LOCAL EXPRESS : “ಹೊಸಪೇಟೆ|ಸಾಹಿತ್ಯವೇ ಸೌಹಾರ್ದ ಪರಂಪರೆಯ ಸೇತುವೆ : ಡಾ. ಆರನಕಟ್ಟೆ ರಂಗನಾಥ ಅಭಿಮತ”

By admin

“ಹೊಸಪೇಟೆ| ಸಾಹಿತ್ಯವೇ ಸೌಹಾರ್ದ ಪರಂಪರೆಯ ಸೇತುವೆ — ಡಾ. ಆರನಕಟ್ಟೆ ರಂಗನಾಥ ಅಭಿಮತ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಹೊಸಪೇಟೆ :

“ಭಾಷೆಗಳ ನಡುವೆ ಗಡಿ ರಚಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ — ಸಾಹಿತ್ಯದ ಅಧ್ಯಯನವೇ ಸೌಹಾರ್ದ ಪರಂಪರೆಯನ್ನು ಬಲಪಡಿಸುವ ಸೇತುವೆಯಾಗುತ್ತದೆ ಎಂದು ಕವಿ ಮತ್ತು ಅನುವಾದಕರಾದ ಡಾ. ಆರನಕಟ್ಟೆ ರಂಗನಾಥ ಅಭಿಪ್ರಾಯಪಟ್ಟರು.

 ಇಲ್ಲಿನ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಲ್ಲಮ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ “ಕನ್ನಡ ಮತ್ತು ತಮಿಳು ಸಾಹಿತ್ಯ: ಸೌಹಾರ್ದ ಪರಂಪರೆ” ವಿಷಯದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

“ನಾವು ಇಂದು ಬಳಸುವ ‘ಸೌಹಾರ್ದ’ ಎಂಬ ಮೌಲ್ಯ ವಿದ್ವಾಂಸರ ಕೊಡುಗೆ ಅಲ್ಲ; ಜನಪದ ಸಂಸ್ಕೃತಿ ಶತಮಾನಗಳಿಂದಲೇ ಅದನ್ನು ಬದುಕಿನ ಅಂಗವಾಗಿ ಬೆಳೆಸಿಕೊಂಡಿದೆ. ಕನ್ನಡ ಮತ್ತು ತಮಿಳು ಭಾಷೆಗಳು ಮೂಲ ದ್ರಾವಿಡ ಭಾಷೆಗೆ ಸೇರಿಕೊಂಡು ನಂತರ ವಿಭಜನೆಗೊಂಡರೂ — ಸಾಹಿತ್ಯ ಬಾಂಧವ್ಯ ಸದಾ ಉಳಿದಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟಗಿರಿ ದಳವಾಯಿ ಮಾತನಾಡಿ “ಬೇರೆ ಭಾಷೆಯನ್ನು ಅದರದೇ ಸೊಗಡಿನಲ್ಲಿ ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸುವುದು ಕಾಲದ ಅಗತ್ಯ. ಬಹುಭಾಷಾ ಕವಿಗೋಷ್ಠಿ ಸಾಹಿತ್ಯಸೌಹಾರ್ದಕ್ಕೆ ಹೊಸ ಶಕ್ತಿ ನೀಡಿದೆ” ಎಂದು ಅಭಿಪ್ರಾಯಪಟ್ಟರು.

ಬಹುಭಾಷಾ ಕವಿಗೋಷ್ಠಿ ಕಂಗೊಳಿಸಿತು. ಕವಿಗೋಷ್ಠಿಯಲ್ಲಿಪವಿತ್ರ, ಶಬ್ರಿನಾ ಭಾನು, ಅಕ್ಷತಾ ಟಿ., ಲೋಕೇಶ್ (ಕನ್ನಡ),ಸುನಿಲ್ (ಲಂಬಾಣಿ),ನಂದಿನಿ, ಪ್ರಭಾಕರ, ರವೀಂದ್ರ, ಬೋರಯ್ಯ, ಪಾಲಯ್ಯ (ತೆಲುಗು),ಖಾಜಾಸಾಬ್ (ಉರ್ದು),ಶ್ವೇತಾ ಬಾಳಿ (ಇಂಗ್ಲಿಷ್),ಇಸ್ಮಾಯಿಲ್ ಸಿದ್ಧಿಕ್ (ಹಿಂದಿ),ಮಂಜುನಾಥ್ (ಮರಾಠಿ, ಉರ್ದು) ಮತ್ತು ಡಾ. ರಂಗನಾಥ (ತಮಿಳು)ತಮ್ಮ ಭಾಷೆಗಳ ಕವಿತಾವಾಚನಗಳಿಂದ ಶ್ರೋತೃಗಳನ್ನು ರಂಜಿಸಿದರು.

ಆರಂಭದಲ್ಲಿ ಮಂಜುನಾಥ್ ಕರಿಲಿಂಗಣ್ಣ ಪ್ರಾರ್ಥಿಸಿದರು.ಡಾ. ಗೋವಿಂದ ಸ್ವಾಗತಿಸಿ, ಡಾ. ಸಂತೋಷ ನಿರೂಪಿಸಿದರು. ಅಂತ್ಯದಲ್ಲಿ ವಿನೋದ ವಂದನೆ ಸಲ್ಲಿಸಿದರು.