🟢 LOCAL EXPRESS : “ಕೊಪ್ಪಳ|ಮಗುವಿನೊಂದಿಗೆ ಪೋಷಕರ  ಭಿಕ್ಷಾಟನೆ : ಪೊಲೀಸರಿಂದ ಎಚ್ಚರಿಕೆ”

By admin

🟢 LOCAL EXPRESS : “ಕೊಪ್ಪಳ|ಮಗುವಿನೊಂದಿಗೆ ಪೋಷಕರ  ಭಿಕ್ಷಾಟನೆ : ಪೊಲೀಸರಿಂದ ಎಚ್ಚರಿಕೆ”

•  ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ: 

ನಗರದ ಅಶೋಕ್ ಸರ್ಕಲ್ ಪ್ರದೇಶದಲ್ಲಿ ಮೂರು ತಿಂಗಳ ಗಂಡು ಮಗುವಿನೊಂದಿಗೆ ಭಿಕ್ಷಾಟನೆ ಮಾಡಲಾಗುತ್ತಿದ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಉತ್ತರ ಭಾರತದಿಂದ ಕೊಪ್ಪಳದ ಗವಿಮಠ ಜಾತ್ರೆಯ ಪ್ರಯುಕ್ತ ಆಗಮಿಸಿದ್ದ ಲಕ್ಷ್ಮಿ (24) ಹಾಗೂ ಅರ್ಜುನ್ (26) ದಂಪತಿಗಳು ಅಶೋಕ್ ಸರ್ಕಲ್ ಬಳಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದ್ದರು. ತಂದೆ ಪ್ಲಾಸ್ಟಿಕ್ ಆಟಿಕೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು, ತಾಯಿ ಮೂರು ತಿಂಗಳ ಗಂಡು ಮಗುವಿನೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು.

ಈ ವಿಚಾರವನ್ನು ಗಮನಿಸಿದ ಸುಭಾನ್ ಸಾಬ್ ನೀರಲಗಿ ಅವರು ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರವಾಗಿ ಮಕ್ಕಳ ರಕ್ಷಣಾ ಘಟಕದ ಮೂಲಕ 112ಕ್ಕೆ ದೂರು ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.

ಪೊಲೀಸರು ಮಗುವಿನೊಂದಿಗೆ ಭಿಕ್ಷಾಟನೆ ಮಾಡುವುದು ಕಾನೂನುಬಾಹಿರವಾಗಿದ್ದು, ಇದು ಮಕ್ಕಳ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಪೋಷಕರಿಗೆ ತಿಳಿಸಿ, ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದರು.

ಪೊಲೀಸರ ಸೂಚನೆಯನ್ನು ಪೋಷಕರು ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಮಗುವಿನೊಂದಿಗೆ ಭಿಕ್ಷಾಟನೆ ಮಾಡದಿರುವುದಾಗಿ ಭರವಸೆ ನೀಡಿದ್ದಾರೆ. ತಕ್ಷಣದ ಕ್ರಮದಿಂದ ಮಗುವಿನ ಸುರಕ್ಷತೆ ಖಚಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.