LOCAL EXPRESS :“ಶಹಾಪುರ| ಗೋಗಿ(ಕೆ) ಸಮೀಪ ನಾಲ್ಕು ವರ್ಷದ ಗಂಡು ಚಿರತೆ ಶವ ಪತ್ತೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ :
ತಾಲೂಕಿನ ಗೋಗಿ(ಕೆ) ಗ್ರಾಮದ ಸಮೀಪದ ಎಸ್‌ಬಿಸಿ ಮುಖ್ಯ ಕಾಲುವೆ ವ್ಯಾಪ್ತಿಯ ಬೊರುಕಾ ಪವರ್ ಪ್ಲಾಂಟ್ ಗೇಟ್ ಬಳಿ ಶುಕ್ರವಾರ ನಾಲ್ಕು ವರ್ಷದ ಗಂಡು ಚಿರತೆಯ ಶವ ಪತ್ತೆಯಾಗಿದೆ.
ಗೇಟ್ ಸಮೀಪ ಚಿರತೆ ಶವವನ್ನು ಗಮನಿಸಿದ ಬೊರುಕಾ ಕಂಪನಿಯ ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಶಹಾಪುರ ಉಪವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದರು. ಬಳಿಕ ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಯಿತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಗುರುವಾರ ರಾತ್ರಿ ವೇಳೆ ಕಾಲುವೆ ಪ್ರದೇಶದಲ್ಲಿ ಚಿರತೆ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ. ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ನೀರಿನಲ್ಲೇ ಸಿಲುಕಿಕೊಂಡು ಹೊರಬರಲು ಹೋರಾಟ ನಡೆಸಿದರೂ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರಿನ ತೀವ್ರ ರಭಸ ಹಾಗೂ ಉಸಿರುಗಟ್ಟುವಿಕೆಯಿಂದ ಚಿರತೆ ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಪಶು ಸಹಾಯಕ ವೈದ್ಯಾಧಿಕಾರಿ ಡಾ. ಅಣ್ಣಾರಾವ ಪಾಟೀಲ ಅವರು ಮರಣೋತ್ತರ ಪರೀಕ್ಷೆ ನಡೆಸಿ, ಚಿರತೆ ಆರೋಗ್ಯವಾಗಿದ್ದು ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ನೀರಿನಲ್ಲಿ ಸಿಲುಕಿ ಒಳಪೆಟ್ಟುಗಳಾಗಿದ್ದು, ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಚಿರತೆಯ ವಯಸ್ಸು ಸುಮಾರು ನಾಲ್ಕು ವರ್ಷವಾಗಿದ್ದು, ದಷ್ಟಪುಷ್ಟವಾದ ಗಂಡು ಚಿರತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಶಹಾಪುರ ಉಪವಲಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
