
ಯಾದಗಿರಿ: ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರರನ್ನು ಹೈಕಮಾಂಡ್ ನಿಯೋಜನೆ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸುಭಾಷ್ ವೃತ್ತದಲ್ಲಿ ಪಕ್ಷದ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಹಂಚಿಕೊAಡ ಕಾರ್ಯಕರ್ತರು ವಿಜಯೇಂದ್ರ ಪರ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮುದ್ನಾಳ್, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ನಾಯಕರು ಘೋಷಿಸಿದ್ದು, ಪಕ್ಷಕ್ಕೆ ಹೊಸ ಚೈತನ್ಯ ಮೂಡಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಬೇಸರದಲ್ಲಿದ್ದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದು ಹೇಳಿದರು.
ಬಿವೈ ವಿಜಯೇಂದ್ರ ಸಂಘಟನಾ ಚತುರರಾಗಿದ್ದಾರೆ. ಈಗಾಗಲೇ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ನಾವು ಪಕ್ಷ ಸಂಘಟನೆ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸದೃಢವಾಗಿ ಬೆಳೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು, ನಗರ ಮಂಡಲ ಅಧ್ಯಕ್ಷ ಮಂಜುನಾಥ ಜಡಿ, ಪ್ರಮುಖರಾದ ಸದಾಶಿವಪ್ಪಗೌಡ ರೊಟ್ನಡಗಿ, ವಿಲಾಸ್ ಪಾಟೀಲ್, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ರಮೇಶ ದೊಡ್ಡಮನಿ, ದೇವಿಂದ್ರಪ್ಪ ಯರಗೋಳ, ರಾಜು ಸ್ವಾಮಿ, ರವಿ ಬಾಪೂರೆ, ಶ್ರೀದೇವಿ ಶೆಟ್ಟಿಹಳ್ಳಿ, ಸುನಿತಾ ಚವ್ಹಾಣ, ದಶರಥಸಿಂಗ್ ಠಾಕೂರ, ಅಜಯ ಮಡ್ಡಿ, ಸಾಬು ಚಂಡರಕಿ, ಅನಿಲ ಕರಾಟೆ, ಕೃಷ್ಣಾರಡ್ಡಿ ಬಬಲಾದಿ, ಜಿತೇಂದ್ರ ಇದ್ದರು.
