ಎಂದಿನಂತೆ ಹರಟೆ ಹಾಸ್ಯಕ್ಕಾಗಿ ಸ್ನೇಹಿತರ ಬಳಗI
ಬಳಿ ಬಂದ ರಾಮ ಕಾಲಹರಣಕ್ಕಾಗಿ; II
ವಿಜಯ, ಮಧುಮತ್ತ, ಕಶ್ಯಪ,ಮಂಗಲ, ಕುಲ,ಸುರಜಿ, I
ಕಾಲಿಯಾ,ಭದ್ರ, ದಂತವಕ್ರ, ಸುಮಗಂಧ,ಸೇರಿದರು II
ರಾಮನ ಸ್ನೇಹಿತರು; ಮಾತಿನ ಚಟಾಕಿಗಳ ಮಧ್ಯೆ ರಾಮ ನುಡಿದ ಭದ್ರನಿಗೆ: I
“ ಓ ಭದ್ರಾ, ಎನ್ನ ಬಗ್ಗೆ ರಾಜ್ಯ ವ ನಗರದಲಿII
ಜನ ಏನು ಆಡಿಕೊಳ್ಳುತಿಹರು? ಶತ್ರುಘ್ನ,ಭರತ, I
ಲಕ್ಷ್ಮಣ ವ ಸೀತೆ ಬಗ್ಗೆ ಏನು ಆಡಿಕೊಳ್ಳತಿಹರು? ಕೈಕೆಯಿ, ತಾಯಂದಿರII
ಬಗ್ಗೆ ಏನು ಆಡಿಕೊಳ್ಳುತಿಹರು? ರಾಜರು ಅರಣ್ಯದಲ್ಲಿರಲಿ, I
ಸಿಂಹಾಸನದಲ್ಲಿರಲಿ, ಅವನ ಟೀಕಿಸುವರು ಜನ ಸದಾ!II
ಕೇಳಿ ರಾಮನ ಪ್ರಶ್ನೆ ಕೈಮುಗಿದು ಭದ್ರ ಉತ್ತರಿಸಿದ: “ನಗರದೇಲ್ಲI
ಪ್ರಜೆಗಳು ಮೆಚ್ಚುಗೆ ನುಡಿಗಳನ್ನು ಆಡುತಿಹರು ನಿನ್ನ ಬಗ್ಗೆ, II
ಓ ರಾಜನೇ, ಹೊಗಳುತಿಹರು ದಶಗ್ರೀವನ ವಧಿಸಿI
ಸಾಧಿಸಿದ ನಿನ್ನ ವಿಜಯ, ಎಲ್ಲೆಡೆ ನಿನ್ನ ಪ್ರಸಂಶೆ”.II
ಕೇಳಿ ಭದ್ರನ ನುಡಿ ರಾಮ ಮತ್ತೆ ನುಡಿದ:” ಮುಚ್ಚಿಡದೇ ಹೇಳುI
ಸತ್ಯ, ಎನ್ನ ಬಗ್ಗೆ ಜನ ಆಡಿಕೊಳ್ಳುವ ವದಂತಿ; II
ಕೇಳಿ ಜನರ ವದಂತಿ, ಸರಿಪಡಿಸಿಕೊಳ್ಳುವೆ ತಪ್ಪಿದ್ದನು I
ಭವಿಷ್ಯದ ಒಳಿಗಾಗಿ ಸತ್ಯವನ್ನು ನುಡಿ ಹೆದರದೆ, ನಿಸ್ಸಂದೇಹ”. II
ಕೇಳಿ ರಾಮನ ಕೋರಿಕೆ ಭದ್ರ ಕೈಮುಗಿದು ನುಡಿದ: I
“ ಓ ರಾಜನೇ, ಕೇಳು, ಸರಿಯೋ ತಪ್ಪೋ ಜನ ಬೀದಿ, ಮಾರುಕಟ್ಟೆII
ರಾಜಮಾರ್ಗ, ವನ ಅರಣ್ಯಗಳಲ್ಲಿ ಆಡುವದನು ಹೇಳುವೆ; I
ದೇವ ದಾನವರಿಂದ ಸಾಧ್ಯವಾಗದ ಕಾರ್ಯ ಸಾಧಿಸಿದ II
ರಾಮ, ಸಮುದ್ರಕ್ಕೆ ಸೇತು ಕಟ್ಟಿಸಿ ದಾಟಿದ; ಕಾಲದಳ, I
ವಾನರ ಕರಡಿಗಳ ಸಹಾಯದಿ ರಾಮ ಸೋಲಿಸಿದ ಯುದ್ಧದಲಿ II
ರಾವಣನ ಬಲಿಷ್ಠ ಸೇನೆ; ಅಜೇಯಿ ರಾವಣನನ್ನು ವಧಿಸಿ ಯುದ್ಧದಲಿ I
ಪತ್ನಿ ಸೀತೆಯನ್ನು ಪಡೆದ ರಾಮ ಮರಳಿ ; II
ಕೋಪದಲಿ ರಾಮ ರಾವಣನ ವಧಿಸಿI
ತನ್ನ ಮಡದಿಯನ್ನು ಮನೆಗೆ ತಂದ ಮರಳಿ;II
ರಾವಣ ತನ್ನ ತೊಡೆಮೇಲೆ ಕೂಡ್ರಿಸಿಕೊಂಡ I
ಸೀತೆಯನ್ನು ಹಿಂಪಡೆದು ರಾಮ ಯಾವ ಸಂತೋಷ ಪಟ್ಟ?II
ಸೀತೆಯು ಅಶೋಕವನದಲಿ ರಾವಣನ ಆಧಿನದಲ್ಲಿದ್ದಳು,I
ಅದು ರಾಮನಿಗೆ ಹೇಗೆ ಅರ್ಥವಾಗಿಲ್ಲ?II
ಅದೇ ದುಸ್ಥತಿಯನ್ನು ಪ್ರಜೆಗಳು ತಮ್ಮI
ಪತ್ನಿಯರ ವಿಷಯದಲಿ ಚಿಂತಿತರಾಗಿಹರು; II
ರಾಜನಂತೆ ಪ್ರಜೆಗಳು, ರಾಜ ಹಾಕಿದI
ಮಾರ್ಗದಲಿ ಪ್ರಜೆಗಳು ನಡೆಯಬೇಕೇ? II
ಓ ರಾಜನೆ, ನಗರ ವ ರಾಜ್ಯದಲಿ ಪ್ರಜೆಗಳುI
ಪದೇ ಪದೇ ಆಡಿಕೊಳ್ಳವ ವದಂತಿಗಳಿವು”.II
ಕೇಳಿ ವದಂತಿಗಳನ್ನು ರಾಮ ದುಃಖದಿ ನುಡಿದ:I
“ ಎನ್ನ ಪ್ರಜೆಗಳು ಎನ್ನ ಬಗ್ಗೆ ಆಡುವ ವದಂತಿಗಳೇ ಇವು!” II
ಎಲ್ಲ ಸ್ನೇಹಿತರು ತಲೆ ತಗ್ಗಿಸಿ ರಾಮನಿಗೆ ನುಡಿದರು:I
“ಇದು ಸತ್ಯ, ಓ ಭೂಪತಿಯೇ”II
ಕೇಳಿ ಸ್ನೇಹಿತರ ಒಕ್ಕೂರಿಲಿನ ನುಡಿI
ಶತ್ರು ನಾಶಕ ರಾಮ ಅಲ್ಲಿಂದ ತೊರೆದ. II
ಉತ್ತರಕಾಂಡ
ಆದಿಕವಿ ವಾಲ್ಮೀಕಿಯು ರಾಮನು ತನ್ನ ಸ್ನೇಹಿರೊಂದಿಗೆ ಹರಟೆ ಮಾಡುವ ಸಮಯದಲ್ಲಿ ತನ್ನ ಸ್ನೇಹಿತ ಭದ್ರನಿಂದ ಜನರಾಡುವ ರಾಮನ ಪ್ರಸಂಶೆ ಮತ್ತು ರಾವಣನು ಸ್ಪರ್ಷಿಸಿ ತನ್ನಾಧೀನದಲಿಟ್ಟುಕೊಂಡ ಸೀತೆಯನ್ನು ರಾಮ ಪುನಃ ಅರಮನೆಗೆ ಕರೆದು ರೀತಿಯು ಅಂದಿನ ಸಾಮಾಜಿಕ ಪುರುಷ-ಮಾನಸಿಕ ಸ್ಥಿಗತಿಗೆ ವಿರುದ್ಧವಾದದನ್ನು ಸಂಗತಿಯನ್ನು ತಿಳಿದು ರಾಮನು ಶೋಕಿತನಾದ ಪ್ರಸಂಗವನ್ನು ವಿವರಿಸಿರುವರು, ಅಲ್ಲದೇ ಸ್ತ್ರೀಯ ಕುರಿತು ಅಂದಿನ ಪುರುಷರ ಸಾಮಾಜಿಕ ಮನಸ್ಥಿಯನ್ನು ಕವಿ ಯಥಾವತ್ತಾಗಿ ಹೀಗೆ ಚಿತ್ರಿಸಿರುವರು: “
ಎಂದಿನಂತೆ ಕಾಲಹರಣಕ್ಕಾಗಿ, ಹರಟೆ ಹಾಸ್ಯಕ್ಕಾಗಿ ರಾಮನು ಸ್ನೇಹಿತರ ಬಳಗ ಬಳಿ ಬಂದನು; ರಾಮನ ಸ್ನೇಹಿತರಾದ ವಿಜಯ, ಮಧುಮತ್ತ, ಕಶ್ಯಪ, ಮಂಗಲ, ಕುಲ, ಸುರಜಿ, ಕಾಲಿಯಾ, ಭದ್ರ, ದಂತವಕ್ರ, ಸುಮಗಂಧ ಅಲ್ಲಿ ಸೇರಿದ್ದರು; ಮಾತಿನ ಚಟಾಕಿಗಳ ಮಧ್ಯೆ ರಾಮನು ತನ್ನ ಸ್ನೇಹಿತ ಭದ್ರನಿಗೆ ಕೇಳಿದನು ಓ ಭದ್ರಾ, ನನ್ನ ಬಗ್ಗೆ ರಾಜ್ಯ ಮತ್ತು ನಗರದಲಿ ಜನರು ಏನು ಆಡಿಕೊಳ್ಳುತಿರುವರು? ಶತ್ರುಘ್ನ, ಭರತ, ಲಕ್ಷ್ಮಣ ಮತ್ತು ಸೀತೆಯ ಬಗ್ಗೆ ಏನು ಆಡಿಕೊಳ್ಳತಿರುವರು? ಕೈಕೆಯಿ, ತಾಯಂದಿರ ಬಗ್ಗೆ ಏನು ಆಡಿಕೊಳ್ಳುತಿರುವರು? ರಾಜರು ಅರಣ್ಯದಲ್ಲಿರಲಿ, ಸಿಂಹಾಸನದಲ್ಲಿರಲಿ, ಅವನ ಬಗ್ಗೆ ಜನ ಯಾವಾಗಲು ಟೀಕಿಸುವರು!” ರಾಮನ ಪ್ರಶ್ನೆಗಳನ್ನು ಕೇಳಿದ ಭದ್ರನು ಕೈಮುಗಿದು ರಾಮನಿಗೆ ಉತ್ತರಿಸಿದನು “ಓ ರಾಜನೇ, ನಿನ್ನ ಬಗ್ಗೆ ನಗರದೇಲ್ಲ ಪ್ರಜೆಗಳು ಮೆಚ್ಚುಗೆ ನುಡಿಗಳನ್ನು ಆಡುತಿರುವರು, ದಶಗ್ರೀವನ ವಧಿಸಿ ಸಾಧಿಸಿದ ನಿನ್ನ ವಿಜಯ ಪ್ರಸಂಶೆಯನ್ನು ಎಲ್ಲೆಡೆ ಹೊಗಳುತಿರುವರು”. ಸ್ನೇಹಿತ ಭದ್ರನ ಉತ್ತರ ಕೇಳಿದ ರಾಮನು ಮತ್ತೆ ಅವನಿಗೆ ಕೇಳಿದನು” ನನ್ನ ಬಗ್ಗೆ ಜನರು ಆಡಿಕೊಳ್ಳುವ ವದಂತಿ ಸತ್ಯವನ್ನು ಮುಚ್ಚಿಡದೇ ನನಗೆ ಹೇಳು; ಜನರ ವದಂತೆಯನ್ನು ಕೇಳಿ ನಾನು ತಪ್ಪಿದ್ದನು ಸರಿಪಡಿಸಿಕೊಳ್ಳುವೆನು; ನಿಸ್ಸಂದೇಹವಾಗಿ ಹೆದರದೆ ಭವಿಷ್ಯದ ಒಳಿಗಾಗಿ ಸತ್ಯವನ್ನು ಹೇಳು”. ರಾಮನ ಕೋರಿಕೆಯನ್ನು ಕೇಳಿದ ಭದ್ರನು ರಾಮನಿಗೆ ಕೈಮುಗಿದು ಅರುಹಿದನು “ ಓ ರಾಜನೇ, ಸರಿಯೋ ತಪ್ಪೋ ನನಗೆ ತಿಳಿಯದು, ಆದರೆ ಜನ ಬೀದಿ, ಮಾರುಕಟ್ಟೆ, ರಾಜಮಾರ್ಗ, ವನ, ಅರಣ್ಯಗಳಲ್ಲಿ ಆಡುವದನು ನಿನಗೆ ಹೇಳುವೆನು ; ರಾಮನು ಸಮುದ್ರಕ್ಕೆ ಸೇತು ಕಟ್ಟಿಸಿ ಅದನ್ನು ದಾಟಿ ದೇವ ದಾನವರಿಂದ ಸಾಧ್ಯವಾಗದ ಕಾರ್ಯವನ್ನು ಸಾಧಿಸಿದನು; ವಾನರ, ಕರಡಿಗಳ ಕಾಲದಳ ಸಹಾಯದಿಂದ ರಾಮನು ಯುದ್ಧದಲಿ ರಾವಣನ ಬಲಿಷ್ಠ ಸೇನೆ ಸೋಲಿಸಿದನು; ರಾಮನು ಯುದ್ಧದಲಿ ಅಜೇಯಿ ರಾವಣನನ್ನು ವಧಿಸಿ ತನ್ನ ಪತ್ನಿ ಸೀತೆಯನ್ನು ಅವನಿಂದ ಹಿಂಪಡೆದನು; ಕೋಪದಲಿ ರಾಮನು ರಾವಣನನ್ನು ವಧಿಸಿ ತನ್ನ ಮಡದಿಯನ್ನು ಮನೆಗೆ ಮರಳಿ ತಂದನು, ಆದರೆ ರಾವಣನು ತನ್ನ ತೊಡೆಮೇಲೆ ಕೂಡ್ರಿಸಿಕೊಂಡ ಸೀತೆಯನ್ನು ಹಿಂಪಡೆದು ರಾಮನು ಯಾವ ಸಂತೋಷ ಪಟ್ಟನು? ಸೀತೆಯು ಅಶೋಕವನದಲಿ ರಾವಣನ ಆಧಿನದಲ್ಲಿದ್ದಳು, ಅದು ರಾಮನಿಗೆ ಹೇಗೆ ಅರ್ಥವಾಗಿಲ್ಲ? ಅದೇ ದುಸ್ಥತಿಯನ್ನು ನೆನಪಿಸಿಕೊಂಡು ಪ್ರಜೆಗಳು ತಮ್ಮ ಪತ್ನಿಯರ ವಿಷಯದಲಿ ಚಿಂತಿತರಾಗಿರುವರು; ರಾಜನಂತೆ ಪ್ರಜೆಗಳು, ರಾಜ ಹಾಕಿದ ಮಾರ್ಗದಲಿ ಪ್ರಜೆಗಳು ನಡೆಯಬೇಕೇ? ಓ ರಾಜನೆ, ನಗರ ಮತ್ತು ರಾಜ್ಯದಲಿ ಪ್ರಜೆಗಳು ಪದೇ ಪದೇ ಆಡಿಕೊಳ್ಳವ ವದಂತಿಗಳಿವು”. ಜನರ ಆರೋಪ-ವದಂತಿಗಳನ್ನು ತಿಳಿದ ರಾಮನು ದುಃಖದಿಂದ ಉಸುರಿದನು “ಇವು ನನ್ನ ಪ್ರಜೆಗಳು ನನ್ನ ಬಗ್ಗೆ ಆಡುವ ವದಂತಿಗಳೇ! ರಾಮನ ಎಲ್ಲ ಸ್ನೇಹಿತರು ತಲೆ ತಗ್ಗಿಸಿ ರಾಮನಿಗೆ ಅರುಹಿದರು “ಓ ಭೂಪತಿಯೇ, ಇದು ಸತ್ಯ.” ಸ್ನೇಹಿತರ ಒಕ್ಕೂರಿಲಿನ ಮಾತುಗಳನ್ನು ಕೇಳಿ ಶತ್ರು ನಾಶಕ ರಾಮನು ಅಲ್ಲಿಂದ ತೊರೆದನು”.ಹೆಣ್ಣಿನ ವಿಷಯದಲ್ಲಿ ಮಾತ್ರ ಜನರು ಸಂಕುಚಿತ ಸಾಮಾಜಿಕ ಮನಸ್ಥಿತಿ ಹೊಂದಿದನ್ನು ಆದಿಕವಿ ಈ ಪ್ರಸಂಗ ಮುಖೇನ ತಿಳಿಸಿರುವರು ,ಅದು ಸ್ತ್ರೀಕುಲಕ್ಕೆ ಮಾಡುವ ಅನ್ಯಾಯ ಎಂಬ ಸತ್ಯವನ್ನು ತಿಳಿಸಿರುವರು.