ರಾಮನ ಮನೋಸ್ಥಿತಿ ತಿಳಿದು ಚಿಂತಾಜನಕರಾದರು

By admin


ರಾಮನ ಮನೋಸ್ಥಿತಿ ತಿಳಿದು ಚಿಂತಾಜನಕರಾದರುI
ಸಹೋದರರು, ರಾಮನು ನುಡಿದ ಸಹೋದರರಿಗೆ: II
“ ಪ್ರೀಯ ಸಹೋದರರೆ, ಪ್ರಶ್ನಿಸಿ ಬೇಡಿ ನನ್ನI
ಇಚ್ಚೆಯನು, ಆಡಿಕೊಳ್ಳುತಿಹರು ಜನ ಸೀತೆ ಎನ್ನ ಬಗ್ಗೆ,II
ಜನರ ಚುಚ್ಚು ಮಾತುಗಳಿಂದ ಎನ್ನ ಮನ ನೊಂದಿದೆ,I
ನಾನು ಶ್ರೇಷ್ಠ ಇಕ್ಷ್ವಾಕು ಕುಲದಲಿ ಜನಿಸಿದವ, II
ಸೀತೆಯೂ ಶ್ರೇಷ್ಠ ಕುಲದಲ್ಲಿ ಬೆಳೆದವಳು,I
ದಂಡಕಾರಣ್ಯದ ನಮ್ಮ ಬದುಕು ಗೊತ್ತು ಲಕ್ಷ್ಮಣನಿಗೆ: II
ಅರಣ್ಯದಲಿ ಸೀತೆಯನು ಅಪಹರಿಸಿದ ರಾವಣ,I
ಯುದ್ಧದಲಿ ವಧಿಸಿ ರಾವಣನ ಹಿಂಪಡೆದೆ ಸೀತೆಯನು; II
ಸೀತೆ ಮಾಸಗಳವರೆಗೆ ರಾವಣನ ವಶದಲಿದ್ದಳು,I
ತನ್ನ ಪವಿತ್ರತೆ ಪ್ರಮಾಣಿಸಲು ಸೀತೆ ಕೊಟ್ಟಳು ಅಗ್ನಿ ಪರೀಕ್ಷೆ; II
ಲಕ್ಷ್ಮಣನೆ ತಯ್ಯಾರಿಸಿದ್ದ ಅಗ್ನಿಕುಂಡI
ಅಗ್ನಿದೇವ ಪ್ರಮಾಣಿದ ಸೀತೆಯ ಪವಿತ್ರತೆ, ಮುಗ್ಧತೆ; II
ಸಕಲ ದೇವತೆ, ಋಷಿ, ಪ್ರಜೆಗಳ ಸಮಕ್ಷಮದಲಿ ನಡೆಯಿತು I
ಸೀತೆಗೆ ಅಗ್ನಿ ಪರೀಕ್ಷೆ, ಒಪ್ಪಿಸಿದರು ಸೀತೆಯನು ಎನಗೆ; II
ಸೀತೆ ಪವಿತ್ರಳು, ಎನ್ನ ಮನ ಒಪ್ಪಿದೆ,I
ಕರೆದು ತಂದೆ ಸೀತೆಯನು ಅಯೋಧ್ಯೆಗೆ ಮುಗಿಸಿ ವನವಾಸ; II
ಆದರೆ ಇಂದು ಜನರಾಡುವ ಚುಚ್ಚು ಮಾತುI
ಘಾಸಿಗೊಳಿಸಿದೆ ಎನ್ನ ಹೃದಯ, ಓ ಸಹೋದರರೆ; II
ನಿಮಗೆ ಕಳಂಕ ಬರಬಾರದೆಂದು ನಾನುI
ತೊರೆಯುವೆ ಅಯೋಧ್ಯನಗರ ಸೀತೆಯೊಂದಿಗೆ; II
ಆಗಾಧ ದುರಂತ ದುಃಖ ಪೀಡಿಸುತ್ತಿದೆI
ಎನ್ನ ಮನ, ಬದುಕನ್ನು, ಏನು ಮಾಡಲಿ?”. II
ಕೇಳಿ ರಾಮನ ದುಃಖ ಭರತ ರಾಮನಿಗೆ ನುಡಿದ:I
“ಪಾಲಿಸು ನಿನ್ನ ವಚನ, ತಂದೆ ಬಯಕೆ,II
ಹೋಗದಿರು ತೊರೆದು ಅಯೋಧ್ಯೆ, ಎದಿರಿಸೋಣI
ಪ್ರಜೆಗಳ ಕೊಂಕ ಬಿರ್ನುಡಿಗಳನು ಧೈರ್ಯದಿ”.II
ಕೇಳಿ ಭರತನ ಕೋರಿಕೆ ರಾಮ ಲಕ್ಷ್ಮಣನಿಗೆ ನುಡಿದ: I
“ ಓ ಲಕ್ಷ್ಮಣಾ, ನಾಳೆ ಬೆಳಿಗ್ಗೆ ಪಡೆದುಕೋ ಸುಮಂತ್ರನಿಂದ ರಥ, II
ಕೂಡ್ರಿಸಿ ರಥದಲಿ ಸೀತೆಯನು ವಾಲ್ಮೀಕಿ ಆಶ್ರಮದ ಆಸು ಪಾಸ ಬಿಡು, I
ವಿಪಸಾನದಿ ಬಳಿಯಿದ್ದ ವಾಲ್ಮೀಕಿ ಆಶ್ರಮ;II
ಆ ಸುಂದರ ಪ್ರಶಾಂತ ಸ್ಥಳದಲಿ ಬಿಟ್ಟು ಸೀತೆಯನುI
ಮರಳು ಅಯೋಧ್ಯೆಗೆ, ಪೂರೈಸು ನನ್ನೀ ಇಚ್ಚೆಯನು; II
ಓ ಲಕ್ಷ್ಮಣಾ, ಇದು ನಿನಗೆ ನನ್ನ ಆದೇಶವೂ ಅಹುದು,I
ಸೀತೆ ಗಡಿಪಾರ ಬಗ್ಗೆ ಪ್ರಶ್ನಿಸಬೇಡಾ ನನ್ನನು; II
ನೀನು ಎನಗೆ ಈ ನಿರ್ಧಾರ ಕೈಬಿಡುವಂತೆI
ಕೋರಿದರೆ, ಎನಗೆ ತುಂಬಾ ದುಃಖವಾದೀತು; II
ನೀನು ನನ್ನ ಮಾತು ಧಿಕ್ಕರಿಸಿದರೆ, ಅದು ಎನ್ನI
ಬದುಕಿಗೆ ಅಪಾಯ, ನೀನೇ ಎನ್ನ ವೈರಿಯಾಗುವಿ; II
ತಿಳಿಸಿಹಳು ಸೀತೆ ಎನಗೆ ತನ್ನ ಮನದ ಬಯಕೆ,I
ಇಚ್ಚಿಸಿಹಳು ಋಷಿ ಆಶ್ರಮದಲ್ಲಿರಲು, ಗಂಗಾ ದಡದಲಿ; II
ಸೀತೆಯ ಬಯಕೆಯನ್ನು ಪೂರೈಸಲು ನೀನುI
ಎನಗೆ ಸಹಕರಿಸು, ಎನ್ನ ಆದೇಶ ಪಾಲಿಸು”. II
ರಾಮ ಲಕ್ಷ್ಮಣನಿಗೆ ಕೋರುತಿದ್ದಂತೆ ಅವನI
ಕಣ್ಣುಗಳು ತುಂಬಿ ಕಣ್ಣಿರು ಹರಿದವು ಕೋಡಿಯಂತೆ; II
ಗಾಯದ ಆನೆಯಂತೆ ಉಸಿರು ಹಾಕುತ, ದುಃಖಿಸುತ್ತI
ಸಹೋದರರನು ತೊರೆದು ರಾಮ ಸೇರಿದ ಅರಮನೆ.II
ಉತ್ತರಕಾಂಡ

ಆದಿಕವಿ ವಾಲ್ಮೀಕಿಯು ಸೀತೆಯನ್ನು ತೊರೆಯುವ ರಾಮನ ಸಂದಿಗ್ಧ ಮನಸ್ಥಿಯನ್ನು ವಿವರಿಸಿರುವರು, ಅಲ್ಲದೇ ಆದಿಕವಿ ತದ್ಮೂಲಕ (1) ಮುನಿ ಆಶ್ರಮದ ಪ್ರಕೃತಿ ಮಡಿಲಲ್ಲಿ ಇರ ಬಯಸಿದ ಸೀತೆಯ ಗರ್ಭೀಣಿ ಬಯಕೆ, (2) ಜನರ ನಿಂದೆ, (3) ಭರತನ ಸಂದರ್ಭೋಚಿತ ಸಲಹೆ ಮತ್ತು (4) ರಾಮನ ಮನಸ್ಥಿತಿ. ಹೀಗೆಕೆಲವು ಮಹತ್ವದ ಅಂಶಗಳನ್ನು ತಿಳಿಸಿರುವರು:
ರಾಮನ ಮನೋಸ್ಥಿತಿ ತಿಳಿದು ಸಹೋದರರು ಚಿಂತಾಜನಕರಾದರು, ರಾಮನು ಸಹೋದರರಿಗೆ ಅರುಹಿದನು “ ಪ್ರೀಯ ಸಹೋದರರೆ, ನನ್ನ ಇಚ್ಚೆಯನು ಪ್ರಶ್ನಿಸಿ ಬೇಡಿ, ರಾಜ್ಯ, ನಗರದ ಜನರು ಸೀತೆ ಮತ್ತು ನನ್ನ ಬಗ್ಗೆ ನಿಂದನೆಯ ಮಾತುಗಳನ್ನು ಆಡಿಕೊಳ್ಳುತಿರುವರು, ಜನರ ಚುಚ್ಚು ಮಾತುಗಳಿಂದ ನನ್ನ ಮನ ನೊಂದಿದೆ; ನಾನು ಶ್ರೇಷ್ಠ ಇಕ್ಷ್ವಾಕು ಕುಲದಲಿ ಜನಿಸಿದವ, ಸೀತೆಯೂ ಶ್ರೇಷ್ಠ ಕುಲದಲ್ಲಿ ಬೆಳೆದವಳು, ದಂಡಕಾರಣ್ಯದಲ್ಲಿಯ ನಮ್ಮ ಬದುಕಿನ ಬಗ್ಗೆ ಲಕ್ಷ್ಮಣನಿಗೆ ಗೊತ್ತು; ಅರಣ್ಯದಲಿ ರಾವಣನು ಸೀತೆಯನು ಅಪಹರಿಸಿದನು, ನಾನು ಯುದ್ಧದಲಿ ರಾವಣನನ್ನು ಕೊಂದು ಸೀತೆಯನು ಹಿಂಪಡೆದೆನು; ಸೀತೆಯು ಹಲವು ಮಾಸಗಳವರೆಗೆ ಲಂಕೆಯಲ್ಲಿ ರಾವಣನ ವಶದಲಿದ್ದಳು, ತನ್ನ ಪವಿತ್ರತೆ ಪ್ರಮಾಣಿಸಲು ಸೀತೆಯು ಅಗ್ನಿ ಪರೀಕ್ಷೆಯನ್ನೂ ಕೊಟ್ಟಳು; ಲಕ್ಷ್ಮಣನೆ ಆ ಅಗ್ನಿಕುಂಡವನ್ನು ತಯ್ಯಾರಿಸಿದ್ದನು, ಸೀತೆಯ ಪವಿತ್ರತೆ, ಮುಗ್ಧತೆಯನ್ನು ಅಗ್ನಿದೇವನು ಸಕಲ ದೇವತೆ, ಋಷಿ, ಪ್ರಜೆಗಳ ಸಮಕ್ಷಮದಲಿ ಪ್ರಮಾಣಿದನು; ಸೀತೆಗೆ ಅಗ್ನಿ ಪರೀಕ್ಷೆ ನಡೆಯಿತು, ಅದರ ನಂತವೇ ಸೀತೆಯನು ನನಗೆ ಒಪ್ಪಿಸಿದರು; ಸೀತೆ ಪವಿತ್ರಳು, ನನ್ನ ಮನ ಒಪ್ಪಿದೆ, ವನವಾಸ ಮುಗಿಸಿ ನಾನು ಸೀತೆಯನು ಅಯೋಧ್ಯೆಗೆ ಕರೆದು ತಂದೆನು; ಆದರೆ ಇಂದು ಜನರಾಡುವ ಚುಚ್ಚು ಮಾತುಗಳು ನನ್ನ ಹೃದಯವನ್ನು ಘಾಸಿಗೊಳಿಸಿವೆ; ನಿಮಗೆ ಕಳಂಕ ಬರಬಾರದೆಂದು ನಾನು ಸೀತೆಯೊಂದಿಗೆ ಅಯೋಧ್ಯನಗರವನ್ನು ತೊರೆಯುವೆನು; ಆಗಾಧ ದುರಂತ ದುಃಖವು ನನ್ನ ಮನವನ್ನು ಪೀಡಿಸುತ್ತಿದೆ, ಬದುಕಿ ಏನು ಮಾಡಲಿ?”. ರಾಮನ ದುಃಖದ ಮಾತುಗಳನ್ನು ಕೇಳಿ ಭರತನು ರಾಮನಿಗೆ ಕೋರಿದನು” ತಂದೆ ಬಯಕೆಯ ನಿನ್ನ ವಚನ ಪಾಲಿಸು, ಅಯೋಧ್ಯೆಯನ್ನು ತೊರೆದು ಹೋಗದಿರು, ಪ್ರಜೆಗಳ ಕೊಂಕ ಬಿರ್ನುಡಿಗಳನು ಧೈರ್ಯದಿಂದ ಎದಿರಿಸೋಣ”. ಭರತನ ಕೋರಿಕೆಯನ್ನು ಕೇಳಿ ರಾಮನು ಲಕ್ಷ್ಮಣನಿಗೆ ಆದೇಶಿಸಿದನು “ ಓ ಲಕ್ಷ್ಮಣಾ, ನಾಳೆ ಬೆಳಿಗ್ಗೆ ಸುಮಂತ್ರನಿಂದ ರಥವನ್ನು ಪಡೆದುಕೋ, ರಥದಲಿ ಸೀತೆಯನು ಕೂಡ್ರಿಸಿಕೊಂಡು ವಾಲ್ಮೀಕಿ ಆಶ್ರಮದ ಆಸು ಪಾಸ ಬಿಡು, ವಿಪಸಾನದಿ ಬಳಿ ವಾಲ್ಮೀಕಿ ಆಶ್ರಮ ಇರುವದು, ಆ ಸುಂದರ ಪ್ರಶಾಂತ ಸ್ಥಳದಲಿ ಸೀತೆಯನು ಬಿಟ್ಟು ಅಯೋಧ್ಯೆಗೆ ಮರಳು, ಈ ನನ್ನ ಇಚ್ಚೆಯನು ಪೂರೈಸು; ಇದು ನಿನಗೆ ನನ್ನ ಆದೇಶವೂ ಆಗಿದೆ, ನೀನು ಸೀತೆಯ ಗಡಿಪಾರ ಬಗ್ಗೆ ನನ್ನನ್ನು ಪ್ರಶ್ನಿಸಬೇಡಾ; ನೀನು ನನಗೆ ಈ ನಿರ್ಧಾರ ಕೈಬಿಡುವಂತೆ ಕೋರಿದರೆ, ನನಗೆ ತುಂಬಾ ದುಃಖವಾಗುವದು; ನೀನು ನನ್ನ ಮಾತು ಧಿಕ್ಕರಿಸಿದರೆ, ಅದು ನನ್ನ ಬದುಕಿಗೆ ಅಪಾಯ, ನೀನೇ ನನ್ನ ವೈರಿಯಾಗುವಿ; ಸೀತೆಯೂ ತಾನು ಗಂಗಾ ದಡ ಪ್ರದೇಶದಲಿ ಋಷಿ ಆಶ್ರಮದಲ್ಲಿರಲು ನನಗೆ ತನ್ನ ಮನದ ಬಯಕೆಯನ್ನು ತಿಳಿಸಿರುವಳು, ಸೀತೆಯ ಬಯಕೆಯನ್ನು ಪೂರೈಸಲು ನೀನು ನನಗೆ ಸಹಕರಿಸು, ನನ್ನ ಆದೇಶ ಪಾಲಿಸು”. ರಾಮನು ಲಕ್ಷ್ಮಣನಿಗೆ ಕೋರುತಿದ್ದಂತೆ ಅವನ ಕಣ್ಣುಗಳು ತುಂಬಿ ಕಣ್ಣಿರು ಕೋಡಿಯಂತೆ ಹರಿದವು; ಗಾಯದ ಆನೆಯಂತೆ ಉಸಿರು ಹಾಕುತ, ದುಃಖಿಸುತ್ತ ಸಹೋದರರನು ತೊರೆದು ರಾಮನು ಅರಮನೆ ಸೇರಿದನು. ತಂದೆಯ ವಚನ ಪಾಲಿಸಿ ರಾಮನು ದಂಡಕಾರಣ್ಯದಲ್ಲಿದ್ದಾಗ ಸೀತೆಯನ್ನು ಕಳೆದು ತೊಂಡಿದ್ದ , ಈಗ ಪುನ: ತಂದೆ ವಚನ ಪಾಲಿಸಲು ತನ್ನ ಮನಸ್ಸಿನ ವಿರುದ್ಧವಾಗಿ ಸೀತೆಯಿಂದ ದೂರ ಉಳಿದ ರಾಮ ದೌರ್ಭಾಗ್ಯವನ್ನು ಕವಿ ವಾಲ್ಮೀಕಿಯು ತಿಳಿಸಿರುವರು. ವಾಲ್ಮೀಕಿ ಆಶ್ರಮ ಬಳಿ ಸೀತೆಯನ್ನು ಬಿಡಲು ರಾಮನ ಹೇಳಿದ್ದರ ಹಿಂದೆ ರಾಮನ ಕಳಕಳಿ ಇದದ್ದನ್ನು ಕವಿ ತಿಳಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.