ಲಕ್ಷ್ಮಣ ರಾಮನಿಗೆ ಕುತೂಹಲದಿ ಪ್ರಶ್ನಿಸಿದ….

By admin


ಲಕ್ಷ್ಮಣ ರಾಮನಿಗೆ ಕುತೂಹಲದಿ ಪ್ರಶ್ನಿಸಿದ:II
“ಶಾಪಗ್ರಹಸ್ಥ ನಿಮಿ ವ ವಸಿಷ್ಠರು ಮರಳಿ I
ಹೇಗೆ ಪಡೆದರು ತಮ್ಮ ದೇಹ ಪ್ರಜ್ಞೆ?” II
ಕೇಳಿ ಲಕ್ಷ್ಮಣನ ಪ್ರಶ್ನೆ ಉತ್ತರಿಸಿದ ರಾಮ: I
“ಶಾಪಪೀಡಿತ ಇಬ್ಬರೂ ತ್ಯಾಗ ಮಾಡಿದರು ತಮ್ಮ ತಮ್ಮ ದೇಹ,II
ಹೊಸ ದೇಹಕ್ಕಾಗಿ ಮೊರೆ ಹೊಕ್ಕರು ಪಿತಾಮಹಾನ:I
ವಸಿಷ್ಠರು ಹೊಸ ದೇಹಕ್ಕಾಗಿ ಮಹಾದೇವನಲ್ಲಿ ಕೋರಿದರು:II
ʻಓ ಮಹಾದೇವಾ, ನಿಮಿ ಶಾಪಕ್ಕಾಗಿ ತ್ಯಾಗಿಸಿದೆ I
ಎನ್ನ ದೇಹ, ವಾಯುವಿನಲಿ ಲೀನವಾಗಿರುವೆ, II
ಅಶರೀರವಾಗಿ ಧರ್ಮಕಾರ್ಯ ಮಾಡಲು ಎನಗೆI
ಅಸಾಧ್ಯವಾಗಿದೆ, ದಯಪಾಲಿಸು ಹೊಸ ದೇಹ ಎನಗೆ; II
ಕೇಳಿ ವಸಿಷ್ಠರ ಪ್ರಾರ್ಥನೆ ಬ್ರಹ್ಮದೇವನ ನುಡಿದ:I
ಮಿತ್ರ ವ ವರುಣರ ವೀರ್ಯದಲ್ಲಿ ನೀ ಪ್ರವೇಶಿಸು, ||
ತಾಯಿ ಇಲ್ಲದೇ ಹುಟ್ಟಿ ಹೊಸ ದೇಹ ಪಡೆಯುವಿ ನೀ,I
ಕೇಳಿ ಬ್ರಹ್ಮನ ಮಾತು ವಸಿಷ್ಠರು ಹೋದರು ವರುಣ ಆಲಯಕ್ಕೆ;II
ಅದೇ ಸಂದರ್ಭದಲಿ ಮಿತ್ರ ಆಳುತಿದ್ದ ವರುಣ ವಲಯ,I
ತನ್ನ ಸಖಿಯರೊಂದಿಗೆ ಅಪ್ಸರೆ ಊರ್ವಶಿ ಬಂದಿದಳಲ್ಲಿ;II
ಜಲಕ್ರೀಡೆಯಲ್ಲಿದ ಊರ್ವಶಿಯನ್ನು ಅಪ್ಪಿ ವರುಣI
ಅವಳೊಂದಿಗೆ ಸಮಾಗಮ ಇಚ್ಚೆ ವ್ಯಕ್ತ ಪಡಿಸಿದ: II
ಕೇಳಿ ವರುಣನ ಇಚ್ಚೆ ಊರ್ವಶಿ ಕೈಮುಗಿದು ಉತ್ತರಿಸಿದಳು: I
ಓ ವರುಣದೇವಾ, ಸಮಾಗಮಕ್ಕಾಗಿ ಮಿತ್ರನುII
ಎನ್ನ ಕರೆದಿಹನು; ಕಾಮೋದ್ರೇಕಿತ ವರುಣ ನುಡಿದ ಊರ್ವಶಿಗೆ: I
ನೀನು ಸಮಾಗಮಕ್ಕೆ ಒಪ್ಪದಿದ್ದರೆ, II
ನಾ ಬಿಡುವೆ ವೀರ್ಯ ಬ್ರಹ್ಮನಿರ್ಮಿತ ಕುಂಭದಲಿ; I
ಕೇಳಿ ವರುಣನ ನುಡಿ ಊರ್ವಶಿ ಉತ್ತರಿಸಿದಳು: ಹಾಗೆ ಆಗಲಿ, II
ಎನ್ನ ದೇಹ ಮಿತ್ರನದು ಆಗಿದ್ದರೂ ಎನ್ನ ಮನ ನಿನ್ನಲಿದೆ; I
ಕೇಳಿ ಊರ್ವಶಿ ನುಡಿ, ವರುಣ ವಿಸರ್ಜಿಸಿದ ವೀರ್ಯ II
ಕುಂಭದಲಿ, ಬೆಂಕಿ ಉಂಡೆಯಂತೆ ಉದುರಿತು ವೀರ್ಯ; I
ತಕ್ಷಣ ಊರ್ವಶಿ ಅಪೇಕ್ಷಿಸಿದಳು ಮಿತ್ರನ ಸಂಗ II
ಆದರೆ ಇದ ತಿಳಿದ ಮಿತ್ರ ಕೋಪದಿ ಶಪಿಸಿದ ಊರ್ವಶಿಗೆ:I
ನಿನ್ನ ಸಂಗ ಮೊದಲು ಬಯಸಿದವರು ಯಾರು? II
ಎನ್ನ ತೊರೆದೆಕೆ? ಯಾವ ಕಾರಣಕ್ಕೆ ನೀ ಪರ ಸಂಗ ಬಯಸಿದೆ?I
ನಿನಗೆ ನೈತಿಕ ಪ್ರಜ್ಞೆ ಇಲ್ಲವೇ?II
ಈ ಕೃತ್ಯಕಾಗಿ ತಿರಸ್ಕರಿಸುವೆ ನಿನ್ನ,ಮಾನವ ಲೋಕಕ್ಕೆ ಹೋಗು, I
ಕಾಶಿರಾಜ ಪುರವಾಸನ ಸೇರು, ಓ ಪಾಪಿಯೇ,II
ಬುಧಪುತ್ರ ಪುರವಾಸನ ಸೇರು ನೀ. I
ಶಾಪಗ್ರಸ್ಥ ಊರ್ವಶಿ ಕಾಶಿರಾಜ ಪುರುವಾಸನ ಬಳಿ ಬಂದಳು;II
ಪುರ್ವಾಸನ ಸಂಗದಲಿ ಊರ್ವಶಿ ಜನ್ಮಕೊಟ್ಟಳು ಆಯು ನಾಮ ಮಗನಿಗೆ,I
ವೀರನಿಗೆ; ಪರಾಕ್ರಮಿ ಆಯುನ ಮಗನೆII
ನಾಹುಶ; ಹೀಗೆ ಊರ್ವಶಿ ಮಾನವಲೋಕದಲಿ I
ತನ್ನ ಶಾಪದ ದಿನಗಳನ್ನು ಮುಗಿಸಿ ಇಂದ್ರಲೋಕಕ್ಕೆ ಮರಳಿದಳು.II
ಉತ್ತರಕಾಂಡ

ರಾಜಾ ನಿಮಿ ಮತ್ತು ವಸಿಷ್ಠರು ತಮ್ಮ ಶಾಪಗಳಿಂದ ಮುಕ್ತರಾಗಲು ಬ್ರಹ್ಮನಲ್ಲಿ ಮೊರೆಹೊಕ್ಕ, ಬ್ರಹ್ಮನು ವಸಿಷ್ಠರಿಗೆ ಮಿತ್ರ ಮತ್ತು ವರುಣನ ವೀರ್ಯದಲ್ಲಿ ಪ್ರವೇಶಿಸಿಲು ಹೇಳಿದ, ವರುಣ ವಲಯದಲ್ಲಿ ಮಿತ್ರನ ಸಮಾಗಮಕ್ಕೆ ಬಂದ ಊರ್ವಶಿ ವರುಣನ ವೀರ್ಯವನ್ನು ಧರಿಸಿದ, ಮಿತ್ರನಿಗೆ ಊರ್ವಶಿ ಅನೈತಿಕ ಕಾರ್ಯದ ಬಗ್ಗೆ ತಿಳಿದು ಅವಳಿಗೆ ಶಾಪ ನೀಡಿದ ಹಾಗು ಆ ಶಾಪದಂತೆ ಅವಳು ಕಾಶಿರಾಜ ಪುರುವಾನ ಸಂಗ ಮಾಡಿ ಪರಾಕ್ರಮಿ ನಾಹುಶನಿಗೆ ಜನ್ಮ ನೀಡಿದ ಘಟನೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಆದಿಕವಿಯು ಸ್ತ್ರೀಯ ನೈತಿಕ ವಿಚಾರವನ್ನು ಮಿತ್ರನ ವಿಚಾರಗಳಲ್ಲಿ ಹೀಗೆ ವ್ಯಕ್ತ ಪಡಿಸಿರುವರು. ರಾಜಾ ನಿಮಿ ಮತ್ತು ವಸಿಷ್ಠರ ಶಾಪಗ ಳ ಕಥೆ ಕೇಳಿ ಲಕ್ಷ್ಮಣನು ರಾಮನಿಗೆ ಕುತೂಹಲದಿಂದ ಪ್ರಶ್ನಿಸಿದನು “ ಶಾಪಗ್ರಹಸ್ಥ ನಿಮಿ ಮತ್ತು ವಸಿಷ್ಠರು ಮರಳಿ ತಮ್ಮ ದೇಹಕ್ಕೆ ಪ್ರಜ್ಞೆ ಹೇಗೆ ಪಡೆದರು?” ಲಕ್ಷ್ಮಣನ ಪ್ರಶ್ನೆ ಕೇಳಿ ರಾಮನು ಅವನಿಗೆ ಉತ್ತರಿಸಿದನು “ಶಾಪಪೀಡಿತ ಇಬ್ಬರೂ ತಮ್ಮ ತಮ್ಮ ದೇಹ ತ್ಯಾಗ ಮಾಡಿದರು ಹಾಗು ಹೊಸ ದೇಹಕ್ಕಾಗಿ ಮೊರೆ ಹೊಕ್ಕರು ಪಿತಾಮಹಾರನ್ನು. ವಸಿಷ್ಠರು ಹೊಸ ದೇಹಕ್ಕಾಗಿ ಮಹಾದೇವನಲ್ಲಿ ಕೋರಿದರು ʻಓ ಮಹಾದೇವಾ, ನಿಮಿ ಶಾಪಕ್ಕಾಗಿ ನನ್ನ ದೇಹವನ್ನು ತ್ಯಾಗಿಸಿ ವಾಯುವಿನಲಿ ಲೀನವಾಗಿರುವೆನು, ನನಗೆ ಅಶರೀರವಾಗಿ ಧರ್ಮಕಾರ್ಯ ಮಾಡಲು ಅಸಾಧ್ಯವಾಗಿದೆ, ಹೊಸ ದೇಹ ನನಗೆ ದಯಪಾಲಿಸುʼ. ವಸಿಷ್ಠರ ಪ್ರಾರ್ಥನೆಯನ್ನು ಕೇಳಿ ಬ್ರಹ್ಮದೇವನು ವಸಿಷ್ಥರಿಗೆ ಹೇಳಿದನು ನೀನು ಮಿತ್ರ ಮತ್ತು ವರುಣರ ವೀರ್ಯದಲ್ಲಿ ಪ್ರವೇಶಿಸು, ನೀನು ತಾಯಿ ಇಲ್ಲದೇ ಹುಟ್ಟಿ ಹೊಸ ದೇಹ ಪಡೆಯುವಿʼ ಬ್ರಹ್ಮನ ಮಾತು ಕೇಳಿ ವಸಿಷ್ಠರು ವರುಣ ಆಲಯಕ್ಕೆ ಹೋದರು; ಅದೇ ಸಂದರ್ಭದಲಿ ಮಿತ್ರನು ವರುಣ ವಲಯ ಆಳುತಿದ್ದನು; ತನ್ನ ಸಖಿಯರೊಂದಿಗೆ ಅಪ್ಸರೆ ಊರ್ವಶಿ ಬಂದಿದಳಲ್ಲಿ, ಜಲಕ್ರೀಡೆಯಲ್ಲಿದ ಊರ್ವಶಿಯನ್ನು ವರುಣ ಅಪ್ಪಿ ಅವಳೊಂದಿಗೆ ಸಮಾಗಮದ ತನ್ನ ಇಚ್ಚೆಯನ್ನು ವ್ಯಕ್ತ ಪಡಿಸಿದನು; ವರುಣನ ಇಚ್ಚೆ ಕೇಳಿ ಊರ್ವಶಿ ಕೈಮುಗಿದು ಅವನಿಗೆ ಉತ್ತರಿಸಿದಳು ʼಓ ವರುಣದೇವಾ, ಸಮಾಗಮಕ್ಕಾಗಿ ಮಿತ್ರನು ನನ್ನನ್ನು ಇಲ್ಲಿಗೆ ಕರೆದಿರುವನುʼ. ಕಾಮೋದ್ರೇಕಿತ ವರುಣನು ಊರ್ವಶಿಗೆ ಎಚ್ಚರಿಸಿದನು ʼನೀನು ನನ್ನೊಂದಿಗೆ ಸಮಾಗಮಕ್ಕೆ ಒಪ್ಪದಿದ್ದರೆ, ನಾನು ಬಿಡುವೆ ವೀರ್ಯ ನಿನ್ನ ಬ್ರಹ್ಮನಿರ್ಮಿತ ಕುಂಭದಲಿʼ. ವರುಣನ ಮಾತುಗಳನ್ನು ಕೇಳಿ ಊರ್ವಶಿ ಅವನಿಗೆ ಒಪ್ಪಿಗೆಯಿಂದ ಉತ್ತರಿಸಿದಳು ʼಹಾಗೆ ಆಗಲಿ,ನನ್ನ ದೇಹ ಮಿತ್ರನದು ಆಗಿದ್ದರೂ ನನ್ನ ಮನವು ನಿನ್ನಲಿದೆʼ. ಊರ್ವಶಿ ಒಪ್ಪಿಗೆ ಮಾತು ಕೇಳಿ ವರುಣನು ಅವಳ ಕುಂಭದಲಿ ವೀರ್ಯ ವಿಸರ್ಜಿಸಿದನು, ಬೆಂಕಿ ಉಂಡೆಯಂತೆ ವೀರ್ಯ ಉದುರಿತು; ತಕ್ಷಣ ಊರ್ವಶಿವು ಮಿತ್ರನ ಸಂಗ ಅಪೇಕ್ಷಿಸಿದಳು,ಆದರೆ ಈ ಘಟನೆಯನ್ನು ತಿಳಿದ ಮಿತ್ರನು ಕೋಪದಿಂದ ಊರ್ವಶಿಗೆ ಶಾಪ ನೀಡಿದನು ʼನಿನ್ನ ಸಂಗ ಮೊದಲು ಬಯಸಿದವರು ಯಾರು?ನೀನು ನನ್ನ ತೊರೆದೆ ಏಕೆ? ಯಾವ ಕಾರಣಕ್ಕೆ ನೀನು ಪರ ಸಂಗ ಬಯಸಿದೆ? ನಿನಗೆ ನೈತಿಕ ಪ್ರಜ್ಞೆ ಇಲ್ಲವೇ? ಈ ಕೃತ್ಯಕಾಗಿ ನಾನು ನಿನ್ನನ್ನು ತಿರಸ್ಕರಿಸುವೆನು, ನೀನು ಮಾನವ ಲೋಕಕ್ಕೆ ಹೋಗಿ ಕಾಶಿರಾಜ ಪುರವಾಸನ ಸೇರು; ಓ ಪಾಪಿಯೇ, ನೀನು ಬುಧನ ಪುತ್ರ ಪುರವಾಸನನ್ನು ಸೇರುʼ. ಶಾಪಗ್ರಸ್ಥ ಊರ್ವಶಿ ಕಾಶಿರಾಜ ಪುರುವಾಸನ ಬಳಿ ಬಂದಳು; ಪುರುವಾಸನ ಸಂಗದಲಿ ಊರ್ವಶಿ ಆಯು ನಾಮ ಮಗನಿಗೆ ಜನ್ಮಕೊಟ್ಟಳು, ಆ ಪರಾಕ್ರಮಿ ವೀರ ಆಯುನ ಮಗನೇ ನಾಹುಶ; ಹೀಗೆ ಊರ್ವಶಿ ಮಾನವ ಲೋಕದಲಿ ತನ್ನ ಶಾಪದ ದಿನಗಳನ್ನು ಮುಗಿಸಿ ಇಂದ್ರಲೋಕಕ್ಕೆ ಮರಳಿದಳು.”
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.