ಲಕ್ಷ್ಮಣ ನುಡಿದ ರಾಮನಿಗೆ

By admin


ದೈವದ ವಿಚಿತ್ರ ಆಟ ಕೇಳಿ ಲಕ್ಷ್ಮಣ ನುಡಿದ ರಾಮನಿಗೆ: “ಓ ಕಕುತ್ಸ್ಥ, I
ವಸಿಷ್ಠ ವ ನಿಮಿ ಪುನಃ ದೇಹ ಪಡೆದರ್ಹೇಗೆ?”II
ರಾಮನು ಕಥೆ ಹೇಳಲು ಆರಂಭಿಸಿದ:ʻ ಓ ರಾಜಕುಮಾರಾ,I
ವರುಣ ವ ಮಿತ್ರ ವೀರ್ಯ ವಿಸರ್ಜಿಸಿದ ಕುಂಭದಿII
ಜನಿಸಿದರು ಮುನಿಗಳಿಬ್ಬರು; ಮೊದಲನೆ ಕುಂಭದಿ ವಸಿಷ್ಠ ಹೊರ ಬಂದ,I
ನಾನು ನಿನ್ನ ಮಗನಲ್ಲ ಎಂದ ಮಿತ್ರನಿಗೆ;II
ಇಕ್ಷ್ವಾಕು ವಂಶವು ತನ್ನ ಕುಲದ ಕಲ್ಯಾಣಕ್ಕಾಗಿI
ಸ್ವೀಕರಿಸಿತು ವಸಿಷ್ಠರನು ತಮ್ಮ ಧರ್ಮಗುರುವನ್ನಾಗಿ; II
ಓ ಲಕ್ಷ್ಮಣಾ, ಹೀಗೆ ವಸಿಷ್ಠರು ಹೊಸ ದೇಹ ಪಡೆದುI
ನಮ್ಮ ಕುಲ ಗುರುವಾದರು, ಇದು ವಸಿಷ್ಠರ ಕಥೆ; II
ಅದೇ ಕುಂಭದಿ ಮಿತ್ರನ ಮಗನಾಗಿ ನಿಮಿI
ಜನಿಸ ಬೇಕಿತ್ತು, ಆದರೆ ಹಾಗಾಗಲಿಲ್ಲ; II
ಈಗ ನಿಮಿ ಹೇಗೆ ಜನಿಸಿದೆಂಬ ಕಥೆ ಹೇಳುವೆ ಕೇಳು: I
ನಿಮಿ ಪುನಃ ದೇಹ ಪಡೆಯಲು ಶ್ರಮಿಸಿದರುಋಷಿಗಳು;II
ಪ್ರಜೆಗಳು ಸೇವಕರು ಉಡುಪು,ಮೂಲಿಕೆಗಳನ್ನುI
ಕೊಟ್ಟರು, ಮಾಡಿದರು ಮುನಿಗಳು ಯಜ್ಞ;II
ಭೃಗು ಮುನಿ ನಿಮಿಗೆ ನುಡಿದ: ಓ ರಾಜನೇI
ಕೊಡುವೆ ಪುನಃ ಜೀವ ನಿನಗೆ ನಾನು; II
ಯಜ್ಞ ಮೆಚ್ಚಿ ದೇವತೆಗಳು ನಿಮಿಗೆI
ವರ ಕೇಳಲು ಕೋರಿದರು, ನಿಮಿ ದೇವತೆಗಳಿಗೆ ನುಡಿದ:II
ಓ ದೇವತೆಗಳೇ ಎನಗೆ ದೇಹವನ್ನು ಕೊಡಿರಿ,I
ಹಾಗೆ ಅಗಲೆಂದರು ದೇವತೆಗಳು ನಿಮಿಗೆ, II
ವಾಯುರೂಪದಲಿ ನೀ ಜೀವಿಗಳ ಕಣ್ಣಲಿರು I
ಅವು ಪದೇ ಪದೇ ಪಿಳಿಕಿಸಿದಾಗ ನೀ ವಾಯುರೂಪದಲಿ ಚಲಿಸು; II
ಹೀಗೆ ದೇವತೆಗಳು ವರ ನೀಡಿ ಮರಳಿದರುI
ಇತ್ತ ನಿಮಿ ದೇಹ ಪಡೆದನು ಯಜ್ಞಸ್ಥಳದಿ, II
ಮಹಾ ಶಕ್ತಿಯೊಂದಿಗೆ ಸೂತ್ರದಂತೆ ತನ್ನI
ದೇಹ ತಿಕ್ಕಿದ,ಅರನಿದಿ ಮಹಾ ತಪಸ್ವಿಯಾಗಿ ಹುಟ್ಟಿದ; II
ಹೀಗೆ ಹುಟ್ಟಿದವನಿಗೆ ಮಿಥಿ ಎಂದು ಹೆಸರಿಸಿದರುI
ಅವನೇ ವೈದೇಹದ ರಾಜ, ಆದಿ ಜನಕ; II
ಹುಟ್ಟಿತು ಮಹಾಬಲಿ ಮಿಥಿಯಿಂದ ಮಿಥಿಲಾವಂಶ I
ಹೀಗೆ ರಾಜರ್ಷಿ ನಿಮಿ ಪಡೆದ ಪುನಃ ದೇಹ”. II
ಉತ್ತರಕಾಂಡ

ಬ್ರಹ್ಮ ಕುಂಭದಿಂದ ವಸಿಷ್ಠ ಮತ್ತು ನಿಮಿ ಪುನಃ ದೇಹ ಪಡೆದ ಪ್ರಸಂಗ, ವಸಿಷ್ಠರು ಪುನಃ ದೇಹ ಪಡೆದು ಇಕ್ಷ್ವಾಕುಕುಲದ ಗುರುಗಳಾದ ಮತ್ತು ಋಷಿಗಳ ಯಜ್ಞದಿಂದ ನಿಮಿ ದೇಹ ಪಡೆದ, ನಿಮಿಯಿಂದ ಜನ್ಮ ಪಡೆದ ಮಿಥಿ ಮೂಲಕ ಆದಿ ಜನಕ ಮಿಥಿಲಾವಂಶದ ಪ್ರಾರಂಭವಾದ ಕಥೆಗಳನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ದೈವದ ವಿಚಿತ್ರ ಆಟ ಕೇಳಿ ಲಕ್ಷ್ಮಣ ರಾಮನಿಗೆ ಪ್ರಶ್ನಿಸಿದನು “ಓ ಕಕುತ್ಸ್ಥ, ವಸಿಷ್ಠ ಮತ್ತು ನಿಮಿ ಪುನಃ ದೇಹ ಹೇಗೆ ಪಡೆದರು?” ತಕ್ಷಣ ರಾಮನು ಲಕ್ಷ್ಮನನಿಗೆ ಕಥೆ ಹೇಳಲು ಆರಂಭಿಸಿದನು”ಓ ರಾಜಕುಮಾರಾ, ವರುಣ ಮತ್ತು ಮಿತ್ರ ವಿಸರ್ಜಿಸಿದ ವೀರ್ಯ ಬ್ರಹ್ಮಕುಂಭದಿಂದ ಮುನಿಗಳಿಬ್ಬರು ಜನಿಸಿದರು; ಮೊದಲು ಕುಂಭದಿಂದ ವಸಿಷ್ಠ ಹೊರ ಬಂದರು, ನಾನು ನಿನ್ನ ಮಗನಲ್ಲ ಎಂದು ಮಿತ್ರನಿಗೆ ಹೇಳಿದನು; ಇಕ್ಷ್ವಾಕು ವಂಶವು ತನ್ನ ಕುಲದ ಕಲ್ಯಾಣಕ್ಕಾಗಿ ವಸಿಷ್ಠರನು ತಮ್ಮ ಧರ್ಮಗುರುವನ್ನಾಗಿ ಸ್ವೀಕರಿಸಿತು; ಓ ಲಕ್ಷ್ಮಣಾ, ಹೀಗೆ ವಸಿಷ್ಠರು ಹೊಸ ದೇಹ ಪಡೆದು ನಮ್ಮ ಕುಲ ಗುರುವಾದರು, ಇದು ವಸಿಷ್ಠರು ದೇಹ ಪಡೆದ ಕಥೆ; ಅದೇ ಕುಂಭದಿಂದ ಮಿತ್ರನ ಮಗನಾಗಿ ನಿಮಿ ಜನಿಸ ಬೇಕಿತ್ತು, ಆದರೆ ಹಾಗಾಗಲಿಲ್ಲ; ಈಗ ನಿಮಿ ಹೇಗೆ ಜನಿಸಿದೆಂಬ ಕಥೆ ಹೇಳುವೆನು ಕೇಳು ʼ ಋಷಿಗಳು ನಿಮಿ ಪುನಃ ದೇಹ ಪಡೆಯಲು ಶ್ರಮಿಸಿದರು; ಪ್ರಜೆಗಳು ಮತ್ತು ಸೇವಕರು ಉಡುಪು,ಮೂಲಿಕೆಗಳನ್ನು ಕೊಟ್ಟರು, ಮುನಿಗಳು ಯಜ್ಞ ಮಾಡಿದರು; ಭೃಗು ಮುನಿ ನಿಮಿಗೆ ನುಡಿದನು ʻಓ ರಾಜನೇ, ನಾನು ನಿನಗೆ ಪುನಃ ಜೀವ ಕೊಡುವೆನುʼ. ದೇವತೆಗಳು ಯಜ್ಞ ಮೆಚ್ಚಿ ನಿಮಿಗೆ ವರ ಕೇಳಲು ಕೋರಿದರು, ನಿಮಿ ದೇವತೆಗಳಿಗೆ ನುಡಿದನು ʻಓ ದೇವತೆಗಳೇ ನನಗೆ ದೇಹವನ್ನು ಕೊಡಿರಿʼ. ದೇವತೆಗಳು ನಿಮಿಗೆ ಹಾಗೆ ಅಗಲೆಂದರು, ವಾಯುರೂಪದಲಿ ನೀನು ಜೀವಿಗಳ ಕಣ್ಣಲಿರು ಅವು ಪದೇ ಪದೇ ಕಣ್ಣು ಪಿಳಿಕಿಸಿದಾಗ ನೀನು ವಾಯುರೂಪದಲಿ ಚಲಿಸು ಎಂದು ದೇವತೆಗಳು ನಿಮಿಗೆ ವರ ನೀಡಿ ಮರಳಿದರು; ಇತ್ತ ನಿಮಿ ಯಜ್ಞಸ್ಥಳದಿಂದ ದೇಹ ಪಡೆದನು, ಮಹಾ ಶಕ್ತಿಯೊಂದಿಗೆ ಸೂತ್ರದಂತೆ ತನ್ನ ದೇಹ ತಿಕ್ಕಿದನು,ಅದರಿಂದ ಮಹಾ ತಪಸ್ವಿಯಾಗಿ ಹುಟ್ಟಿದ ಮಗು ಮಿಥಿ ಎಂದು ಹೆಸರು ಪಡೆದನು, ಅವನೇ ವೈದೇಹದ ರಾಜ, ಆದಿ ಜನಕನು; ಮಹಾಬಲಿ ಮಿಥಿಯಿಂದ ಮಿಥಿಲಾವಂಶ ಹುಟ್ಟಿತು ಹೀಗೆ ರಾಜರ್ಷಿ ನಿಮಿ ಪುನಃ ದೇಹವನ್ನು ಪಡೆದನು”. ಇಲ್ಲಿ ಕುಂಭದಿಂದ ವಸಿಷ್ಠರು ಹುಟ್ಟಿದ ಕಥೆ ವಿಶೇಷವೆನಿಸುವದು.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.