ಬಲಶಾಲಿ ನಿಮಿ ವಸಿಷ್ಠರಿಗೆ ಏಕೆ ಕ್ಷಮಿಸಲಿಲ್ಲ?

By admin


ಪುನಃ ದೇಹ ಪಡೆದ ವಸಿಷ್ಠ ವ ನಿಮಿI
ಕಥೆ ಕೇಳಿ ಲಕ್ಷ್ಮಣ ರಾಮನಿಗೆ ಪ್ರಶ್ನಿಸಿದ:II
“ಬಲಶಾಲಿ ನಿಮಿ ವಸಿಷ್ಠರಿಗೆ ಏಕೆ ಕ್ಷಮಿಸಲಿಲ್ಲ?I
ಲಕ್ಷ್ಮಣನಿಗೆ ರಾಮ ಉತ್ತರಿಸಿದ:” ಓ ಲಕ್ಷ್ಮಣಾ, II
ಮನುಷ್ಯ ಕ್ಷಮೆ ಮಾಡುವದಿಲ್ಲ ಯಾವಾಗಲೂ; I
ಹೇಳುವೆ ಕೇಳು ರಾಜಾ ಯಯಾತಿ ಗೋಳು:II
ರಾಜಾ ಯಯಾತಿ ಜನಮೆಚ್ಚಗೆಯ ರಾಜ,I
ರಾಜಾ ನಹುಶಾನ ಮಗ, ಇಕ್ಷ್ವಾಕು ಕುಲಜ; II
ನಹುಜಾಗೆ ಇಬ್ಬರು ಸುಂದರ ಪತ್ನಿಯರು,I
ರಾಣಿ ಶರ್ಮಿಶ್ಥಳು ದಿತಿ ವ ದೈತ್ಯವೃಶ್ಪರ್ವನ ಮಗಳುII
ರಾಣಿ ದೇವಯಾನಿ ಶುಕ್ರಾಚಾರ್ಯರ ಮಗಳು; I
ರಾಣಿ ದೇವಯಾನಿ ಯಯಾತಿಗೆ ಪ್ರೀಯಳಾಗಿದಿಲ್ಲII
ಶರ್ಮಿಶ್ಥಳ ಮಗ ಪುರು,ದೇವಯಾನಿ ಮಗ ಯದುI
ಹೀಗೆ ಇಬ್ಬರು ಪುತ್ರರು ರಾಜಾ ಯಯಾತಿಗೆ; II
ತನ್ನ ತಾಯಿ ವ ತನ್ನ ಉತ್ತಮ ಗುಣಗಳಿಂದಾಗಿI
ಅತಿಪ್ರಿಯನಾಗಿದ್ದ ಪುರು ತಂದೆ ಯಯಾತಿಗೆ; II
ಇದನ್ನರಿತ ಯದು ದುಃಖದಿ ತಾಯಿ ದೇವಿಯಾನಿಗೆI
ನುಡಿದ:ʻತಾಳಲಾರೆ ನಿನಗೆ ನೀಡುವ ದುಃಖ,ನಿಂದನೆ; II
ಓ ರಾಣಿ, ನಾವಿಬ್ಬರೂ ಅಗ್ನಿಗೆ ಹಾರೋಣ, ನೋಡಿI
ಸಂಭ್ರಮಿಸಲಿ ದೈತ್ಯ ಪುತ್ರಯೊಂದಿಗೆ ರಾಜಾ ಯಯಾತಿ;II
ಇದು ನಿನಗೆ ಸಾಧ್ಯವಾಗದಿದ್ದರೆ, ಬಿಡು ಎನಗೆI
ನಿನ್ನಿಂದ ಬಹು ದೂರ ಹೋಗಲು;II
ಎಲ್ಲ ಸಹಿಸುತ ನೀನು ಇಲ್ಲಿಯೇ ಬಿದ್ದಿರುI
ಪ್ರಾಣ ತ್ಯಾಗ ಮಾಡಲು ಎನಗೆ ಬಿಡುʼ. II
ಕೇಳಿ ಮಗನ ದುಃಖದ ಮಾತು ದೇವಯಾನಿI
ಕರೆದಳು ತಂದೆ ಶುಕ್ರಾಚಾರ್ಯರನು ಸಹಾಯಕ್ಕೆ; II
ಮಗಳ ಕರೆಗೆ ಭಾರ್ಗವ ಪ್ರತ್ಯಕ್ಷನಾದI
ಅಪ್ಪಿಕೊಂಡು ಮಗಳನ್ನು ಲಾಲಿಸಿದ ಶುಕ್ರಾಚಾರ್ಯ: II
ʻಓ ಮಗಳೆ, ಏನು ವಿಷಯ?ʼ ಪದೇ ಪದೇI
ಪ್ರಶಿಸಿದ ದೇವಿಯಾನಿಯನು ಭಾರ್ಗವ; II
ದೇವಯಾನಿ ಉತ್ತರಿಸಿದಳು ತಂದೆಗೆ: ʻಅಗ್ನಿಗೆ ಹಾರಿ ಇಲ್ಲವೆ ವಿಷ ಕುಡಿದು I
ಇಲ್ಲವೇ ನೀರಿಗೆ ಜಿಗಿದು ನಾ ಸಾಯಬೇಕಾಗಿದೆ;II
ನಿನಗೆ ಗೊತ್ತಿಲ್ಲ ನಾಹುಶಪುತ್ರನ ಎಂತಹ ನಿಂದನೆ,I
ಅವಮಾನ ದುಖಗಳನ್ನು ಎದಿರಿಸುತಿರುವೆ;II
ಮರವನ್ನು ನಿರ್ಲಕ್ಷಿಸಿದಾಗ ಅದನ್ನು ಆಶ್ರಯI
ಪಡೆದ ಜೀವಿಗಳು ಕಷ್ಟಗಳಿಂದ ಬಳಲುವವು; II
ರಾಜನು ಎನ್ನ ನಿರ್ಲಕ್ಷಿಸಿರುವನು, ತೊರೆದಿರುವನು,I
ನಿರ್ಲಕ್ಷಿಸಿರುವಿ ನೀನೂ ಎನ್ನನು, ನಾ ನಿರ್ಲಕ್ಷಿಸಿದ ಮರ;II
ಕೇಳುತ ಮಗಳ ಕೋಪದ ನುಡಿ ಭಾರ್ಗವI
ಶಪಿಸಿದ ನಹುಶಾಪುತ್ರ ಯಯಾತಿಯನು: II
ʻಓ ಯಯಾತಿ, ನೀನು ಕಪಟದೃಷ್ಠಿದಿ ಎನ್ನI
ಕಾಣುತಿರುವೆ, ನಿನಗೆ ಮುಪ್ಪು ಅಡರಲಿʼ II
ಯಯಾತಿಗೆ ಶಾಪ ನೀಡಿ, ಮಗಳನ್ನು ಸಂತೈಸಿI
ಭಾರ್ಗವ ಪ್ರಜ್ವಲಿಸುವ ಸೂರ್ಯನಂತೆ ಹಿಂದಿರುಗಿದ. II
ಉತ್ತರಕಾಂಡ

ಯಯಾತಿಯಿಂದ ತನ್ನ ಮತ್ತು ತನ್ನ ಮಗನಿಗೆ ಆಗುವ ಅನ್ಯಾಯ, ನಿಂದನೆಯನ್ನು ಸಹಿಸದ ರಾಣಿ ದೇವಯಾನಿ ತನ್ನ ತಂದೆ ಶುಕ್ರಾಚಾರ್ಯರನ್ನು ಸಹಾಯಕ್ಕೆ ಕರೆದಾಗ ಅವರು ಮಗಳಿಗಾದ ಅನ್ಯಾಯ ತಿಳಿದು ʼವೃಧ್ಧನಾಗುʼಎಂದು ಯಯಾತಿಗೆ ಶಾಪಕೊಟ್ಟ ಪ್ರಸಂಗವನ್ನು ಹೀಗೆ ಆದಿಕವಿ ವಾಲ್ಮೀಕಿಯು ವಿವರಿಸಿರುವರು: ಪುನಃ ದೇಹ ಪಡೆದ ವಸಿಷ್ಠ ಮತ್ತು ನಿಮಿ ಕಥೆ ಕೇಳಿ ಲಕ್ಷ್ಮಣ ರಾಮನಿಗೆ ಪ್ರಶ್ನಿಸಿದನು “ಬಲಶಾಲಿ ನಿಮಿ ವಸಿಷ್ಠರಿಗೆ ಏಕೆ ಕ್ಷಮಿಸಲಿಲ್ಲ?” ಲಕ್ಷ್ಮಣನಿಗೆ ರಾಮನು ಉತ್ತರಿಸಿದನು ” ಓ ಲಕ್ಷ್ಮಣಾ, ಮನುಷ್ಯ ಯಾವಾಗಲೂ ಕ್ಷಮೆ ಮಾಡುವದಿಲ್ಲ; ನಿನಗೆ ಹೇಳುವೆ ಕೇಳು ರಾಜಾ ಯಯಾತಿ ಗೋಳು ʻರಾಜಾ ಯಯಾತಿ ಜನಮೆಚ್ಚಗೆಯ ರಾಜನು, ಅವನು ಇಕ್ಷ್ವಾಕು ಕುಲದ ರಾಜಾ ನಹುಶಾನ ಮಗನು, ನಹುಜಾಗೆ ಇಬ್ಬರು ಸುಂದರ ಪತ್ನಿಯರು, ಮೊದಲನೆ ಪತ್ನಿ ರಾಣಿ ಶರ್ಮಿಶ್ಥಳು, ಅವಳು ದಿತಿ ಮತ್ತು ದೈತ್ಯವೃಶ್ಪರ್ವನ ಮಗಳು;ಮತ್ತೊಬ್ಬಳು ರಾಣಿ ದೇವಯಾನಿ, ಅವಳು ಶುಕ್ರಾಚಾರ್ಯರ ಮಗಳು; ರಾಣಿ ದೇವಯಾನಿ ಯಯಾತಿಗೆ ಪ್ರೀಯಳಾಗಿದಿಲ್ಲ; ಶರ್ಮಿಶ್ಥಳ ಮಗ ಪುರು ಮತ್ತು ದೇವಯಾನಿ ಮಗ ಯದು, ಹೀಗೆ ರಾಜಾ ಯಯಾತಿಗೆ ಇಬ್ಬರು ಪುತ್ರರು; ರಾಜಕುಮಾರ ಪುರು ತನ್ನ ಮತ್ತು ತನ್ನ ತಾಯಿ ಉತ್ತಮ ಗುಣಗಳಿಂದಾಗಿ ತಂದೆ ಯಯಾತಿಗೆ ಅತಿಪ್ರಿಯನಾಗಿದ್ದನು, ಇದನ್ನರಿತ ಯದು ದುಃಖದಿಂದ ತಾಯಿ ದೇವಿಯಾನಿಗೆ ಅರುಹಿದನು ʻ ನಿನಗೆ ನೀಡುವ ದುಃಖ,ನಿಂದನೆ ನೋಡಿ ನಾನು ತಾಳಲಾರೆ; ಓ ರಾಣಿ, ನಾವಿಬ್ಬರೂ ಅಗ್ನಿಗೆ ಹಾರೋಣ, ಅದನ್ನು ನೋಡಿ ದೈತ್ಯ ಪುತ್ರಯೊಂದಿಗೆ ರಾಜಾ ಯಯಾತಿ ಸಂಭ್ರಮಿಸಲಿ; ಇದು ನಿನಗೆ ಸಾಧ್ಯವಾಗದಿದ್ದರೆ, ನಿನ್ನಿಂದ ಬಹು ದೂರ ಹೋಗಲು ನನಗೆ ಅನುಮತಿ ಕೊಡು, ನೀನು ಎಲ್ಲ ಸಹಿಸುತ ಇಲ್ಲಿಯೇ ಬಿದ್ದಿರು, ನನಗೆ ಪ್ರಾಣ ತ್ಯಾಗ ಮಾಡಲು ಅನುಮತಿ ಕೊಡುʼ. ಮಗನ ದುಃಖದ ಅರಿಕೆ ಮಾತುಗಳನ್ನು ಕೇಳಿ ದೇವಯಾನಿ ತನ್ನ ಸಹಾಯಕ್ಕೆ ತಂದೆ ಶುಕ್ರಾಚಾರ್ಯರನು ಕರೆದಳು; ಮಗಳ ಕರೆಗೆ ಭಾರ್ಗವ ಪ್ರತ್ಯಕ್ಷನಾಗಿ, ಅವಳನ್ನು ಅಪ್ಪಿಕೊಂಡು, ಶುಕ್ರಾಚಾರ್ಯ ಮಗಳನ್ನು ಲಾಲಿಸಿದನು ʻಓ ಮಗಳೆ, ಏನು ವಿಷಯ?ʼ ಭಾರ್ಗವನು ದೇವಿಯಾನಿಯನು ಪದೇ ಪದೇ ಪ್ರಶ್ನಿಸಿದನು; ದೇವಯಾನಿ ತಂದೆಗೆ ರೋಧಿಸಿ ಹೇಳಿದಳು ʻ ಅಗ್ನಿಗೆ ಹಾರಿ ಇಲ್ಲವೆ ವಿಷ ಕುಡಿದು ಇಲ್ಲವೇ ನೀರಿಗೆ ಜಿಗಿದು ನಾನು ಸಾಯಬೇಕಾಗಿದೆ;ನಿನಗೆ ಗೊತ್ತಿಲ್ಲ ನಾನು ನಾಹುಶಪುತ್ರನಿಂದ ಎಂತಹ ನಿಂದನೆ,ಅವಮಾನ ದುಖಗಳನ್ನು ಎದಿರಿಸುತಿರುವೆನು; ಮರವನ್ನು ನಿರ್ಲಕ್ಷಿಸಿದಾಗ ಅದನ್ನು ಆಶ್ರಯ ಪಡೆದ ಜೀವಿಗಳು ಕಷ್ಟಗಳಿಂದ ಬಳಲುವವು; ರಾಜನು ನನ್ನನ್ನು ನಿರ್ಲಕ್ಷಿಸಿರುವನು, ತೊರೆದಿರುವನು; ನೀನೂ ನನ್ನನು ನಿರ್ಲಕ್ಷಿಸಿರುವಿ, ನಾನು ನಿರ್ಲಕ್ಷಿಸಿದ ಮರʼ. ಮಗಳ ಕೋಪದ ಮಾತುಗಳನ್ನು ಭಾರ್ಗವವನು ನಹುಶಾಪುತ್ರ ಯಯಾತಿಯನು ಶಪಿಸಿದನು ʼಓ ಯಯಾತಿ, ನೀನು ಕಪಟದೃಷ್ಠಿಯಿಂದ ನನ್ನನ್ನು ಕಾಣುತಿರುವೆ, ನಿನಗೆ ಮುಪ್ಪು ಅಡರಲಿʼ ಯಯಾತಿಗೆ ಶಾಪ ನೀಡಿ, ಮಗಳನ್ನು ಸಂತೈಸಿ ಭಾರ್ಗವನು ಪ್ರಜ್ವಲಿಸುವ ಸೂರ್ಯನಂತೆ ಹಿಂದಿರುಗಿದನು.” ತಂದೆಯ ಪಕ್ಷಪಾತನೀತಿ ಮತ್ತು ದ್ವಿಪತ್ನಿರ ಸಮಸ್ಯೆಯನ್ನು ಕವಿ ಇಲ್ಲಿ ವಿವರಿಸಿರುವದು ವಿಶೇಷ.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.