ಲವನಾಸುರ ಎಲ್ಲಿರುವನು?

By admin


ಕೇಳಿ ಮುನಿಗಳ ಕೋರಕೆ ರಾಮ ನುಡಿದ:I
“ಲವನಾಸುರ ಎಲ್ಲಿರುವನು? ಅವನ ವರ್ತನೆ ಹೇಗೆ?”. II
ಕೇಳಿ ರಾಮನ ಪ್ರಶ್ನೆ ಮುನಿಗಳು ಉತ್ತರಿಸಿದರು:I
“ಅವನು ಪ್ರಾಣಿ, ಮುನಿ ಭಕ್ಷಕ, ಮಹಾಕ್ರೂರಿ, II
ಯಾವಾಗಲೂ ಮಧುವನದಲ್ಲಿ ವಿಹರಿಸುವನುI
ಹುಲಿ ಸಿಂಹ ಪಕ್ಷಿ ಮಾನವ ಜೀವಿಗಳೆ ಅವನ ಆಹಾರ;II
ಲವನಾಸುರನ ಭಕ್ಷಿಸುವ ರೀತಿ ಪ್ರಳಯಾಂತಕI
ಸಕಲ ಜೀವಿಗಳ ವಿನಾಸಕ್ಕೆ ದಾರಿ.” ಕೇಳಿ ರಾಘವ II
ಮುನಿಗಳ ನುಡಿ ಉತ್ತರಿಸಿದ:“ವಧಿಸುವೆ ಆ ರಾಕ್ಷಸನ” I
ಕೇಳಿ ರಾಮನ ಭರವಸೆ ಸಂತೋಷ ಪಟ್ಟರು ಮುನಿಗಳು:II
ರಾಮ ನುಡಿದ ತನ್ನ ಮೂವರೂ ಸಹೋದರರಿಗೆ:I
“ಆ ಅಸುರನ ವಧಿಸಲು ಯಾರು ಸಬಲರು? II
ಯಾರನ್ನು ನೇಮಿಸಲಿ? ಭರತ ಇಲ್ಲವೆI
ಶತ್ರುಘ್ನ, ಸಂಹರಿಸಲು ಲವನಾಸುರನ”.II
ಕೇಳಿ ಅಣ್ಣ ರಾಮನ ನುಡಿ ಭರತ ಉತ್ತರಿಸಿದ: I
“ನಾನು ವಧಿಸುವೆ ಆ ರಾಕ್ಷಸನ, ವಹಿಸು ಆ ಹೊಣೆ ಎನಗೆ.” II
ಭರತನ ಆವೇಶದ ನುಡಿ ಕೇಳಿ ಶತ್ರುಘ್ನ ನುಡಿದ:I
“ಓ ರಾಘವಾ, ಭರತ ತೋರಿಸಿಹನು ತನ್ನ ಸಾಮರ್ಥ್ಯ, II
ಅಣ್ಣನ ಅನುಪಸ್ಥಿತಿಯಲ್ಲಿ ಅಯೋಧ್ಯೆಯನುI
ಸಮರ್ಪಕವಾಗಿ ನಡೆಸಿಹನು, ಮಹಾಬಲಶಾಲಿ ಭರತ;II
ಆ ರಾಕ್ಷಸ ಸಂಹರಿಸಲು ವ ಎನ್ನ ಶೌರ್ಯ ತೋರಿಸಲು I
ನೀಡು ಎನಗೆ ಅವಕಾಶ.” ಕೇಳಿ ಶತ್ರುಘ್ನನ ಕೋರಿಕೆ II
ರಾಮ ನುಡಿದ:“ಆಗಲಿ ಹಾಗೆ, ಆಜ್ಞೆ ನೀಡುವೆ ನಿನಗೆ,I
ಮಧುನ ರಾಜ್ಯಕ್ಕೆ ಪಟ್ಟಗಟ್ಟುವೆನಿನ್ನ;II
ನಿನ್ನ ಇಚ್ಚೆಯಂತೆ ಇರಲಿ ಇಲ್ಲಿಯೆ ಭರತ,I
ಮರುಸ್ಥಾಪಿಸು ಯಮುನೆದಿ ಕೊಚ್ಚಿಹೋದ ರಾಜ್ಯ,II
ರಾಜನಿಲ್ಲದ ರಾಜ್ಯ ನರಕದಂತಾಗುವದು; I
ಲವನಾಸುರನ ಸಂಹರಿಸಿ ನೀನೆ ಅದರ ರಾಜ್ಯನಾಗು;II
ನಾನು ಹೇಳಿದನ್ನು ಮರುಪ್ರಶ್ನಿಸ ಬೇಡಾI
ಪಾಲಿಸು ಹಿರಿ ಅಣ್ಣನ ಆದೇಶ; II
ವಸಿಷ್ಠರ, ಪುರೋಹಿತರ ಆಚರಣೆ ಪರಂಪರೆಯಲಿI
ಪಟ್ಟಗಟ್ಟುವೆ ನಿನಗೆ, ಪಡೆ ಎಲ್ಲರ ಆಶಿರ್ವಾದ”.II
ಉತ್ತರಕಾಂಡ

ರಾಮನು ಮುನಿಗಳಿಂದ ಲವನಾಸುರನ ಸುಳಿವು ತಿಳಿದು ಅವನನ್ನು ವಧಿಸುವ ಜವಾಬ್ದಾರಿ ಬಗ್ಗೆ ಸಹೋದರರನ್ನು ಕೋರಿದಾಗ ಶತ್ರುಘ್ನನು ತನ್ನ ಸಾಮರ್ಥ್ಯ ತೋರಿಸಲು ಆ ಅವಕಾಶವನ್ನು ತನಗೆ ಕೊಡುವಂತೆ ರಾಮನಲ್ಲಿ ಕೋರಿದ ಪ್ರಸಂಗವನ್ನು ಹೀಗೆ ಆದಿಕವಿ ವಾಲ್ಮೀಕಿಯು ವಿವರಿಸಿರುವರು:
ಚ್ಯವನ ಮುನಿಗಳ ಕೋರಕೆ ಕೇಳಿ ರಾಮನು ಮುನಿಗಳಿಗೆ “ ಲವನಾಸುರ ಎಲ್ಲಿರುವನು? ಅವನ ವರ್ತನೆ ಹೇಗೆ?” ಎಂದು ಪ್ರಶ್ನಿಸಿದನು. ರಾಮನ ಪ್ರಶ್ನೆಗಳನ್ನು ಕೇಳಿ ಮುನಿಗಳು ರಾಮನಿಗೆ ಉತ್ತರಿಸಿದರು “ಅವನು ಪ್ರಾಣಿ, ಮುನಿ ಭಕ್ಷಕ, ಮಹಾಕ್ರೂರಿ, ಯಾವಾಗಲೂ ಮಧುವನದಲ್ಲಿ ವಿಹರಿಸುವನು; ಹುಲಿ ಸಿಂಹ ಪಕ್ಷಿ ಮಾನವ ಜೀವಿಗಳೆ ಅವನ ಆಹಾರ; ಲವನಾಸುರನ ಭಕ್ಷಿಸುವ ರೀತಿ ಪ್ರಳಯಾಂತಕ, ಅದು ಸಕಲ ಜೀವಿಗಳ ವಿನಾಸಕ್ಕೆ ದಾರಿ.” ರಾಘವ ಮುನಿಗಳ ಉತ್ತರ ಕೇಳಿ “ವಧಿಸುವೆ ಆ ರಾಕ್ಷಸನ” ಎಂದು ಭರವಸೆ ಕೊಟ್ಟನು; ರಾಮನ ಭರವಸೆಯ ಮಾತು ಕೇಳಿ ಮುನಿಗಳು ಸಂತೋಷ ಪಟ್ಟರು. ರಾಮನು ತನ್ನ ಮೂವರೂ ಸಹೋದರರಿಗೆ ಕೇಳಿದನು “ಆ ಅಸುರನ ವಧಿಸಲು ಯಾರು ಸಬಲರು? ಯಾರನ್ನು ನೇಮಿಸಲಿ? ಭರತ ಇಲ್ಲವೆ ಶತ್ರುಘ್ನನನ್ನು ಲವನಾಸುರನ ಸಂಹರಿಸಲು ನೇಮಿಸಲಿ?” ಅಣ್ಣ ರಾಮನ ಪ್ರಶ್ನೆಗೆ ಭರತ ಉತ್ತರಿಸಿದನು “ಆ ರಾಕ್ಷಸನ ನಾನು ವಧಿಸುವೆ, ಆ ಹೊಣೆ ನನಗೆ ವಹಿಸು.” ಭರತನ ಆವೇಶದ ಉತ್ತರ ಕೇಳಿ ಶತ್ರುಘ್ನ ನುಡಿದನು “ಓ ರಾಘವಾ, ಭರತ ತನ್ನ ಸಾಮರ್ಥ್ಯವನ್ನು ಈಗಾಗಲೇ ತೋರಿಸಿರುವನು, ಮಹಾಬಲಶಾಲಿ ಭರತನು ಅಣ್ಣನ ಅನುಪಸ್ಥಿತಿಯಲ್ಲಿ ಅಯೋಧ್ಯೆಯನು ಸಮರ್ಪಕವಾಗಿ ನಡೆಸಿರುವನು, ಆ ರಾಕ್ಷಸನನ್ನು ಸಂಹರಿಸಲು ಮತ್ತು ಅದರ ಮೂಲಕ ನನ್ನ ಶೌರ್ಯ ತೋರಿಸಲು ನನಗೆ ಅವಕಾಶ ನೀಡು.” ಶತ್ರುಘ್ನನ ಕೋರಿಕೆ ಕೇಳಿ ರಾಮನು ಅವನಿಗೆ “ ಹಾಗೆ ಆಗಲಿ, ನಿನಗೆ ಆಜ್ಞೆ ನೀಡುವೆ, ನಿನ್ನನ್ನು ಮಧುನ ರಾಜ್ಯಕ್ಕೆ ಪಟ್ಟಗಟ್ಟುವೆನು; ನಿನ್ನ ಇಚ್ಚೆಯಂತೆ ಭರತ ಇಲ್ಲಿಯೆ ಇರಲಿ, ನೀನು ಯಮುನಾ ನದಿಯಿಂದ ಕೊಚ್ಚಿಹೋದ ರಾಜ್ಯವನ್ನು ಮರುಸ್ಥಾಪಿಸು, ರಾಜನಿಲ್ಲದ ರಾಜ್ಯ ನರಕದಂತಾಗುವದು; ಲವನಾಸುರನ ಸಂಹರಿಸಿ ನೀನೇ ಅದರ ರಾಜ್ಯನಾಗು; ನಾನು ಹೇಳಿದನ್ನು ಮರುಪ್ರಶ್ನಿಸ ಬೇಡಾ, ಹಿರಿ ಅಣ್ಣನ ಆದೇಶವನ್ನು ಪಾಲಿಸು; ವಸಿಷ್ಠರ, ಪುರೋಹಿತರ ಆಚರಣೆ ಪರಂಪರೆಯಲಿ ನಿನಗೆ ಪಟ್ಟಗಟ್ಟುವೆ, ಪಡೆ ಎಲ್ಲರ ಆಶಿರ್ವಾದ”. ಸಾಮರ್ಥ್ಯ ಪ್ರದರ್ಶನ ಅವಕಾಶ ಗಿಟ್ಟಿಸಿಕೊಳ್ಳುವ ರಾಜಕುಮಾರರ ತವಕವನ್ನು ಆದಿಕವಿ ಇಲ್ಲಿ ವಿವರಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.