ರಾಮ ಶತ್ರುಘ್ನನಿಗೆ ನುಡಿದ…

By admin


ಮುಂದುವರೆಸುತ ರಾಮ ಶತ್ರುಘ್ನನಿಗೆ ನುಡಿದ:I
“ ಇಗೋ ಇಲ್ಲಿವೆ ನಾಲ್ಕು ಸಹಸ್ರ ಕುದುರೆಗಳು, II
ಎರಡು ಸಹಸ್ರ ರಥಗಳು,ಆಯ್ದ ಶತ ಆನೆಗಳು,I
ಮನರಂಜನೆಗಾಗಿ ನೃತ್ಯಗಾರರು ಗಾಯಕರು,II
ಬಂಗಾರ, ಬೆಳ್ಳಿ ಮುದ್ರೆಗಳು, ಆಹಾರ ಸಾಮಗ್ರಿಗಳು,I
ಅಸ್ತ್ರ ಶಸ್ತ್ರಗಳು, ಸಾರಿಗೆ ಸಲಕರಣೆಗಳು ನಿನಗಾಗಿ;II
ಸ್ತ್ರೀ, ಆಳು, ಸೇವಕರು ಬೇಕಾದಲ್ಲಿ ಪಡೆಯಿರಿI
ದೇಣಿಗೆ ಮೂಲಕ, ಸೈನಿಕರನು ಸಂತೃಪ್ತ ಪಡಿಸಿII
ಸೈನಿಕರಲಿ ಶಿಸ್ತು ಮೂಡಿಸಿ, ಹುರುದುಂಬಿಸಿ,I
ಅವರನು ಸಂತೃಪ್ತ ಪಡಿಸುವ ಮೂಲಕ;II
ಓ ಶತ್ರುಘ್ನ, ಪ್ರವೇಶಿಸು ನೀನೊಬ್ಬನೇ ಮಧು ಅರಣ್ಯದಲಿI
ಹಿಡಿದು ಬಿಲ್ಲು ಬಾಣಗಳನ್ನು ಎಚ್ಚರದಿ;II
ತಿಳಿಯದಿರಲಿ ಲವನನಿಗೆ ನಿನ್ನ ಪ್ರವೇಶ,I
ಲವನನಿಗೆ ಸಂಶಯ ಬಾರದಂತೆ ಇರು;II
ತನ್ನ ವಿರೋಧಿಗಳ ಸುಳಿವು ತಿಳಿದರೆ ಲವನನಿಗೆI
ನಾಶ ಪಡಿಸುವನು ತಕ್ಷಣ ತನ್ನ ಬಲದಿ;II
ಬೇಸಿಗೆ ಗತಿಸುತಾ ಇದೆ, ಬರಲಿ ಮಳೆಗಾಲI
ಅವಕಾಶ ಸಿಕ್ಕಕೂಡಲೆ ವಧಿಸು ಲವನನ, ಓ ಶತ್ರುಘ್ನ;II
ಮುನಿಗಳ ನೇತೃತ್ವದಲಿ ಮುಂದೆ ಕಳಿಸು ಸೈನ್ಯ,I
ಬೇಸಿಗೆಯಲಿ ನದಿಗಳನ್ನು ದಾಟಲು ಸುಲಭವಾಗಿ; II
ಯಾರು ಅಡ್ಡಿ ಪಡಿಸದಂತಹ ನದಿI
ದಡದಲಿ ಹೂಡು ಬಿಡಾರ ಸೈನ್ಯದೊಂದಿಗೆ; II
ಕಾಲ್ನಡಿಗೆದಿ ಬಾಣ ಹೂಡಿ ಮುಂದೆ ಮುಂದೆ ಸಾಗಿ ಗುರುತಿಸು ಬಿಡಾರ ಸ್ಥಳ”. I
ಅಣ್ಣನಿಂದ ಆದೇಶ ಸಲಹೆ ಪಡೆದುII
ಶತ್ರುಘ್ನ ಸಾಗಿದ ದಂಡಯಾತ್ರೆಯಲಿ,I
ಕೈ ಮುಗಿದು ಸಹೋದರ ವ ವಸಿಷ್ಠರಿಗೆ.II
ಉತ್ತರಕಾಂಡ

ರಾಮನು ಶತ್ರುಘ್ನನಿಗೆ ಸೈನ್ಯ, ಕುದುರೆ, ಆನೆಗಳನ್ನು ಕೊಟ್ಟು ಎಚ್ಚರದಿಂದ ಲವನನ ಪ್ರದೇಶವನ್ನು ಪ್ರವೇಶಿಸಲು, ಲವನನಿಗೆ ತಿಳಿಯದಂತೆ ಅರಣ್ಯದಲಿರಲು ಹಾಗು ಅವಕಾಶ ನೋಡಿ ಲವನನ್ನು ಸಂಹರಿಸಲು ರಾಮನು ಕೊಟ್ಟ ಎಚ್ಚರಿಕೆ ಬೋಧನೆ, ಶತ್ರುಘ್ನನ ದಂಡಯಾತ್ರೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಗಮನಾರ್ಹ ಅಂಶಗಳೆಂದರೆ (1) ಸೈನ್ಯದ ಬಗ್ಗೆ ಎಚ್ಚರಿಕೆ, (2) ದಂಡಯಾತ್ರೆಗೆ ಬೆಸಿಗೆಕಾಲ ಸೂಕ್ತ ಮತ್ತು (3) ಯುದ್ಧಪೂರ್ವದಲ್ಲಿ ವೈರಿ ಬಗ್ಗೆ ಎಚ್ಚರಿಕೆ. ಅವುಗಳನ್ನು ಹೀಗೆ ವಿವರಿಸಲಾಗಿದೆ: ತನ್ನ ಬೋಧನೆಯನ್ನು ಮುಂದುವರೆಸುತ ರಾಮನು ಶತ್ರುಘ್ನನಿಗೆ ಹೇಳಿದನು “ ಇಗೋ ನಾಲ್ಕು ಸಹಸ್ರ ಕುದುರೆಗಳು ನಿನಗಾಗಿ ಎರಡು ಸಹಸ್ರ ರಥಗಳು, ಆಯ್ದ ಶತ ಆನೆಗಳು ಇಲ್ಲಿವೆ, ನಿನಗಾಗಿ ಮನರಂಜಸುವ ನೃತ್ಯಗಾರರು, ಗಾಯಕರು, ಬಂಗಾರ, ಬೆಳ್ಳಿ ಮುದ್ರೆಗಳು, ಆಹಾರ ಸಾಮಗ್ರಿಗಳು, ಅಸ್ತ್ರ ಶಸ್ತ್ರಗಳು, ಸಾರಿಗೆ ಸಲಕರಣೆಗಳು ಇಲ್ಲಿವೆ; ಸೈನಿಕರನು ಸಂತೃಪ್ತ ಪಡಿಸಲು ದೇಣಿಗೆ ಮೂಲಕ ಸ್ತ್ರೀ, ಆಳು, ಸೇವಕರು ಬೇಕಾದಲ್ಲಿ ಪಡೆಯಿರಿ, ದಾರಿಯಲಿ ಸೈನಿಕರನು ಸಂತೃಪ್ತ ಪಡಿಸುವ ಮೂಲಕ ಸೈನಿಕರಲಿ ಶಿಸ್ತು ಮೂಡಿಸಿ, ಅವರನ್ನು ಹುರುದುಂಬಿಸಿ; ಓ ಶತ್ರುಘ್ನ, ಹಿಡಿದು ಬಿಲ್ಲು ಬಾಣಗಳನ್ನು ಎಚ್ಚರದಿಂದ ನೀನೊಬ್ಬನೇ ಮಧು ಅರಣ್ಯದಲಿ ಪ್ರವೇಶಿಸು; ಲವನನಿಗೆ ನಿನ್ನ ಪ್ರವೇಶ ತಿಳಿಯಕೂಡದು, ನೀನು ಲವನನಿಗೆ ಸಂಶಯ ಬಾರದಂತೆ ಇರು; ಲವನನಿಗೆ ತನ್ನ ವಿರೋಧಿಗಳ ಸುಳಿವು ತಿಳಿದರೆ ಅವನು ಅವರನ್ನು ತಕ್ಷಣ ತನ್ನ ಬಲದಿಂದ ನಾಶ ಪಡಿಸುವನು; ಈಗ ಬೇಸಿಗೆ ಕಾಲ ಗತಿಸುತಾ ಇದೆ, ಮಳೆಗಾಲ ಬರಲಿ, ಅವಕಾಶ ಸಿಕ್ಕಕೂಡಲೆ ನೀನು ಲವನನ ವಧಿಸು; ಮುನಿಗಳ ನೇತೃತ್ವದಲಿ ಸೈನ್ಯವನ್ನು ಮುಂದಕ್ಕೆ ಕಳಿಸು, ಅವರು ಬೇಸಿಗೆಯಲಿ ನದಿಗಳನ್ನು ಸುಲಭವಾಗಿ ದಾಟಲಿ; ಯಾರು ಅಡ್ಡಿ ಪಡಿಸದಂತಹ ನದಿ ದಡದಲಿ ಸೈನ್ಯದೊಂದಿಗೆ ಬಿಡಾರ ಹೂಡು; ನೀನು ಕಾಲ್ನಡಿಗೆಯಿಂದ ಬಾಣ ಹೂಡಿ ಮುಂದೆ ಮುಂದೆ ಸಾಗಿ ಬಿಡಾರ ಸ್ಥಳವನ್ನು ಗುರುತಿಸು”. ಅಣ್ಣನಿಂದ ಆದೇಶ ಮತ್ತು ಸಲಹೆ ಪಡೆದು, ಸಹೋದರ ಮತ್ತು ವಸಿಷ್ಠರಿಗೆ ಕೈ ಮುಗಿದು ಶತ್ರುಘ್ನನು ದಂಡಯಾತ್ರೆಯಲಿ ಸಾಗಿದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.