
ನಡೆಯಿತು ಒಂದು ಮಾಸಾವಧಿಯ ದಂಡಯಾತ್ರೆ,I
ಹೆಜ್ಜೆಗಳ ಗತಿ ಹೆಚ್ಚಿಸಿದ ಶತ್ರುಘ್ನ; II
ಕಂಡನು ಶತ್ರುಘ್ನ ವಾಲ್ಮೀಕಿ ಆಶ್ರಮ ತಾಣI
ಸಾಗುತ ಎರಡು ದಿನಗಳ ನಂತರ;II
ಕೈಮುಗಿದು ವಾಲ್ಮೀಕಿ ಬಳಿ ಬಂದುI
ಬೇಡಿಕೊಂಡ ಶತ್ರುಘ್ನ:” ಓ ಕೃಪಾಮಯಿ, II
ಅಣ್ಣನ ಆಜ್ಞೆಯಂತೆ ಹೊರಟಿರುವೆ ದಂಡಯಾತ್ರೆ,I
ತಂಗಲು ಇಂದಿನ ರಾತ್ರಿ ಇಲ್ಲಿ ಕೊಡು ನಮಗೆ ಅಪ್ಪನೆ; II
ಹೊರಡುವೆನು ನಸುಕಿನಲ್ಲಿ ಎದ್ದು ಪಶ್ಚಿಮದತ್ತI
ನಾನು ನನ್ನ ಸೈನ್ಯದೊಂದಿಗೆ, ಯಾರಿಗೂ ತಿಳಿಯದೆ;II
ಕೇಳಿ ಶತ್ರುಘ್ನನ ಅರಿಕೆ ಮುಗ್ಳನಗುತ ವಾಲ್ಮಿಕಿI
ನುಡಿದ:” ಓ ರಾಜಕುಮಾರನೆ, ಸ್ವಾಗತ ನಿನಗೆ,II
ಈ ಆಶ್ರಮ ರಘುಕುಲದ ಪಿತೃಗಳದ್ದುI
ಅನುಮಾನಿಸದೆ ಸ್ವಿಕರಿಸು ಆಸನ ವ ಮಧುಪಾನ;||
ನೀರು ಸ್ವೀಕರಿಸಿ ತೊಳೆದುಕೊಳ್ಳಿ ಕೈಕಾಲ”.I
ಸ್ವೀಕರಿಸಿದ ಶತ್ರುಘ್ನ ವಾಲ್ಮೀಕಿ ಆತಿಥ್ಯ, II
ಗಡ್ಡೆ ಹಣ್ಣು ಸೇವಿಸಿ, ಸಂತುಷ್ಟಗೊಂಡುI
ಶತ್ರುಘ್ನ ಲಾಲಿಸಿದ ಋಷಿ ವಾಲ್ಮೀಕಿಯನು: II
“ಆಶ್ರಮದ ಪೂರ್ವಕ್ಕೆ ಇರುವ ಈ ಫಲವತ್ತಾದI
ಧಾನ್ಯ ಸಮೃದ್ಧ ವಿಶಾಲ ಯಜ್ಞ ಭೂಮಿ ಯಾರದ್ದು?” II
ಋಷಿ ವಾಲ್ಮೀಕಿ ಉತ್ತರಿಸಿದರು: “ಓ ಶತ್ರುಘ್ನಾ,I
ಹೇಳುವೆ ಕೇಳು ಈ ಭೂಮಿ ಯಾರದೆಂದು! II
ನಿನ್ನ ಪಿತೃಗಳಲ್ಲಿ ಒಬ್ಬ ರಾಜಾ ಸೌದೆಸ,I
ಪರಾಕ್ರಮಿ ಸದ್ಗುಣಿ ಮಿತ್ರಸಹನ ತಂದೆ;II
ಸೌದೆಸನು ಒಂದು ದಿನ ಬಂದಾಗ ಬೇಟೆಗೆ ಕಂಡನು ಇರ್ವ I
ರಾಕ್ಷಸರನು, ಹುಲಿರೂಪದಲಿ ಅಲ್ಲಿ ಸುಳಿವುದನು;II
ತಮ್ಮ ಹಸಿ ಹಿಂಗಿಸಿಕೊಳ್ಳಲು ಸಹಸ್ರ ಸಹಸ್ರI
ಜಿಂಕೆಗಳನ್ನು ಭಕ್ಷಿಸಿಸುತಿದ್ದರು ಇರ್ವ ರಾಕ್ಷಸರು; II
ಅದ ಕಂಡ ಸೌದೆಸನು ಕೋಪಗೊಂಡುI
ಭಲ್ಲೆದಿ ಒರ್ವ ರಾಕ್ಷಸನ ಹೊಡೆದನು;II
ಬದುಕಿದ ರಾಕ್ಷಸ ಕಂಡು ತನ್ನ ಜತೆಗಾರನ ಮರಣ ದುಃಖದಿI
ರಾಜನಿಗೆ ನುಡಿಯಿತು:”ಓ ಕ್ರೂರಿಯೇ, ನಿನಗೆ ಏನುII
ಹಾನಿ ಮಾಡಿದ್ದಿಲ್ಲ ಎನ್ನ ಜತೆಗಾರ, ಆದರೂ ನೀ ಅವನ ವಧಿಸಿದಿ,I
ತಿರಿಸಿಕೊಳ್ಳುವೆ ನಾನೊಂದು ದಿನ ಇದರ ಸೇಡು.”II
ಹೀಗೆ ನುಡಿದು ಅದೃಶ್ಯವಾಯಿತು ಆ ರಾಕ್ಷಸ;ಕಾಲ ಗತಿಸಿದಂತೆ I
ಸೌದೆಸಪುತ್ರ ಮಿತ್ರಸಹನ ಪಟ್ಟವೇರಿದ,II
ಅಶ್ವಮೇಧಯಜ್ಞ ಏರ್ಪಡಿಸಿದ ಸೌದೆಸ ವಸಿಷ್ಠರನೇತೃತ್ವದಲಿ, I
ನಡೆಯಿತು ಯಜ್ಞವು ಹಲವುಸಂವತ್ಸರವರೆಗೆ;II
ತನ್ನ ದುಃಖವನ್ನು ನೆನೆಪಿಸಿಕೊಂಡು ರಾಕ್ಷಸI
ವಸಿಷ್ಠರ ರೂಪ ಧರಿಸಿತು,ನುಡಿಯಿತು ರಾಜನಿಗೆ: II
“ಯಜ್ಞ ಪೂರ್ಣವಾಯಿತು, ತಂದುಕೊಡು ಬೇಗ ಮಾಂಸI
ಎನ್ನ ಹಸಿವು ಹಿಂಗಿಸಿಕೊಳ್ಳಬೇಕಾಗಿದೆ, ಓ ರಾಜನೆ.” II
ಕೇಳಿ ವಸಿಷ್ಠರೂಪಿ ರಾಕ್ಷಸನ ನುಡಿ ರಾಜI
ಹೇಳಿದ ತನ್ನ ನಿಪುಣ ಅಡಿಗೆಭಟ್ಟನಿಗೆ: II
“ ಹವಿಸವನ್ನು ತಯ್ಯಾರಿಸು, ರುಚಿಕರ ಮಾಂಸದೂಟI
ಉಂಡು ತೃಪ್ತಿ ಪಡಲಿ ಎನ್ನ ಗುರು!” II
ರಾಜನ ಆಜ್ಞೆಗೆ ಕಸಿವಿಸಿಗೊಂಡರು ಅಡುಗೆಭಟ್ಟರು,I
ಧರಿಸಿತು ಆ ರಾಕ್ಷಸ ಅಡುಗೆಭಟ್ಟನ ರೂಪ, II
ಮಾನವ ಮಾಂಸ ಭಕ್ಷ ತಯ್ಯಾರಿಸಿI
ತಂದು ರಾಜನ ಬಳಿ ನುಡಿಯಿತು ರಾಜನಿಗೇ: II
“ಇಲ್ಲಿದೆ ರುಚಿಕರ ಮಾಂಸದ ಭಕ್ಷ”.I
ಊಟಕ್ಕೆ ಬಡಿಸಿದ ರಾಕ್ಷಸ ಆ ಭಕ್ಷ,II
ರಾಜಾ ಸೌದೆಸ, ಅವನ ಪತ್ನಿ ಮದಯಂತಿ ವI
ವಸಿಷ್ಠರು ಕುಳಿತಿದ್ದರು ಆ ಭಕ್ಷ ಸೇವಿಸಲು; II
ಮಾಂಸದ ಭಕ್ಷ ಕಂಡು ವಸಿಷ್ಠರು ಅದು ಮಾನವನ I
ಮಾಂಸವೆಂದು ಗುರುತಿಸಿ ರಾಜನಿಗೆ ಶಾಪ ನೀಡಿದರು: II
“ಓ ರಾಜನೆ, ನೀನು ಎನಗೆ ನೀಡಿದ ಭಕ್ಷ ಸದಾ ನಿನ್ನ ಆಹಾರವಾಗಲಿ” I
ಅದನ್ನು ಅರ್ಥೈಸಿಕೊಂಡನು ಸೌದೆಸ,II
ಪ್ರತಿಯಾಗಿ ವಸಿಷ್ಠರಿಗೆ ಶಾಪ ನೀಡಲು ಕಮಂಡಲದ ನೀರು ಕೈಗೆ ಹಾಕಿಕೊಂಡಾಗ ಸೌದೆಸ, I
ರಾಣಿ ನುಡಿದಳು ರಾಜನಿಗೆ:II
“ ಓ ರಾಜನೆ, ವಸಿಷ್ಠರು ನಮ್ಮ ಆಧ್ಯಾತ್ಮಗುರು, ಸರಿಯಲ್ಲಾI
ಗುರುಗೆ ಶಾಪ ನೀಡುವದು, ಗುರು ದೇವರಿಗೆ ಸಮ.” II
ತಕ್ಷಣ ಕೈಯಲ್ಲಿಯ ನೀರು ಚೆಲ್ಲಿ ಎರಗಿದನು ವಸಿಷ್ಠರ ಪಾದಕ್ಕೆ,I
ಅಂದಿನಿಂದ ಕಲ್ಮಶಪಾದ ಹೆಸರು ಬಂತು ಸೌದೆಸರಿಗೆ; II
ರಾಕ್ಷಸ ಮೋಸದಿ ತಮಗೆ ಮಾಡಿದ ಅನ್ಯಾಯವನ್ನುI
ಪದೇ ಪದೇ ರಾಜದಂಪತಿಗಳು ತಿಳಿಸಿದರು ವಸಿಷ್ಠರಿಗೆ; II
ಕೇಳಿ ರಾಜದಂಪತಿಗಳ ರೋಧನೆ ವಸಿಷ್ಠರು ಸೌದೆಸನಿಗೆ ನುಡಿದರು: I
“ನಿನಗೆ ಕೊಟ್ಟ ಎನ್ನ ಶಾಪ ಹುಸಿಯಾಗದು,II
ಆದರೆ ನೀಡುವೆ ನಿನಗೆ ವರ; ನೀ ಮುಕ್ತವಾಗುವಿ I
ಶಾಪದಿಂದ ಹನ್ನೇರಡು ಸಂವತ್ಸರಗಳಲ್ಲಿ, ನೀವು ಈ ಗತ ಕಹಿ II
ಘಟನೆಯನ್ನು ನೆನಪಿಸಿಕೊಳ್ಳಕೂಡದು” I
ಶಾಪದಿಂದ ಬಳಲಿದ ಸೌದೆಸ ಮುಕ್ತನಾಗಿ ಪುನಃ ತನ್ನ ರಾಜ್ಯಬಾರ ನಡೆಸಿದ; II
ಓ ಶತ್ರುಘ್ನಾ, ಆ ಕಲ್ಮಶಪಾದ ಏರ್ಪಡಿಸಿದI
ಯಜ್ಞಭೂಮಿಯೇ ಈ ಫಲವತ್ತಾದ ವಿಶಾಲ ಭೂಮಿ” II
ಕೇಳಿ ವಾಲ್ಮೀಕಿಯಿಂದ ಆ ಸ್ಥಳದ ಮಹಿಮೆI
ಪ್ರವೇಶಿಸಿದ ಗುಡಿಸಲನ್ನು ರಾತ್ರಿ ಕಳೆಯಲು ಶತ್ರುಘ್ನ. II
ಉತ್ತರಕಾಂಡ
ಅಯೋಧ್ಯಾ ರಾಜಕುಮಾರ ಶತ್ರುಘ್ನನು ಒಂದು ರಾತ್ರಿ ಕಳೆಯಲು ವಾಲ್ಮೀಕಿ ಬಳಿ ಬಂದು ಆಶ್ರಯ ಕೇಳಿದಾಗ, ವಾಲ್ಮೀಕಿಯು ಅವನನ್ನು ಸ್ವಾಗತಿಸಿದ ಮತ್ತು ಶತ್ರುಘ್ನನಿಗೆ ಅವರ ವಂಶಜ ರಾಜಾ ಸೌದೆಸನು ಏರ್ಪಡಿಸಿದ ಫಲವತ್ತಾದ ಯಜ್ಞಭೂಮಿಯನ್ನು ತೋರಿಸಿ ಅದರ ಕಥೆಯನ್ನು ಹೇಳಿದ ಪ್ರಸಂಗವನ್ನು ವಿವರಿಸಿರುವರು, ಇಲ್ಲಿ ರಾಜಾ ಸೌದೇಸ ಪತ್ನಿ ರಾಜನಿಗೆ ಗುರುವಿನ ಮಹತ್ವ ತಿಳಿಸಿದ ಅಂಶವನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಶತ್ರುಘ್ನನ ಒಂದು ಮಾಸಾವಧಿಯ ದಂಡಯಾತ್ರೆ ಸಾಗಿತು, ಶತ್ರುಘ್ನನು ದಂಡೆಯಾತ್ರೆಯ ಗತಿಯನ್ನು ಹೆಚ್ಚಿಸಿದನು; ದಂಡಯಾತ್ರೆಯಲ್ಲಿ ಸಾಗುತ ಎರಡು ದಿನಗಳ ನಂತರ ದಾರಿ ಮಧ್ಯೆ ಶತ್ರುಘ್ನ ವಾಲ್ಮೀಕಿ ಆಶ್ರಮ ತಾಣವನ್ನು ಕಂಡನು ಹಾಗು ವಾಲ್ಮೀಕಿ ಬಳಿ ಬಂದು ಶತ್ರುಘ್ನನು ಕೈಮುಗಿದು ಅವರನ್ನು ಬೇಡಿಕೊಂಡನು ” ಓ ಕೃಪಾಮಯಿ, ನಾನು ಅಣ್ಣನ ಆಜ್ಞೆಯಂತೆ ದಂಡಯಾತ್ರೆ ಹೊರಟಿರುವೆನು, ಇಂದಿನ ರಾತ್ರಿ ನಿಮ್ಮಲ್ಲಿ ತಂಗಲು ನಮಗೆ ಅಪ್ಪನೆ ಕೊಡು; ರಾತ್ರಿ ಕಳೆದು ನಸುಕಿನಲ್ಲಿ ಎದ್ದು ಪಶ್ಚಿಮದತ್ತ ನಾನು ನನ್ನ ಸೈನ್ಯದೊಂದಿಗೆ ಯಾರಿಗೂ ತಿಳಿಯದಂತೆ ಹೊರಡುವೆನು; ಶತ್ರುಘ್ನನ ಅರಿಕೆ ಕೇಳಿ ಮುಗ್ಳನಗುತ ವಾಲ್ಮೀಕಿಯು ಶತ್ರುಘ್ನನಿಗೆ ನುಡಿದನು” ಓ ರಾಜಕುಮಾರನೆ, ನಿನಗೆ ಸ್ವಾಗತ, ಈ ಆಶ್ರಮವು ರಘುಕುಲದ ಪಿತೃಗಳದ್ದು, ಅನುಮಾನಿಸದೆ ಆಸನ ಮತ್ತು ಮಧುಪಾನವನ್ನು ಸ್ವಿಕರಿಸು, ನಮ್ಮಿಂದ ನೀರು ಸ್ವೀಕರಿಸಿ ಕೈಕಾಲ ತೊಳೆದುಕೊಳ್ಳಿರಿ”. ಶತ್ರುಘ್ನನು ವಾಲ್ಮೀಕಿಯ ಆತಿಥ್ಯವನ್ನು ಸ್ವೀಕರಿಸಿದನು; ಗಡ್ಡೆ, ಹಣ್ಣು ಸೇವಿಸಿ ಸಂತುಷ್ಟಗೊಂಡು ಶತ್ರುಘ್ನನು ಋಷಿ ವಾಲ್ಮೀಕಿಯನು ಲಾಲಿಸಿದನು “ಈ ಆಶ್ರಮದ ಪೂರ್ವಕ್ಕೆ ಇರುವ ಆ ಫಲವತ್ತಾದ ಧಾನ್ಯ ಸಮೃದ್ಧ ವಿಶಾಲ ಯಜ್ಞ ಭೂಮಿ ಯಾರದ್ದು?” ಋಷಿ ವಾಲ್ಮೀಕಿಯು ಶತ್ರುಘ್ನನಿಗೆ ಉತ್ತರಿಸಿದರು “ಓ ಶತ್ರುಘ್ನಾ, ಆ ಭೂಮಿ ಯಾರದೆಂದು ಹೇಳುವೆ ಕೇಳು! ರಾಜಾ ಸೌದೆಸನು ನಿನ್ನ ಪಿತೃಗಳಲ್ಲಿ ಒಬ್ಬನು, ಅವನು ಪರಾಕ್ರಮಿ ಸದ್ಗುಣಿ ಮಿತ್ರಸಹನ ತಂದೆ; ಒಂದು ದಿನ ಸೌದೆಸನು ಬೇಟೆಗೆ ಬಂದಾಗ ಹುಲಿರೂಪದಲಿ ಅಲ್ಲಿ ಸುಳಿವು ಇಬ್ಬರು ರಾಕ್ಷಸರನು ಕಂಡನು; ಅವರು ತಮ್ಮ ಹಸಿ ಹಿಂಗಿಸಿಕೊಳ್ಳಲು ಸಹಸ್ರ ಸಹಸ್ರ ಜಿಂಕೆಗಳನ್ನು ಭಕ್ಷಿಸಿಸುತಿದ್ದರು; ಅದನು ಗಮನಿಸಿದ ಸೌದೆಸನು ಕೋಪಗೊಂಡು ಅವರಲ್ಲಿ ಒರ್ವ ರಾಕ್ಷಸನನ್ನು ಭಲ್ಲೆಯಿಂದ ಹೊಡೆದು ಕೊಂದನು; ತನ್ನ ಜತೆಗಾರನ ಮರಣ ಕಂಡು ಬದುಕಿ ಉಳಿದ ಮತ್ತೊಂದು ರಾಕ್ಷಸವು ದುಃಖದಿಂದ ರಾಜನಿಗೆ ಆಹ್ವಾನದ ಮಾತುಗಳನ್ನು ಆಡಿತುʻಓ ಕ್ರೂರಿಯೇ, ನನ್ನ ಜೊತೆಗಾರ ನಿನಗೆ ಏನು ಹಾನಿ ಮಾಡಿದ್ದಿಲ್ಲ, ಆದರೂ ನೀನು ಅವನನ್ನು ವಧಿಸಿರುವೆ, ನಾನು ಮುಂದೊಂದು ದಿನ ಇದರ ಸೇಡು ತಿರಿಸಿಕೊಳ್ಳುವೆನು.ʼ ಹೀಗೆ ನುಡಿದು ಆ ರಾಕ್ಷಸ ಅದೃಶ್ಯವಾಯಿತು; ಕಾಲ ಗತಿಸಿದಂತೆ ಸೌದೆಸನ ಪುತ್ರ ಮಿತ್ರಸಹನ ಪಟ್ಟವೇರಿದನು, ರಾಜಾ ಸೌದೆಸನು ವಸಿಷ್ಠರ ನೇತೃತ್ವದಲಿ ಅಶ್ವಮೇಧಯಜ್ಞ ಏರ್ಪಡಿಸಿದನು, ಆ ಯಜ್ಞವು ಹಲವಾರು ಸಂವತ್ಸರವರೆಗೆ (ವರ್ಷಗಳವರೆಗೆ) ನಡೆಯಿತು; ಈ ಅವಕಾಶವನ್ನು ಬಳಸಿಕೊಂಡು ತನ್ನ ಜೊತೆಗಾರನ ವಧೆಯ ದುಃಖವನ್ನು ನೆನೆಪಿಸಿಕೊಂಡ ಆ ರಾಕ್ಷಸವು ವಸಿಷ್ಠರ ರೂಪ ಧರಿಸಿ ರಾಜನಿಗೆ ಹೇಳಿತು ʻಓ ರಾಜನೆ, ಯಜ್ಞ ಪೂರ್ಣವಾಯಿತು, ನನಗೆ ನನ್ನ ಹಸಿವು ಹಿಂಗಿಸಿಕೊಳ್ಳಬೇಕಾಗಿದೆ, ಮಾಂಸವನ್ನು ಬೇಗ ತಂದುಕೊಡುʼ. ವಸಿಷ್ಠರೂಪಿ ರಾಕ್ಷಸನ ಮಾತು ಕೇಳಿ ರಾಜನು ತನ್ನ ನಿಪುಣ ಅಡಿಗೆಭಟ್ಟನಿಗೆ ಆದೇಶಿಸಿದನು ʻಹವಿಸವನ್ನು(ಆಕಳ ತುಪ್ಪದಲ್ಲಿ ಮಾಂಸ ಭಕ್ಷವನ್ನು) ತಯ್ಯಾರಿಸು, ರುಚಿಕರ ಮಾಂಸದೂಟ ಉಂಡು ನನ್ನ ಗುರು ತೃಪ್ತಿ ಪಡಲಿ!ʼ ರಾಜನ ಆಜ್ಞೆ ಕೇಳಿ ಅಡುಗೆಭಟ್ಟರು ಕಸಿವಿಸಿಗೊಂಡರು; ಆ ರಾಕ್ಷಸನು ಅಡುಗೆಭಟ್ಟನ ರೂಪ ಧರಿಸಿ ಮಾನವ ಮಾಂಸ ಭಕ್ಷ ತಯ್ಯಾರಿಸಿದನು, ಅದನ್ನು ರಾಜನ ಬಳಿ ತಂದು ಆ ರಾಕ್ಷಸವು ರಾಜನಿಗೆ ʻಇಲ್ಲಿದೆ ರುಚಿಕರ ಮಾಂಸದ ಭಕ್ಷʼ ಎಂದು ಹೇಳಿತು. ಅಡಿಗೆಭಟ್ಟರೂಪಿ ರಾಕ್ಷಸ ಆ ನರಮಾಂಸ ಭಕ್ಷವನ್ನು ಊಟಕ್ಕೆ ಕುಳಿತ ರಾಜಾ ಸೌದೆಸ, ಅವನ ಪತ್ನಿ ಮದಯಂತಿ ಮತ್ತು ವಸಿಷ್ಠರಿಗೆ ನೀಡಿದನು, ಆ ಮಾಂಸದ ಭಕ್ಷ ಕಂಡು ವಸಿಷ್ಠರು ಅದು ಮಾನವನ ಮಾಂಸವೆಂದು ಗುರುತಿಸಿ ರಾಜನಿಗೆ ʻ ಓ ರಾಜನೆ, ನೀನು ನನಗೆ ನೀಡಿದ ಭಕ್ಷ ಸದಾ ನಿನ್ನ ಆಹಾರವಾಗಲಿʼ ಎಂದು ಶಾಪ ನೀಡಿದರು, ಆ ಸ್ಥಿತಿಗತಿಯನ್ನು ರಾಜಾ ಸೌದೆಸನು ಅರ್ಥೈಸಿಕೊಂಡನು ಹಾಗು ವಸಿಷ್ಠರ ಶಾಪಕ್ಕೆ ಪ್ರತಿಯಾಗಿ ವಸಿಷ್ಠರಿಗೆ ಶಾಪ ನೀಡಲು ಕಮಂಡಲದ ನೀರು ಕೈಗೆ ಹಾಕಿಕೊಂಡಾಗ ಅವನ ರಾಣಿಯು ʻ ಓ ರಾಜನೆ, ವಸಿಷ್ಠರು ನಮ್ಮ ಆಧ್ಯಾತ್ಮಗುರು, ಗುರುಗೆ ಶಾಪ ನೀಡುವದು ಸರಿಯಲ್ಲಾ, ಗುರು ದೇವರಿಗೆ ಸಮʼ ಎಂದು ಎಚ್ಚರಿಸಿದಳು. ಅವಳ ಎಚ್ಚರಿಕೆ ಮಾತುಗಳನ್ನು ಕೇಳಿ ತಕ್ಷಣ ಕೈಯಲ್ಲಿಯ ನೀರು ಚೆಲ್ಲಿ ರಾಜನು ವಸಿಷ್ಠರ ಪಾದಕ್ಕೆ ಎರಗಿದನು, ಅಂದಿನಿಂದ ರಾಜಾ ಸೌದೆಸರಿಗೆ ಕಲ್ಮಶಪಾದ ಎಂಬ ಹೆಸರು ಬಂತು; ರಾಕ್ಷಸವು ಮೋಸದಿಂದ ತಮಗೆ ಮಾಡಿದ ಅನ್ಯಾಯವನ್ನು ರಾಜದಂಪತಿಗಳು ಪದೇ ಪದೇ ವಸಿಷ್ಠರಿಗೆ ತಿಳಿಸಿದರು; ರಾಜದಂಪತಿಗಳ ರೋಧನೆ ಕೇಳಿ ವಸಿಷ್ಠರು ಸೌದೆಸನಿಗೆ ʻನಿನಗೆ ಕೊಟ್ಟ ನನ್ನ ಶಾಪ ಹುಸಿಯಾಗದು, ನೀನು ಹನ್ನೇರಡು ಸಂವತ್ಸರಗಳಲ್ಲಿ ಶಾಪದಿಂದ ಮುಕ್ತವಾಗುವ ವರವನ್ನು ನಾನು ನಿನಗೆ ನೀಡುವೆ, ಆದರೆ ನೀವು ಈ ಗತ ಕಹಿ ಘಟನೆಯನ್ನು ನೆನಪಿಸಿಕೊಳ್ಳಕೂಡದುʼ ಎಂದು ನುಡಿದನು; ಶಾಪದಿಂದ ಬಳಲಿದ ಸೌದೆಸನು ಅದರಿಂದ ಮುಕ್ತನಾಗಿ ಪುನಃ ತನ್ನ ರಾಜ್ಯಬಾರ ನಡೆಸಿದನು; ಓ ಶತ್ರುಘ್ನಾ, ಆ ಕಲ್ಮಶಪಾದ ಏರ್ಪಡಿಸಿದ ಯಜ್ಞಭೂಮಿಯೇ ಈ ಫಲವತ್ತಾದ ವಿಶಾಲ ಭೂಮಿ” ವಾಲ್ಮೀಕಿಯಿಂದ ಆ ಸ್ಥಳದ ಮಹಿಮೆಯನ್ನು ಕೇಳಿ ಶತ್ರುಘ್ನನು ರಾತ್ರಿ ಕಳೆಯಲು ಗುಡಿಸಲನ್ನು ಪ್ರವೇಶಿಸಿದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
