ಶತ್ರುಘ್ನ ಮತ್ತು ಲವನಾಸುರರ ಮಧ್ಯೆ ಯುದ್ಧ

By admin


ಕೇಳಿ ಶತ್ರುಘ್ನನ ನುಡಿ ಕೋಪವೇರಿತು ಲವನನಿಗೆ I
“ನಿಲ್ಲು” ಎನ್ನುತ ಲವನ ಮುಷ್ಠಿದಿ ಹೊಡೆಯಲು ಮುಂದಾದ;II
ಶತ್ರುಘ್ನ ಲವನನಿಗೆ ದಿಟ್ಟತನದಿ ಉತ್ತರಿಸಿದ:I
“ನೀನು ಬೇರೆಯವರನ್ನು ಕೊಂದಾಗ ಹುಟ್ಟಿದಿಲ್ಲ ನಾನು,II
ಆದರೆ, ಇಂದು ಎನ್ನ ಬಾಣ ಸೇರಿಸುವದು ನಿನ್ನI
ಯಮಲೋಕಕ್ಕೆ, ಸಾಕ್ಷಿಯಾಗಲಿ ಮುನಿಗಳು;II
ಎನ್ನ ಬಾಣ ನಿನ್ನವಧಿಸಿದ ನಂತರI
ನಗರ, ನಗರಜನ, ಜೀವಿಗಳು ಪಡೆವರು ನೆಮ್ಮದಿ;II
ಸೂರ್ಯ ಕಿರಣ ಕಮಲ ಸುತ್ತಿದಂತೆI
ಎನ್ನ ಬಾಣ ನಿನ್ನ ಹೃದಯ ಸೇರುವದು.”II
ಕೇಳುತ ಶತ್ರುಘ್ನನ ಮಾತು ಲವನI
ಸಿಟ್ಟಿನಿಂದ ಗಿಡ ಕಿತ್ತು ಹೊಡೆದ ಶತ್ರುಘ್ನನ ಎದೆ;II
ಆದರೆ ಶತ್ರುಘ್ನ ಅದನ್ನು ತುಂಡರಿಸಿದ ಬಾಣಗಳಿಂದ,I
ಪದೇ ಪದೇ ಲವನ ಗಿಡಗಳಿಂದ ಪ್ರಹಾರ ಮಾಡಿದ, II
ನಿರಂತರ ಶತ್ರುಘ್ನ ಬಾಣಗಳ ಬಿಟ್ಟುI
ಲವನನ ಪ್ರಹಾರದಿಂದ ಸ್ವಯಂ ರಕ್ಷಿಸಿಕೊಂಡ;II
ಲವನ ಶತ್ರುಘ್ನರ ಭೀಕರ ಕಾಳಗ ನೋಡಿI
ಮುನಿಗಳು ಗಂಧರ್ವರು ದೇವತೆಗಳು ಪಟ್ಟರು ಆನಂದ; II
ಒಂದು ಸಲ ಪೆಟ್ಟು ತಿಂದ ಶತ್ರುಘ್ನ ನೆಲದ್ಮೇಲೆI
ಬಿದ್ದ, ಆ ಅವಕಾಶ ಬಳಸಿಕೊಳ್ಳಲಿಲ್ಲ ಲವನ:II
ಶಿವ-ಭಲ್ಲೆ ತರಲು ಹೋಗದೇ ಲವನ ಹಸಿವು ಹಿಂಗಿಸಿಕೊಳ್ಳಲುI
ಆಹಾರ ಹುಡುಕಲು ಹೋದ,ಶತ್ರುಘ್ನ ಸತ್ತನೆಂದು;II
ಎಚ್ಚತ್ತು ಶತ್ರುಘ್ನ, ಸುಧಾರಿಸಿಕೊಂಡು ಮತ್ತೆI
ದ್ವಾರ ಬಳಿ ನಿಂತ ಕಾಯುತ ಲವನನ; II
ಹೂಡಿದ ಬಿಲ್ಲಿಗೆ ಶತ್ರುಘ್ನ ರಾಮ ಕೊಟ್ಟ ದೈವಿ ಬಾಣವನು,I
ಗಂಧಲೇಪಿತ ಬಾಣ ಹೊಳೆಯುತಿತ್ತು ಭಯ ಹುಟ್ಟಿಸುತ್ತ;II
ಕಂಡು ಬಾಣನು ಗಂಧರ್ವ ದೇವ ಅಪ್ಸರೆಯರುI
ಭಯಭೀತರಾದರು ವಿಶ್ವದ ನಾಶ ಭೀತಿಯಲಿ; II
ಘರ್ಜಿಸುತ ಶತ್ರುಘ್ನ ದಿಟ್ಟಿಸಿದ ಲವನ ಬರುವದನ್ನೆ,I
ಕಂಡು ಲವನನ ಹೊಡೆದ ಬಾಣ ಅವನ ಎದೆಗೆ; II
ಲವನನ ಎದೆ ಸೀಳಿ ಹೊಕ್ಕಿತು ಬಾಣ I
ಆಳದ ಗಾಯಗೊಳಿಸಿ ಮರಳಿತು ಶತ್ರುಘ್ನ ಬಳಿ ಬಾಣ;II
ಬಾಣದೇಟಿಕೆ ಲವನ ನೆಲ್ಕುರುಳಿದ ಸಿಡಿಲುI
ಬಡೆದ ಪರ್ವತ ಶಿಖರದಂತೆ, ಪ್ರಾಣ ಬಿಟ್ಟ; II
ಬಿಡುತ್ತಲೆ ಲವನ ಪ್ರಾಣ ಶಿವ-ಭಲ್ಲೆ ಮರಳಿತು ರುದ್ರನ ಬಳಿ,I
ಲವನನ ವಧೆ ಕಂಡು ಸಂಭ್ರಮಿಸಿದರು ಮುನಿಗಳು.II
ಉತ್ತರಕಾಂಡ

ಶತ್ರುಘ್ನ ಮತ್ತು ಲವನಾಸುರರ ಮಧ್ಯೆ ಯುದ್ಧ ನಡೆದಾಗ, ಲವನಾಸುರನ ಏಟಿಗೆ ಶತ್ರುಘ್ನನು ಮೋರ್ಛೆಯಾದಾಗ ಅವನು ಸತ್ತನೆಂದು ಭಾವಿಸಿ ತನ್ನ ಶಿವ-ಭಲ್ಲೆ ತರದೇ ಬೇಟೆಗೆ ಹೋದ ಲವನಾಸುರನ ಮೂರ್ಖತನ, ಅಹಂಕಾರವು ಅವನ ಸಾವಿಗೆ ಕಾರಣವಾದ ಸಂಗತಿಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಹಂಕಾರದ ಅಜ್ಞಾನ ವೀರರ ಬುದ್ಧಿಯನ್ನು ಭ್ರಮಿತಗೊಳಿಸುವದನ್ನು ಆದಿಕವಿ ಹೀಗೆ ತಿಳಿಸಿರುವರು: ಶತ್ರುಘ್ನನ ಯುದ್ಧ ಆಹ್ವಾನ ಎಚ್ಚರಿಕೆ ಮಾತುಗಳನ್ನು ಕೇಳಿ ಲವನನಿಗೆ ಕೋಪವೇರಿತು “ನಿಲ್ಲು” ಎನ್ನುತ ಲವನನು ಮುಷ್ಠಿಯಿಂದ ಶತ್ರುಘ್ನನನ್ನು ಹೊಡೆಯಲು ಮುಂದಾದನು; ಶತ್ರುಘ್ನನು ಲವನನಿಗೆ ದಿಟ್ಟತನದಿಂದ ಉತ್ತರಿಸಿದನು “ ನೀನು ಬೇರೆಯವರನ್ನು ಕೊಂದಾಗ ನಾನು ಹುಟ್ಟಿದಿಲ್ಲ, ಆದರೆ, ಇಂದು ನನ್ನ ಬಾಣ ನಿನ್ನನ್ನು ಯಮಲೋಕಕ್ಕೆ ಸೇರಿಸುವದು, ಇಲ್ಲಿ ನೆರೆದ ಮುನಿಗಳು ಸಾಕ್ಷಿಯಾಗಲಿ; ನನ್ನ ಬಾಣ ನಿನ್ನನ್ನು ವಧಿಸಿದ ನಂತರ ನಗರ, ನಗರಜನ, ಜೀವಿಗಳು ನೆಮ್ಮದಿ ಪಡೆವರು; ಸೂರ್ಯ ಕಿರಣವು ಕಮಲ ಸುತ್ತಿದಂತೆ ನನ್ನ ಬಾಣ ನಿನ್ನ ಹೃದಯ ಸೇರುವದು.” ಶತ್ರುಘ್ನನ ಮಾತುಗಳನ್ನು ಕೇಳುತ ಲವನನು ಸಿಟ್ಟಿನಿಂದ ಗಿಡ ಕಿತ್ತು ಶತ್ರುಘ್ನನ ಎದೆಗೆ ಹೊಡೆದನು, ಆದರೆ ಶತ್ರುಘ್ನನು ಅದನ್ನು ತನ್ನ ಬಾಣಗಳಿಂದ ತುಂಡರಿಸಿದನು; ಪದೇ ಪದೇ ಲವನನು ಗಿಡಗಳಿಂದ ಪ್ರಹಾರ ಮಾಡಿದನು, ಆದರೆ ನಿರಂತರ ಶತ್ರುಘ್ನನು ಬಾಣಗಳ ಬಿಟ್ಟು ಲವನನ ಪ್ರಹಾರದಿಂದ ಸ್ವಯಂ ರಕ್ಷಿಸಿಕೊಂಡನು; ಲವನ ಮತ್ತು ಶತ್ರುಘ್ನರ ಮಧ್ಯೆ ನಡೆದ ಭೀಕರ ಕಾಳಗ ನೋಡಿ ಮುನಿಗಳು ಗಂಧರ್ವರು ದೇವತೆಗಳು ಆನಂದ ಪಟ್ಟರು; ಒಂದು ಸಲ ಪೆಟ್ಟು ತಿಂದ ಶತ್ರುಘ್ನನು ನೆಲದ್ಮೇಲೆ ಬಿದ್ದನು, ಆದರೆ ಲವನನು ಆ ಅವಕಾಶ ಬಳಸಿಕೊಳ್ಳಲಿಲ್ಲ ಅರ್ಥಾರ್ತ್‌ ಶತ್ರುಘ್ನ ಸತ್ತನೆಂದು ತಿಳಿದು ಶಿವ-ಭಲ್ಲೆ ತರಲು ಹೋಗದೇ ಲವನನು ತನ್ನ ಹಸಿವು ಹಿಂಗಿಸಿಕೊಳ್ಳಲು ಆಹಾರ ಹುಡುಕಲು ಹೋದನು. ಇತ್ತ ಶತ್ರುಘ್ನನು ಎಚ್ಚತ್ತು, ಸುಧಾರಿಸಿಕೊಂಡು ಮತ್ತೆ ದ್ವಾರ ಬಳಿ ಲವನನ ಕಾಯುತ ನಿಂತನು; ಶತ್ರುಘ್ನನು ರಾಮ ಕೊಟ್ಟ ದೈವಿ ಬಾಣವನು ಬಿಲ್ಲಿಗೆ ಹೂಡಿದನು, ಗಂಧಲೇಪಿತ ಬಾಣ ಹೊಳೆಯುತ ಭಯ ಹುಟ್ಟಿಸುತಿತ್ತು; ಆ ಬಾಣನು ಕಂಡು ಗಂಧರ್ವ ದೇವ ಅಪ್ಸರೆಯರು ವಿಶ್ವದ ನಾಶ ಭೀತಿಯಲಿ ಭಯಭೀತರಾದರು; ಘರ್ಜಿಸುತ ಶತ್ರುಘ್ನನು ಲವನ ಬರುವದನ್ನೆ ದಿಟ್ಟಿಸಿದ, ನೋಡುತ ಲವನನ ಬರುವದನ್ನು ಅವನ ಎದೆಗೆ ಬಾಣ ಹೊಡೆದನು, ಬಾಣ ಲವನನ ಎದೆ ಸೀಳಿ ಹೊಕ್ಕಿತು ಹಾಗು ಅದು ಆಳದ ಗಾಯಗೊಳಿಸಿ ಶತ್ರುಘ್ನನ ಬಳಿ ಮರಳಿತು; ಬಾಣದೇಟಿಕೆ ಲವನಾಸುರನು ಸಿಡಿಲು ಬಡೆದ ಪರ್ವತ ಶಿಖರದಂತೆ ನೆಲ್ಕುರುಳಿ ಪ್ರಾಣ ಬಿಟ್ಟನು; ಲವನ ಪ್ರಾಣ ಬಿಡುತ್ತಲೆ ಶಿವ-ಭಲ್ಲೆ ರುದ್ರನ ಬಳಿ ಮರಳಿತು, ಲವನನ ವಧೆ ಕಂಡು ಮುನಿಗಳು ಸಂಭ್ರಮಿಸಿದರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.