
ನೋಡಿ ಲವನನ ವಧೆ ಸಂಭ್ರಮಿಸಿದರು ಮುನಿ ದೇವತೆಗಳು,I
ಶತ್ರುಘ್ನನಿಗೆ ಮುನಿ ಅಗ್ನಿ ನುಡಿದ:” ಜಯಶಾಲಿಯಾದೆ,II
ಓ ರಘುಕುಲ ಶತ್ರುಘ್ನ,ಧರ್ಮಕಾರ್ಯ ಮಾಡಿರುವಿI
ವಧಿಸಿ ಲವನಾಸುರನ, ಕೇಳು ವರ ಮುನಿಗಳಲಿ;II
ಕೇಳಿ ಮುನಿ ದೇವತೆಗಳ ನುಡಿ ಶತ್ರುಘ್ನ ಕೋರಿದ: I
“ದೆವತೆಗಳು ನಿರ್ಮಿಸಿದ ಈ ನಗರ ಪಡೆಯುವ ಇಚ್ಚೆ ಎನಗೆ”. II
ಕೇಳಿ ಶತ್ರುಘ್ನನ ಇಚ್ಚೆ ಮುನಿ ದೇವತೆಗಳು ನುಡಿದರು:I
“ ಹಾಗೆ ಆಗಲಿ, ಈ ಸುಂದರ ನಗರದ ಸ್ವಾಮಿಯಾಗು”. II
ಶತ್ರುಘ್ನ ವಿಜಯ ಸಂದೇಸ ಕಳಿಸಿ ಕರೆಯಿಸಿಕೊಂಡI
ತನ್ನ ಸೈನ್ಯ ಯಮುನಾನದಿ ಬಿಡಾರದಿಂದ; II
ಪಟ್ಟಗಟ್ಟಿದರು ಪ್ರಜೆಗಳು ಶತ್ರುಘ್ನನಿಗೆ ಮಧುಪುರI
ನಗರ ರಾಜ್ಯದ, ಸಮೃದ್ಧ ಶಾಂತಿ ನೆಲೆಸಿತು; II
ಕಳೆದ ಶತ್ರುಘ್ನ ಹನ್ನೇರಡು ಸಂವತ್ಸರಗಳನುI
ಮಧುಪುರ ನಗರ ರಾಜ್ಯವಾಳುತ, ಜನ ಹಿತದಲಿ; II
ಯಮುನಾ ನದಿ ದಡದಲ್ಲಿ ಬೆಳೆಯಿತುI
ನಗರರಾಜ್ಯ ಆಕರ್ಷಣಿಯದಾಗಿ, ಸಮೃದ್ಧಿಯಲಿ;II
ರಾಜಮಾರ್ಗಗಳು, ತೋಪು ಹೂದೋಟಗಳು ಚಿತ್ರ ಶಿಲ್ಪಕಲೆಗಳು, I
ಮಾರುಕಟ್ಟೆಗಳು ಆಕರ್ಷಣೀಯದಾಗಿದ್ದವು;II
ಮಧುನಗರದ ಅಂದ ಚಂದ, ಸಿರಿ ಸಂಪತ್ತುI
ಹೆಚ್ಚಿಸಿದ ಶತ್ರುಘ್ನ ಹನ್ನೆರಡು ಸಂವತ್ಸರಗಳಲ್ಲಿ;II
ಮುಡಿತು ಶತ್ರುಘ್ನನಲಿ ರಾಮನ ಭೇಟಿI
ಬಯಕೆ, ಮರಳಿದ ರಾಮನ ಭೇಟಿಗೆ ಶತ್ರುಘ್ನ. II
ಉತ್ತರಕಾಂಡ
ಲವನನ ವಧೆಯನಂತರ ಶತ್ರುಘ್ನನು ಮಧುಪುರನಗರ ರಾಜ್ಯದ ರಾಜನಾಗಿ ಹನ್ನೇರಡು ವರ್ಷಗಳ ತನ್ನ ಆಡಳಿತದಲ್ಲಿ ಅದನ್ನು ಸಮವೃದ್ಧಿ, ನೆಮ್ಮದಿಯ ರಾಜ್ಯವನ್ನಾಗಿ ಮಾಡಿದ ಮತ್ತು ಅಣ್ಣ ರಾಮನಿಗೆ ಭೇಟಿಯಾಗಲು ಬಯಸಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಮಧುಪುರನಗರ ರಾಜ್ಯದ ವರ್ಣನೆಯನ್ನು ಆದಿಕವಿ ಹೀಗೆ ನೀಡಿರುವರು: ಲವನನ ವಧೆ ನೋಡಿ ಮುನಿ ದೇವತೆಗಳು ಸಂಭ್ರಮಿಸಿದರು, ಶತ್ರುಘ್ನನಿಗೆ ಮುನಿ ಅಗ್ನಿಯು ನುಡಿದನು ” ಓ ರಘುಕುಲ ಶತ್ರುಘ್ನ, ಸುದೈವದಿ ಜಯಶಾಲಿಯಾದೆ, ಲವನಾಸುರನ ವಧಿಸಿ ನೀನು ಧರ್ಮಕಾರ್ಯ ಮಾಡಿರುವಿ, ಮುನಿಗಳಲಿ ವರ ಕೇಳು; ಮುನಿ ದೇವತೆಗಳ ಮಾತುಗಳನ್ನು ಕೇಳಿ ಶತ್ರುಘ್ನನು “ದೇವತೆಗಳು ನಿರ್ಮಿಸಿದ ಈ ನಗರ ಪಡೆಯುವ ಇಚ್ಚೆ ನನಗಿದೆ” ಎಂದು ಕೋರಿದನು. ಶತ್ರುಘ್ನನ ಇಚ್ಚೆಯನ್ನು ಕೇಳಿದ ಮುನಿ ದೇವತೆಗಳು “ ಹಾಗೆ ಆಗಲಿ, ಈ ಸುಂದರ ನಗರದ ಸ್ವಾಮಿಯಾಗು” ಎಂದು ಹಾರೈಸಿದರು. ಶತ್ರುಘ್ನನು ತನ್ನ ವಿಜಯ ಸಂದೇಸ ಕಳಿಸಿ ಯಮುನಾನದಿ ಬಿಡಾರದಿಂದ ತನ್ನ ಸೈನ್ಯ ಕರೆಯಿಸಿಕೊಂಡನು; ಮಧುಪುರ ಪ್ರಜೆಗಳು ಶತ್ರುಘ್ನನಿಗೆ ಪಟ್ಟಗಟ್ಟಿದರು; ಶತ್ರುಘ್ನನ ಆಡಳಿತದಲ್ಲಿ ಮಧುಪುರ ನಗರ ರಾಜ್ಯದಲ್ಲಿ ಸಮೃದ್ಧ, ಶಾಂತಿ ನೆಲೆಸಿತು; ಮಧುಪುರ ನಗರ ರಾಜ್ಯವಾಳುತ, ಜನ ಹಿತದಲಿ ಶತ್ರುಘ್ನನು ಹನ್ನೇರಡು ಸಂವತ್ಸರಗಳನು ಕಳೆದನು. ಮಧುಪುರ ನಗರರಾಜ್ಯವು ಆಕರ್ಷಣಿಯದಾಗಿ, ಸಮೃದ್ಧಿಯಲಿ ಯಮುನಾ ನದಿ ದಡದಲ್ಲಿ ಬೆಳೆ ಯಿತು; ಅದರ ರಾಜಮಾರ್ಗಗಳು, ತೋಪು ಹೂದೋಟಗಳು, ಚಿತ್ರ ಶಿಲ್ಪಕಲೆಗಳು, ಮಾರುಕಟ್ಟೆಗಳು ಆಕರ್ಷಣೀಯದಾಗಿದ್ದವು; ಶತ್ರುಘ್ನನು ಹನ್ನೆರಡು ಸಂವತ್ಸರಗಳಲ್ಲಿ ಮಧುನಗರದ ಅಂದ ಚಂದ, ಸಿರಿ ಸಂಪತ್ತು ಹೆಚ್ಚಿಸಿದನು; ಶತ್ರುಘ್ನನಲಿ ಅಣ್ಣ ರಾಮನ ಭೇಟಿಯ ಬಯಕೆ ಮುಡಿತು, ಶತ್ರುಘ್ನನು ರಾಮನ ಭೇಟಿಗಾಗಿ ಅಯೋಧ್ಯೆಗೆ ಮರಳಿದನು.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
