
ಶತ್ರುಘ್ನನಿಗೆ ವಿದಾಯ ಹೇಳಿ ರಾಮ ತನ್ನ ರಾಜ್ಯಭಾರದಲ್ಲಿI
ಲೀನನಾದ, ಸಮಾನತೆ ಸಾಧನೆ ಕಾರ್ಯದಲ್ಲಿ;II
ಕೆಲ ಕಾಲದ ನಂತರ,ಒರ್ವ ಮುದಿ ಬ್ರಾಹ್ಮಣ ಬಂದ I
ಅರಮನೆ ದ್ವಾರ ಬಳಿ ಕಿರುಚುತ ಅಳುತ್ತ, ಎತ್ತಿಕೊಂಡು II
ಬಾಲಕನ ಶವ ಮುದಿ ಬ್ರಾಹ್ಮಣ ಪದೇ ಪದೇ ಗೋರ್ಗರೆದ: I
“ನಾನೇನು ಪಾಪ ಮಾಡಿದೆ ಪೂರ್ವಜನ್ಮದಲಿ?”II
ತಂದೆ-ದುಃಖದಲಿ ನಿರಂತರ ರೋಧಿಸಿದI
ಮುದಿ ಬ್ರಾಹ್ಮಣ: “ಓ ಮಗನೇ, ಓ ಮಗನೇ! ಅಯ್ಯೋ II
ಯಾವ ಜನ್ಮದಲಿ ಎಸಗಿದ ಎನ್ನ ಅಪರಾಧI
ಇಂದು ಮಗನ ಸಾವು ನೋಡುವಂತೆ ಮಾಡಿದೇ? II
ಎನ್ನ ಮಗನಿಗೆ ಇನ್ನೂ ಹದಿನಾಲ್ಕು ವರ್ಷI
ವಯಸ್ಸು ಪೂರ್ಣವಾಗಲಿಲ್ಲ, ಆದರೆ ಸಾವು ಬಂತೇII
ಓ ಕಂದಾ, ಇನ್ನು ಕೆಲವೇ ದಿನಗಳಲ್ಲಿ ನಾನು,I
ನಿನ್ನ ತಾಯಿ ಸಾಯುವೆವು ನಿನ್ನ ಕೊರಗಿನಲ್ಲಿ;II
ನಾನೇಂದು ಸುಳ್ಳು ನುಡಿದಿಲ್ಲ, ಹಿಂಸೆ ನೀಡಿಲ್ಲ, I
ನಾನು ಯಾವ ಪ್ರಾಣಿಗೂ, ಯಾವ ವ್ಯಕ್ತಿಗೂ;II
ತಪ್ಪೇನು ಈ ಮಗು ಮಾಡಿದ? ಯಾಕೆI
ನಮಗೆ ಹುಟ್ಟಿದ? ಇಂದು ಸತ್ತನೇಕೇ?;II
ತಂದೆಗೆ ಸೇವೆ ಸಲ್ಲಿಸಲಿಲ್ಲವೇಕೇ?, ನಾನು ಕಂಡಿಲ್ಲ,ಕೇಳಿಲ್ಲI
ಇಂತಹ ಅಕಾಲಿಕ ಮರಣ ಘಟನೆ ರಾಮನ ರಾಜ್ಯದಲ್ಲಿ; II
ಇದು ರಾಮನೇಸಗಿದ ಪಾಪದ ದುಷ್ಫಲವೇI
ಬಾಲಕರು ಅಕಾಲಿಕ ಮರಣ ಅಪ್ಪುವದು? II
ಪರ ರಾಜ್ಯಗಳಲ್ಲಿ ಬಾಲಕರಿಗೆ ಮರಣದI
ಭಯವಿಲ್ಲ, ಕಂಡಿದೆ ಅದು ರಾಮನ ರಾಜ್ಯದಲ್ಲಿ;II
ಓ ರಾಜನೆ, ಮರಳಿ ಜೀವ ಕೊಡು ಎನ್ನ ಮಗನಿಗೆ,I
ಇಲ್ಲವೇ ನಾನು ನನ್ನ ಪತ್ನಿ ಬಿಡುವೆವು ಪ್ರಾಣ ಇಲ್ಲಿಯೇ;II
ಬ್ರಾಹ್ಮಣರ ಮರಣವನ್ನು ಸಂತೋಷದಿI
ಆಚರಿಸು ಸಹೋದರರೊಂದಿಗೆ, ಓ ಪರಾಕ್ರಮಿ ರಾಜನೆ;II
ಸಮೃದ್ಧಿ ನೆಮ್ಮದಿಯಿಂದ ಇದ್ದ ಅಯೋಧ್ಯೆ I
ಒಮ್ಮೇಲೆ ಬ್ರಾಹ್ಮಣ ಬಾಲಕ ಮರಣದ ಪಾಪಕೀಡಾಯಿತೇ?II
ರಾಮನ ಪಾಪದ ಆಡಳಿತದಿಂದಾಗಿ ಒದಗಿತೇ ಬ್ರಾಹ್ಮಣರಿಗೆ ಈ ದುರ್ಗತಿ?,I
ರಾಮನು ದುರ್ನಡತೆಯವನೇ?II
ರಾಮನ ಪಾಪದ ದುಷ್ಫಲವಾಗಿ ಬಂದೆರಗಿದೆI
ಸಾವು ಎನ್ನ ಮಗನಿಗೆ, ಇದಕ್ಕೆ ಕಾರಣ ರಾಮನೆ”.II
ಹೀಗೆ ಬ್ರಾಹ್ಮಣ ರಾಮನ ನಿಂದಿಸಿI
ಎಡೆ ಬಡೆದುಕೊಂಡು ನಿರಂತರ ಅಳುತಿದ್ದ. II
ಉತ್ತರಕಾಂಡ
ಸಮೃದ್ಧ ಶಾಂತ ರಾಮರಾಜ್ಯದಲ್ಲಿ ಒಬ್ಬ ಬಡ ಬ್ರಾಹ್ಮಣ ಬಾಲಕನ ಸಾವು, ಅದಕ್ಕೆ ಕಾರಣ ರಾಮನ ಪಾಪ ಕಾರ್ಯವೆಂದು ಪುತ್ರವಿಯೋಗ ತಂದೆಯ ಪ್ರಲಾಪವನ್ನು ವಿವರಿಸಿರುವರು, ಇಲ್ಲಿ ಅಕಾಲಿಕ ಮರಣ, ವಿಪತ್ತುಗಳು ಸಂಭವಿಸಿದರೆ ಅದು ಆ ರಾಜ ಇಲ್ಲವೆ ಅವನ ರಾಜದಲ್ಲಿ ನಡೆದ ಪಾಪದ ಕಾರ್ಯಗಳ ದುಷ್ಫಲವೆಂದು ತೀರ್ಮಾನಿಸುವ ಸಾಮಾಜಿಕ ಮನೋಸ್ಥಿತಿಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು. ಶತ್ರುಘ್ನನಿಗೆ ವಿದಾಯ ಹೇಳಿ ರಾಮನು ತನ್ನ ರಾಜ್ಯದ ಸಮಾನತೆ ಸಾಧನೆ ಕಾರ್ಯದ ಆಡಳಿತದಲ್ಲಿ ತಲ್ಲೀನನಾದನು; ಕೆಲ ಕಾಲದ ನಂತರ, ಒರ್ವ ಮುದಿ ಬ್ರಾಹ್ಮಣನು ಕಿರುಚುತ ಅಳುತ್ತ ರಾಮನ ಅರಮನೆ ದ್ವಾರ ಬಳಿ ಬಂದನು, ಆ ಮುದಿ ಬ್ರಾಹ್ಮಣನು ಬಾಲಕನ ಶವ ಎತ್ತಿಕೊಂಡು ಪದೇ ಪದೇ “ನಾನೇನು ಪಾಪ ಮಾಡಿದೆ ಪೂರ್ವಜನ್ಮದಲಿ?” ಎಂದು ರೋಧಿಸಿದನು; ತಂದೆ-ದುಃಖದಲಿ ನಿರಂತರ ರೋಧಿಸಿದ ಮುದಿ ಬ್ರಾಹ್ಮಣನು ಹೀಗೆ ಆಡಿಕೊಂಡನು “ಓ ಮಗನೇ, ಓ ಮಗನೇ! ಅಯ್ಯೋ ! ಯಾವ ಜನ್ಮದಲಿ ಎಸಗಿದ ನನ್ನ ಅಪರಾಧ ಇಂದು ಮಗನ ಸಾವು ನೋಡುವಂತೆ ಮಾಡಿದೇ? ನನ್ನ ಮಗನಿಗೆ ಇನ್ನೂ ಹದಿನಾಲ್ಕು ವರ್ಷ ವಯಸ್ಸು ಪೂರ್ಣವಾಗಲಿಲ್ಲ, ಆದರೆ ಸಾವು ಬಂತೇ? ಓ ಕಂದಾ, ಇನ್ನು ಕೆಲವೇ ದಿನಗಳಲ್ಲಿ ನಿನ್ನ ಕೊರಗಿನಲ್ಲಿ ನಾನು ಮತ್ತು ನಿನ್ನ ತಾಯಿ ಸಾಯುವೆವು; ನಾನೇಂದು ಸುಳ್ಳು ನುಡಿದಿಲ್ಲ, ನಾನು ಯಾವ ಪ್ರಾಣಿಗೂ, ಯಾವ ವ್ಯಕ್ತಿಗೂ ಹಿಂಸೆ ನೀಡಿಲ್ಲ; ಈ ಮಗು ಮಾಡಿದ ತಪ್ಪೇನು? ಯಾಕೆ ನಮಗೆ ಹುಟ್ಟಿದ? ಇಂದು ಸತ್ತನೇಕೇ?; ತಂದೆಗೆ ಸೇವೆ ಸಲ್ಲಿಸಲಿಲ್ಲವೇಕೇ?, ನಾನು ಕಂಡಿಲ್ಲ,ಕೇಳಿಲ್ಲ ಇಂತಹ ಅಕಾಲಿಕ ಮರಣ ಘಟನೆ ರಾಮನ ರಾಜ್ಯದಲ್ಲಿ; ಬಾಲಕರು ಅಕಾಲಿಕ ಮರಣ ಅಪ್ಪುವದು ರಾಮನು ಮಾಡಿದ ಪಾಪದ ದುಷ್ಫಲವೇ? ಪರ ರಾಜ್ಯಗಳಲ್ಲಿ ಬಾಲಕರಿಗೆ ಮರಣದ ಭಯವಿಲ್ಲ, ಆದರೆ ಅದು ರಾಮನ ರಾಜ್ಯದಲ್ಲಿ ಕಾಣಿಸಿಕೊಂಡಿದೆ; ಓ ರಾಜನೆ, ನೀನು ನನ್ನ ಮಗನಿಗೆ ಮರಳಿ ಜೀವ ಕೊಡು, ಇಲ್ಲವೇ ನಾನು ಮತ್ತು ನನ್ನ ಪತ್ನಿ ಇಲ್ಲಿಯೇ ಪ್ರಾಣ ಬಿಡುವೆವು; ಓ ಪರಾಕ್ರಮಿ ರಾಜನೆ ನೀನು ನಿನ್ನ ಸಹೋದರರೊಂದಿಗೆ ಬ್ರಾಹ್ಮಣರ ಮರಣವನ್ನು ಸಂತೋಷದಿಂದ ಆಚರಿಸು; ಸಮೃದ್ಧಿ ನೆಮ್ಮದಿಯಿಂದ ಇದ್ದ ಅಯೋಧ್ಯೆಯು ಒಮ್ಮೇಲೆ ಬ್ರಾಹ್ಮಣ ಬಾಲಕ ಮರಣದ ಪಾಪಕೀಡಾಯಿತೇ? ರಾಮನ ಪಾಪದ ಆಡಳಿತದಿಂದಾಗಿ ಒದಗಿತೇ ಬ್ರಾಹ್ಮಣರಿಗೆ ಈ ದುರ್ಗತಿ?, ರಾಮನು ದುರ್ನಡತೆಯವನೇ? ರಾಮನ ಪಾಪದ ದುಷ್ಫಲವಾಗಿ ಇಂದು ಸಾವು ನನ್ನ ಮಗನಿಗೆ ಬಂದೆರಗಿದೆ, ಇದಕ್ಕೆ ರಾಮನೇ ಕಾರಣ”. ಹೀಗೆ ಬ್ರಾಹ್ಮಣ ರಾಮನನ್ನು ನಿಂದಿಸಿ ಎಡೆ ಬಡೆದುಕೊಂಡು ನಿರಂತರ ಅಳುತಿದ್ದನು. ಮಗ ಅಕಾಲಿಕ ಮೃತ್ಯು ಹೊಂದಿದ್ದರಿಂದ ಜನ್ಮಕೊಟ್ಟವರಿಗೆ ದುಃಖವಾಗುವದು ಸಹಜ ಆದರೆ ಅದೇ ದು:ಖದಲ್ಲಿ ತಮಗಾದ ದುಃಖಕ್ಕೆ ಇನ್ನೊಬ್ಬರನ್ನು ಕಾರಣಿಭೂತರನ್ನಾಗಿ ಮಾಡುವದು ಸರಿಯಲ್ಲ ಎಂಬ ಸಂದೇಶವನ್ನು ಆದಿಕವಿ ವಾಲ್ಮೀಕಿಯು ಈ ಮುಖೇನ ನೀಡಿರುವರು, ಕೆಲವೊಂದು ಅಧ್ಯಯನಗಳ ಪ್ರಕಾರ ಈ ಘಟನೆಯು ಮೂಲ ವಾಲ್ಮೀಕಿಯವರುದು ಆಗಿರದೆ ಅದನ್ನು ಸ್ವಾರ್ಥಕ್ಕಾಗಿ ಸೇರಿಸಲಾಗಿದೆ ಎಂಬುದು ಸುಸ್ಪಷ್ಟ.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
