
ರಾಮಾಯಣ ಕಾವ್ಯ ಕೇಳಿದ ಶತ್ರುಘ್ನನ. ಕಿವಿ, ಮನದಲಿ ಪ್ರತಿದ್ವನಿತು, ಬರಲಿಲ್ಲ ನಿದ್ರೆ;II
ಹೇಗೋ ರಾತ್ರಿ ಕಳೆದು ಮುಂಜಾವಿನಲ್ಲಿ ಎದ್ದು, I
ಪೂಜೆ ಮುಗಿಸಿ ಕೈಮುಗಿದು ವಾಲ್ಮೀಕಿ ಮುನಿಗೆ ನುಡಿದ: II
“ಓ ದೈವೀಕೃಪೆಧರ, ಅಯೋಧ್ಯೆಗೆ ಮರಳಲು ಎನಗೆ ಕೊಡು ಅಪ್ಪನೆ, I
ಎಂದಿಗೂ ತಮ್ಮ ಆತಿಥ್ಯ ಮರೆಯಲಾರೆ”. II
ಕೇಳಿ ಶತ್ರುಘ್ನನ ಕೋರಿಕೆ, ಶತ್ರುಘ್ನನ ಅಪ್ಪಿಕೊಂಡುI
ಅಯೋಧ್ಯೆಗೆ ಮರಳಲು ವಾಲ್ಮೀಕಿ ಅನುಮತಿಸಿದರು;II
ಬೇಗ ಅಯೋಧ್ಯೆ ತಲಪುವ ತವಕದಲಿI
ಪಯಣ ಬೆಳೆಸಿದನುಯ ಶತ್ರುಘ್ನ ಸೇನೆಯೊಂದಿಗೆ;II
ವೇಗದಿ ತಲುಪಿ ಅಂದದ ಅಯೋಧ್ಯೆನಗರನ್ನುI
ಪ್ರವೇಶಿಸಿದ ಶತ್ರುಘ್ನ ತನ್ನ ಸಹಚರರೊಂದಿಗೆ;II
ಸಭಾಂಗಣದಲಿ ಮಂತ್ರಿಗಣ ಮಧ್ಯೆ ಸಿಂಹಾಸನರೂಢI
ರಾಮ ಕಂಡನು ಹೊಳೆವ ಚಂದ್ರನಂತೆ, ಇಂದ್ರನಂತೆ; II
ಬಂದು ರಾಮನ ಬಳಿ ಶತ್ರುಘ್ನ ಕೈಮುಗಿದುI
ರಾಮನಿಗೆ ನಿವೇದಿಸಿದನು:” ಓ ಮಹಾರಾಜನೆ, II
ಬಂದಿರುವೆ ನಿಮ್ಮ ಆಜ್ಞೆಯನ್ನು ಪೂರ್ಣಗೊಳಿಸಿ,I
ದುಷ್ಟ ಲವನನ ವಧಿಸಿ ಅವನ ರಾಜ್ಯ ಪಡೆದಿರುವೆ;II
ಕಳೆದೆ ಹನ್ನೆರಡು ಸಂವತ್ಸರಗಳ ದೂರವಿದ್ದುI
ನಿನ್ನಿಂದ, ಇನ್ನು ಇರಲಾರೆ ನಿನ್ನಿಂದ ದೂರ;II
ಆಕಳಿಂದ ಕರು ದೂರಮಾಡಿದಂತೆ ಇನ್ನುI
ಎನ್ನ ಕಳಿಸಬೇಡಾ ನಿನ್ನಿಂದ ದೂರ”. II
ಕೇಳುತ ಶತ್ರುಘ್ನನ ನುಡಿ ರಾಮ ಅವನ ಅಪ್ಪಿಕೊಂಡು ನುಡಿದ:I
”ಓ ಶೂರನೆ, ಸರಿ ಅನಿಸವು ಶೂರನಿಗೆ ಇಂತಹಮಾತು;II
ಹಿಂದಿರುಗಿಸರು ಪರರ ಭೂಮಿಗಳನು ರಾಜರುI
ಪ್ರಜೆಗಳ ರಕ್ಷಣೆ ರಾಜರ ಕರ್ತವ್ಯ, ಓ ವೀರ ಶತ್ರುಘ್ನಾ;II
ನೀನು ಪದೇ ಪದೇ ಅಯೋಧ್ಯೆಗೆ ಭೇಟಿಯಾಗುI
ನನಗಾಗಿ, ಆದರೆ ಮರಳು ನಿನ್ನ ರಾಜಧಾನಿಗೆ ;II
ಪ್ರೀತಿಸುವೆ ನಾನು ನಿನ್ನ ನನ್ನ ಪ್ರಾಣಗಿಂತ ಹೆಚ್ಚುI
ಆದರೂ ಎನಗೆ ನಿನ್ನ ರಾಜ್ಯದ ರಕ್ಷಣೆ ಬಹು ಮುಖ್ಯ;II
ಬಂದಿರುವಿ, ಇರು ನನ್ನೊಂದಿಗೆ ಏಳು ದಿನ,I
ಪುನಃ ಮರಳು ನಿನ್ನ ರಾಜಧಾನಿಗೆ ಸೇನೆಯೊಂದಿಗೆ”. II
ಕೇಳಿ ರಾಮನ ಉಪದೇಶ ಶತ್ರುಘ್ನ ದುಃಖದಿI
ನುಡಿದ:” ಹಾಗೆ ಆಗಲಿ, ಪಾಲಿಸುವೆ ನಿನ್ನ ಆಜ್ಞೆ”. II
ರಾಮನ ಸಾನಿಧ್ಯದಲಿ ಶತ್ರುಘ್ನ ಕಳೆದI
ಏಳು ದಿನ ಅಣ್ಣನ ಇಚ್ಚೆಯಂತೆ;II
ಭರತ,ಲಕ್ಷ್ಮಣ ವ ರಾಮನಿಗೆ ವಿಧೇಯಕತೆದಿI
ಕೈ ಮುಗಿದು ಶತ್ರುಘ್ನ ಮರಳಿದ ತನ್ನ ರಾಜಧಾನಿಗೆ.II
ಉತ್ತರಕಾಂಡ
ಶತ್ರುಘ್ನನು ತವಕದಲ್ಲಿ ರಾಮನಿಗೆ ಭೇಟಿಕೊಟ್ಟು ತನಗೆ ವಹಿಸಿದ ಕಾರ್ಯ ಸಾಧಿಸಿದ ಸುದ್ಧಿ ಮುಟ್ಟಿಸಿದ, ರಾಮನು ಶತ್ರುಘ್ನನಿಗೆ ಅವನು ಗೆದ್ದ ಮಧುಪುರ ನಗರ ರಾಜ್ಯಕ್ಕೆ ಮರಳಿ ಪ್ರಜೆಗಳ ಸೇವೆ ಮಾಡೆಂದು ನೀಡಿದ ಉಪದೇಶ ಹಾಗು ಅಣ್ಣನ ಉಪದೇಶದಂತೆ ಶತ್ರುಘ್ನನು ಅಯೊಧ್ಯೆಯಲ್ಲಿ ಏಳು ದಿನ ತಂಗಿ ಪುನಃ ಮಧುಪುರಕ್ಕೆ ಮರಳಿದ ಸಂಗತಿಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಯುದ್ಧದಲ್ಲಿ ಗೆದ್ದ ಭೂಮಿಯನ್ನು ಹಿಂದಕ್ಕೆ ಮರಳಿಸದೇ ಅಲ್ಲಿಯ ಪ್ರಜೆಗಳ ರಕ್ಷಣೆ ಗೆದ್ದವನ ಜವಾಬ್ದಾರ ಎಂಬುದನ್ನು ಕವಿ ಉಲ್ಲೇಖಿಸಿರುವರು.ರಾಮಾಯಣ ಕಾವ್ಯ ಕೇಳಿದ ಶತ್ರುಘ್ನನ ಕಿವಿ, ಮನದಲಿ ಅದು ಪ್ರತಿದ್ವನಿತು, ಅವನಿಗೆ ನಿದ್ರೆ ಬರಲಿಲ್ಲ, ಆದರೆ ಹೇಗೋ ರಾತ್ರಿ ಕಳೆದು ಮುಂಜಾವಿನಲ್ಲಿ ಎದ್ದು ಪೂಜೆ ಮುಗಿಸಿ ಕೈಮುಗಿದು ವಾಲ್ಮೀಕಿ ಮುನಿಗೆ “ಓ ದೈವೀಕೃಪೆಯುಳ್ಳವನೆ, ಅಯೋಧ್ಯೆಗೆ ಮರಳಲು ನನಗೆ ಅಪ್ಪನೆ ಕೊಡು, ನಾನು ಎಂದಿಗೂ ತಮ್ಮ ಆತಿಥ್ಯ ಮರೆಯಲಾರೆ” ಕೋರಿದನು. ಶತ್ರುಘ್ನನ ಕೋರಿಕೆ ಕೇಳಿ ಅವನನ್ನು ಅಪ್ಪಿಕೊಂಡು ಅಯೋಧ್ಯೆಗೆ ಮರಳಲು ವಾಲ್ಮೀಕಿ ಅನುಮತಿಸಿದರು; ಬೇಗ ಅಯೋಧ್ಯೆ ತಲಪುವ ತವಕದಲಿ ಶತ್ರುಘ್ನನು ಸೇನೆಯೊಂದಿಗೆ ಪಯಣ ಬೆಳೆಸಿದನು; ಶತ್ರುಘ್ನ ತನ್ನ ಸಹಚರರೊಂದಿಗೆ ವೇಗದಿಂದ ತಲುಪಿ ಅಂದದ ಅಯೋಧ್ಯೆನಗರನ್ನು ಪ್ರವೇಶಿಸಿದನು; ಸಭಾಂಗಣದಲಿ ಮಂತ್ರಿಗಣ ಮಧ್ಯೆ ಸಿಂಹಾಸನರೂಢ ರಾಮನು ಶತ್ರುಘ್ನಿಗೆ ಹೊಳೆವ ಚಂದ್ರನಂತೆ, ಇಂದ್ರನಂತೆ ಕಂಡನು; ಶತ್ರುಘ್ನನು ರಾಮನ ಬಳಿ ಬಂದು ಕೈಮುಗಿದು ರಾಮನಿಗೆ ನಿವೇದಿಸಿದನು:” ಓ ಮಹಾರಾಜನೆ, ನಾನು ನಿಮ್ಮ ಆಜ್ಞೆಯನ್ನು ಪೂರ್ಣಗೊಳಿಸಿ ಬಂದಿರುವೆನು, ದುಷ್ಟ ಲವನನನ್ನು ವಧಿಸಿ ಅವನ ರಾಜ್ಯ ಪಡೆದಿರುವೆನು;ಈ ನಿಮಿತ್ಯ ನಾನು ನಿನ್ನಿಂದ ಕಳೆದೆ ಹನ್ನೆರಡು ಸಂವತ್ಸರಗಳವರೆಗೆ ದೂರವಿದ್ದೆನು, ಇನ್ನು ನಿನ್ನಿಂದ ದೂರ ಇರಲಾರೆನು; ಆಕಳಿಂದ ಕರು ದೂರಮಾಡಿದಂತೆ ಇನ್ನು ನನ್ನನ್ನು ನಿನ್ನಿಂದ ದೂರ ಕಳಿಸಬೇಡಾ”. ಶತ್ರುಘ್ನನ ನುಡಿಗಳನ್ನು ಕೇಳುತ ರಾಮನು ಅವನನ್ನು ಅಪ್ಪಿಕೊಂಡು ಅವನಿಗೆ ಉದೇಶಿಸಿದನು ”ಓ ಶೂರನೆ, ಶೂರನಿಗೆ ಇಂತಹ ಮಾತು ಸರಿ ಅನಿಸವು; ಯುದ್ಧದಲ್ಲಿ ಗೆದ್ದ ಪರರ ಭೂಮಿಗಳನು ರಾಜರು ಹಿಂದಿರುಗಿಸರು, ಆದರೆ ಪ್ರಜೆಗಳ ರಕ್ಷಣೆ ರಾಜರ ಕರ್ತವ್ಯ; ನೀನು ನನಗಾಗಿ ಪದೇ ಪದೇ ಅಯೋಧ್ಯೆಗೆ ಭೇಟಿಯಾಗು, ಆದರೆ ನೀನು ನಿನ್ನ ರಾಜಧಾನಿ ಮಧುಪುರನಗರಕ್ಕೆ ಮರಳು; ನಾನು ನಿನ್ನನ್ನು ನನ್ನ ಪ್ರಾಣಗಿಂತ ಹೆಚ್ಚು ಪ್ರೀತಿಸುವೆನು ಆದರೂ ನನಗೆ ನಿನ್ನ ರಾಜ್ಯದ ರಕ್ಷಣೆ ಬಹು ಮುಖ್ಯ; ನೀನು ನನ್ನ ಬಳಿ ಬಂದಿರುವಿ, ನನ್ನೊಂದಿಗೆ ಏಳು ದಿನ ಇರು, ನೀನು ನಿನ್ನ ರಾಜಧಾನಿಗೆ ಸೇನೆಯೊಂದಿಗೆ ಪುನಃ ಮರಳು”. ರಾಮನ ಉಪದೇಶ ಕೇಳಿ ಶತ್ರುಘ್ನನು ದುಃಖದಿಂದ ” ಹಾಗೆ ಆಗಲಿ, ಪಾಲಿಸುವೆ ನಿನ್ನ ಆಜ್ಞೆ” ಎಂದು ನುಡಿದನು. ರಾಮನ ಸಾನಿಧ್ಯದಲಿ ಶತ್ರುಘ್ನನು ಅವನ ಇಚ್ಚೆಯಂತೆ ಏಳು ದಿನ ಕಳೆದನು; ಭರತ,ಲಕ್ಷ್ಮಣ ಮತ್ತು ರಾಮನಿಗೆ ವಿಧೇಯಕತೆಯಿಂದ ಕೈ ಮುಗಿದು ಶತ್ರುಘ್ನನು ತನ್ನ ರಾಜಧಾನಿಗೆ ಮರಳಿದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
