ದ್ವಾರಪಾಲಕ ಮುಟ್ಟಿಸಿದ ರಾಮನ ಸಂದೇಶ ಭರತ

By admin


ದ್ವಾರಪಾಲಕ ಮುಟ್ಟಿಸಿದ ರಾಮನ ಸಂದೇಶ ಭರತI
ಲಕ್ಷ್ಮಣರಿಗೆ, ಬಂದರು ಓಡಿ ಅವರು ರಾಮನ ಬಳಿ;II
ಭರತ ಲಕ್ಷ್ಮಣರನ್ನು ಅಪ್ಪಿಕೊಂಡು ರಾಮ ನುಡಿದ:I
“ನಾನು ಪೂರ್ಣಗೊಳಿದೆ ಆ ಬ್ರಾಹ್ಮಣನ ಕಾರ್ಯ, II
ಈಗ ರಾಜಸುಯ ಯಜ್ಞ ಮಾಡಬೇಕೆಂದು ಎನಗೆI
ಬಯಕೆಯಾಗಿದೆ, ಅಧರ್ಮ ತೊಡೆದು ಧರ್ಮ ರಕ್ಷಣೆಗೆ;II
ರಾಜಸುಯ ಯಜ್ಞ ಆಚರಣೆ ಅಲಿಖಿತ ನಿಯಮI
ಅದರ ಆಚರಣೆಗೆ ನೀವಿಬ್ಬರೂ ನನಗೆ ಜೊತೆ ನೀಡಬೇಕು;II
ಮಿತ್ರಾನು ಪಡೆದನು ವರುಣ ಪದವಿ I
ಆಚರಿಸಿ ರಾಜಸುಯ ಯಜ್ಞ, ಸಿರಿವಂತ ಕೊಡುಗೆ ಅರ್ಪಿಸಿ; II
ಸೋಮನು ಪಡೆದನು ಶಾಶ್ವತ ಕೀರ್ತಿI
ಲೋಕಗಳಲ್ಲಿ ಆಚರಿಸಿ ರಾಜಸುಯ ಯಜ್ಞ; II
ಪರಂಪರೆಯಂತೆ ರಾಜಸುಯ ಯಜ್ಞ ಆಚರಣೆI
ನಮಗೆ ಭವಿಷ್ಯದಲಿ ಸಮೃದ್ಧಿ, ಶಾಂತಿ ನೀಡುವದು”. II
ಕೇಳಿ ರಾಮನ ಮಾತು ಚರ್ಚಾಪಟು ಭರತ ಕೈ ಮುಗಿದುI
ರಾಮನಿಗೆ ಅರುಹಿದ:” ಓ ಪ್ರೀಯ ಸಹೋದರನೆ, II
ನಿನ್ನಲಿ ಕರ್ತವ್ಯಪ್ರಜ್ಞೆ ಅದ್ಭುತವಾಗಿದೆ, ಜಗದI
ಉದ್ಧಾರ ಕಳಕಳಿ ನಿನ್ನ ಹೃದಯದಲ್ಲಿದೆ, II
ಜಗದ ಎಲ್ಲ ರಾಜರಿಗೆ ವ ನಮಗೂ ನೀನೇ ರಕ್ಷಕI
ನೀನು ಎಮಗೆ ದೇವ ವ ಪ್ರಜಾಪತಿಯಿದ್ದಂತೆ;II
ಓ ಅಜಾನುಬಾಹು, ಮಕ್ಕಳು ನಿನ್ನನು ತಂದೆಯೆಂದುI
ಕಾಣುವರು, ಸಕಲ ಜೀವಿಗಳಿಗೆ ನೀನೇ ಮೋಕ್ಷದಾತ;II
ಓ ರಾಘವಾ,ಕರುಣಾಮಯಿ ಸ್ವಭಾವದ ನೀನುI
ರಾಜಸುಯ ಯಜ್ಞ ಆಚರಿಸಲು ಸಾಧ್ಯವೇ? II
ಈ ಯಜ್ಞದಿ ನಾಶವಾಗುವವು ರಾಜ್ಯ ಮನೆತನಗಳು,I
ಶೂರರ, ವೀರರ ಪ್ರಾಣಾಹುತಿ ನಡೆಯುವದು, II
ಜಾಗತಿಕ ನಾಶ ನಿಂದನೆಗೆ ಈ ಯಜ್ಞ ಕಾರಣವಾದೀತು I
ಓ ಪರಾಕ್ರಮಿ ಸಿಂಹವೇ, ನಾಶ ಮಾಡಬೇಡಾ ಜಗವನು: II
ಈ ಯಜ್ಞದಿ ನೀನೆ ನಾಶ ಮಾಡುವಿI
ನಿನ್ನ ರಕ್ಷಣೆ ಬಯಸಿದ ಜೀವಿಗಳನ್ನು”.II
ಕೇಳಿ ಭರತನ ಚರ್ಚಾನಿಪುಣತೆ ಮಾತುಗಳನ್ನು I
ಅಮೃತ ಸಮ ಮಧುರಾಕ್ಷರಗಳದಿ ಭರತನಿಗೆ ನುಡಿದ ರಾಮ:II
“ ನಿನ್ನ ಮಾತುಗಳು ಎನಗೆ ತೃಪ್ತಿ, ಸಂತೋಷI
ನೀಡಿದವು,ಇದೊಂದು ನಿರ್ಣಾಯಿಕ ಚರ್ಚೆ, II
ಓ ಅಜೇಯಿ ಶೂರನೇ,ಧರ್ಮನಿಷ್ಠೆಯುಳ್ಳI
ನಿನ್ನ ವಾದ ಭೂಮಂಡಳವನು ರಕ್ಷಿಸಿತು:II
ಓ ಸದ್ಗುಣಿ ಭರತನೇ, ನಿನ್ನ ಮಾತು ಕೇಳಿ ಬದಲಿಸಿದೆ ಎನ್ನ ನಿರ್ಧಾರ, I
ಮಾಡಲಾರೆ ರಾಜಸುಯ ಯಜ್ಞ;II
ಪ್ರತಿವಾದಿ ಸಣ್ಣ ಮಗುವಿದ್ದರೂ ಕೇಳಬೇಕುI
ಅವನ ವಾದ, ಮೆಚ್ಚಿದೆ ನಿನ್ನ ಸಲಹೆ.” II
ಉತ್ತರಕಾಂಡ

ರಾಮನು ರಾಜಸುಯ ಯಜ್ಞ ಮಾಡಬೇಕೆಂದು ತನ್ನ ಬಯಕೆಯನ್ನು ಸಹೋದರರ ಮುಂದೆ ಮಂಡಿಸಿದಾಗ ಭರತನು ಅದರಿಂದ ಆಗುವ ದುಷ್ಪರಿಣಾಗಳ ಬಗ್ಗೆ ಮನವರಿಕೆ ಮಾಡಿ ರಾಮನಿಗೆ ಅದನು ಮಾಡದಂತೆ ನೀಡಿದ ಸಲಹೆ ಮತ್ತು ಭರತನ ಸಲಹೆಯನ್ನು ರಾಮನು ಮೆಚ್ಚಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದೇ ವೇಳೆ ಕವಿಯು (1) ರಾಜಸುಯ ಯಜ್ಞ ಪರಿನಾಮಗಳು ಮತ್ತು (2) ಸೂಕ್ತ ಸಲಹೆಗಳು ವಯಸ್ಸಾತೀತ. ಹೀಗೆ ಕೆಲವು ಮುಖ್ಯ ಅಂಶಗಳನ್ನು ವ್ಯಕ್ತ ಪಡಿಸಿರುವರು: ರಾಮನು ಬಂದ ಸಂದೇಶವನ್ನು ಭರತ ಲಕ್ಷ್ಮಣರಿಗೆ ದ್ವಾರಪಾಲಕ ಮುಟ್ಟಿಸಿದ, ಅವರು ರಾಮನ ಬಳಿ ಓಡಿ ಬಂದರು;ಭರತ ಮತ್ತು ಲಕ್ಷ್ಮಣರನ್ನು ಅಪ್ಪಿಕೊಂಡು ರಾಮ ಅವರಿಗೆ ನುಡಿದನು “ನಾನು ಆ ಬ್ರಾಹ್ಮಣನ ಕಾರ್ಯ ಪೂರ್ಣಗೊಳಿದೆನು, ಅಧರ್ಮ ತೊಡೆದು ಧರ್ಮ ರಕ್ಷಣೆಗಗಾಗಿ ಈಗ ರಾಜಸುಯ ಯಜ್ಞ ಮಾಡಬೇಕೆಂದು ನನಗೆ ಬಯಕೆಯಾಗಿದೆ; ರಾಜಸುಯ ಯಜ್ಞ ಆಚರಣೆ ಅಲಿಖಿತ ನಿಯಮ, ಅದರ ಆಚರಣೆಗೆ ನೀವಿಬ್ಬರೂ ನನಗೆ ಜೊತೆ ನೀಡಬೇಕು; ಮಿತ್ರಾನು ರಾಜಸುಯ ಯಜ್ಞ ಆಚರಿಸಿ, ಸಿರಿವಂತ ಕೊಡುಗೆ ಅರ್ಪಿಸಿ ವರುಣ ಪದವಿಯನ್ನು ಪಡೆದನು, ಸೋಮನು ರಾಜಸುಯ ಯಜ್ಞ ಆಚರಿಸಿ ಲೋಕಗಳಲ್ಲಿ ಶಾಶ್ವತ ಕೀರ್ತಿ ಪಡೆದನು, ನಾವು ಪರಂಪರೆಯಂತೆ ರಾಜಸುಯ ಯಜ್ಞ ಆಚರಣೆ ಮಾಡಿದರೆ ನಮಗೆ ಭವಿಷ್ಯದಲಿ ಸಮೃದ್ಧಿ, ಶಾಂತಿ ಸಿಗುವದು”. ರಾಮನ ಬಕೆ ಮಾತು ಕೇಳಿ ಚರ್ಚಾಪಟು ಭರತನು ರಾಮನಿಗೆ ಕೈ ಮುಗಿದು ಅರುಹಿದನು ” ಓ ಪ್ರೀಯ ಸಹೋದರನೆ, ನಿನ್ನಲಿ ಕರ್ತವ್ಯಪ್ರಜ್ಞೆ ಅದ್ಭುತವಾಗಿದೆ, ಜಗದ ಉದ್ಧಾರ ಕಳಕಳಿ ನಿನ್ನ ಹೃದಯದಲ್ಲಿದೆ, ಜಗದ ಎಲ್ಲ ರಾಜರಿಗೆ ಮತ್ತು ನಮಗೂ ನೀನೇ ರಕ್ಷಕನು, ನೀನು ನಮಗೆ ದೇವರು ಮತ್ತು ಪ್ರಜಾಪತಿಯಿದ್ದಂತೆ; ಮಕ್ಕಳು ನಿನ್ನನು ತಂದೆಯೆಂದು ಕಾಣುವರು, ಸಕಲ ಜೀವಿಗಳಿಗೆ ನೀನೇ ಮೋಕ್ಷದಾತನು;ಕರುಣಾಮಯಿ ಸ್ವಭಾವದ ನೀನು ರಾಜಸುಯ ಯಜ್ಞ ಆಚರಿಸಲು ಸಾಧ್ಯವೇ? ಈ ಯಜ್ಞದಿಂದ ರಾಜ್ಯ ಮನೆತನಗಳು ನಾಶವಾಗುವವು, ಶೂರರ, ವೀರರ ಪ್ರಾಣಾಹುತಿ ನಡೆಯುವದು, ಜಾಗತಿಕ ನಿಂಧನೆಗೆ ಈ ಯಜ್ಞ ನಾಶ ಕಾರಣವಾದೀತು, ಜಗವನು ನಾಶ ಮಾಡಬೇಡಾ: ನಿನ್ನ ರಕ್ಷಣೆ ಬಯಸಿದ ಜೀವಿಗಳನ್ನು ಈ ಯಜ್ಞದಿಂದ ನೀನೇ ನಾಶ ಮಾಡುವಿ”. ಭರತನ ಚರ್ಚಾನಿಪುಣತೆಯ ಸಲಹೆ ಮಾತುಗಳನ್ನು ಕೇಳಿ ರಾಮನು ಅಮೃತ ಸಮ ಮಧುರಾಕ್ಷರಗಳದಿಂದ ಭರತನಿಗೆ ಮೆಚ್ಚುಗೆ ಮಾತುಗಳನ್ನು ಹೇಳಿದನು “ಓ ಅಜೇಯಿ ಶೂರನೇ, ನಿನ್ನ ಮಾತುಗಳು ನನಗೆ ತೃಪ್ತಿ, ಸಂತೋಷ ನೀಡಿದವು,ಇದೊಂದು ನಿರ್ಣಾಯಿಕ ಚರ್ಚೆ; ಧರ್ಮನಿಷ್ಠೆಯುಳ್ಳ ನಿನ್ನ ವಾದ ಭೂಮಂಡಳವನು ರಕ್ಷಿಸಿತು, ನಿನ್ನ ಮಾತು ಕೇಳಿ ನಾನು ನನ್ನ ನಿರ್ಧಾರ ಬದಲಿಸಿದೆ, ನಾನು ರಾಜಸುಯ ಯಜ್ಞ ಮಾಡಲಾರೆನು; ಪ್ರತಿವಾದಿ ಸಣ್ಣ ಮಗುವಿದ್ದರೂ ಅವನ ವಾದ ಕೇಳಬೇಕು, ನಿನ್ನ ಸಲಹೆ ಮೆಚ್ಚಿದೆನು.”
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.