
ಕೇಳಿ ಶಿಷ್ಯರಿಂದ ಅರುಜಾಳ ಬಲತ್ಕಾರ ವ್ಯಥೆ ಸುದ್ಧಿI
ಹಸಿದ ಹುಲಿಯಂತೆ ಮರಳಿದ ಶುಕ್ರಾಚಾರ್ಯ ಆಶ್ರಮಕ್ಕೆ;II
ರಾಹು ನುಂಗಿದ ಚಂದ್ರನಂತೆ ಮಂಕಾದ ಮಗಳ ಕಂಡು I
ಅಪ್ಪಿ ಧೂಳದ ಮೈ ಸವರಿ ಸಂತೈಸಿದ ಶುಕ್ರಾಚಾರ್ಯ;II
ಮೂರೂ ಲೋಕಗಳನ್ನೆ ನುಂಗುವ ಕೋಪದಲಿI
ಶುಕ್ರಾಚಾರ್ಯ ನುಡಿದ ಶಿಷ್ಯರಿಗೆ:” ಸಾಕ್ಷಿಯಾಗಿ ನೀವು, II
ಕಂಡು ಕೆಂಡದಂತಹ ನನ್ನ ಕೋಪ ಶಾಪವುI
ಪಾಪಿ ದಂಡನ ಮೇಲೆ ವಿಪತ್ತಾಗಿ ಸುರಿಯುವದನು;II
ಯಜ್ಞ ಅಗ್ನಿಗೆ ಕೈ ಹಾಕಿರುವ ದುಷ್ಟ ದಂಡನುI
ನಾಶವಾಗುವನು ತನ್ನ ಸಾಮ್ರಾಜ್ಯದೊಂದಿಗೆ,II
ಇನ್ನು ಏಳು ದಿನಗಳಲ್ಲಿ ದಂಡನು ನಾಶವಾಗುವನುI
ತನ್ನ ಮಕ್ಕಳು, ಸೈನ್ಯ, ಶೂರರೊಂದಿಗೆ, ಶಾಪದ ದುಷ್ಫಲದಿ II
ಪಾಕ ರಾಕ್ಷಸನನ್ನು ಇಂದ್ರ ಸಂಹರಿಸಿದಂತೆ I
ಎನ್ನ ಶಾಪದ ಧೂಳದ ಬಿರುಗಾಳಿ ಮಾಡುವದು ಶತ ಯೋಜನೆಗವ್ಯಾಪ್ತಿ ನಾಶ;II
ಏಳು ದಿನಗಳಲ್ಲಿ ಧೂಳ ಬೂದಿ ಮಳೆಯಿಂದ ಹೂತುI
ಹೋಗುವದು ದಂಡನ ಸಾಮ್ರಾಜ್ಯ, ಮಧುಮಂತನಗರ”.II
ಹೀಗೆ ನುಡಿಯುತ ಶುಕ್ರಾಚಾರ್ಯ ನುಡಿದ ಶಿಷ್ಯರಿಗೆ:I
“ಈ ಪ್ರದೇಶದಿಂದ ದೂರ ಹೋಗಿ ಪಡೆಯಿರಿ ಆಶ್ರಯ” II
ಕೇಳಿ ಆಶ್ರಮವಾಸಿಗಳೆಲ್ಲ ದೂರ ಹೋದರು ಆ ಪ್ರದೇಶದಿ,I
ಶುಕ್ರಾಚಾರ್ಯ ಪುತ್ರಿ ಅರುಜಾಳಿಗೆ ನುಡಿದ:II
“ ಓ ಅರುಜಾ, ಧ್ಯಾನ ಮಾಡುತ ಕುಳಿತಿರು ಆಶ್ರಮದಲಿ, I
ಏನು ಮಾಡದು ಧೂಳಿ ಬಿರುಗಾಳಿ ನಿನಗೆ ವ ನಿನ್ನೊಂದಿಗೆII
ಇರುವ ವನ್ಯ ಜೀವಿಗಳಿಗೆ; ನಿನ್ನ ಸಮಯವನ್ನು ಕಾಯು,I
ನಾಲ್ಕುಯೋಜನೆ ಪ್ರದೇಶದಲಿ ಅನುಭವಿಸುತ II
ಸರೋವರದ ಸುಖ, ನಿಸ್ಸಕಾಳಜಿಯಾಗಿರು”.I
ಕೇಳಿ ತಂದೆಯ ಉಪದೇಶ ʻಹಾಗೆ ಆಗಲಿʼ ಎಂದಳು ಅರುಜಾ, II
ಶುಕ್ರಾಚಾರ್ಯರು ಆಶ್ರಯ ಹುಡಿಕಿ ಹೋದರು ದೂರ; I
ಏಳನೆ ದಿನ ಬೀಸಿತು ಧೂಳಿ-ಬೂದಿ ಬಿರುಗಾಳಿ, II
ಹೋದ ಹೂತು ರಾಜನು ತನ್ನ ರಾಜ್ಯ ,I
ಸೇವಕರು, ಸೈನ್ಯದೊಂದಿಗೆ ಧೂಳ ಬೂದಿಯಲಿ; II
ಮಧುಮಂತನಗರ ಪ್ರದೇಶವು ದಂಡಕ ಮರಭೂಮಿಯಾಯಿತುI
ಮಾರ್ಪಟ್ಟಿತು ಅದೇ ಪ್ರದೇಶವು ಜನಸ್ಥಾನವಾಗಿ; II
ಓ ರಾಘವಾ, ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸಿರುವೆ ಸವಿಸ್ತಾರವಾಗಿI
ಅಷ್ಟಚಲ ಪರ್ವತದಾಚೆ ಸೂರ್ಯ ಅಸ್ತನಾಗುತಿಹನುII
ಸಂಜೆಯಾಗುತಿದೆ, ಪೂಜೆ ಸಮಯ, ಎಲ್ಲ ಮುನಿಗಳು ಸ್ನಾನಕ್ಕೆ ಹೊರಟಿಹರು,I
ನಾವು ಮುಗಿಸೋಣ ಸಂಧ್ಯವಂದನೆ”.II
ಉತ್ತರಕಾಂಡ
ರಾಜಾ ದಂಡ ಮತ್ತು ಅವನ ಮಧುವಂತನಗರವು ಶುಕ್ರಾಚಾರ್ಯರ ಶಾಪಕ್ಕೆ ಬಲಿಯಾಗಿ ಅದು ದಂಡಕ ಮರುಭೂಮಿಯಾಗಿ, ಮುಂದೆ ಜನಸ್ಥಾನವಾದ ಕಥೆಯನ್ನು ಅಗಸ್ತ್ಯರು ರಾಮನಿಗೆ ಹೇಳಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಶುಕ್ರಾಚಾರ್ಯರು ತನ್ನ ಶಿಷ್ಯರಿಂದ ತನ್ನ ಪುತ್ರಿ ಅರುಜಾಳ ಬಲತ್ಕಾರ ವ್ಯಥೆ ಸುದ್ಧಿ ತಿಳಿದು ಹಸಿದ ಹುಲಿಯಂತೆ ಆಶ್ರಮಕ್ಕೆ ಮರಳಿದನು; ರಾಹು ನುಂಗಿದ ಚಂದ್ರನಂತೆ ಮಂಕಾದ ಮಗಳನ್ನು ಕಂಡು ಶುಕ್ರಾಚಾರ್ಯ ಅವಳನ್ನು ಅಪ್ಪಿ ಅವಳ ಧೂಳದ ಮೈಯನ್ನು ಸವರಿ ಸಂತೈಸಿದನು; ಮೂರೂ ಲೋಕಗಳನ್ನೆ ನುಂಗುವ ಕೋಪದಲಿ ಶುಕ್ರಾಚಾರ್ಯನು ಶಿಷ್ಯರಿಗೆ ನುಡಿದನು “ಸಾಕ್ಷಿಯಾಗಿ ನೀವು, ಕೆಂಡದಂತಹ ನನ್ನ ಕೋಪ ಶಾಪವು ಪಾಪಿ ದಂಡನ ಮೇಲೆ ವಿಪತ್ತಾಗಿ ಸುರಿಯುವದನು ನೋಡಿರಿ; ಯಜ್ಞ ಅಗ್ನಿಗೆ ಕೈ ಹಾಕಿರುವ ದುಷ್ಟ ದಂಡನು ತನ್ನ ಸಾಮ್ರಾಜ್ಯದೊಂದಿಗೆ ನಾಶವಾಗುವನು, ನನ್ನ ಶಾಪದ ದುಷ್ಫಲದಿಂದ ಇನ್ನು ಏಳು ದಿನಗಳಲ್ಲಿ ದಂಡನು ತನ್ನ ಮಕ್ಕಳು, ಸೈನ್ಯ, ಶೂರರೊಂದಿಗೆ ನಾಶವಾಗುವನು, ಪಾಕ ರಾಕ್ಷಸನನ್ನು ಇಂದ್ರ ಸಂಹರಿಸಿದಂತೆ ನನ್ನ ಶಾಪದ ಧೂಳೀ ಬಿರುಗಾಳಿ ಶತ ಯೋಜನೆಗವ್ಯಾಪ್ತಿ ಪ್ರದೇಶವನ್ನು ನಾಶ ಮಾಡುವದು; ಏಳು ದಿನಗಳಲ್ಲಿ ಧೂಳ ಬೂದಿ ಮಳೆಯಿಂದ ದಂಡನ ಸಾಮ್ರಾಜ್ಯ, ಮಧುಮಂತನಗರವು ಹೂತು ಹೋಗುವದು”. ಹೀಗೆ ನುಡಿಯುತ ಶುಕ್ರಾಚಾರ್ಯ ಮತ್ತೆ ಶಿಷ್ಯರಿಗೆ ನುಡಿದನು “ನೀವು ಈ ಪ್ರದೇಶದಿಂದ ದೂರ ಹೋಗಿ ಆಶ್ರಯ ಪಡೆಯಿರಿ”. ಗುರುವಿನ ಎಚ್ಚರಿಕೆ ನುಡಿ ಕೇಳಿ ಆಶ್ರಮವಾಸಿಗಳೆಲ್ಲ ಆ ಪ್ರದೇಶ ತೊರೆದು ದೂರ ಹೋದರು; ಶುಕ್ರಾಚಾರ್ಯ ತನ್ನ ಪುತ್ರಿ ಅರುಜಾಳಿಗೆ ನುಡಿದನು “ ಓ ಅರುಜಾ, ನೀನು ಧ್ಯಾನ ಮಾಡುತ ಆಶ್ರಮದಲಿ ಕುಳಿತಿರು, ನಿನಗೆ ಮತ್ತು ನಿನ್ನೊಂದಿಗೆ ಇರುವ ವನ್ಯ ಜೀವಿಗಳಿಗೆ ಧೂಳಿ ಬಿರುಗಾಳಿಯು ಏನೂ ಮಾಡದು; ನೀನು ನಾಲ್ಕುಯೋಜನೆ ಪ್ರದೇಶದಲಿ ಸರೋವರದ ಸುಖ ಅನುಭವಿಸುತ, ನಿಸ್ಸಕಾಳಜಿಯಾಗಿರು,ನಿನ್ನ ಸಮಯವನ್ನು ಕಾಯು.” ತಂದೆಯ ಉಪದೇಶ ಕೇಳಿ “ಹಾಗೆ ಆಗಲಿ” ಎಂದಳು ಅರುಜಾ; ಶುಕ್ರಾಚಾರ್ಯರು ಆಶ್ರಯ ಹುಡಿಕಿ ದೂರ ಹೋದರು; ಧೂಳಿ-ಬೂದಿ ಬಿರುಗಾಳಿಯು ನಿರಂತರ ಏಳನೆ ದಿನ ಬೀಸಿತು, ರಾಜನು ತನ್ನ ರಾಜ್ಯ , ಸೇವಕರು, ಸೈನ್ಯದೊಂದಿಗೆ ಧೂಳ-ಬೂದಿಯಲ್ಲಿ ಹೂತು ಹೋದನು; ಅದರಿಂದ ಮಧುಮಂತನಗರ ಪ್ರದೇಶವು ದಂಡಕ ಮರಭೂಮಿಯಾಯಿತು, ಮುಂದೆ ಅದೇ ಪ್ರದೇಶವು ಜನಸ್ಥಾನವಾಗಿ ಮಾರ್ಪಟ್ಟಿತು; ಹೀಗೆ ಅಗಸ್ತ್ಯರು ರಾಮನಿಗೆ ರಾಜಾ ದಂಡನ ಕಥೆ ಹೇಳುತ “ಓ ರಾಘವಾ, ನಿನ್ನೆಲ್ಲ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರಿಸಿರುವೆನು, ಅಷ್ಟಚಲ ಪರ್ವತದಾಚೆ ಸೂರ್ಯ ಅಸ್ತನಾಗುತಿಹನು, ಸಂಜೆಯಾಗುತಿದೆ, ಪೂಜೆ ಸಮಯವಾಯಿತು, ಎಲ್ಲ ಮುನಿಗಳು ಸ್ನಾನಕ್ಕೆ ಹೊರಟಿಹರು, ನಾವು ಸಂಧ್ಯಾವಂದನೆ ಮುಗಿಸೋಣ” ಎಂದು ಹೇಳಿದನು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
