ಕುಂಭಜ ಅಗಸ್ತ್ಯ ಮುನಿ ಕಥೆ ಮುಂದುವರೆಸಿದ

By admin


ಕುಂಭಜ ಅಗಸ್ತ್ಯ ಮುನಿ ಕಥೆ ಮುಂದುವರೆಸಿದ: “ ಓ ಕಕುತ್ಸ್ಥ,I
ಆಳಿದ ಬಹುಕಾಲ ದಂಡನು ಎದುರಿಸುತ II
ಎಲ್ಲ ಅಡತಡೆಗಳನ್ನು;ಒಂದು ರಮ್ಯ ಚೈತ್ರಮಾಸ ದಿನ ದಂಡನುI
ಭಾರ್ಗವ ಮುನಿ ಆಶ್ರಮಕ್ಕೆ ಹೋದನು; II
ಭಾರ್ಗಪುತ್ರಿ ಅದ್ವಿತೀಯ ಸುಂದರಿ ಅರಣ್ಯದಲಿI
ವಿಹರಿಸುವದನ್ನು ಕಂಡು ಬಿದ್ದ ಅವಳ ಮೋಹದಲಿ; II
ಮನ್ಮಥನ ಬಾಣದಿ ಗಾಯಗೊಂಡು ಹೋದ ಅವಳ ಬಳಿ, I
ನುಡಿದ ಅವಳಿಗೆ:ʻ ಓ ಬಳಕುವ ನಡದವಳೇ, II
ಏಲ್ಲಿಂದ ಬಂದಿರುವೆ? ನಿನ್ನ ತಂದೆ ಯಾರು?I
ನಿನ್ನ ವೈಯಾರಕ್ಕೆ ಮನಸೋತು ನಾ ಕೇಳುತಿರುವೆʼ.II
ದಂಡನ ಹಿಂಜರಿತದ ಮಾತುಗಳನ್ನು ಕೇಳಿ ಭಾರ್ಗವ ಪುತ್ರಿ I
ಸುಮಧುರ ಉತ್ತರಿಸಿದಳು ದ್ವನಿಯಲಿ: ʻಶಾಶ್ವತ ಕೃತ್ಯಗಳ II
ಶುಕ್ರಾಚಾರ್ಯರ ಹಿರಿಯ ಪುತ್ರಿ ನಾನು,ಎನ್ನ ಹೆಸರು ಅರುಜಾ, I
ನಾವು ಈ ಆಶ್ರಮವಾಸಿಗಳು, ಓ ರಾಜನೆ;II
ಓ ರಾಜನೆ, ನೋಡಬೇಡಾ ಅಷ್ಟೊಂದು ದಿಟ್ಟಿಸಿ ನನ್ನI
ಇನ್ನೂ ನಾನು ತಂದೆ ರಕ್ಷಣೆಯಲ್ಲಿ ಇದ್ದವಳು;II
ನನ್ನ ತಂದೆ ನಿನ್ನ ಗುರು, ನೀನು ಗುರುವಿನ ಶಿಷ್ಯ,I
ಗುರುವಿನ ಸಿಟ್ಟಿನ ಶಾಪಕ್ಕೆ ಬಲಿಯಾದಿ ನೀ, ಎಚ್ಚರ;II
ಓ ರಾಜನೆ, ಧರ್ಮ ಪ್ರಕಾರ ನಾನು ನಿನಗೆ ಪ್ರಮಾಣಿಕಳಾಗಿ ವರ್ತಿಸಬೇಕು,I
ಮೊದಲು ನೀ ಭೇಟಿಯಾಗೆನ್ನ ತಂದೆಗೆ, II
ನನ್ನ ತಂದೆಯಿಂದ ಬೇಡಿ ಪಡಿ ನನ್ನ,ಇಲ್ಲವೇ, ಬಲಿಯಾಗು ನೀ I
ಅವನ ಕೋಪಕ್ಕೆ; ಕೋಪದಿ ಎನ್ನ ತಂದೆ II
ಭಸ್ಮ ಮಾಡುವನು ಮೂರೂ ಲೋಕಗಳನು ನಿರ್ಪರಾಧಿಯಾಗಿ ನೀನು I
ಅವನಿಂದ ಕೇಳಿ ನನ್ನ ಪಡೆಯಬಹುದುʼ.II
ಕಾಮದಮಲಿನಲಿದ್ದ ದಂಡ ಕೈಮುಗಿದು ಅವಳಿಗೆ ನುಡಿದ:I
ʻನಿನ್ನ ಮೆಚ್ಚಿಗೆ ಕೊಡು, ಓ ಅಕರ್ಷಣೀಯ ಸುಂದರಿ, II
ತಡಮಾಡದೆ ನೀ ಎನ್ನಲ್ಲಿಯ ಕಾಮಾಗ್ನಿಯನು ನಂದಿಸು, I
ಓ ಸುಂದರಿ, ನನ್ನೊಂದಿಗೆ ಸಮಾಗಮ ನಡೆಸು,II
ಸಾವು ಬರಲಿ, ಏನೇ ಕೆಡಕು ಬಂದರೆ ನಾ ಎದಿರಿಸುವೆ,I
ಓ ಅಂಜುಬುರುಕಿ, ಎನ್ನ ಕರೆಗೆ ಸ್ಪಂದಿಸು, II
ಕಾಮ ಎನ್ನ ಆವರಿಸಿದೆʼ.ಹೀಗೆ ಅಬ್ಬರಿಸುತ ದಂಡ I
ಅರುಜಾಳನ್ನು ಬಾಹುಗಳಲ್ಲಿ ಬಂಧಿಸಿ ಬಲತ್ಕರಿಸಿದ, II
ಮರಳಿದ ಮಧುಮಂತ ನಗರಕ್ಕೆ; I
ಬಲತ್ಕರಿಸಿಕೊಂಡ ಅರುಜಾ ಅಳುತ್ತ ತಂದೆ ದಾರಿ ಕಾಯ್ದಳು ಆಶ್ರಮ ಬಳಿ”.II
ಉತ್ತರಕಾಂಡ

ರಾಜಾ ದಂಡನು ತನ್ನ ಗುರು ಪುತ್ರಿ ಅರುಜಾಳ ಸೌಂದರ್ಯ ನೋಡಿ ಕಾಮಮೋಹಿತನಾಗಿ ಅವಳ ಎಚ್ಚರಕೆಗೆ ಕಿವಿಗೊಡದೇ ಅವಳನ್ನು ಬಲತ್ಕರಿಸಿದ ಪ್ರಸಂಗವನ್ನು ವಿವರಿಸಿರುವರು, ಕವಿಯು ಇಲ್ಲಿ ಕೆಲವು ಪ್ರಮಖ ಅಂಶಗಳನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು; (1)ಹೆಣ್ಣಿನ ಸೌಂದರ್ಯ ಆಕರ್ಷಣೆ (2) ಕಾಮಾಗ್ನಿ ಅಂಧತೆ ಮತ್ತು (3) ಸ್ತ್ರೀಮೆಲೆ ದೌರ್ಜನ್ಯ.ಅಂಶಗಳನ್ನು ಹೀಗೆ ವಿವರಿಸಿರುವರು: ಕುಂಭಜ ಅಗಸ್ತ್ಯ ಮುನಿಯು ದಂಡನ ಕಥೆಯನ್ನು ಮುಂದುವರೆಸಿ ರಾಮನಿಗೆ ಹೇಳಿದನು “ ಓ ಕಕುತ್ಸ್ಥ, ರಾಜಾ ದಂಡನು ಎಲ್ಲ ಅಡತಡೆಗಳನ್ನು ಎದುರಿಸುತ ಬಹುಕಾಲ ಆಳಿದನು; ಒಂದು ರಮ್ಯ ಚೈತ್ರಮಾಸ ದಿನ ದಂಡನು ಭಾರ್ಗವ ಮುನಿ ಆಶ್ರಮಕ್ಕೆ ಹೋದನು; ಅಲ್ಲಿ ಅರಣ್ಯದಲಿ ಭಾರ್ಗಪುತ್ರಿ ಅದ್ವಿತೀಯ ಸುಂದರಿ ವಿಹರಿಸುವದನ್ನು ಕಂಡು ಅವಳ ಮೋಹದಲಿ ಬಿದ್ದನು; ಮನ್ಮಥನ ಬಾಣದಿಂದ ಗಾಯಗೊಂಡು ದಂಡನು ಅವಳ ಬಳಿ ಹೋಗಿ ತಡವರಿಸುತ ಅವಳಿಗೆ ಕೋರಿದನು ʻ ಓ ಬಳಕುವ ನಡದವಳೇ, ಏಲ್ಲಿಂದ ಬಂದಿರುವೆ? ನಿನ್ನ ತಂದೆ ಯಾರು? ನಿನ್ನ ವೈಯಾರಕ್ಕೆ ಮನಸೋತು ನಾನು ನಿನ್ನನ್ನು ಕೇಳುತಿರುವೆನುʼ. ದಂಡನ ಹಿಂಜರಿತದ ಮಾತುಗಳನ್ನು ಕೇಳಿದ ಭಾರ್ಗವ ಪುತ್ರಿ ಸುಮಧುರ ದ್ವನಿಯಲಿ ದಂಡನಿಗೆ ಉತ್ತರಿಸಿದಳು ʻ ಓ ರಾಜನೆ, ನಾನು ಶಾಶ್ವತ ಕೃತ್ಯಗಳ ಶುಕ್ರಾಚಾರ್ಯರ ಹಿರಿಯ ಪುತ್ರಿ, ನನ್ನ ಹೆಸರು ಅರುಜಾ, ನಾವು ಈ ಆಶ್ರಮವಾಸಿಗಳು; ಓ ರಾಜನೆ, ಅಷ್ಟೊಂದು ದಿಟ್ಟಿಸಿ ನನ್ನನ್ನು ನೋಡಬೇಡಾ, ಇನ್ನೂ ನಾನು ತಂದೆ ರಕ್ಷಣೆಯಲ್ಲಿ ಇದ್ದವಳು, ನನ್ನ ತಂದೆ ನಿನ್ನ ಗುರು, ನೀನು ಗುರುವಿನ ಶಿಷ್ಯ, ನೀನು ಗುರುವಿನ ಸಿಟ್ಟಿನ ಶಾಪಕ್ಕೆ ಬಲಿಯಾಗಬೇಡಾ, ಎಚ್ಚರವಿರಲಿ; ಓ ರಾಜನೆ, ಧರ್ಮ ಪ್ರಕಾರ ನಾನು ನಿನಗೆ ಪ್ರಮಾಣಿಕಳಾಗಿ ವರ್ತಿಸಬೇಕು, ಮೊದಲು ನೀನು ನನ್ನ ತಂದೆಯನು ಭೇಟಿಯಾಗು, ನೀನು ನನ್ನನ್ನು ನನ್ನ ತಂದೆಯಿಂದ ಬೇಡಿ ಪಡಿ, ಇಲ್ಲವೇ, ನೀನು ಅವನ ಕೋಪಕ್ಕೆ ಬಲಿಯಾಗು; ಕೋಪದಿಂದ ನನ್ನ ತಂದೆ ಮೂರೂ ಲೋಕಗಳನು ಭಸ್ಮ ಮಾಡುವ ಸಾಮರ್ಥ್ಯದವನು, ನೀನು ಯಾವುದೇ ಅಪರಾಧ ಮಾಡದೇ ಅವನಿಂದ ನನ್ನನ್ನು ಕೇಳಿ ನನ್ನ ಪಡೆಯಬಹುದುʼ. ಕಾಮದಮಲಿನಲಿದ್ದ ದಂಡ ಕೈಮುಗಿದು ಅವಳಿಗೆ ಕೋರಿದನು ʻ ಓ ಅಕರ್ಷಣೀಯ ಸುಂದರಿ, ನಿನ್ನ ಮೆಚ್ಚಿಗೆ ಕೊಡು, ನೀನು ತಡಮಾಡದೆ ನನ್ನಲ್ಲಿಯ ಕಾಮಾಗ್ನಿಯನು ನಂದಿಸು, ನನ್ನೊಂದಿಗೆ ಸಮಾಗಮ ನಡೆಸು; ಸಾವು ಬರಲಿ, ಏನೇ ಕೆಡಕುಗಳು ಬಂದರೆ ನಾನು ಎದಿರಿಸುವೆ; ಓ ಅಂಜುಬುರುಕಿ, ನನ್ನ ಕರೆಗೆ ಸ್ಪಂದಿಸು, ಕಾಮವು ನನ್ನನ್ನು ಆವರಿಸಿದೆʼ. ಹೀಗೆ ಅಬ್ಬರಿಸುತ ರಾಜಾ ದಂಡನು ಗುರುಪುತ್ರಿ ಅರುಜಾಳನ್ನು ತನ್ನ ಬಾಹುಗಳಲ್ಲಿ ಬಂಧಿಸಿ ಅವಳನ್ನು ಬಲತ್ಕರಿಸಿದನು ಹಾಗು ಅವನು ಮಧುಮಂತ ನಗರಕ್ಕೆ ಮರಳಿದನು; ಬಲತ್ಕರಿಸಿಕೊಂಡ ಅರುಜಾ ಬಿಕ್ಕಿ ಬಿಕ್ಕಿ ಅಳುತ್ತ ತಂದೆ ದಾರಿ ಕಾಯುತ ಆಶ್ರಮ ಬಳಿ ಕುಳಿತಳು”.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.