ಕೇಳಿ ಅಗಸ್ತ್ಯರಿಂದ ಆಕಾಶವಾಸಿ ಕಥೆ

By admin


ಕೇಳಿ ಅಗಸ್ತ್ಯರಿಂದ ಆಕಾಶವಾಸಿ ಕಥೆI
ರಾಮ ಕೇಳಿದ ಪ್ರಶ್ನೆಗಳನ್ನು ಅಗಸ್ತ್ಯರಿಗೆ: II
“ ಓ ಮುನಿ ಶ್ರೇಷ್ಠನೆ, ಈ ಪ್ರದೇಶದಲ್ಲಿI
ಹಕ್ಕಿಗಳು,ಪ್ರಾಣಿಗಳು, ವನ್ಯಜೀವಿಗಳೇಕೆ ಇಲ್ಲ? II
ವಿದರ್ಭರಾಜ ಶ್ವೇತನು ಈ ನಿರ್ಜೀವಿಗಳI
ಪ್ರದೇಶಕ್ಕೆ ತಪಸ್ಸು ಮಾಡಲೇಕೆ ಬಂದ? II
ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸು,I
ಎಲ್ಲವನ್ನು ಸವಿಸ್ತಾರವಾಗಿ ಎನಗೆ ತಿಳಿಸು”.II
ಕೇಳಿ ರಾಮನ ಪ್ರಶ್ನೆಗಳನು ಅಗಸ್ತ್ಯರು ಉತ್ತರಿಸಿದರು:I
“ ಪ್ರಾಚೀನ ಕಾಲದ ಸ್ವರ್ಣಯುಗದಲ್ಲಿ, ಓ ರಾಮಾ, II
ಅಧಿಪತಿ ಮನು ಆಳುತಿದ್ದ ಈ ಭೂಮಂಡಳI
ಅವನ ಮಗನೇ ಇಕ್ಷ್ವಾಕು,ತನ್ನ ಕುಲೋಧಾರಕ;II
ಹಿರಿಮಗ ಇಕ್ಷ್ವಾಕುವನ್ನು ಪಟ್ಟಗಟ್ಟಿ ಮನುI
ನುಡಿದ:ʻ ಜಗತ್ತಿನ ಘನ ರಾಜವಂಶದ ಸಂಸ್ಥಾಪಕನಾಗುʼ. II
ಓ ರಾಮಾ ತಂದೆ ಮನುಗೆ ವಚನಕೊಟ್ಟI
ಇಕ್ಷ್ವಾಕು ತನ್ನ ರಾಜವಂಶ ಬೆಳೆಸುವಂತೆ, ನುಡಿದ;II
ʻಓ ಸರ್ವೋತ್ತಮನೆ, ಮೆಚ್ಚಿದೆ ನಿನ್ನ, ನಿಸ್ಸಂದೇಹI
ಬೆಳೆಸುವೆ ನಮ್ಮ ರಾಜವಂಶ ಭೂಮಂಡಲ ಆಳಲು; II
ಧರ್ಮ ತಳಹದಿ ಮೇಲೆ ರಾಜ್ಯವಾಳುವೆ,I
ಶಿಕ್ಷಿಸುವೆ ಅಧರ್ಮಿ, ಪಾಪಿಗಳನ್ನು ನ್ಯಾಯದಂತೆʼ.II
ಕೇಳಿ ಪುತ್ರನಿಂದ ವಚನ ಮನು ನುಡಿದ:I
ʻಓ ಪ್ರೀಯ ಪುತ್ರನೇ, ಧರ್ಮನಿಷ್ಠೆದಿ ಆಳು ಭೂಮಂಡಳʼ. II
ಹೀಗೆ ಆಶಿರ್ವದಿಸುತ ಪುತ್ರ ಇಕ್ಷ್ವಾಕುವಿಗೆ I
ಅಧಿಪತಿ ಮನು ಬ್ರಹ್ಮಲೋಕ ಸೇರಿದ ಆನಂದದಲಿ;II
ಅಗಣಿತ ವೈಭವದೊಂದಿಗೆ ಇಕ್ಷ್ವಾಕು ತನ್ನI
ಸಾಮ್ರಾಜ್ಯ ವಿಸ್ತರಣೆ ವ ಸಮೃದ್ಧಿಯಲಿ ಮಗ್ನನಾದ;II
ದತ್ತಿ ಧರ್ಮ ದಾನ ಕಾರ್ಯಗಳಲ್ಲಿ,I
ಯಜ್ಞಗಳ ಆಚರಣೆಯಲಿ ತೊಡಗಿದ ಇಕ್ಷ್ವಾಕು;.II
ಇಕ್ಷ್ವಾಕುವಿಗೆ ದೇವತೆಗಳ ವರಗಳಿಂದI
ಶತ ಪುತ್ರರು ಜನಿಸಿದರು, ಓ ರಾಮಾ;II
ತೊಂಬತ್ತೊಂಬತ್ತು ಪುತ್ರರು ವಿಧೇಯಕ ಧರ್ಮನಿಷ್ಠೆಯುಳ್ಳವರು,I
ಆದರೆ ಕೊನೆ ಪುತ್ರ ಮಾತ್ರ ತದ್ವಿರುದ್ಧವಾಗಿದ್ದII
ಕೊನೆಯಪುತ್ರ ದುರ್ಗುಣಿಯಾಗಿದ್ದರಿಂದ ಅವನಿಗೆ I
ತಂದೆ ʼದಂಡʼ ನೆಂದು ಹೆಸರು ಇಟ್ಟಿದ್ದ, ಶಿಕ್ಷೆಗೆ ಅರ್ಹನು ಹೆಸರನಂತೆ;II
ಓ ರಾಘವಾ, ಕೊನೆ ಪುತ್ರನಿಗೆ ಅವನ ಯೋಗ್ಯ ಪ್ರದೇಶವಿಲ್ಲದಕಾರಣI
ರಾಜಾ ಹುಡುಕಿದ ವಿಂದ್ಯ ವ ಶೈವಲ ಪರ್ವತಗಳ ಮಧ್ಯೆ ತಾಣ;II
ನಿರ್ಮಿಸಿದ ಸುಂದರ ನಗರವನು ಇಕ್ಷ್ವಾಕುI
ಪುತ್ರ ದಂಡನಿಗಾಗಿ ವಿಂದ್ಯ ಶೈವಲ ಪರ್ವತಗಳ ಮಧ್ಯೆ;II
ಹೆಸರಿಟ್ಟನು ಆ ನಗರಕ್ಕೆ ಮಧುಮಂತನಗರವೆಂದು,I
ಪರ್ವತಗಳ ಶ್ರೇಣಿಗಳಿಂದ ಸುತ್ತುವರೆದ ಪ್ರಸ್ಥಭೂಮಿನಗರ;II
ದಂಡ ಮಧುಮಂತನಗರದ ರಾಜನಾದ,I
ಶುಕ್ರದೇವ ಆಧ್ಯಾತ್ಮ ಗುರುವಾದರು ದಂಡನಿಗೆ; ಶುಕ್ರದೇವನ ವ ದಂಡ II
ಆಳಿದರು ಮಧುನಗರ ಬಹಳ ಕಾಲದವರೆಗೆ, I
ಬೃಹಸ್ಪತಿ ಮಾರ್ಗದರ್ಶನದಲಿ ಇಂದ್ರ ದೇವಲೋಕ ಆಳಿದಂತೆ”.II
ಉತ್ತರಕಾಂಡ

ರಾಮನು ಅಗಸ್ತ್ಯರನ್ನು ಆ ನಿರ್ಜನ ಪ್ರದೇಶಕ್ಕೆ ರಾಜಾ ಶ್ವೇತನು ತಪಸ್ಸಿಗೆ ಬಂದ ಕಾರಣ ಕೇಳಲು ಅಗಸ್ತ್ಯರು ರಾಮನಿಗೆ ಸತ್-ಯುಗದ ಅಧಿಪತಿ ಮನುವಿನ ಪುತ್ರ ಇಕ್ಷ್ವಾಕುವಿನ ಕಥೆಯನ್ನು ಹೇಳಲು ಪ್ರಾರಂಭಿಸಿ ಅವನ ನೂರು ಪುತ್ರರಲ್ಲಿ ಕೊನೆಯ ಪುತ್ರ ದಂಡನನ್ನು ಮಧುವಂತನಗರದ ರಾಜನಾಗಿ ಮಾಡಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ಅಗಸ್ತ್ಯರಿಂದ ಆಕಾಶವಾಸಿ ಕಥೆಯನ್ನು ಕೇಳಿದ ರಾಮನು ಅಗಸ್ತ್ಯರಿಗೆ ಪುನಃ ಪ್ರಶ್ನೆಗಳನ್ನು ಕೇಳಿದನು “ಓ ಮುನಿ ಶ್ರೇಷ್ಠನೆ, ಈ ಪ್ರದೇಶದಲ್ಲಿ ಹಕ್ಕಿಗಳು,ಪ್ರಾಣಿಗಳು, ವನ್ಯಜೀವಿಗಳೇಕೆ ಇಲ್ಲ? ವಿದರ್ಭರಾಜ ಶ್ವೇತನು ಈ ನಿರ್ಜೀವ ಪ್ರದೇಶಕ್ಕೆ ತಪಸ್ಸು ಮಾಡಲು ಏಕೆ ಬಂದ? ಈ ಎಲ್ಲ ನನ್ನ ಪ್ರಶ್ನೆಗಳಿಗೆ ಉತ್ತರಿಸು, ಎಲ್ಲವನ್ನು ಸವಿಸ್ತಾರವಾಗಿ ನನಗೆ ತಿಳಿಸು.” ರಾಮನ ಪ್ರಶ್ನೆಗಳನು ಕೇಳಿದ ಅಗಸ್ತ್ಯರು ಅವನಿಗೆ ಉತ್ತರಿಸಿದರು “ಓ ರಾಮಾ ಪ್ರಾಚೀನ ಕಾಲದ ಸ್ವರ್ಣಯುಗದಲ್ಲಿ (ಕೃತಯುಗದಲ್ಲಿ) ಈ ಭೂಮಂಡಳವನ್ನು ಅಧಿಪತಿ ಮನು ಆಳುತಿದ್ದನು, ಅವನ ಮಗನೇ ಇಕ್ಷ್ವಾಕು,ತನ್ನ ಕುಲೋಧಾರಕ ಹಿರಿಮಗ ಇಕ್ಷ್ವಾಕುವನ್ನು ಮನು ಪಟ್ಟಗಟ್ಟಿ ʻಜಗತ್ತಿನ ಘನ ರಾಜವಂಶದ ಸಂಸ್ಥಾಪಕನಾಗುʼ ಎಂದು ಹಾರೈಸಿದನು. ಓ ರಾಮಾ, ಇಕ್ಷ್ವಾಕು ತನ್ನ ರಾಜವಂಶ ಬೆಳೆಸುವಂತೆ ತನ್ನ ತಂದೆ ಮನುಗೆ ವಚನಕೊಟ್ಟು ನುಡಿದನು ʻಓ ಸರ್ವೋತ್ತಮನೆ, ಮೆಚ್ಚಿದೆ ನಿನ್ನ, ನಿಸ್ಸಂದೇಹ, ಭೂಮಂಡಲ ಆಳಲು ನಮ್ಮ ರಾಜವಂಶವನ್ನು ಬೆಳೆಸುವೆನು; ನಾನು ಧರ್ಮ ತಳಹದಿಯ ಮೇಲೆ ರಾಜ್ಯವಾಳುವೆ, ಅಧರ್ಮಿಯರನ್ನು ಪಾಪಿಗಳನ್ನು ನ್ಯಾಯದಂತೆ ಶಿಕ್ಷಿಸುವೆʼ. ಪುತ್ರನಿಂದ ವಚನ ಕೇಳಿ ಮನು ಅವನಿಗೆ ನುಡಿದನು ʻ ಓ ಪ್ರೀಯ ಪುತ್ರನೇ, ಧರ್ಮನಿಷ್ಠೆಯಿಂದ ಭೂಮಂಡಳ ಆಳು ʼ. ಹೀಗೆ ಆಶಿರ್ವದಿಸುತ ಪುತ್ರ ಇಕ್ಷ್ವಾಕುವನ್ನು ಅಧಿಪತಿ ಮನು ಆನಂದದಲಿ ಬ್ರಹ್ಮಲೋಕವನ್ನು ಸೇರಿದನು;ಅಗಣಿತ ವೈಭವದೊಂದಿಗೆ ಇಕ್ಷ್ವಾಕು ತನ್ನ ಸಾಮ್ರಾಜ್ಯ ವಿಸ್ತರಣೆ ಮತ್ತು ಸಮೃದ್ಧಿಯಲಿ ಮಗ್ನನಾದನು; ಇಕ್ಷ್ವಾಕು ದತ್ತಿ ಧರ್ಮ ದಾನ ಕಾರ್ಯಗಳಲ್ಲಿ ಮತ್ತು ಯಜ್ಞಗಳ ಆಚರಣೆಯಲಿ ತೊಡಗಿದನು; ದೇವತೆಗಳ ವರಗಳಿಂದ ಇಕ್ಷ್ವಾಕುವಿಗೆ ಶತ ಪುತ್ರರು ಜನಿಸಿದರು, ಅವರಲ್ಲಿ ತೊಂಬತ್ತೊಂಬತ್ತು ಪುತ್ರರು ವಿಧೇಯಕ ಧರ್ಮನಿಷ್ಠೆಯುಳ್ಳವರು, ಆದರೆ ಕೊನೆ ಪುತ್ರ ಮಾತ್ರ ಅವುಗಳಿಗೆ ತದ್ವಿರುದ್ಧವಾಗಿದ್ದನು; ಇಕ್ಷ್ವಾಕು ತನ್ನ ಕೊನೆಯಪುತ್ರನು ದುರ್ಗುಣಿಯಾಗಿದ್ದರಿಂದ ಅವನಿಗೆ ʼದಂಡʼ ನೆಂದು ಹೆಸರು ಇಟ್ಟಿದ್ದನು, ಅವನು ಹೆಸರನಂತೆ ಶಿಕ್ಷೆಗೆ ಅರ್ಹನು;, ಕೊನೆ ಪುತ್ರನಿಗೆ ಅವನ ಯೋಗ್ಯ ಪ್ರದೇಶವಿಲ್ಲದ ಕಾರಣ ರಾಜಾ ಅವನಿಗಾಗಿ ವಿಂದ್ಯ ಮತ್ತು ಶೈವಲ ಪರ್ವತಗಳ ಮಧ್ಯೆ ತಾಣವನ್ನು ಹುಡುಕಿದನು ಹಾಗು ಇಕ್ಷ್ವಾಕು ತನ್ನ ಪುತ್ರ ದಂಡನಿಗಾಗಿ ವಿಂದ್ಯ, ಶೈವಲ ಪರ್ವತಗಳ ಮಧ್ಯೆ ಸುಂದರ ನಗರವನು ನಿರ್ಮಿಸಿದನು ಮತ್ತು ಆ ನಗರಕ್ಕೆ ಮಧುಮಂತನಗರವೆಂದು ಹೆಸರಿಟ್ಟನು; ಪರ್ವತಗಳ ಶ್ರೇಣಿಗಳಿಂದ ಸುತ್ತುವರೆದ ಪ್ರಸ್ಥಭೂಮಿಯ ಮಧುಮಂತನಗರದ ರಾಜನಾಗಿ ದಂಡ ಆಳಿದನು, ರಾಜಾ ದಂಡನಿಗೆ ಶುಕ್ರದೇವನು(ಶುಕ್ರಾಚಾರ್ಯ) ಆಧ್ಯಾತ್ಮ ಗುರುವಾದನು; ಬೃಹಸ್ಪತಿ ಮಾರ್ಗದರ್ಶನದಲಿ ಇಂದ್ರ ದೇವಲೋಕ ಆಳಿದಂತೆ ಶುಕ್ರದೇವನ ಮಾರ್ಗದರ್ಶನದಲ್ಲಿ ರಾಜಾ ದಂಡನು ಮಧುಮಂತನಗರವನ್ನು ಬಹಳ ಕಾಲದವರೆಗೆ ಆಳಿದನು.”
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.