
ಕೇಳಿ ಅಗಸ್ತ್ಯರ ಕೋರಿಕೆ ಕೈ ಮುಗಿದು ಆಕಾಶವಾಸಿ ನುಡಿದ:I
“ ಓ ಬ್ರಾಹ್ಮಣನೆ, ಕೇಳು ನನ್ನ ಪೂರ್ವ ಜನ್ಮದ ವ್ಯಥೆ ಕಥೆ,II
ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರಿಸುವದು ಎನ್ನ ದುರ್ದೈವ ಕಥೆ:I
ಗತಕಾಲ ದಲಿ ಎನ್ನ ತಂದೆ ಸುದೆವ ಆಳುತಿದ್ದ ವಿದರ್ಭಪ್ರದೇಶ,II
ಅವನಿಗೆ ಇರ್ವರು ರಾಣಿಯರು,ಇರ್ವರು ಪುತ್ರರು,I
ನನ್ನ ಹೆಸರು ಶ್ವೇತ, ನನ್ನ ತಮ್ಮನ ಹೆಸರು ಸುರಥ; II
ತಂದೆ ಮರಣದ ನಂತರ ಪ್ರಜೆಗಳು ಪಟ್ಟಗಟ್ಟಿದರು ನನ್ನನ್ನು I
ವಿದರ್ಭರಾಜ್ಯಕ್ಕೆ; ಸಮಾನತೆ ತತ್ವದಡಿ ಮಾಡಿದೆ II
ರಾಜ್ಯಭಾರ ಧರ್ಮನಿಷ್ಠೆದಿ ಬಹಳಕಾಲ I
ರಾಜ್ಯವಾಳಿ ಮುಪ್ಪಾದೆ ನಾನು; ತಮ್ಮ ಸುರಥನ ಪಟ್ಟಗಟ್ಟಿ II
ನಾನು ರಾಜ್ಯ ತೊರೆದು ವನದಲಿ ವಾಸಿಲು ಬಂದೆ, I
ದಟ್ಟರಣ್ಯ ಹೊಕ್ಕು ಸುತ್ತಿದೆ ದಾರಿ ತೋಚದೆ; II
ಪಕ್ಷಿ ಪ್ರಾಣಿಗಳು ಕಾಣದ ಈ ಪ್ರದೇಶದಲಿ,I
ವಾಸವಾದೆ ಈ ಸುಂದರ ಸರೋವರ ದಡದಲಿII
ಈ ಮಹಾ ಅರಣ್ಯದಲಿ, ಸರೋವರ ದಡದಲಿI
ಬಹುಕಾಲ ಆಚರಿಸಿದೆ ಧರ್ಮಕಾರ್ಯ, ತಪಸ್ಸು;II
ನನ್ನ ಕಠೋರ ತಪಸ್ಸು ಒಯ್ಯಿತು ನನ್ನನು ಬ್ರಹ್ಮಲೋಕಕ್ಕೆ, I
ಆದರೆ ನನ್ನಲಿ ಹಸಿವು, ನೀರಡಿಕೆಗಳಿದ್ದವು;II
ಬ್ರಹ್ಮಲೋಕದಲಿ ಹಸಿವು ನೀರಡಿಕೆಯಿಂದI
ಇರಬಾರದೆಂದು ಹೋದೆ ಬ್ರಹ್ಮನ ಬಳಿ;II
ಬ್ರಹ್ಮನನ್ನು ಲಾಲಿಸಿದೆ:ʻ ಓ ದೇವಾದಿ ದೇವಾ,I
ಹಸಿವು ನೀರಡಿಕೆಗಳಿಂದ ಯಾರು ಇರಬಾರದು ಇಲ್ಲಿ, II
ಆದರೆ ನನ್ನಲಿ ಹಸಿವು ನೀರಡಿಕೆಗಳಿವೆ,I
ಓ ದೇವಾ, ಏನು ಮಾಡಲಿ? ಹೇಗೆ ಇಂಗಿಸಿಕೊಳ್ಳಲಿ?ʼ II
ಕೇಳಿ ನನ್ನ ಅಳಲು ಬ್ರಹ್ಮದೇವ ನುಡಿದ: ʻಓ ಸುದೆವಪುತ್ರನೆ,I
ನಿನ್ನ ಶರೀರವೇ ನಿನಗೆ ನಿತ್ಯ ಆಹಾರ,II
ನಿನ್ನದೇ ದೇಹದ ಮಾಂಸವನ್ನು ನಿತ್ಯ ತಿನ್ನುI
ಸರೋವರದ ನೀರು ಕುಡಿ, ತೀರಿಸುಕೋ ತೃಷೆಗಳನ್ನು;II
ನೀನು ದಾನ ಮಾಡದೇ ಸ್ವರ್ಗ ಸೇರಿರುವಿ I
ಕಾರಣ ನೀ ಸ್ವರ್ಗದಲ್ಲೂ ಹಸಿವು ನೀರಡಿಕೆ ಹೊಂದಿರುವಿ;II
ಅಗಸ್ತ್ಯ ಮುನಿ ಬಂದು ಈ ಅರಣ್ಯ ಪ್ರದೇಶಕ್ಕೆI
ನಿನ್ನನ್ನು ಹಸಿವು ನೀರಡಿಕೆಗಳಿಂದ ಮುಕ್ತಗೊಳಿಸುವನು. II
ಓ ಅಗಸ್ತ್ಯ ಮುನಿಗಳೆ, ಈ ಶವ ತಿಂದು ನಿತ್ಯ ನನ್ನI
ಹಸಿವು ಹೆಚ್ಚುತಿದೆ, ಮುಕ್ತಿಕೊಡು ಇದರಿಂದ ಎನಗೆ;II
ಓ ಮುನಿಶ್ರೇಷ್ಠರೆ, ಈ ಆಭರಣಗಳನ್ನು ಸ್ವೀಕರಿಸಿ ನನ್ನಿಂದI
ದಾನವಾಗಿ, ಮುಕ್ತಗೊಳಿಸು ಈ ಬಳಲಿಕೆಯಿಂದ ನನ್ನ”.II
ಕೇಳಿ ಆ ಆಕಾಶವಾಸಿಯ ಕೋರಿಕೆ ನಾನುI
ಸ್ವೀಕರಿಸಿದೆ ಈ ಆಭರಣಗಳನ್ನು ಅವನಿಂದ;II
ಪಡೆಯುತ್ತಲೇ ಅವನಿಂದ ಆಭರಣಗಳನ್ನು ನಾನುI
ಅವನ ನಶ್ವರ ದೇಹ ಕರಗಿ ಹೋಯಿತು; II
ಆಕಾಶವಾಸಿ ನಿತ್ಯ ಭವಣೆಯಿಂದ ಮುಕ್ತನಾದ, I
ಹೀಗೆ ಈ ಅದ್ಭುತ ಆಭರಣ ಎನಗೆ ದೊರಕಿತು, ಓ ರಾಮಾ.II
ಉತ್ತರಕಾಂಡ
ಅಗಸ್ತ್ಯ ಮುನಿಗಳು ರಾಮನಿಗೆ ನೀಡಿದ ಆಭರಣಗಳು ತನ್ನ ಬಳಿ ಬಂದ ಕಥೆ ಹೇಳುತ ಶ್ವೇತನು ತಪಸ್ಸಿನ ಬಲದಿಂದ ಬ್ರಹ್ಮಲೋಕ ಸೇರಿದ ಆದರೆ ಅವನು ದಾನ ಮಾಡದೇ ಇದ್ದದರಿಂದ ಬ್ರಹ್ಮಲೋಕದಲ್ಲೂ ಶ್ವೇತನು ನಶ್ವರ ಶರೀರ ಹೊಂದಿದ ಮತ್ತು ಆಹಾರ, ನೀರಡಿಕೆ ತೃಷೆಗಳಿಂದ ಬಳಲುತಿದ್ದ, ಬ್ರಹ್ಮ ಹೇಳಿದಂತೆ ಅಗಸ್ತ್ಯರು ಆ ಸರೋವರ ಬಳಿ ಬಂದಾಗ ಶ್ವೇತನು ತನ್ನ ಆಭರಣಗಳನ್ನು ಅಗಸ್ತ್ಯರಿಗೆ ದಾನ ನೀಡಿ ನಶ್ವರ ಶರೀರದಿಂದ ಮತ್ತು ತೃಷೆಗಳಿಂದ ಮುಕ್ತಿ ಪಡೆದ ಕಥೆ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸರುವರು, ಇಲ್ಲಿ ದಾನದ ಬಲವಿಲ್ಲದೆ ಸ್ವಗಕ್ಕೆ ಹೋದರು ವ್ಯರ್ಥವೆಂಬ ಸಂದೇಶ ಕತೆಯನ್ನು ಕವಿಯು ಹೀಗೆ ನೀಡಿರುವರು: ಅಗಸ್ಯರ ಕೋರಿಕೆ ಕೇಳಿದ ಆ ಆಕಾಶವಾಸಿ ಕೈ ಮುಗಿದು ಅಗಸ್ತ್ಯರಿಗೆ ನುಡಿದನು “ ಓ ಬ್ರಾಹ್ಮಣನೆ, ನನ್ನ ಪೂರ್ವ ಜನ್ಮದ ವ್ಯಥೆ ಕಥೆ ಕೇಳು, ನೀನು ಕೇಳಿದ ಎಲ್ಲ ಪ್ರಶ್ನೆಗಳಿಗೆ ನನ್ನ ದುರ್ದೈವ ಕಥೆಯು ಉತ್ತರಿಸುವದು: ಗತಕಾಲದಲಿ ನನ್ನ ತಂದೆ ಸುದೆವ ವಿದರ್ಭಪ್ರದೇಶವನ್ನು ಆಳುತಿದ್ದನು, ಅವನಿಗೆ ಇಬ್ಬರು ರಾಣಿಯರು,ಇಬ್ಬರು ಪುತ್ರರು,ಅವರಲ್ಲಿ ನನ್ನ ಹೆಸರು ಶ್ವೇತ ಮತ್ತು ನನ್ನ ತಮ್ಮನ ಹೆಸರು ಸುರಥ; ನನ್ನ ತಂದೆಯ ಮರಣದ ನಂತರ ಪ್ರಜೆಗಳು ನನ್ನನ್ನು ವಿದರ್ಭರಾಜ್ಯಕ್ಕೆ ಪಟ್ಟಗಟ್ಟಿದರು; ನಾನು ಸಮಾನತೆ ತತ್ವದಡಿ ಧರ್ಮನಿಷ್ಠೆಯಿಂದ ಬಹಳಕಾಲ ರಾಜ್ಯವಾಳಿ ಮುಪ್ಪಾದೆನು; ನನ್ನ ತಮ್ಮ ಸುರಥನ ಪಟ್ಟಗಟ್ಟಿ ನಾನು ರಾಜ್ಯ ತೊರೆದು ವನದಲಿ ವಾಸಿಲು ಬಂದೆನು, ದಾರಿ ತೋಚದೆ ದಟ್ಟರಣ್ಯ ಹೊಕ್ಕು ಸುತ್ತಿದೆನು; ಪಕ್ಷಿ ಪ್ರಾಣಿಗಳು ಕಾಣದ ಈ ಪ್ರದೇಶದ ಈ ಸುಂದರ ಸರೋವರ ದಡದಲಿ ವಾಸವಾದೆನು; ನಾನು ಈ ಮಹಾ ಅರಣ್ಯದ ಸರೋವರ ದಡದಲಿ ಬಹುಕಾಲ ಧರ್ಮಕಾರ್ಯ, ತಪಸ್ಸು ಆಚರಿಸಿದೆನು; ನನ್ನ ಕಠೋರ ತಪಸ್ಸು ನನ್ನನು ಬ್ರಹ್ಮಲೋಕಕ್ಕೆ ಒಯ್ಯಿತು, ಆದರೆ ನನ್ನಲಿ ಹಸಿವು, ನೀರಡಿಕೆಗಳಿದ್ದವು; ಬ್ರಹ್ಮಲೋಕದಲಿ ಹಸಿವು ನೀರಡಿಕೆಯಿಂದ ಇರಬಾರದೆಂದು ಬ್ರಹ್ಮನ ಬಳಿ ಹೋದೆನು ಹಾಗು ಬ್ರಹ್ಮನನ್ನು ಲಾಲಿಸಿದೆನುʻ ಓ ದೇವಾದಿ ದೇವಾ, ಇಲ್ಲಿ ಹಸಿವು ನೀರಡಿಕೆಗಳಿಂದ ಯಾರು ಇರಬಾರದು, ಆದರೆ ನನ್ನಲಿ ಹಸಿವು ನೀರಡಿಕೆಗಳಿವೆ; ಓ ದೇವಾ, ನಾನು ಏನು ಮಾಡಲಿ? ಹಸಿವು ನೀರಡಿಕೆಗಳನ್ನು ಹೇಗೆ ಇಂಗಿಸಿಕೊಳ್ಳಲಿ?ʼ ನನ್ನ ಅಳಲು ತಿಳಿದು ಬ್ರಹ್ಮದೇವನು ಉತ್ತರಿಸಿದನು ʻಓ ಸುದೆವಪುತ್ರನೆ, ನಿನ್ನ ಶರೀರವೇ ನಿನಗೆ ನಿತ್ಯ ಆಹಾರ, ನೀನು ನಿನ್ನದೇ ದೇಹದ ಮಾಂಸವನ್ನು ನಿತ್ಯ ತಿನ್ನು, ಆ ಸರೋವರದ ನೀರು ಕುಡಿ, ತೀರಿಸುಕೋ ನಿನ್ನ ತೃಷೆಗಳನ್ನು; ನೀನು ದಾನ ಮಾಡದೇ ಸ್ವರ್ಗ ಸೇರಿರುವಿ, ಕಾರಣ ನೀನು ಸ್ವರ್ಗದಲ್ಲೂ ಹಸಿವು ನೀರಡಿಕೆ ಹೊಂದಿರುವಿ, ಅಗಸ್ತ್ಯ ಮುನಿಗಳು ಈ ಅರಣ್ಯ ಪ್ರದೇಶಕ್ಕೆ ಬಂದು ನಿನ್ನನ್ನು ಹಸಿವು ನೀರಡಿಕೆಗಳಿಂದ ಮುಕ್ತಗೊಳಿಸುವನುʼ. ಒಂದು ದಿನ ಅಗಸ್ತ್ಯ ಮುನಿಗಳು ಇಲ್ಲಿ ಬಂದದನ್ನು ಕಂಡು ನಾನು ಅವರಲ್ಲಿ ಕೋರಿದೆ ʻಓ ಅಗಸ್ತ್ಯ ಮುನಿಗಳೆ, ನಾನು ಈ ಶವ ತಿಂದರೂ ನಿತ್ಯ ನನ್ನ ಹಸಿವು ಹೆಚ್ಚುತಿದೆ, ಇದರಿಂದ ನನಗೆ ಮುಕ್ತಿಕೊಡು, ನನ್ನಿಂದ ದಾನವಾಗಿ ಈ ಆಭರಣಗಳನ್ನು ಸ್ವೀಕರಿಸಿ, ಈ ಬಳಲಿಕೆಯಿಂದ ನನ್ನನ್ನು ಮುಕ್ತಗೊಳಿಸು”.ಹೀಗೆ ಶ್ವೇತನ ಕಥೆ ಹೇಳುತ ಅಗಸ್ತ್ಯರು ರಾಮನಿಗೆ” ಓ ರಾಮಾ, ನಾನು ಆ ಆಕಾಶವಾಸಿಯ ಕೋರಿಕೆ ಕೇಳಿ ಅವನಿಂದ ಈ ಆಭರಣಗಳನ್ನು ಸ್ವೀಕರಿಸಿದೆನು, ನಾನು ಅವನಿಂದ ಆಭರಣಗಳನ್ನು ಪಡೆಯುತ್ತಲೇ ಅವನ ನಶ್ವರ ದೇಹ ಕರಗಿ ಹೋಯಿತು; ಆ ಆಕಾಶವಾಸಿ ತನ್ನ ನಿತ್ಯ ಭವಣೆಯಿಂದ ಮುಕ್ತನಾದನು, ಹೀಗೆ ನನಗೆ ಈ ಅದ್ಭುತ ಆಭರಣ ದೊರಕಿತು.”
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
