
ರಾಮ ಬ್ರಾಹ್ಮಣ ಮುನಿಗಳೊಂದಿಗೆ ಭೇಟಿಯಾದ ಕುಂಭಜ ಅಗಸ್ತ್ಯರನು,I
ಸ್ವಾಗತಿಸಿದರು ಎಲ್ಲರನ್ನೂ ಅಗಸ್ತ್ಯರು: II
“ಎಲ್ಲರಿಗೂ ಸ್ವಾಗತಾ, ನಿನ್ನ ಸೌಭಾಗ್ಯ I
ಕರೆದು ತಂದಿದೆ ಎನ್ನ ಬಳಿ, ಓ ರಾಮಾ; II
ಶಂಭುಕನ ಉದ್ಧರಸಿ, ಬ್ರಾಹ್ಮಣ ಬಾಲಕ ಜೀವಂತವಾಗಲುI
ಉಪಕರಿಸಿದ ನೀನು ಕೊಡುಗೆಗೆ ಅರ್ಹನು; II
ವಿಶ್ವಕರ್ಮ ತಯ್ಯಾರಿಸಿದೀ ದೈವೀ ಆಭರಣ ಕೊಡುಗೆ ಸ್ವೀಕರಿಸು, I
ಇಂದು ತಂಗಿ ಎನ್ನ ಬಳಿ ನಾಳೆ ಅಯೋಧ್ಯೆಗೆ ಮರಳು. II
ಈ ದೈವೀ ಆಭರಣವನು ನಾನು ಪಡೆದI
ಕಥೆ ಹೇಳುವೆ ಕೇಳು:ʻ ಓ ರಾಮಾ, II
ಹಿಂದೆ ತ್ರೇತಾಯುಗದಲ್ಲಿ ನಾಲ್ಕ ಶತ ಯೋಜನೆI
ನಿರ್ಜೀವ ಪ್ರದೇಶದಲ್ಲಿ ಮಾಡುತಿದ್ದೆ ಕಠಿಣ ತಪಸ್ಸು; II
ಆದರೆ ಅದು ಗೆಡ್ಡೆ, ಹಣ್ಣು ಹಂಪಲ ಗಿಡಗಳಿಂದI
ತುಂಬಿ ಸುಂದರ ಆಕರ್ಷಣೀಯ ಪ್ರದೇಶವಾಗಿತ್ತು; II
ಆ ಪ್ರದೇಶದ ಮಧ್ಯದಲಿ ನಾಲ್ಕ ಯೋಜನೆI
ವಿಸ್ತಾರದ ಚಕ್ರವಾಕ, ಹಕ್ಕಿಗಳ ಸುಂದರ ಸರೋವರವಿತ್ತು; II
ಚಕ್ರವಾಕ ಹಕ್ಕಿಗಳೇ ಅದರ ಆಭರಣಗಳಾಗಿದ್ದವುI
ತುಂಬಿತ್ತು ಸರೋವರದಲಿ ಶಾಂತ ಆಳವಾದ ಸಿಹಿ ನೀರು; II
ಆ ಸರೋವರ ಬಳಿ ಪ್ರಾಚೀನ ಆಶ್ರಮವಿತ್ತು ಅದರಲ್ಲಿ I
ಮನುಷ್ಯನಾಗಲಿ, ಪ್ರಾಣಿಗಳಾಗಲಿವಾಸವಿದ್ದಿದಿಲ್ಲ; II
ಒಂದು ಮುಂಜಾವಿನಲಿ ಎದ್ದು ನಾನು ಹೋದೆI
ಆ ಸರೋವರದತ್ತ, ಆದರೆ ಅದರಲ್ಲಿ ಕಂಡೆ ಶವ; II
ವೈಭವದಿ ಶವ ಹೊಳೆಯುತ್ತಿತ್ತು ಸರೋವರದಲಿI
ಒಂದು ಕ್ಷಣ ಆ ದೃಶ್ಯ ಹುಟ್ಟಿಸಿತು ಎನ್ನಲಿ ಮಜುಗರ; II
ಓ ರಾಘವಾ, ಸರೋವರ ದಡದಲ್ಲಿ ನಿಂತುI
ನನ್ನಲಿ ಯೋಚಿಸಿದೆ: ʻಇದೇನು?ʼ; II
ಕಂಡೆ ಮರುಕ್ಷಣದಲಿ ಸ್ವರ್ಗೀಯ ರಥ, ಓ ರಾಮಾ,I
ರಥದಲಿ ಬಂದ ಅದ್ಭುತ ವ್ಯಕ್ತಿ ಸಹಸ್ರ ಸಹಸ್ರಅಪ್ಸರೆಯರೊಂದಿಗೆ; II
ಆಭರಣ ಶೃಂಗಾರಿತ ಅಪ್ಸರೆಯರಲ್ಲಿ ನುಡಿಸುತಿದ್ದರುI
ಕೆಲವರು ಮೃದಂಗ, ವೀಣೆ, ಪನವಸ ವಾದ್ಯಗಳನ್ನು, II
ಇನ್ನು ಕೆಲವರು ನೃತ್ಯ ಮಾಡುತಿದ್ದರು,I
ಮತ್ತು ಕೆಲವರು ಚಾಮರ ಬೀಸುತಿದ್ದರು ಆ ಯುವ ವ್ಯಕ್ತಿಗೆ; II
ಮೇರು ಪರ್ವತ ಶಿಖರದಂತೆ ಹೊಳೆಯುತಿದ್ದ ಯುವಕI
ಇಳಿದು ರಥದಿಂದ ನನ್ನ ಎದಿರು, ತಿಂದ ಆ ಶವವನ್ನು; II
ಶವ ಭಕ್ಷಿಸಿ ಹಸಿವು ಇಂಗಿಸಿಕೊಂಡು, ಧುಮುಕಿ ನೀರಿನಲ್ಲಿ I
ಬಾಯಿ, ಅಂಗಗಳನ್ನು ತೊಳೆದುಕೊಂಡು ರಥವೇರಿದ; II
ಆ ಸ್ವರ್ಗೀಯ ಯುವಕ ಹೊರಡುವದರಲಿದ್ದ I
ನಾನು ತಡೆದು ಅವನನ್ನು ಮಾತಾಡಿಸಿದೆ: ʻಓ ರಾಜಕುಮಾರ, II
ದೇವತೆಯನು ಹೋಲುವ ನೀನ್ಯಾರು?I
ಶವದ ಮಾಂಸ ಏಕೆ ಭಕ್ಷಿಸಿಸದೆ? ನಿನಗೆ ಏನು ಪ್ರಯೋಜನ? II
ಇದರಲ್ಲಿ ಏನೋ ರಹಸ್ಯ ಅಡಗಿದೆ, ಈ ಸ್ನೇಹಿತನಿಗೆI
ಹೇಳು ನನಗೆ ಇದರ ಗುಟ್ಟು, ಆಗುತ್ತಿಲ್ಲ ನನಗೆ ನಂಬಿಕೆʼ. II
ಹೀಗೆ ಕುತೂಹಲದಿ ಕೇಳಿದೆ ಆ ಸ್ವರ್ಗೀಯ ಯುವಕನ,I
ಎಲ್ಲವನ್ನು ಹೇಳು ಪ್ರಾರಂಭಿಸಿದ ಆ ನಕಿನ . II
ಉತ್ತರಕಾಂಡ
ರಾಮನು ಬ್ರಾಹ್ಮಣ ಮುನಿಗಳೊಂದಿಗೆ ಅಗಸ್ತ್ಯ ಮುನಿ ಆಶ್ರಮಕ್ಕೆ ಬಂದ, ಅಗಸ್ತ್ಯರು ಎಲ್ಲರನ್ನು ಸ್ವಾಗತಿಸಿ ರಾಮನಿಗೆ ಸ್ವರ್ಗೀಯ ಆಭರಣವನ್ನು ಕೊಟ್ಟು ಅದು ತನ್ನ ಬಳಿ ಬಂದ ಕಥೆಯನ್ನು ಹೇಳುವ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: ರಾಮನು ಬ್ರಾಹ್ಮಣ ಮುನಿಗಳೊಂದಿಗೆ ಕುಂಭಜ ಅಗಸ್ತ್ಯರನು ಭೇಟಿಯಾದನು, ಅಗಸ್ತ್ಯರು ಎಲ್ಲರನ್ನೂ ಸ್ವಾಗತಿಸಿದರು ಹಾಗು ರಾಮನಿಗೆ ನುಡಿದರು “ ಓ ರಾಮಾ, ನಿನ್ನ ಸೌಭಾಗ್ಯವು ನಿನ್ನನ್ನು ನನ್ನ ಬಳಿ ಕರೆದು ತಂದಿದೆ; ಶಂಭೂಕನ ಉದ್ಧರಸಿ, ಬ್ರಾಹ್ಮಣ ಬಾಲಕ ಜೀವಂತವಾಗಲು ಉಪಕರಿಸಿದ ನೀನು ಕೊಡುಗೆಗೆ ಅರ್ಹನು; ವಿಶ್ವಕರ್ಮ ತಯ್ಯಾರಿಸಿದ ಈ ದೈವೀ ಆಭರಣವನ್ನು ಕೊಡುಗೆಯಾಗಿ ಸ್ವೀಕರಿಸು, ಇಂದು ನನ್ನ ಬಳಿ ತಂಗಿ ನಾಳೆ ಅಯೋಧ್ಯೆಗೆ ಮರಳು. ಈ ದೈವೀ ಆಭರಣವನ್ನು ನಾನು ಪಡೆದ ಕಥೆ ಹೇಳುವೆ ಕೇಳುʻ ಓ ರಾಮಾ, ಹಿಂದೆ ತ್ರೇತಾಯುಗದಲ್ಲಿ, ನಾಲ್ಕು ಶತ ಯೋಜನೆ ನಿರ್ಜೀವ ಪ್ರದೇಶದಲ್ಲಿ ನಾನು ಕಠಿಣ ತಪಸ್ಸು ಮಾಡುತಿದ್ದೆನು, ಅದು ಗೆಡ್ಡೆ, ಹಣ್ಣು ಹಂಪಲ ಗಿಡಗಳಿಂದ ತುಂಬಿ ಸುಂದರ ಆಕರ್ಷಣೀಯ ಪ್ರದೇಶವಾಗಿತ್ತು, ಆ ಪ್ರದೇಶದ ಮಧ್ಯದಲಿ ನಾಲ್ಕ ಯೋಜನೆ ವಿಸ್ತಾರದ ಚಕ್ರವಾಕ, ಹಕ್ಕಿಗಳ ಸುಂದರ ಸರೋವರವಿತ್ತು, ಚಕ್ರವಾಕ ಹಕ್ಕಿಗಳೇ ಅದರ ಆಭರಣಗಳಾಗಿದ್ದವು, ಆ ಸರೋವರದಲಿ ಶಾಂತ ಆಳವಾದ ಸಿಹಿ ನೀರು ತುಂಬಿತ್ತು, ಆ ಸರೋವರ ಬಳಿ ಪ್ರಾಚೀನ ಆಶ್ರಮವಿತ್ತು, ಆ ಆಶ್ರದಲ್ಲಿ ಮನುಷ್ಯನಾಗಲಿ, ಪ್ರಾಣಿಗಳಾಗಲಿ ವಾಸವಿದ್ದಿದಿಲ್ಲ; ಒಂದು ಮುಂಜಾವಿನಲಿ ಎದ್ದು ನಾನು ಆ ಸರೋವರದತ್ತ ಹೋದೆನು, ಆದರೆ ಅದರಲ್ಲಿ ನಾನು ಶವ ಕಂಡೆನು, ಸರೋವರದಲಿ ಶವವು ವೈಭವದಿಂದ ಹೊಳೆಯುತ್ತಿತ್ತು, ಆ ದೃಶ್ಯವು ಒಂದು ಕ್ಷಣ ನನ್ನಲಿ ಮಜುಗರ ಹುಟ್ಟಿಸಿತು; ಓ ರಾಘವಾ, ಸರೋವರ ದಡದಲ್ಲಿ ನಿಂತು ʻಇದೇನು?ʼ ಎಂದು ನನ್ನಲಿ ಯೋಚಿಸಿದೆನು, ಆದರೆ ಮರುಕ್ಷಣದಲಿ ಸ್ವರ್ಗೀಯ ರಥ ಬರುವದನ್ನು ಕಂಡೆನು, ರಥದಲಿ ಒಬ್ಬ ಅದ್ಭುತ ವ್ಯಕ್ತಿಯು ಸಹಸ್ರ ಸಹಸ್ರ ಅಪ್ಸರೆಯರೊಂದಿಗೆ ಬಂದನು, ಆ ಆಭರಣ ಶೃಂಗಾರಿತ ಅಪ್ಸರೆಯರಲ್ಲಿ ಕೆಲವರು ಮೃದಂಗ, ವೀಣೆ, ಪನವಸ ವಾದ್ಯಗಳನ್ನು ನುಡಿಸುತಿದ್ದರು, ಇನ್ನು ಕೆಲವರು ನೃತ್ಯ ಮಾಡುತಿದ್ದರು,ಮತ್ತು ಕೆಲವರು ಆ ಯುವ ವ್ಯಕ್ತಿಗೆ ಚಾಮರ ಬೀಸುತಿದ್ದರು; ಮೇರು ಪರ್ವತ ಶಿಖರದಂತೆ ಆ ಯುವಕ ಹೊಳೆಯುತಿದ್ದನು, ಆ ಯುವಕನು ನನ್ನ ಎದಿರು ರಥದಿಂದ ಇಳಿದು, ಆ ಶವವನ್ನು ತಿಂದನು ಹಾಗು ಶವ ಭಕ್ಷಿಸಿ ಹಸಿವು ಇಂಗಿಸಿಕೊಂಡು, ನೀರಿನಲ್ಲಿ ಧುಮುಕಿ ತನ್ನ ಬಾಯಿ, ಅಂಗಗಳನ್ನು ತೊಳೆದುಕೊಂಡು ರಥವೇರಿದನು; ಆ ಸ್ವರ್ಗೀಯ ಯುವಕ ಹೊರಡುವದರಲಿದ್ದ ನಾನು ಅವನನ್ನು ತಡೆದು ಮಾತಾಡಿಸಿದೆ ʻಓ ರಾಜಕುಮಾರ, ದೇವತೆಯನು ಹೋಲುವ ನೀನ್ಯಾರು? ಶವದ ಮಾಂಸ ಏಕೆ ಭಕ್ಷಿಸಿದೆ? ನಿನಗೆ ಏನು ಪ್ರಯೋಜನ? ಇದರಲ್ಲಿ ಏನೋ ರಹಸ್ಯ ಅಡಗಿದೆ, ನೀನು ಈ ಸ್ನೇಹಿತನಿಗೆ ಹೇಳು ಅದರ ಗುಟ್ಟು, ನಿನ್ನ ಕೃತ್ಯ ಕಂಡು ನನಗೆ ನಂಬಿಕೆ ಆಗುತ್ತಿಲ್ಲ ʼ. ಹೀಗೆ ಕುತೂಹಲದಿಂದ ನಾನು ಕೇಳಿದ ಪ್ರಶ್ನೆಗಳಿಗೆ ಆ ಸ್ವರ್ಗೀಯ ಯುವಕನು ನನಗೆ ಎಲ್ಲವನ್ನು ಹೇಳು ಪ್ರಾರಂಭಿಸಿದನು.”
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
