
ಕೇಳಿ ರಾಮನ ಆದೇಶ ದೂತರು ಯಮುನಾನದಿ ದಡದ I
ಮಧುರಾ ನಗರಕ್ಕೆ ಶೀಘ್ರ ಪಯಣಿಸಿದರು, ಎಲ್ಲಿಯೂ ತಂಗದೆ; II
ತಪುಪಿದರು ಮಧುರಾನಗರ ಮೂರು ರಾತ್ರಿಗಳ ನಂತರ,I
ದೂತರು ನಡೆದದ್ದನು ತಿಳಿಸಿದರು ಶತ್ರುಘ್ನನಿಗೆ: II
“ಲಕ್ಷ್ಮಣನ ತೊರೆದು ರಾಮ,ಲವ ಕುಶರಿಗೆ I
ಪ್ರತ್ಯೇಕ ಎರಡು ಸುಂದರ ರಾಜಧಾನಿ ನಿರ್ಮಿಸಿದ ರಾಮ, II
ದಕ್ಷಿಣದ ವಿಂಧ್ಯಪರ್ವತ ವಲದಲಿ ಕುಶವತಿನಗರI
ರಾಜಧಾನಿ ಸ್ಥಾಪಿಸಿ ಕುಶನಿಗೆ ಪಟ್ಟಗಟ್ಟಿದ ರಾಮ, II
ಕೋಸಲದ ಉತ್ತರದಲಿ ಶ್ರವಸ್ತಿನಗರ ರಾನಧಾನಿI
ನಿರ್ಮಿಸಿ ಲವನಿಗೆ ಪಟ್ಟಗಟ್ಟಿದ ರಾಮ; II
ಎಲ್ಲವನ್ನು ತೊರೆದು ಲಕ್ಷ್ಮಣನ ದಾರಿI
ಹಿಡಿಯುವ ಸಂಕಲ್ಪ ಮಾಡಿರುವನು ರಾಮ.” II
ಕೇಳಿ ದೂತರಿಂದ ರಾಮನ ಆದೇಶI
ಶತ್ರುಘ್ನ ಮೌನನಾದನು ಕೆಲ ಕ್ಷಣ; II
ಅಯೋಧ್ಯೆಯ ಭಯಾನಕ ಬೆಳವಣಿಗೆಗಳನ್ನುI
ತಿಳಿದು ಶತ್ರುಘ್ನ ಶೀಘ್ರ ಸಭೇ ಕರೆದನು; II
ರಾಜಗುರು ಕಂಚನ, ಪ್ರಜೆಗಳು, ಮಂತ್ರಿಗಳುI
ಮುನಿಗಳು ಸೇರಿದರು ಸಭೆಗೆ ವಿಷಯ ತಿಳಿಯಲಿ;II
ತನ್ನ ಇಬ್ಬರೂ ಪುತ್ರರಿಗೆ ತನ್ನೆಲ್ಲ ಸಂಪತ್ತು ಹಂಚಿದ ಸಮನಾಗಿ, I
ರಾಜ್ಯವನ್ನು ಇಬ್ಬಾಗಿಸಿದ ಶತ್ರುಘ್ನ: II
ಪುತ್ರ ಸುಬಾಹುನನ್ನು ಪಟ್ಟಗಟ್ಟಿದ ಮಧುರಾ ರಾಜ್ಯಕ್ಕೆ,I
ಶತ್ರುಘತಿನನ್ನು ಪಟ್ಟಗಟ್ಟಿದ ವೈದಿಶನಗರ ರಾಜ್ಯಕ್ಕೆ; II
ಶತ್ರುಘ್ನ ಒಬ್ಬಂಟಿಗನಾಗಿ ರಥವೇರಿI
ಅಯೋಧ್ಯೆ ನಗರಕ್ಕೆ ಬೆಳಿಸಿದ ಶೀಘ್ರ ಪಯಣ; II
ದುಃಖಿತ ರಾಮನ ಬಳಿ ಬಂದು ಶತ್ರುಘ್ನI
ಕೈಮುಗಿದು ವಿನಮ್ರತೆದಿ ರಾಮನಿಗೆ ಅರುಹಿದ: II
“ ಪಟ್ಟಗಟ್ಟಿದೆ ಎನ್ನ ಇಬ್ಬರೂ ಪುತ್ರರಿಗೆ,ಓ ರಾಜನೇ,I
ಬಂದಿರುವೆ ತಮ್ಮ ಬಳಿ, ತಮ್ಮನು ಹಿಂಬಾಲಿಸಲು; II
ಓ ಶೂರನೇ, ಕರೆದುಕೋ ನನ್ನನ್ನು ನಿನ್ನೊಂದಿಗೆI
ತಡೆಯಬೇಡಾ ನನ್ನ, ನೀನಿಲ್ಲದೆ ಬದುಕಲಾರೆ”.II
ಕೇಳಿ ಶತ್ರುಘ್ನನ ನಿರ್ಧಾರ ರಾಮI
ಅವನಿಗೆ ರಾಮ ನುಡಿದ:” ಹಾಗೆ ಆಗಲಿ.” II
ರಾಮನ ಸುದ್ಧಿ ತಿಳಿದು ರಾಕ್ಷಸರು, ವಾನರರುI
ಬಂದರು ರಾಮನ ಬಳಿ ಸುಗ್ರೀವನ ನೇತೃತ್ವದಲಿ; II
ಆಗಸದತ್ತ ಮುಖವೆತ್ತಿ ನಿಂತ ರಾಮನI
ಬಳಿಬಂದು ಕೋರಿದರು ನಿರ್ಧಾರ ಕೈಬಿಡುವಂತೆ;II
ಕೇಳಿ ರಾಮನ ಇಹಲೋಕ ತೊರೆವ ಸುದ್ಧಿ ದೇವ, I
ಗಂಧರ್ವ, ಮುನಿಗಳು ಕೋರಿದರು ರಾಮನಲ್ಲಿ:II
“ನಿನ್ನ ಹಿಂಬಾಲಿಸಲು ನಾವೂ ಬಂದಿರುವೆವು, I
ತೊರೆಯಬೇಡಾ ನಮ್ಮನ್ನು, ಇಲ್ಲವೇ ಎಮಗೆ ನೀಡು ಮರಣ.” II
ಅದೇವೇಳೆ ಸುಗ್ರೀವನು ರಾಮನ ಬಳಿ ಬಂದುI
ಕೈ ಮುಗಿದು ರಾಮನಲ್ಲಿ ಅರುಹಿದನು: II
“ಅಂಗದನ್ನು ಕಿಷ್ಕಿಂಧರಾಜ್ಯ ಪಟ್ಟಗಟ್ಟಿರುವೆ, ಓ ರಾಜನೇ,I
ನಿನ್ನೊಂದಿಗೆ ಹಿಂಬಾಲಿಸುವ ಬಯಕೆದಿ ಬಂದಿರುವೆ”. II
ಕೇಳಿ ಸುಗ್ರೀವನ ಬಯಕೆ ರಾಮ ನುಡಿದ ಸುಗ್ರೀವನಿಗೆI
“ಅದರಂತೆ ಆಗಲಿ”. ರಾಕ್ಷಸೇಂದ್ರ ವಿಭೀಷಣನಿಗೆ II
ರಾಮ ನುಡಿದ: “ ಓ ರಾಕ್ಷಸೇಂದ್ರಾ, ಜನರು I
ಬದುಕಿರುವವರೆಗೆ ವಾಸವಿರು ನೀ ಲಂಕೆಯಲಿ: II
ಇದು ನಿನ್ನ ಸ್ನೇಹಿತ ರಾಮನ ಇಚ್ಚೆ,I
ಬದುಕಿರು ನೀ ಸೂರ್ಯ ಚಂದ್ರರಿರುವವರೆಗೆ, II
ನನ್ನ ಗುಣಗಾನ ಭೂಮಿಯಲಿ ಇರುವವರೆಗೆI
ನೀನು ಭೂಮಂಡಳದಲ್ಲಿ ಹೊಳೆಯುತಿರು; II
ನ್ಯಾಯ ನೀತಿಯಂತೆ ಆಳು ಪ್ರಜೆಗಳನ್ನು ನಿನ್ನ ಸ್ನೇಹಿತ I
ರಾಮನ ಈ ಮಾತು ನಡೆಸಿಕೊಡು, ಓ ರಾಕ್ಷಸೇಂದ್ರಾ.” II
“ ಹಾಗೆ ಆಗಲಿ, ಪ್ರಭು” ಎಂದನುI
ವಿಭೀಷಣ ಕೇಳಿ ರಾಮನ ಆದೇಶ;II
ಕಕುತ್ಸ್ಥ ಹನುಮಾನನಿಗೆ ಉಪದೇಶಿಸಿದ:ಚಿರಂಜೀವಿಯಾಗು, I
ಎನ್ನ ಬಯಕೆಯನ್ನು ತೊರೆಯಬೇಡಾ,II
ಲೋಕಗಳಲ್ಲಿ ನನ್ನ ಕಥೆ ಇರುವವರೆಗೆ ನೀನು I
ನನ್ನ ನಾಮದಲಿ ಅಮರನಾಗಿರುವಿ, ಪಾಲಿಸು ಎನ್ನ ವಚನ.”II
ಕೇಳಿ ರಾಮನ ಶುಭಹಾರೈಕೆಗಳನ್ನು ಹನುಮಾನI
ರಾಮನಿಗೆ ಅರುಹಿದ:” ಓ ರಾಮಾ,II
ನಿನ್ನ ಪವಿತ್ರ ಚರಿತೆ ಭೂಮಂಡದಲಿ ಇರುವವರೆಗೆ I
ನಾನು ನಿನ್ನ ಭಕ್ತನಾಗಿರುವೆ”. ಜಾಂಬವಾನನತ್ತ ತಿರುಗಿ II
ರಾಮನ ನುಡಿದ: “ಕಲಿಯುಗ ಆರಂಭವಾಗುವವರೆಗೆI
ನೀನು ಜೀವಿಸಿರು ಭೂಮಂಡಳದಲಿ.”II
ರಾಮನು ವಾನರರಿಗೆ, ಕರಡಿಗಳಿಗೆ ನುಡಿದನು:I
“ನೀವು ಬಯಸಿದರೆ, ನನ್ನೊಂದಿಗೆ ಬರಬಹುದು.” II
ಉತ್ತರಕಾಂಡ
ಲವ ಕುಶರಿಗೆ ಕೋಸರಾಜ್ಯ ವಿಭಜಿಸಿ ಪ್ರತ್ಯೇಕ ರಾಜ್ಯ ಸ್ಥಾಪಿಸಿ ಪಟ್ಟಗಟ್ಟಿ ರಾಮನು ಭೂಮಂಡಲ ತೊರೆವ ಅರ್ಥಾರ್ತ್ ಮಹಾಪ್ರಸ್ಥಾನದತ್ತ ಪಯಣಿಸಲಿರುವ ಸುದ್ಧಿ ತಿಳಿದು ಶತ್ರುಘ್ನ, ಹನುಮಾನ, ಸುಗ್ರೀವ, ಜಾಂಬುವಾನ, ವಿಭೀಷಣ, ರಾಕ್ಷಸರು ಮತ್ತು ವಾನರರು ರಾಮನ ಬಳಿ ಬಂದು ರಾಮನಿಗೆ ತನ್ನ ನಿರ್ಧಾರ ಕೈ ಬಿಡುವಂತೆ ಕೋರಿದ, ರಾಮನು ಎಲ್ಲರಿಗೂ ಬೋಧಿಸಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಇಲ್ಲಿ ಹನುಮಾನ ಮತ್ತು ವಿಭೀಷಣನಿಗೆ ಜಿರಂಜೀವಿಯಾರಿಲು ರಾಮನು ಆದೇಶಿಸಿದ್ದು ಉಲ್ಲೇಖಿನಿಯ ಸಂಗತಿಯನ್ನು ಹೀಗೆ ವಿವರಿಸಿರುವರು: ರಾಮನ ಆದೇಶ ಕೇಳಿ ದೂತರು ಯಮುನಾನದಿ ದಡದ ಮಧುರಾನಗರಕ್ಕೆ ಶೀಘ್ರ ಪಯಣಿಸಿದರು, ಎಲ್ಲಿಯೂ ತಂಗದೆ ಮಧುರಾನಗರವನ್ನು ಮೂರು ರಾತ್ರಿಗಳ ಅವಧಿಯಲ್ಲಿ ತಪುಪಿದರು; ನಂತರ, ದೂತರು ಶತ್ರುಘ್ನನಿಗೆ ನಡೆದದ್ದನು ತಿಳಿಸಿದರು “ಲಕ್ಷ್ಮಣನ ತೊರೆದು ರಾಮನು ಲವ ಕುಶರಿಗೆ ಪ್ರತ್ಯೇಕ ಎರಡು ಸುಂದರ ರಾಜಧಾನಿ ನಿರ್ಮಿಸಿ ದಕ್ಷಿಣದ ವಿಂಧ್ಯಪರ್ವತ ವಲಯದಲಿ ಕುಶವತಿನಗರ ರಾಜಧಾನಿ ಸ್ಥಾಪಿಸಿ ಕುಶನಿಗೆ ಪಟ್ಟಗಟ್ಟಿದ ಮತ್ತು ಕೋಸಲದ ಉತ್ತರದಲಿ ಶ್ರವಸ್ತಿನಗರ ರಾಜಧಾನಿ ನಿರ್ಮಿಸಿ ಲವನಿಗೆ ಪಟ್ಟಗಟ್ಟಿದನು ಹಾಗು ರಾಮನು ಎಲ್ಲವನ್ನು ತೊರೆದು ಲಕ್ಷ್ಮಣನ ದಾರಿ ಹಿಡಿಯುವ ಸಂಕಲ್ಪ ಮಾಡಿರುವನು.” ದೂತರಿಂದ ರಾಮನ ಆದೇಶ ತಿಳಿದು ಶತ್ರುಘ್ನನು ಕೆಲ ಕ್ಷಣ ಮೌನನಾದನು; ಅಯೋಧ್ಯೆಯ ಭಯಾನಕ ಬೆಳವಣಿಗೆಗಳನ್ನು ತಿಳಿದು ಶತ್ರುಘ್ನ ಶೀಘ್ರ ಸಭೆ ಕರೆದನು; ವಿಷಯ ತಿಳಿಯಲು ರಾಜಗುರು ಕಂಚನ, ಪ್ರಜೆಗಳು, ಮಂತ್ರಿಗಳು ಮುನಿಗಳು ಸಭೆಗೆ ಸೇರಿದರು; ಶತ್ರುಘ್ನನು ತನ್ನ ಇಬ್ಬರೂ ಪುತ್ರರಿಗೆ ತನ್ನೆಲ್ಲ ಸಂಪತ್ತು ಸಮನಾಗಿ ಹಂಚಿದ ಹಾಗು ರಾಜ್ಯವನ್ನು ಇಬ್ಬಾಗಿಸಿ ಪುತ್ರ ಸುಬಾಹುನನ್ನು ಮಧುರಾ ರಾಜ್ಯಕ್ಕೆ ಮತ್ತು ಶತ್ರುಘತಿನನ್ನು ವೈದಿಶನಗರ ರಾಜ್ಯಕ್ಕೆ ಪಟ್ಟಗಟ್ಟಿದನು; ಶತ್ರುಘ್ನನು ಒಬ್ಬಂಟಿಗನಾಗಿ ರಥವೇರಿ ಅಯೋಧ್ಯೆ ನಗರಕ್ಕೆ ಶೀಘ್ರ ಪಯಣ ಬೆಳಿಸಿದನು; ಶತ್ರುಘ್ನನು ದುಃಖಿತ ರಾಮನ ಬಳಿ ಬಂದು, ಅವನಿಗೆ ಕೈಮುಗಿದು ವಿನಮ್ರತೆಯಿಂದ ಅರುಹಿದನು “ಓ ರಾಜನೇ, ನನ್ನ ಇಬ್ಬರೂ ಪುತ್ರರಿಗೆ ಪಟ್ಟಗಟ್ಟಿ ತಮ್ಮ ಬಳಿ ತಮ್ಮನು ಹಿಂಬಾಲಿಸಲು ಬಂದಿರುವೆನು; ನನ್ನನ್ನು ನಿನ್ನೊಂದಿಗೆ ಕರೆದುಕೋ ನನ್ನ ತಡೆಯಬೇಡಾ, ನೀನಿಲ್ಲದೆ ನಾನು ಬದುಕಲಾರೆನು.” ಶತ್ರುಘ್ನನ ನಿರ್ಧಾರವನ್ನು ತಿಳಿದ ರಾಮನು ಅವನಿಗೆ” ಹಾಗೆ ಆಗಲಿ” ಎಂದನು; ರಾಮನ ಅಂತಿಮ ಯಾತ್ರೆಯ ಸುದ್ಧಿಯನ್ನು ತಿಳಿದು ಸುಗ್ರೀವನ ನೇತೃತ್ವದಲಿ ರಾಕ್ಷಸರು, ವಾನರರು ರಾಮನ ಬಳಿ ಬಂದರು ಹಾಗು ಆಗಸದತ್ತ ಮುಖವೆತ್ತಿ ನಿಂತ ರಾಮನನ್ನು ತನ್ನ ನಿರ್ಧಾರ ಕೈಬಿಡುವಂತೆ ಕೋರಿದರು; ರಾಮನ ಇಹಲೋಕ ತೊರೆವ ಸುದ್ಧಿಯನ್ನು ಕೇಳಿ ದೇವ, ಗಂಧರ್ವ, ಮುನಿಗಳು ರಾಮನಲ್ಲಿ “ ನಿನ್ನ ಹಿಂಬಾಲಿಸಲು ನಾವೂ ಬಂದಿರುವೆವು, ನಮ್ಮನ್ನು ತೊರೆಯಬೇಡಾ, ಇಲ್ಲವೇ ನಮಗೆ ಮರಣ ನೀಡು” ಎಂದು ಕೋರಿದರು; ಅದೇವೇಳೆ ಸುಗ್ರೀವನು ರಾಮನ ಬಳಿ ಬಂದು ಕೈ ಮುಗಿದು ರಾಮನಲ್ಲಿ ಅರುಹಿದನು “ ಓ ರಾಜನೇ, ನಾನು ಅಂಗದನ್ನು ಕಿಷ್ಕಿಂಧರಾಜ್ಯಕ್ಕೆ ಪಟ್ಟಗಟ್ಟಿರುವೆ, ನಿನ್ನೊಂದಿಗೆ ಹಿಂಬಾಲಿಸುವ ಬಯಕೆಯಿಂದ ಬಂದಿರುವೆನು.” ಸುಗ್ರೀವನ ಬಯಕೆಯನ್ನು ಕೇಳಿ ರಾಮನು ಸುಗ್ರೀವನಿಗೆ “ ಅದರಂತೆ ಆಗಲಿ.” ಎಂದು ನುಡಿದನು; ಆದರೆ ರಾಕ್ಷಸೇಂದ್ರ ವಿಭೀಷಣನಿಗೆ ರಾಮನು ಉಪದೇಶಿಸಿದನು “ ಓ ರಾಕ್ಷಸೇಂದ್ರಾ, ಜನರು ಬದುಕಿರುವವರೆಗೆ ನೀನು ಲಂಕೆಯಲಿ ವಾಸವಿರು, ಇದು ನಿನ್ನ ಸ್ನೇಹಿತ ರಾಮನ ಇಚ್ಚೆ, ನೀನು ಸೂರ್ಯ ಚಂದ್ರರಿರುವವರೆಗೆ ಬದುಕಿರು, ನನ್ನ ಗುಣಗಾನ ಭೂಮಿಯಲಿ ಇರುವವರೆಗೆ ನೀನು ಭೂಮಂಡಳದಲ್ಲಿ ಹೊಳೆಯುತಿರು; ನ್ಯಾಯ ನೀತಿಯಂತೆ ಪ್ರಜೆಗಳನ್ನು ಆಳು, ನಿನ್ನ ಸ್ನೇಹಿತ ರಾಮನ ಈ ಮಾತು ನಡೆಸಿಕೊಡು.” ವಿಭೀಷಣನು ರಾಮನ ಆದೇಶ ಕೇಳಿ “ ಹಾಗೆ ಆಗಲಿ, ಪ್ರಭು” ಎಂದನು; ಕಕುತ್ಸ್ಥನು ಹನುಮಾನನಿಗೆ ಉಪದೇಶಿಸಿದನು “ನೀನು ಚಿರಂಜೀವಿಯಾಗು, ನನ್ನ ಬಯಕೆಯನ್ನು ತೊರೆಯಬೇಡಾ, ಲೋಕಗಳಲ್ಲಿ ನನ್ನ ಕಥೆ ಇರುವವರೆಗೆ ನೀನು ನನ್ನ ನಾಮದಲಿ ಅಮರನಾಗಿರುವಿ, ನನ್ನ ವಚನ ಪಾಲಿಸು.” ರಾಮನ ಶುಭಹಾರೈಕೆಗಳನ್ನು ಕೇಳಿದ ಹನುಮಾನನು ರಾಮನಿಗೆ ಅರುಹಿದ ” ಓ ರಾಮಾ, ನಿನ್ನ ಪವಿತ್ರ ಚರಿತೆ ಭೂಮಂಡದಲಿ ಇರುವವರೆಗೆ ನಾನು ನಿನ್ನ ಭಕ್ತನಾಗಿರುವೆ.” ಜಾಂಬವಾನನತ್ತ ತಿರುಗಿ ರಾಮನ ಅವನಿಗೆ ನುಡಿದನು “ಕಲಿಯುಗ ಆರಂಭವಾಗುವವರೆಗೆ ಭೂಮಂಡಳದಲಿ ನೀನು ಜೀವಿಸಿರು.” ರಾಮನು ವಾನರರಿಗೆ, ಕರಡಿಗಳಿಗೆ ಕೋರಿದನು “ನೀವು ಬಯಸಿದರೆ, ನನ್ನೊಂದಿಗೆ ಬರಬಹುದು.”
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
