
ನಸುಕು ಹರಿದಂತೆ ವಿಶಾಲೆದೆ ರಾಮI
ತನ್ನ ಆಧ್ಯಾತ್ಮ ಗುರುಗಳಿಗೆ ಅರುಹಿದ: II
“ಬ್ರಾಹ್ಮಣರ ಮಧ್ಯೆ ಅಗ್ನಿಹೋತ್ರ ಬೆಳಗಲಿ,I
ಬಲಿಪೀಠಗಳ ಆಚರಣೆ ನಡೆಯಲಿ,ಓ ಗುರುದೇವಾ.” II
ಕೇಳಿ ರಾಮನ ಅರಿಕೆ ವಸಿಷ್ಠರುI
ಮಹಾಪ್ರಸ್ಥಾನ ವಿಧಿ ವಿದಾನಗಳನ್ನು ಆರಂಭಿಸಿದರು; II
ಧರಿಸಿ ರೇಷ್ಮೆ ಉಡುಪು, ಕೈಯಲಿ ಕುಶಹುಲ್ಲುI
ಹಿಡಿದು ಸರ್ಯು ನದಿಯತ್ತ ಸಾಗಿದ ರಾಮ; II
ತಡೆ ತಡೆದು ನಡೆಯುತ ರಾಮI
ಕಾಲದಾರಿಯಲಿ ಸರ್ಯು ನದಿಯತ್ತ ಸಾಗಿದ; II
ತನ್ನ ಬಿಲ್ಲು ಬಾಣ ಅಸ್ತ್ರಗಳನ್ನು ಹೊತ್ತುI
ಸಾಗಿದ ರಾಮ ತಡೆ ತಡೆದು ಸೂರ್ಯನಂತೆ; II
ಓಂಕಾರ ಉಚ್ಚರಿಸುತ ಋಷಿ ಮುನಿಗಳುI
ಸಾಗಿದ್ದರು ರಾಮನೊಂದಿಗೆ ಸರ್ಯುನದಿಯತ್ತ; II
ಅಯೋಧ್ಯೆಯ ಸ್ತೃೀಯರು, ಮಕ್ಕಳು, ವೃದ್ಧರು ಸೇವಕರು, I
ಆಪ್ತರು ಎಲ್ಲರೂ ಸಾಗಿದ್ದರು ರಾಮನೊಂದಿಗೆ;II
ಭರತ, ಶತ್ರುಘ್ನ ತಮ್ಮ ಮಡದಿಯರೊಂದಿಗೆ, I
ಇಕ್ಷ್ವಾಕು ಸಂಬಂಧಿಗಳು, ಸ್ನೇಹತರು ಸಾಗಿದ್ದರು ರಾಮನೊಂದಿಗೆ; II
ಮಂತ್ರಿಗಣ, ಸೇನಾಧಿಪತಿಗಳು, ಎಲ್ಲರೂI
ನಡೆದರು ರಾಮನ ಹೆಜ್ಜೆಯಲಿ ಹೆಜ್ಜೆಯಿಟ್ಟು; II
ರಾಮನ ಹೆಜ್ಜೆಯಲಿ ಹೆಜ್ಜೆಯಿಟ್ಟು ಹರುಷದಿI
ಸಾಗಿದ ಜೀವಿಗಳಲ್ಲವೂ ಪವಿತ್ರರಾದವು; II
ರಾಮನ ಮಹಾಪ್ರಸ್ಥಾನದಲಿ ಭಾಗವಹಿಸಿದ I
ಪ್ರತಿ ಜೀವಿ ನಿರ್ಜೀವಿ ವಸ್ತು ಪುನೀತರಾದವು, ಪವಿತ್ರರಾದವು. II
ಉತ್ತರಕಾಂಡ
ರಾಮನೊಂದಿಗೆ ಭರತ, ಶತ್ರುಘ್ನ, ತಮ್ಮ ಮಡದಿಯರೊಂದಿಗೆ ಮಹಾ ಪ್ರಸ್ಥಾನಕ್ಕೆ ಸರ್ಯೂನದಿಯತ್ತ ಸಾಗುವಾಗ ಅಯೋಧ್ಯೆಯ ಎಲ್ಲರೂ ಅದರಲ್ಲಿ ಭಾಗವಹಿಸಿ ರಾಮನೋಂದಿಗೆ ಹೆಜ್ಜೆ ಇಡುತ್ತ ಪುನಿತರಾದ ಸಂಗತಿಯನ್ನು ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು.: ನಸುಕು ಹರಿದಂತೆ ವಿಶಾಲೆದೆ ರಾಮನು ತನ್ನ ಆಧ್ಯಾತ್ಮ ಗುರುಗಳಿಗೆ ಕೋರಿದನು “ಓ ಗುರುದೇವಾ, ಬ್ರಾಹ್ಮಣರ ಮಧ್ಯೆ ಅಗ್ನಿಹೋತ್ರ ಬೆಳಗಲಿ, ಬಲಿಪೀಠಗಳ ಆಚರಣೆ ನಡೆಯಲಿ.” ರಾಮನ ಅರಿಕೆ ಕೇಳಿ ವಸಿಷ್ಠರು ಮಹಾಪ್ರಸ್ಥಾನ ವಿಧಿ ವಿದಾನಗಳನ್ನು ಆರಂಭಿಸಿದರು; ರೇಷ್ಮೆ ಉಡುಪು ಧರಿಸಿ, ಕೈಯಲಿ ಕುಶಹುಲ್ಲು ಹಿಡಿದು ರಾಮನು ಸರ್ಯೂ ನದಿಯತ್ತ ಸಾಗಿದನು; ತಡೆ ತಡೆದು ನಡೆಯುತ ರಾಮ ಕಾಲದಾರಿಯಲಿ ಸರ್ಯೂ ನದಿಯತ್ತ ಸಾಗಿದನು; ತನ್ನ ಬಿಲ್ಲು ಬಾಣ ಅಸ್ತ್ರಗಳನ್ನು ಹೊತ್ತು ತಡೆ ತಡೆದು ಸೂರ್ಯನಂತೆ ರಾಮ ಸಾಗಿದನು; ಓಂಕಾರ ಉಚ್ಚರಿಸುತ ಋಷಿ ಮುನಿಗಳು ರಾಮನೊಂದಿಗೆ ಸರ್ಯೂನದಿಯತ್ತ ಸಾಗಿದ್ದರು; ಅಯೋಧ್ಯೆಯ ಸ್ತೃೀಯರು, ಮಕ್ಕಳು, ವೃದ್ಧರು, ಸೇವಕರು, ಆಪ್ತರು ಎಲ್ಲರೂ ರಾಮನೊಂದಿಗೆ ಸಾಗಿದ್ದರು; ಭರತ ಮತ್ತು ಶತ್ರುಘ್ನ ತಮ್ಮ ಮಡದಿಯರೊಂದಿಗೆ, ಇಕ್ಷ್ವಾಕು ಸಂಬಂಧಿಗಳು, ಸ್ನೇಹತರು ರಾಮನೊಂದಿಗೆ ಸಾಗಿದ್ದರು; ಮಂತ್ರಿಗಣ, ಸೇನಾಧಿಪತಿಗಳು, ಎಲ್ಲರೂ ರಾಮನ ಹೆಜ್ಜೆಯಲಿ ಹೆಜ್ಜೆಯಿಟ್ಟು ನಡೆದರು; ರಾಮನ ಹೆಜ್ಜೆಯಲಿ ಹೆಜ್ಜೆಯಿಟ್ಟು ಹರುಷದಿಂದ ಸಾಗಿದ ಜೀವಿಗಳಲ್ಲವೂ ಪವಿತ್ರರಾದವು; ರಾಮನ ಮಹಾಪ್ರಸ್ಥಾನದಲಿ ಭಾಗವಹಿಸಿದ ಪ್ರತಿ ಜೀವಿ ನಿರ್ಜೀವಿ ವಸ್ತು ಪುನೀತರಾದವು, ಪವಿತ್ರರಾದವು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
