ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ವಿವಿಧ ಇಲಾಖೆ ಅಧಿಕಾರಿಗಳ ನಿಯೋಜನೆ

By admin


ಕೊಪ್ಪಳ: ಕೊಪ್ಪಳ ನಗರದಲ್ಲಿ ಜನವರಿ 23 ರಿಂದ 29ರ ವರೆಗೆ ಜರುಗುವ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2024ರ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಿ, ಕಾರ್ಯ ಹಂಚಿಕೆ ಮಾಡಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆದೇಶಿಸಿದ್ದಾರೆ.
ಗವಿಸಿದ್ದೇಶ್ವರ ಸಂಸ್ಥಾನ, ಶ್ರೀ ಗವಿಮಠದಿಂದ ಜ.23 ರಿಂದ 29ರ ವರೆಗೆ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2024ರ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಜ.27ರ ಶನಿವಾರದಂದು ಮಹಾ ರಥೋತ್ಸವ ಜರುಗಲಿದೆ. ಈ ಸಂಬಂಧ ಪೂರ್ವಭಾವಿ ಸಭೆಯನ್ನು ಕೈಗೊಂಡು ವಿವಿಧ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವ ನಿರ್ವಹಣೆಯ ಮೇಲುಸ್ತುವಾರಿಯನ್ನು ಮಾಡಲು ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇಶದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸಾರ್ವಜನಿಕರು, ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ, ಆಹಾರ ವ್ಯವಸ್ಥೆ, ಜನ ಸಂದಣಿ ನಿರ್ವಹಣೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಪೊಲೀಸ್ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜೆಸ್ಕಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಿ ಆದೇಶಿಸಲಾಗಿರುತ್ತದೆ.
*ಪೊಲೀಸ್ ಇಲಾಖೆ:* ಪೊಲೀಸ್ ಇಲಾಖೆಯಿಂದ ಕೊಪ್ಪಳ ಉಪ ಪೊಲೀಸ್ ಅಧೀಕ್ಷಕರನ್ನು ನಿಯೋಜಿಸಲಾಗಿದ್ದು, ಜಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್, ಸಿ.ಸಿ.ಕ್ಯಾಮರಾಗಳ ಅಳವಡಿಕೆ, ಜಾತ್ರಾ ಸ್ಥಳದಲ್ಲಿ ಔಟ್ ಪೊಲೀಸ್ ಸ್ಟೇಷನ್ ಪ್ರಾರಂಭ, ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಿ ನಗರದ ವಿವಿಧ ಸ್ಥಳಗಳಲ್ಲಿ ಪಾರ್ಕಿಂಗ್ ನಕಾಶೆಯ ಬ್ಯಾನರ್‌ಗಳ ಅಳವಡಿಕೆ, ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಸೂಕ್ತ ಪೊಲೀಸ್ ಸಿಬ್ಬಂದಿಗಳ ಹಾಗೂ ಅವಶ್ಯಕವಿದ್ದ ಸ್ಥಳಗಳಲ್ಲಿ ಗೃಹರಕ್ಷಕರ ನಿಯೋಜನೆ. ಗಣ್ಯರಿಗೆ ಸೂಕ್ತ ಸಂಚಾರ ವ್ಯವಸ್ಥೆ, ಇನ್ನಿತರ ಭದ್ರತಾ ವ್ಯವಸ್ಥೆ ಹಾಗೂ ಕಾಲ ಕಾಲಕ್ಕೆ ಅಗತ್ಯತೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದೆ.
*ಡಿ.ಯು.ಡಿ.ಸಿ ಕೊಪ್ಪಳ:* ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಯೋಜನಾ ನಿರ್ದೇಶಕರು ಹಾಗೂ ಕೊಪ್ಪಳ ನಗರಸಭೆಯ ಪೌರಾಯುಕ್ತರು, ಸ್ವಚ್ಛತೆಗೆ ಆದ್ಯತೆ ನೀಡಿ, ಇದಕ್ಕಾಗಿ ವಿವಿಧ ತಾಲ್ಲೂಕುಗಳ ಹೆಚ್ಚುವರಿ ಪೌರ ಕಾರ್ಮಿಕರನ್ನು ನಿಯೋಜನೆ, ಹೆಚ್ಚುವರಿ ಸಕ್ಕಿಂಗ್ ಮಷೀನ್ ಮತ್ತು ಜಟ್ಟಿಂಗ್ ಮಷೀನ್ ವ್ಯವಸ್ಥೆ, ಸ್ವಚ್ಛತೆ, ನೀರಿನ ವ್ಯವಸ್ಥೆ, ಸ್ಯಾನಿಟೈಸ್, ಘನತ್ಯಾಜ್ಯ ನಿರ್ವಹಣೆ, ಜಾತ್ರೆಗೆ ನಿಯೋಜಿಸಿದ ಎಲ್ಲಾ ಅಧಿಕಾರಿ ವರ್ಗದವರು ಒಂದೇ ಕಡೆ ಇರಲು ಅನುಕೂಲವಾಗುವಂತೆ ಕಂಟ್ರೋಲ್ ರೂಮ್ ಹಾಗೂ ಸಹಾಯವಾಣಿ ಕೇಂದ್ರದ ವ್ಯವಸ್ಥೆ, ನೀರು ಸರಬರಾಜು ಪೈಪ್‌ಲೈನ್ ದುರಸ್ಥಿ ಹಾಗೂ ವಾಲ್‌ಲೀಕ್ ಆಗದಂತೆ ಕ್ರಮವಹಿಸುವುದರ ಜೊತೆಗೆ ನಿರಂತರವಾಗಿ ಭಕ್ತಾಧಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದೆ.
*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ:* ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ ವಿಭಾಗದ ಕಾರ್ಯಪಾಲಕ ಅಭಿಯಂತರರು, ಟ್ಯಾಂಕರ್‌ಗಳ ಮೂಲಕ ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲು ಕೊಪ್ಪಳ ನಗರಸಭೆಗೆ ಅಗತ್ಯ ಸಹಕಾರ ನೀಡಬೇಕು. ಇದರೊಂದಿಗೆ ಇನ್ನಿತರ ಕುಡಿಯುವ ನೀರಿನ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಕಾಲ ಕಾಲಕ್ಕೆ ಅಗತ್ಯತೆಗೆ ತಕ್ಕಂತೆ ಕಾರ್ಯನಿರ್ವಹಿಸುವಂತೆ ಆದೇಶಿಸಿದೆ.
*ವಿದ್ಯುತ್ ಇಲಾಖೆ (ಜೆಸ್ಕಾಂ):* ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ವಿದ್ಯುತ್ ಸರಬರಾಜು ಮಾಡುವಲ್ಲಿ ಯಾವುದೇ ವ್ಯತ್ಯಯ ಆಗದಂತೆ ಹಾಗೂ ವಿದ್ಯುತ್ ತಂತಿಗಳಲ್ಲಿ ಯಾವುದೇ ರೀತಿಯ ಶಾರ್ಟ್ ಸರ್ಕ್ಯೂಟ್ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಪರಿವರ್ತಕ ವಿಫಲವಾಗದಂತೆ ಹೆಚ್ಚುವರಿ ಪರಿವರ್ತಕಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ವಿದ್ಯುತ್ ಲೈನ್‌ಗಳು ಹಾದು ಹೋದ ಸ್ಥಳಗಳಲ್ಲಿ ಆಟೋಪಕರಣಗಳನ್ನು ಹಾಕದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದೆ.
*ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:* ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಆಹಾರ ಸುರಕ್ಷಾಧಿಕಾರಿಯವರು ಗವಿಮಠದ ಅಡುಗೆ ಸಿಬ್ಬಂದಿಯೊಂದಿಗೆ ವಿಶೇಷ ಸಭೆ ಜರುಗಿಸಿ, ಆಹಾರ ಸುರಕ್ಷಾ ಕ್ರಮಗಳನ್ನು ಕೈಗೊಂಡು, ಮಠಕ್ಕೆ ಬಂದಂತಹ ಎಲ್ಲಾ ತರಹದ ಆಹಾರ ಪದಾರ್ಥ ಹಾಗೂ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿಯೇ ಭಕ್ತಾಧಿಗಳಿಗೆ ನೀಡುವ ಕ್ರಮ ವಹಿಸಬೇಕು. ಮಠದ ಆವರಣದಲ್ಲಿ ಅಥವಾ ಮುಂಭಾಗದಲ್ಲಿ ಒಂದು ಪರಿಶೀಲನಾ ಸ್ಥಳವನ್ನು ಗುರುತಿಸಿ, ಅದರಲ್ಲಿ ನಗರಸಭೆ, ಪೊಲೀಸ್ ಹಾಗೂ ಆರೋಗ್ಯ ಸುರಕ್ಷಾ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಪರಿಶೀಲನಾ ಕಾರ್ಯವನ್ನು ಕೈಗೊಳ್ಳಬೇಕು. ಜಾತ್ರೆ ನಡೆಯುವ ಸ್ಥಳದಲ್ಲಿ ತುರ್ತು ಸೇವಾ ಘಟಕವನ್ನು ಪ್ರಾರಂಭಿಸಿ, ಕರ್ತವ್ಯಕ್ಕೆ ತಜ್ಞ ವೈದ್ಯರು, ಶುಶ್ರೂಕಿಯರನ್ನು ಹಾಗೂ ಅಂಬುಲೆನ್ಸ್ಗಳನ್ನು ನಿರಂತರವಾಗಿ ನಿಯೋಜಿಸುವಂತೆ ಸೂಚನೆ ನೀಡಿದೆ.
*ಅಗ್ನಿಶಾಮಕ ಇಲಾಖೆ:* ಕೊಪ್ಪಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಜಾತ್ರೆಯಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಸಮರ್ಪಕ ಫೈರ್ ಇಂಜಿನ್ (ಅಗ್ನಿ ನಂದಕ) ವಾಹನವನ್ನು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜಾತ್ರೆಯಲ್ಲಿ ಹಾಕಲಾಗುವ ಅಂಗಡಿಗಳು, ಆಟೋಪಕರಣ, ನಾಟಕ ಹಾಗೂ ಮುಂತಾದವುಗಳಿಗೆ ಪರವಾನಿಗೆ ನೀಡುವ ಮೊದಲು ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಒದಗಿಸಬೇಕು. ಸೂಕ್ತ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿನಂದಕಗಳನ್ನು ಅಳವಡಿಸಿಕೊಂಡಿರುವುದನ್ನು ಖಾತರಿ ಪಡಿಸಿಕೊಳ್ಳುವಂತೆ ಸೂಚಿಸಿದೆ.
*ಲೋಕೋಪಯೋಗಿ ಇಲಾಖೆ:* ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ರಥೋತ್ಸವದ 3 ದಿನಗಳ ಪೂರ್ವದಲ್ಲಿ ರಥದ ಎಲ್ಲಾ ಚಕ್ರಗಳನ್ನು ಹಾಗೂ ರಥದ ಎಲ್ಲಾ ಭಾಗಗಳನ್ನು ಪರಿಶೀಲನೆ ಮಾಡಿ, ಮಹಾರಥೋತ್ಸವ ಜರುಗುವುದಕ್ಕೆ ಸೂಕ್ತ ಇರುವ ಅಥವಾ ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರವನ್ನು ಒದಗಿಸಬೇಕು. ರಥೋತ್ಸವದ ದಿನದಂದು ಆಗಮಿಸುವ ಗಣ್ಯರ ವೇದಿಕೆಯನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ತಿಳಿಸಿದೆ.
*ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:* ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ನಗರ ಹಾಗೂ ಗ್ರಾಮೀಣ ಸಾರಿಗೆ ಬಸ್‌ಗಳ ಸಮಯವನ್ನು ವಿಸ್ತರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು. ಬಸ್‌ಗಳ ನಿಲುಗಡೆಗಾಗಿ ನಿಗದಿತ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು ಸೂಚಿಸಿದೆ.
*ವಾರ್ತಾ ಮತ್ತು ಪ್ರಸಾರ ಇಲಾಖೆ:* ಜಿಲ್ಲಾ ವಾರ್ತಾಧಿಕಾರಿಗಳು ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಯ ಬಗ್ಗೆ ವ್ಯಾಪಕವಾಗಿ ದಿನಪತ್ರಿಕೆಗಳಲ್ಲಿ ಪ್ರಚುರಪಡಿಸಲು ಕ್ರಮ ಕೈಗೊಳ್ಳಬೇಕು.
ನಿಯೋಜಿತ ಎಲ್ಲಾ ಅಧಿಕಾರಿಗಳು ಸಮರ್ಪಕ ಕಾರ್ಯ ನಿರ್ವಹಣೆಗಳಿಗಾಗಿ ಅಗತ್ಯವೆನಿಸಿದಲ್ಲಿ ತಮ್ಮ ಅಧೀನ ಕಚೇರಿ ಸಿಬ್ಬಂದಿಗಳನ್ನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಬಹುದಾಗಿದೆ. ಉಪವಿಭಾಗಾಧಿಕಾರಿಗಳು, ನಿಯೋಜಿತ ಇಲಾಖೆಗಳೊಂದಿಗೆ ಹೆಚ್ಚುವರಿ ಕಾರ್ಯಗಳಿಗಾಗಿ ಸಿಬ್ಬಂದಿಯ ಅವಶ್ಯಕತೆ ಇದ್ದಲ್ಲಿ ಅನ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ನಿಯೋಜಿತ ಎಲ್ಲಾ ಇಲಾಖಾ ಅಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸಬೇಕು. ನಿಯೋಜಿತ ಅಧಿಕಾರಿಗಳು ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ, ಭಕ್ತಾಧಿಗಳಿಗೆ ಯಾವುದೇ ತರಹದ ಅನಾನುಕೂಲವಾಗದಂತೆ ಕರ್ತವ್ಯ ನಿರ್ವಹಿಸಬೇಕು.
ನಿಯೋಜಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ತರಹದ ಲೋಪ ಎಸಗಿದಲ್ಲಿ ಅಥವಾ ನಿರ್ಲಕ್ಷ್ಯತನ ತೋರಿದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.