ಶಹಾಪುರ: ಇಲ್ಲಿನ ಟಿಎಪಿಸಿಎಂಎಸ್ನ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿರುವ ಚಿತ್ತಾಪುರ ತಾಲೂಕಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಸಹೋದರ ರಾಜು ರಾಠೋಡ ಹಾಗೂ ಗೋಪಾಲ ಎನ್ನುವರನ್ನು ಶನಿವಾರ ಶಹಾಪುರ ಠಾಣೆಯ ಪೊಲೀಸರು ಗುರುಮಿಠಕಲದಲ್ಲಿ ಬಂಧಿಸಿದ್ದಾರೆ.
ನವಂಬರ ತಿಂಗಳಲ್ಲಿ ನಡೆದಿದೆ ಎನ್ನಲಾದ ಟಿಎಪಿಸಿಎಂಎಸ್ನ ರೂ2.6ಕೋಟಿ ಮೌಲ್ಯದ 6,077 ಕ್ವಿಂಟಾಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರಪುರ ಡಿವೈಎಸ್ಪಿ ಜಾವೇದ ಇನಾಂದಾರ ತನಿಖೆ ನಡೆಸುತ್ತಿದ್ದಾಗ ಸದರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ರಾಜು ರಾಠೋಡ ಅವರಿಗೆ ಪಡಿತರ ಅಕ್ಕಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಸ್ವಖುಷಿ ಹೇಳಿಕೆಯಲ್ಲಿ ತಿಳಿಸಿದ್ದರು. ಅದರ ಬೆನ್ನು ಹತ್ತಿದ ಪೊಲೀಸರು ಕೊನೆಗೆ ರಾಜು ರಾಠೋಡ ಅವರನ್ನು ಬಂಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಶಹಾಪುರ ಠಾಣೆಯ ಪಿ.ಐ ಎಸ್.ಎಂ.ಪಾಟೀಲ್ ತಿಳಿಸಿದರು.
ಆದರೆ ಬಿಜೆಪಿ ಪಕ್ಷದ ಮುಖಂಡ ಮಣಿಕಂಠ ರಾಠೋಡ ಅವರನ್ನು ಬಂಧಿಸುವ ಪ್ರಹಸನವು ನಡೆದಿತ್ತು. ಆದರೆ ಕಾನೂನು ಹಾಗೂ ತಾಂತ್ರಿಕ ಕಾರಣದಿಂದ ಅವರನ್ನು ಬಂಧಿಸಲು ಆಗಲಿಲ್ಲ ಎಂದು ಪೊಲೀಸ್ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.
