
ಯಾದಗಿರಿ : ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಬೇಕು ಎಂದು ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಸೂಚಿಸಿದರು.
ಗುರುಮಿಠಕಲ್ ನಗರದ ಪುರಭವನ ಸಭಾಂಗಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆ ಅಧಿಕಾರಿಗಳು ವಿಶೇಷವಾಗಿ ಮುತುವರ್ಜಿ ವಹಿಸಿ ಜನರ ಭೂಮಿಗೆ ಸಂಬAಧಿಸಿದAತೆ ಸಮಸ್ಯೆಗಳನ್ನು ಬಗೆಹರಿಸಬೇಕು. ಪಹಣಿ ಮ್ಯುಟೇಷನ್, ಸರ್ವೆ, ಪೋಡಿ, ತಿದ್ದುಪಡಿ, ಹದ್ದು ಬಸ್ತು ಖಾತೆ ವರ್ಗಾವಣೆ ಮತ್ತಿತರ ಕುಂದುಕೊರತೆಗಳನ್ನು ಆದಷ್ಟು ಬೇಗ ಬಗೆಹರಿಸಿ ಕೊಟ್ಟು ಜನರ ಸಂಕಷ್ಟವನ್ನು ಪರಿಹರಿಸಬೇಕು ಎಂದು ನುಡಿದರು.
ಪೊಲೀಸರು ಜನಸ್ನೇಹಿಯಾಗಬೇಕು. ಠಾಣೆಗೆ ಬರುವ ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ವಾಸ್ತವ ಹಾಗೂ ಸತ್ಯ ಪ್ರಕರಣಗಳನ್ನು ದಾಖಲಿಸಿಕೊಂಡು ಜನರಿಗೆ ನ್ಯಾಯ ಒದಗಿಸಬೇಕು. ಈ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಹಳ್ಳಿಗಳ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರತೀ ನಿತ್ಯ ಪರದಾಡುವ ಸ್ಥಿತಿ ಇದೆ ಹೀಗಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಬೇಕು ಎಂದರು.
ಗುರುಮಿಠಕಲ್ ಜನತೆಯ ಆಶಯಗಳಿಗೆ ಸ್ಪಂದಿಸುವ ಮೂಲಕ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ, ಚರಂಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಮೂಲಕ ಮೂಲ ಸೌಕರ್ಯ ಒದಗಿಸಬೇಕು ಎಂದು ನುಡಿದರು.
ಜಿಲ್ಲಾಧಿಕಾರಿ ಡಾ ಸುಶೀಲಾ ಬಿ.ಅವರು ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರವು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಸಾರ್ವಜನಿಕರು, ರೈತರು ಹಾಗೂ ಗ್ರಾಮಸ್ಥರ ಸಮಯ, ಹಣ ಉಳಿತಾಯ ಮಾಡುವುದು, ವಿನಾಕಾರಣ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲಾಡಳಿತವೇ, ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ತಿಳಿಸಿದರು.
ಸಮಸ್ಯೆ ಕುರಿತು ಲಿಖಿತ ರೂಪದಲ್ಲಿ ಅರ್ಜಿಸಲ್ಲಿಸಿದರೆ, ಆಯಾ ಇಲಾಖೆಗೆ ಕಳುಹಿಸಿ, ಶೀಘ್ರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ತಹಶೀಲ್ದಾರ ನೀಲಪ್ರಭಾ, ತಾಲೂಕು ಪಂಚಾಯತ ಇಓ ಸಂತೋಷ ಶೇಷಲು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
