ಬಾಲಕಿಯರ ಪಿಯು ಕಾಲೇಜಿಗೆ ಸಚಿವರ ಭೇಟಿ ಕಾಲೇಜಿನ ಮೂಲಭೂತ ಸೌಕರ್ಯಕ್ಕೆ ಅಗತ್ಯ ನೆರವು : ದರ್ಶನಾಪುರ ಭರವಸೆ

By admin


ಶಹಾಪುರ : ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜ ಮತ್ತು ಪ್ರೌಢಶಾಲೆ ಒಂದೇ ಕಡೆ ಇದ್ದು, ಪ್ರೌಢಶಾಲೆ ಮತ್ತು ಪಿಯು ಕಾಲೇಜು ಎರಡು ಸೇರಿ ಎರಡು ಸಾವಿರದಷ್ಟು ವಿದ್ಯಾರ್ಥಿನಿಯರ ಸಂಖ್ಯೆ ಇದ್ದು, ಅಗತ್ಯ ಮೂಲಭೂತ ಸೌಕರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು. ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಸಂಖ್ಯೆ ಕಾಲೇಜಿನ ಕೋಣೆಗಳು, ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿ ಕಾಲೇಜಿನ ಮುಖ್ಯಸ್ಥರಿಂದ ಮನವಿ ಪತ್ರ ಸ್ವೀಕರಿಸಿ ನಂತರ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಅನುಕೂಲ, ಹೊಸಕೋಣೆಗಳ ನಿರ್ಮಾಣ ಮತ್ತು ಶಿಥಿಲಗೊಂಡಿರುವ ಕೋಣೆಗಳನ್ನು ತೆಗೆದು ಹೊಸಕೋಣೆಗಳ ನಿರ್ಮಾಣಕ್ಕೆ ಅನುದಾನದ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಬಗ್ಗೆ ಯೋಜನೆ ರೂಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ವೆಂಕೋಬ ಪಾಟೀಲ, ಉಪನ್ಯಾಸಕರಾದ ವೈ.ಹೆಚ್.ವಜ್ಜಲ,
ಭೀಮಪ್ಪ ಪೀರಾಪುರ, ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.