
ಶಹಾಪುರ : ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳು ೧೯೯೫ರ ನಂತರ ಸುಮಾರು ೨೮ವರ್ಷಗಳಿಂದಲೂ ಸರಕಾರದಿಂದ ಯಾವುದೇ ಅನುದಾನವನ್ನು ಪಡೆಯದೆ ಕನ್ನಡದ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧನೆಯನ್ನು ಮಾಡುತ್ತಾ ಬಂದಿದ್ದು, ಪ್ರಸ್ತುತ ಸಮಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಅನೇಕ ಅನಧಿಕೃತ ಕೋಚಿಂಗ್ ಸೆಂಟರ್ ಹಾವಳಿಯಿಂದ ಮತ್ತು ಇಂಗ್ಲೀಷ್ ಮಾಧ್ಯಮ ಶಾಲೆಗಳಿಂದ ನಲುಗಿವೆ. ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಪಾಠ ಬೋಧನೆಯನ್ನು ಮಾಡುವ ಶಿಕ್ಷಕರ ಉಳಿವಿಗಾಗಿ ಕೂಡಲೇ ಎಚ್ಚೆತ್ತುಕೊಂಡು ಸರ್ಕಾರವು ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ನೀಡಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂತಹ ಕೆಲಸ ಮಾಡಬೇಕಾಗಿದೆ.
ನಗರದಲ್ಲಿ ಸರ್ಕಾರದಿಂದ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಯಾವುದೇ ಅಧಿಕಾರಿಗಳ ಸೂಚನೆಗೆ ಮಣಿಯದೇ ಅನಧಿಕೃತವಾಗಿ ಕೋಚಿಂಗ್ ಶಾಲೆಗಳನ್ನು ನಡೆಸುತ್ತಿದ್ದು, ತಕ್ಷಣವೇ ಅಂತಹ ಶಾಲೆಗಳ ವಿರುದ್ಧ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲು ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರಿಗೆ ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು.ವನದುರ್ಗ ನೇತೃತ್ವದಲ್ಲಿ ತಾಲೂಕು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಸಂಘ ಹಾಗೂ ತಾಲೂಕ ಖಾಸಗಿ ಶಾಲಾ ಒಕ್ಕೂಟದಿಂದ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂಧಿಸಿದ ಸಚಿವರು, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಹಾಗೂ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಅನಧಿಕೃತ ಶಾಲೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಸ್ಥಗಿತಗೊಳಿಸಿ, ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಪರಿಶೀಲಿಸಿ, ಮಕ್ಕಳು ಇಲ್ಲದೆ ಹಾಜರಾತಿಯನ್ನು ನೀಡಿ ಸರ್ಕಾರಕ್ಕೆ ವಂಚಿಸುತ್ತಿರುವ ಮುಖ್ಯ ಶಿಕ್ಷಕರು ಮತ್ತು ಅದಕ್ಕೆ ಸಹಕರಿಸುತ್ತಿರುವವರು ಯಾರೆ ಇದ್ದರು ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.ಶಾಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಯಾರು ಕೂಡ ಅನಧಿಕೃತ ಶಾಲೆಗಳನ್ನು ನಡೆಸಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಶಾಲೆಗಳ ಸಂಘದ ಸಂಚಾಲಕ ಮಲ್ಲಿಕಾರ್ಜುನ ಪಾಟೀಲ, ಖಾಸಗಿ ಶಾಲಾ ಒಕ್ಕೂಟದ ಗೌರವಾಧ್ಯಕ್ಷ ಶರಣಗೌಡ ಪಾಟೀಲ, ಕಾರ್ಯದರ್ಶಿ ವಿ.ಸತ್ಯಂರೆಡ್ಡಿ, ಕನ್ನಡ ಮಾಧ್ಯಮ ಶಾಲೆಗಳ ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ, ಸಹ ಕಾರ್ಯದರ್ಶಿ ತಿಪ್ಪಣ್ಣ ಖ್ಯಾತನಾಳ, ಉಪಾಧ್ಯಕ್ಷ ವಾಯ್.ಎಂ.ಪಾಟೀಲ್, ಪ್ರವೀಣ ಫಿರಂಗಿ, ರಾಮು ಸಗರ, ಶರಣಗೌಡ ಗೋಗಿ, ಮೃತ್ಯುಂಜಯ, ಸಂಗನಬಸಪ್ಪ ದೊರಿ, ಚೆನ್ನಯ್ಯಸ್ವಾಮಿ, ಶಿವಶಂಕರ ಹೇರೂಂಡಿ, ಅಶೋಕ ಘನಾತೆ, ಮೂರ್ತಿ ಮುದ್ಗಲ್ ಶರಣಪ್ಪ ಜಂಗಂಡಿ, ಅರವಿಂದ ಕುಲ್ಕರ್ಣಿ, ಪ್ರದೀಪ ಪುರ್ಲೆ, ಚಂದ್ರು ಹೊಸ್ಮನಿ, ಹನುಮಂತರಾಯ ದೊರಿ, ಶಿವಶರಣಪ್ಪ ಪತ್ರಿ ಸೇರಿದಂತೆ ಖಾಸಗಿ ಶಾಲೆಗಳ ಒಕ್ಕೂಟದ ಪ್ರಮುಖರು ಇದ್ದರು.
