ಗುರುವೆಂಬ ಅರಿವಿನ ಸಾಕ್ಷಾತ್ಕಾರ

By admin

ಖ್ಯಾತ ಲೇಖಕರು:- ಡಾ.ಸಾಯಿಬಣ್ಣ ಮುಡಬೂಳ ಸಹಾಯಕ ಪ್ರಾಧ್ಯಾಪಕರು, ಪ್ರಭು ಪದವಿ‌ ಮಹಾವಿದ್ಯಾಲಯ ಸುರಪುರ

ಭಾರತ ಹಲವು ಹಬ್ಬ ಹರಿದಿನಗಳನ್ನು ಆಚರಿಸುವ ವೈವಿದ್ಯಮಯ ಜನಸಮುದಾಯಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಪ್ರತಿ ಸಮುದಾಯಗಳು ತಮ್ಮದೆಯಾದ ಮಹತ್ವಪೂರ್ಣವಾದ ಸಾಂಸ್ಕೃತಿಕ ಹೆಗ್ಗುರುತುಗಳನ್ನು ಗಾಢವಾಗಿ ಮೂಡಿಸಿವೆ. ಹಾಗಾಗಿ ಸಾಂಸ್ಕೃತಿಕ ಅನನ್ಯತೆಯು ಹಲವು ಆಚರಣೆಗಳ ಮೂಲಕ ಅನೇಕ ಸವಾಲುಗಳು ಮಧ್ಯೇಯು ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಇಂದಿನ ಆಧುನಿಕ ಸಮಾಜವು ಭರಾಟೆಗಳ ಮದ್ಯೆ ಜೀವಿಸಿತಿದ್ದರು ತಮ್ಮ ಸಂಪ್ರದಾಯ, ರೀತಿ, ನೀತಿ, ವಿಧಿವಿಧಾನಗಳನ್ನು ನಮ್ಮ ಸಾಂಸ್ಕೃತಿಕ ಇತಿಹಾಸ ಇಂದಿನ ಆಧುನಿಕ ಸಮಾಜಗಳ ಜೊತೆ ಮುಖಾ ಮುಖಿಯಾಗಿ ತನ್ನ ಪ್ರಸ್ತುತತೆಯ ಔಚಿತ್ಯವನ್ನು ಜನಮಾನಸದಲ್ಲಿ ಮೂಡಿಸಿ ಗತಕಾಲದ ವೈಭವಗಳನ್ನು ನಿರಾತಂಕವಾಗಿ ಮುಂದುವರೆಯಲು ಸಾಧ್ಯವಾಗಿಸುತ್ತಿದೆ.ಹೀಗೆ ಈ ನೆಲದ ಪರಂಪರೆಯ ಕುರುಹುಗಳಾಗಿ ಅನೇಕ ಹಬ್ಬ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಅಂತಹ ಆಚರಣೆಗಳಲ್ಲಿ ಗುರುಪೂರ್ಣಿಮೆಯು ಒಂದು.

ಜಗತ್ತಿನ ಭೂಪಟದಲ್ಲಿ ಗುರು, ಶಿಕ್ಷಕ ಎನ್ನುವ ಸ್ಥಾನಕ್ಕೆ ಭಾರತದಲ್ಲಿ ಸಿಗುವಷ್ಟು ಗೌರವ, ಪ್ರೀತಿ ಆದರಗಳು ಬೇರೆಲ್ಲೂ ಸಿಗುವದಕ್ಕೆ ಸಾಧ್ಯವಿಲ್ಲ. ಪ್ರಪಂಚದ ಎಲ್ಲಡೆ ಗುರುವನ್ನು ವೃತ್ತಿಯಿಂದ ಮಾತ್ರ ಪರಿಗಣಿಸಿ ಅವರನ್ನು ಸತ್ಕರಸಿದರೆ ನಮ್ಮ ರಾಷ್ಟ್ರದಲ್ಲಿ ಗುರುವನ್ನು ಬಹುನೆಲೆಗಳಿಂದ ಗೌರವಿಸುವ, ಪೂಜಿಸುವ ಪರಿಪಾಠವಿದೆ. ಬದುಕಿನ ಪ್ರತಿ ಹಂತದಲ್ಲೂ ಗುರಿವಿನ ಮಾರ್ಗದರ್ಶನವನ್ನು ಪಡೆದು ಮುನ್ನುಗ್ಗುವ ಮನೋಧರ್ಮವನ್ನು ನಮ್ಮ ಸಮಾಜ ರೂಪಿಸಿದೆ. ವಿದ್ಯಾರ್ಥಿಗಳ ಸರ್ವಂಗಿಣ ಪ್ರಗತಿಯ ಗುರಿಯೆಡೆಗೆ ಕೊಂಡೋಯ್ಯುವದೆ ಶಿಕ್ಷಣದ ಮೂಲ ಮಂತ್ರವಾಗಿದೆ ಎನ್ನುವದೆ ಇಲ್ಲಿನ ಶಿಕ್ಷಕರ ಅಭಿಮತವಾಗಿದೆ.ಶಿಕ್ಷಣ ಎನ್ನುವದನ್ನು ಕೇವಲ ಕಲಿಕೆಗೆ ಸೀಮಿತಗೊಳಿಸದೆ, ಶಿಕ್ಷಣವು ಬಹುಮುಖಿ ಆಶಯಗಳನ್ನು ಈಡೇರಿಸು ಸಾಧನ ಎನ್ನುವ ನೆಲೆಯಲ್ಲಿ ಶಿಕ್ಷಣವನ್ನು ಪರಿಭಾವಿಸುವ ವಾತಾವರಣ ಇಲ್ಲಿರುವದು ಶಿಕ್ಷಣಕ್ಕೆ ನಮ್ಮ ಸಮಾಜ ನೀಡುವ ಪ್ರಾಧಾನ್ಯತೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳನ್ನು ಕಲಿಕಾರ್ಥಿಗಳು ಎನ್ನುವ ಪಾಶ್ಚಿಮಾತ್ಯ ಮನೋಸ್ಥಿತಿಗೂ ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಭವಿಷ್ಯತ್ತು ಎನ್ನುವ ಮನೋಧರ್ಮಕ್ಕೂ ಸಾಕಷ್ಟು ವ್ಯತ್ಯಾಸವಿರುವದು ನಾವು ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವ ಜಗಜ್ಜಾಹಿರಾಗುತ್ತದೆ. ಭಾರತದ ಶೈಕ್ಷಣಿಕ ವಲಯವು ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಸಮೃದ್ಧವಾಗಿ ಹರಡುವದರ ಮುಖೇನ ಜೀವಪರತೆಯನ್ನು ಮೆರದಿದೆ. ವಿದ್ಯಾರ್ಥಿ ಕೇಂದ್ರೀತ ಶಿಕ್ಷಣ ವ್ಯವಸ್ಥೆಯು ಸಮಾಜದಲ್ಲಿ ಹಲವು ಪರಿವರ್ತನೆಗಳನ್ನು ತಂದಿರುವದು ಸತ್ಯವಾದರೂ, ಈ ದೆಸೆಯಲ್ಲಿ ಇನ್ನು ಕೆಲವಾರು ಬದಲಾವಣೆಗಳಾಗಬೇಕಿದೆ.ವಿದ್ಯಾರ್ಥಿಗಳ ಸುಧಾರಣೆಗಾಗಿ ತಮ್ಮ ಸೇವೆಯನ್ನು ಮಿಸಲಿಟ್ಟು ಈ ವರ್ಗವನ್ನು ಮುಖ್ಯವಾಹಿನಿಯಲ್ಲಿ ಕರೆತರಲು ಸಾರ್ಥಕ ಶ್ರಮವನ್ನು ವಿನಿಯೋಗಿಸುವ ಗುರುವೃಂದವನ್ನು ನೆನೆಯಲು ಇದೊಂದು ಔಪಚಾರಿಕವಾದ ಅವಕಾಶ. ವಿದ್ಯಾರ್ಥಿ ಸಮೂಹದ ಸಮಗ್ರ ಬೆಳವಣಿಗೆ ಹಂಬಲಿಸುವ ಗುರುವಿನ ನಿಸ್ವಾರ್ಥ ಸೇವೆಗಾಗಿ ಮಿಸಲಿಡುವ ದಿನವಾಗಿ ಇಂದು ದೇಶಾದ್ಯಂತ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ.

ಈ ಆಚರಣೆಯ ಮೂಲಕ ಗುರುವಿನ ಬಹುಮುಖಿ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುವದು. ಈ ನಿಟ್ಟಿನಲ್ಲಿ ಇನ್ನು ಕ್ರೀಯಾತ್ಮಕವಾಗಿ ಶಿಕ್ಷಕ ವರ್ಗ ವಿದ್ಯಾರ್ಥಿಗಳ ಸಂವರ್ಧನೆಗಾಗಿ ತೊಡಗಿಕೊಳ್ಳಬೇಕಾದ ಅವಶ್ಯಕತೆಯಿದೆ. ಗುರು ಎನ್ನುವ ಭಾವವನ್ನು ಸಮಾಜ ಸಂದೇಶ, ಮಾಹಿತಿಯನ್ನು ತುಂಬಬಲ್ಲ ಔಪಚಾರಿಕ ವೃತ್ತಿಕಾರ ಎನ್ನುವ ಗ್ರಹಿಕೆಯನ್ನು ವಿಶಾಲವಾಗಿಸಿ, ಗುರು ಎಂದರೆ ಸದ್ಭಾವ, ಬದುಕಿಗೆ ಅರಿವನ್ನು ತರುವ ಸಾಕ್ಷಾತ್ಕಾರವೆನ್ನುವ ಎಂಬ ನೆಲೆಯಲ್ಲಿಪರಿಭಾವಿಸಬೇಕಾದ ಅಗತ್ಯತೆಯಿದೆ. ಭಾರತೀಯ ಸಂಧರ್ಭದ ಪಾರಂಪರಿಕ ಚರಿತ್ರೆಯನ್ನು ಗಮನಿಸಿದಾಗ ವಿವಿಧ ಕಾಲಘಟ್ಟಗಳಲ್ಲಿ ಗುರು ತನ್ನತೆಯಾದ ಔಚಿತ್ಯ ಮತ್ತು ಪ್ರಾಮುಖ್ಯತೆಯನ್ನು ಸಂಪಾದಿಸುತ್ತ ಬಂದಿದ್ದಾನೆ. ಗುರು, ಶಿಕ್ಷಕ, ಮೇಸ್ಟ್ರು, ಎಂಬ ಪರ್ಯಾಯ ಹೆಸರುಗಳಿಂದ ಗುರುತಿಸುವ ಈ ವರ್ಗ ಸಮಾಜವನ್ನು ತಿಳಿವಿನ ಕಡೆ ಕೊಂಡೋಯ್ಯುವ ಕಾರ್ಯಸುಚಿಯ ಮುಖೇನ ತಮ್ಮನ್ನ ತೆಯ್ದುಕೊಂಡಿದ್ದಾರೆ.ಬದುಕಿನ ಅಂಧಕಾರವನ್ನು ಕಳೆಯುವ ಜ್ಞಾನಜ್ಯೋತಿಯಾಗಿ ಗುರು ಕಂಡು ಬರುವನು. ಮೌಲ್ಯಾಧಾರಿತ ಬದುಕನ್ನು ನಿರ್ಮಿಸಿಕೊಳ್ಳಲು ಗುರುವಿನ ವಿಚಾರಮಾಲಿಕೆ ಅತ್ಯಗತ್ಯ ವಾಗಿದೆ. ಪುರಾಣ, ಪುಣ್ಯಕಥೆ, ಧರ್ಮಗ್ರಂಥಗಳಲ್ಲಿ ಗುರುವಿನ ಅಗಾಧವಾದ ಜ್ಞಾನದ ಉಲ್ಲೇಖಗಳಿವೆ. ವಿವೇಕದ ಮೂಲಕ ಸಾಮಾಜಿಕ ಪ್ರಜ್ಞೆಯನ್ನು, ಸಾತ್ವಿಕ ತಾತ್ವಿಕವಾದ ಗುಣಹಂದರವನ್ನು ವಿದ್ಯಾರ್ಥಿಗಳಲ್ಲಿ ಆವಿರ್ಭವಿಸುವಂತೆ ಮಾಡಿ ಮೌಲಿಕವಾದ, ಆದರ್ಶವಾದ ಸಾಮಾಜಿಕ ಸಂರಚನೆಗೆ ತನ್ನನ್ನು ಒಡ್ಡಿಕೊಳ್ಳುವ ಗುರು ಅಪ್ರತಿಮವಾದ ಸಾಮಾಜಿಕ ಚಿಂತಕನಾಗಿಯು ಕಂಡು ಬರುವದರಲ್ಲಿ ಯಾವುದೆ ಅನುಮಾನಗಳಿಲ್ಲವೆಂದು ಪೂರ್ಣ ಚಿತ್ತದಿಂದ ಒಪ್ಪಿಕೊಳ್ಳಬಹುದು. ಗುರುವೆಂದರೆ ತಿದ್ದುವ ತಿಡುವ ಮಿತಿಯಲ್ಲಿ ಗುರ್ತಿಸಿಕೊಳ್ಳದೆ, ಸಮಗ್ರ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಬೇಕಾಗುವ ಗುಣಮಟ್ಟದ ತಿಳಿವಿನ ಹರಿವನ್ನು ಪೋರೈಸುವ ಮಹಾನ್ ಬುಗ್ಗೆಯಾಗಿದ್ದು, ಆ ಮೂಲಕ ವಿದ್ಯಾರ್ಥಿ ಸಮೂಹವನ್ನು ಅರಿವಿನ ಕ್ಷಿತಿಜದ ಕಡೆ ಕರೆ ತರುವ ಜ್ಞಾನವಾಹಿನಿಯಾಗಿದ್ದಾನೆ.ಕತ್ತಲಿನಿಂದ ಬೆಳಕಿನಡೆಗೆ, ಅಗೋಚರದಿಂದ ಗೋಚರದೆಡೆಗೆ, ಪ್ರಮಾದದಿಂದ ಸರಿಯೇಡೆಗೆ ತಂದು ನಿಲ್ಲಿಸುವ ಗುರುವು ಸತ್ಯ ಮಿಥ್ಯೇಗಳನ್ನು ತೌಲನಿಕವಾಗಿ ನಿಜ ಜೀವನ ದರ್ಶನ ಮಾಡಿಸಿವ ಜ್ಞಾನಯೋಗಿಯಾಗಿದ್ದಾನೆ. ಅಕ್ಷರದ ಮೂಲಕ ಸರ್ವವನ್ನು ಗ್ರಹಿಸುಬಹುದೇನ್ನುವ ದೋಷಪೂರಿತ ಚಿಂತನೆಯನ್ನು ಬದಿಗೆ ಸರಿಸಿ, ಅಕ್ಷರವು ಪಜ್ಞೆಯನ್ನು, ವಿವೇಕವನ್ನ, ಅರಿವನ್ನು ಶೇಖರಿಸಿಕೊಂಡ ಕಲಿಕಾ ಮಾಧ್ಯಮವಾಗಿದ್ದು, ಇಂತಹ ಉದಾತ್ತ ಮೌಲ್ಯಗಳನ್ನು ಗರ್ಭಿಕರಿಸಿಕೊಂಡ ವಿದ್ಯಾರ್ಥಿಗಳು ಸಾಮಾಜಿಕ ಸಂಪತ್ತಾಗಿ ರೂಪುಗೊಂಡು ಸಮಾಜಕ್ಕೆ ವರದಾನವಾಗುತ್ತಾರೆ.ಕೇವಲ ಕಲಿಕೆಯ ನೆಲೆಯಲ್ಲಿ ಅಕ್ಷರವನ್ನು ಅಂತರ್ಗತವಾಗಿಸಿಕೊಂಡರೆ ಅವರು ಅಕ್ಷರಿಗಳಾಗಿ ಮಾತ್ರ ಅವರು ತಮ್ಮನ್ನು ತೊರ್ಪಡಿಸಿಕೊಳ್ಳುವದರಿಂದ, ಅಂತಹ ಅಕ್ಷರಿ ವರ್ಗದಿಂದ ಸಮಾಜವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದು. ಗುರುವನ್ನು ಭಿನ್ನವಾಗಿ ಅವರವರ ಕಣ್ಣೋಟದಲ್ಲಿ ವ್ಯಾಖ್ಯಾನಿಸಿದರು, ಗುರುವೆಂದರೆ ಅರಿವನ್ನು ತರುವ ವಿವೇಕದ ಖಣಜ, ತಿಳಿಯನ್ನು ಸಾರವ ಜ್ಞಾನನಿಧಿಯಾಗಿದ್ದಾನೆ. ಸಮಕಾಲಿನ ಕಾಲಘಟ್ಟದ ಯುವಸಮೂಹವು ಗುರುವನ್ನು, ಕಲಿಸುವ ವೃತ್ತಿಕಾರನ ದೆಸೆಯಲ್ಲಿ ಗ್ರಹಿಸದೆ, ಅವರೊರ್ವ ಜ್ಞಾನದ ಪ್ರತಿರೂಪ, ಅರಿವಿನ ಆಗರ, ವಿವೇಕದ ಮಹಾಮೊತ್ತ ಎನ್ನುವ ಬಹುನೆಲೆಯಲ್ಲಿ ಅವರನ್ನು ಎದುರುಗೊಂಡಾಗ ಮಾತ್ರ ಜೀವನ ಸಾಕ್ಷಾತ್ಕಾರದ ಒಳಮರ್ಮವನ್ನು ಅರಿಯಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ಅರಿಯಲು ಮಾರ್ಮಿಕವಾದ ಅಪ್ರತಿಮವಾದ ಜ್ಞಾನದ ಅವಶ್ಯಕತೆಯಿದೆ ಇದನ್ನು ಗುರುವಿನಿಂದ ಮಾತ್ರ ಈ ಪೃಥ್ವಿಯಲ್ಲಿ ಪಡೆಯಲು ಸಾಧ್ಯ. ಕಾರಣ ಗುರುವಿನ ಮಹತ್ವವನ್ನು ವಿದ್ಯಾರ್ಥಿ ಸಮೂಹ ಮತ್ತು ಸಮಕಾಲಿನ ಸಮಾಜ ಅರಿತಾಗ ಮಾತ್ರ ಗುರುಪೂರ್ಣಿಮೆಯಂತಹ ಆಚರಣೆಗಳಿಗೆ ಮಹತ್ವ ಬರಲು ಸಾಧ್ಯ.