ಯುವ ನಿಧಿ ನೋಂದಣಿ ಗುರಿ ಸಾಧಿಸಿ; ಡಿಸಿ ಸುಶೀಲಾ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿನ ಯುವ ನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನೋಂದಣಿ ಮಾಡಿ ಗುರಿ ಸಾಧಿಸಿ, ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯುವನಿಧಿ ಯೋಜನೆಯ ನೋಂದಣಿ ಕುರಿತು ಯೋಜನೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಇಲ್ಲಿಯವರೆಗೆ 4678 ಫಲಾನುಭವಿಗಳು ನೋಂದಣಿಯಾಗಿದ್ದು, ಇದರಲ್ಲಿ 4830 ಫಲಾನುಭವಿಗಳಿಗೆ ಪುನರಾವರ್ತನೆ ಒಳಗೊಂಡಂತೆ ನೇರ ನಗದು ಡಿಬಿಟಿ ಮೂಲಕ ಜನೇವರಿ ತಿಂಗಳಿಂದ ಮೇ ತಿಂಗಳವರೆಗೆ 1,44,73, 500 ರೂ.ಜಮಾ ಆಗಿರುತ್ತದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2022-23ರಲ್ಲಿ ಪದವಿ, ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಪಟ್ಟ ಆಧಿಕಾರಿಗಳಿಗೆ ನೀಡುವಂತೆ ತಿಳಿಸಿ, ಜಿಲ್ಲೆಯ ಅರ್ಹ ಎಲ್ಲಾ ಪದವಿ, ಡಿಪ್ಲೋಮಾ ಪದವೀಧರರು ಸರ್ಕಾರದ ಯೋಜನೆಯ ನೆರವು ಪಡೆಯುವಂತೆ ತಿಳಿಸಿದರು.
ಜಿಲ್ಲಾಮಟ್ಟದ ವ್ಯಾಪ್ತಿಯಲ್ಲಿ ಇರುವ ಐಟಿಐ ತರಬೇತಿಗಾಗಿ ಪ್ರವೇಶ ಪಡೆಯುವುದಕ್ಕೆ ಐಟಿಐ ಕಾಲೇಜುಗಳ ಪ್ರಾಚಾರ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.
ಕಡೆಚೂರಿನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದ ಬಗ್ಗೆ ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಮಾಡಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಈ ಕೇಂದ್ರವು 2021 ರಲ್ಲಿ ಪ್ರಾರಂಭವಾಗಿ ಒಟ್ಟು 250 ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷದಲ್ಲಿ ಹೊಸ ಕೋರ್ಸ್ ಪ್ರಾರಂಭವಾಗಿದ್ದು, ಬಾಕಿ ಉಳಿದ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಂಬAಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಒಟ್ಟು 31 ಐಟಿಐ, 05 ಪಾಲಿಟೆಕ್ನಿಕ್, 01 ಇಂಜಿನಿಯರಿAಗ್ ಕಾಲೇಜ್ ಮತ್ತು 71 ಪದವಿ ಕಾಲೇಜುಗಳಿದ್ದು ಈ ಸಂಸ್ಥೆಗಳಲ್ಲಿ 2022-23 ರಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಸಂಪರ್ಕಿಸಿ, ಯೋಜನೆಯ ಬಗ್ಗೆ ಮಾಹಿತಿ ನೀಡಿ ಯೋಜನೆಯ ನೋಂದಣಿ ಕುರಿತಂತೆ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿನ ಕಾಲೇಜುಗಳಿಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾದ ಅಂಕಪಟ್ಟಿಗಳ ವಿತರಣೆಯಲ್ಲಿ ಸಮಸ್ಯೆಗಳನ್ನು ಕಂಡುಬರುತ್ತಿದ್ದು, ಈ ಸಮಸ್ಯೆ ಬಗ್ಗೆ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜಹೀರ್ ಅಹ್ಮದ್, ಜಿಲ್ಲಾ ಉದ್ಯೋಗಾಧಿಕಾರಿ ಪ್ರಭಾಕರ್ ವಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಬಸಪ್ಪ ಎಸ್ ತಳವಾಡಿ, ಕಡೆಚೂರ ಜಿಟಿಟಿಸಿ ಪ್ರಾಚಾರ್ಯ ಅನಿಲಕುಮಾರ, ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ, ಪ್ರಭಾರಿ ಡಿಡಿಪಿಐ ಬಸನಗೌಡ ಆಲ್ದಾಳ, ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ, ಎಲ್‌ಕೆಇಟಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಜಿ.ಎಮ್ ವಿಶ್ವಕರ್ಮ, ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.