
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಸೌಲಭ್ಯಗಳ ಕೊರತೆಯನ್ನು ದೂರುವುದು ನೆಪವೇ ಹೊರತು ಅದು ಸಾಧಕನ ತಪ್ಪಲ್ಲ.ಬದುಕಿಗೆ ಎಂದಿಗೂ ವಿರಾಮ ನೀಡಬೇಡಿ.ನಿಮ್ಮ ಸಾಧನೆಯ ಬದುಕಿನ ಬಾಗಿಲು ಮುಚ್ಚಿಡುವುದು ಬೇಡ. ಒಂದು ಬಾಗಿಲು ಮುಚ್ಚಿದರು ಬೇರೊಂದು ಬಾಗಿಲು ತೆರೆದು ನಡೆಯಿರಿ. ಗ್ರಾಮೀಣ ಮಕ್ಕಳಿಗೂ ಕನಸಿವೆ. ಆದರೆ ಆ ಕನಸು ಇಲ್ಲಗಳ ಮಧ್ಯೆ ಸೊರಗದೆ ಇಲ್ಲಗಳೆ ನಿಮ್ಮ ಸಾಧನೆಯ ಮೆಟ್ಟಿಲು ಮಾಡಿಕೊಂಡು ಸಾಧಿಸಬೇಕು ಎಂದು ಸಾಂಸ್ಕೃತಿಕ ಚಿಂತಕಿ, ಲೇಖಕಿ ಡಾ.ಶೈಲಜಾ ಬಾಗೇವಾಡಿ ಹೇಳಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ ಮತ್ತು ೨೦೨೪-೨೫ ನೇ ಸಾಲಿನ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಲ್ಯಾಣ ಭಾಗ ಶಿಕ್ಷಣ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದೊಡ್ಡ ಕೊಡುಗೆ ಇದೆ. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ಶ್ರೀವಿಜಯ ಬರೆದದ್ದು ಕಲಬುರಗಿಯ ಸೇಡಂ ತಾಲೂಕಿನ ಈಗಿನ ಮಳಖೇಡದಲ್ಲಿ. ಸಮಾನತೆಯ ಸಂದೇಶ ಸಾರಿದ್ದು ನಮ್ಮ ಕಲ್ಯಾಣ ಎಂದು ಹೆಮ್ಮೆ ಪಡಿ. ಎಂದಿಗೂ ಹಿಂದುಳಿದವರು ಎಂದು ಅಂದುಕೊಳ್ಳಬೇಡಿ ಎಂದು ಹೇಳಿದರು.
ಎಡಿಸಿ ಶರಣಬಸಪ್ಪ ಕೋಟೆಪ್ಪಗೋಳ್ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ,ಹಸಿದ ಹೊಟ್ಟೆಯಲ್ಲಿ ಇದ್ದುಕೊಂಡು ಈ ಜಗತ್ತಿನಲ್ಲಿ ಸಾಧಕರಾಗಿದ್ದಾರೆ. ಪಠ್ಯ ಪುಸ್ತಕ ಓದುವುದು ಮಾತ್ರ ವಿದ್ಯೆಯಲ್ಲ, ಹೊರಗಿನಿಂದ ಕಲಿಯುವುದು ವಿದ್ಯೆಯಲ್ಲ, ನಮ್ಮೋಳಗಿನ ಪ್ರತಿಭೆ ಮತ್ತು ಜ್ಞಾನ ಹೊರಹಾಕಿ ಜಗತ್ತಿಗೆ ಪರಿಚಯಿಸುವುದು ನಿಜವಾದ ವಿದ್ಯೆ. ಜಗತ್ತು ಒಂದು ಅಕ್ಷಯ ಪಾತ್ರೆಯಿದ್ದಂತೆ, ಇಲ್ಲಿ ಬೇಕಾದ್ದನ್ನು ಪಡೆಯುವ ಶಕ್ತಿ ಬೆಳಸಿಕೊಳ್ಳಬೇಕು. ಅದಕ್ಕಾಗಿ ಕಠಿಣ ಅಭ್ಯಾಸದ ಅಗತ್ಯವಿದೆ ಎಂದರು
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಶಾಂಭವಿಮಾತಾ ಚಿಕ್ಕಮಠದ ಪೀಠಾಧಿಪತಿಗಳಾದ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ ವಿದ್ಯಾರ್ಥಿಗಳು ತಮ್ಮ ಬದುಕಿನ ಆರಂಭದ ಇಪ್ಪತ್ತೈದು ವರ್ಷಗಳನ್ನು ಜ್ಞಾನಾರ್ಜನೆಗೆ ಮಾತ್ರ ಮೀಸಲಿಡಬೇಕು. ನಂತರದ ಜೀವನದಲ್ಲಿಯೂ ವಿದ್ಯಾರ್ಥಿಯಾಗಿಯೇ ಇರಬೇಕು ಹೊರತು ಪರೀಕ್ಷಾರ್ಥಿಯಾಗಿ ಬದುಕಲು ಪ್ರಯತ್ನಿಸಬಾರದು ಕಾರಣ ಭವ್ಯ ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶಿಕ್ಷಕಿ ಸಂಗೀತಾ ದೇಸಾಯಿ ಮಾತನಾಡಿದರು, ಮಲ್ಲಿಕಾರ್ಜುನ ಮೇಟಿ ಅಧ್ಯಕ್ಷತೆವಹಿಸಿದ್ದರು, ಮುಖ್ಯಗುರು ಪ್ರಕಾಶ ಬಳ್ಳಾರಿ ಪ್ರಾಂಶುಪಾಲ ಮಹೇಶ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು.
