
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ತಾಲ್ಲೂಕಿನ ಸೈದಾಪೂರ ಗ್ರಾಮದ ಮಹಾವೀರ ಜೈನ್ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕನ ವಿರುದ್ಧ ಅಷ್ಟೇ ಅಲ್ಲ ಶಾಲಾ ಆಡಳಿತ ಮಂಡಳಿ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು ಶಾಲೆಯನ್ನು ಮುಚ್ಚಿಸಬೇಕು ಮತ್ತು ಪ್ರಕರಣದ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಇಡಿ ಪ್ರಕರಣದಲ್ಲಿ ಕೇವಲ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡರೆ ಸಾಲದು ಈ ಘಟನೆಗೆ ಶಾಲಾ ಆಡಳಿತ ಮಂಡಳಿಯೂ ಪರೋಕ್ಷವಾಗಿ ಹೊಣೆಯಾಗಿದ್ದು, ತಕ್ಷಣ ಕಠಿಣ ಕ್ರಮ ಜರುಗಿಸಬೇಕು ಶಾಲೆಯ ಅನುಮತಿ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಾಲಕನಿಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯವಾಗಿದ್ದು, ಘಟನೆ ನಡೆದು ನಾಲ್ಕು ದಿನಗಳಾದರೂ ಆಡಳಿತ ಮಂಡಳಿ ವಿಳಂಬ ಮಾಡಿ ಮುಚ್ಚಿ ಹಾಕಲು ಯತ್ನಿಸಿದ್ದು, ಮಕ್ಕಳ ಆಯೋಗ ಪ್ರವೇಶ ಮಾಡಿದ ನಂತರ ಶಿಕ್ಷಣಾಧಿಕಾರಿಗಳು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದರೆ ಅಧಿಕಾರಿಗಳ ಬೇಜವಬ್ದಾರಿತನ ಎಷ್ಟು ಎಂದು ಎತ್ತಿ ತೋರಿಸುತ್ತದೆ. ಡಿಡಿಪಿಐ ಅವರು ಸಂಪೂರ್ಣ ವಿಫಲರಾಗಿದ್ದು ಅವರನ್ನು ತಕ್ಷಣ ಎತ್ತಂಗಡಿ ಮಾಡಬೇಕೆಂದು ಅವರು ಒತ್ತಾಯಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ಆಗಲು ಕಠಿಣ ಕ್ರಮ ಅಗತ್ಯ ಎಂದ ಅವರು, ಇದರ ಜೊತೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಂಡು ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿನ ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಿ ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಂಡು ಆ ಶಾಲೆಯನ್ನು ಮುಚ್ಚಿ ಕಠಿಣ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಇಲಾಖೆ ವಿರುದ್ಧವೂ ಹೋರಾಟ ರೂಪಿಸಲಾಗುವುದು ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ಸಾಹೇಬಗೌಡ ನಾಯಕ, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ಸುರೇಶ ಬೆಳಗುಂದಿ, ಕಾಶಿನಾಥ ನಾನೇಕ ಎಚ್ಚರಿಸಿದ್ದಾರೆ.
