
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಪೂರ್ವಭಾವಿ ಸಭೆ
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಇದೇ ಸೆಪ್ಟೆಂಬರ್ 17 ರಂದು ನಡೆಯುವ ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ಉತ್ಸವ ದಿನಾಚರಣೆಯನ್ನು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣ-ವಿಜೃಂಭಣೆಯಿಂದ ಆಚರಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಕಾರ್ಯಕ್ರಮವು ಜಿಲ್ಲಾ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಬೇಕು.ಅಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೈದಾನದ ಸ್ವಚ್ಛತೆ, ಕುಡಿಯುವ ನೀರು, ಅಲ್ಪೋಪಹಾರ, ವೇದಿಕೆ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು.
ಅಂದು ಬೆಳಿಗ್ಗೆ ಜಿಲ್ಲಾಡಳಿತ ವತಿಯಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ತಪ್ಪದೇ ಭಾಗವಹಿಸಬೇಕು. ಪೋಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿ ಶಾಮಕದಳ ಸೇರಿದಂತೆ ಕವಾಯತು ತಂಡಗಳನ್ನು ರಚಿಸಿ ಸೂಕ್ತಕ್ರಮ ಕೈಗೊಳ್ಳಬೇಕು. ಶಿಷ್ಠಾಚಾರದಂತೆ ಅತಿಥಿಗಣ್ಯರನ್ನು ಆಹ್ವಾನಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಧ್ವಜಾರೋಹಣ ನಡೆಯುವ ಮೈದಾನದ ಸುತ್ತಲೂ ಅವಶ್ಯಕತೆ ಇದ್ದಲ್ಲಿ ಬ್ಯಾರಿಕೇಡಿಂಗ್ ನಿರ್ಮಾಣ, ಶಿಷ್ಟಾಚಾರ ಪಾಲನೆ, ಸೂಕ್ತ ಪೊಲೀಸ್ ಬಂದೊಬಸ್ತ, ಅಗ್ನಿಶಾಮಕ ವಾಹನ, ಆರೋಗ್ಯ ಇಲಾಖೆಯಿಂದ ನುರಿತ ವೈದ್ಯರೊಂದಿಗೆ ಚಿಕಿತ್ಸಾ ವಾಹನ ಇರುವಂತೆ ನೋಡಿಕೊಳ್ಳಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಧ್ವಜಾರೋಹಣ ಹಿನ್ನಲೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ, ಧ್ವಜಾರೋಹಣ ಎಲ್ಲಾ ಸರ್ಕಾರಿ ಕಚೇರಿ ದೀಪಾಲಂಕಾರ ವ್ಯವಸ್ಥೆ, ಮತ್ತು ಇನ್ನಿತರ ಕುರಿತು ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿವಿಧ ಸರ್ಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಡಿವೈಎಸ್ಪಿ ಅರುಣಕುಮಾರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ವಿದ್ಯುತ್ ಜೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಾಯಕ ಇಲಾಖೆ ಉಪನಿರ್ದೇಶಕ ಪವನ, ಮುಖಂಡರಾದ ಶಂಕರ ಸೋನಾರ್, ಭೀಮು ಪೂಜಾರಿ, ಶ್ರೀದೇವಿ ಕಟ್ಟಿಮನಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
