
ರಾಜ್ಯ ವಕ್ತಾರ ಎಚ್. ವೆಂಕಟೇಶ ದೊಡ್ಡೇರಿ ಆಗ್ರಹ
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ರಸ್ಟ್ಗೆ ನೋಂದಣಿ ಮಾಡಿಸಿಕೊಂಡ ಒಂದೇ ತಿಂಗಳಲ್ಲಿಯೇ 5 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡು ಅಧಿಕಾರದ ಸ್ಪಷ್ಟ ದುರುಪಯೋಗ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಹೆಚ್.ವೆಂಕಟೇಶ ದೊಡ್ಡೇರಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ‘ಪಾಲಿಭಾಷೆ ಕಲಿಸುವುದಾಗಿ 19 ಎಕರೆ ಜಾಗವನ್ನು ಪಡೆದುಕೊಂಡಿದ್ದಾರೆ. ಆದರೆ ಎಷ್ಟು ಜನರಿಗೆ ಪಾಲಿ ಭಾಷೆ ಕಲಿಸೀರಿ, ಎಷ್ಟು ಜನರಿಗೆ ನೌಕರಿ ನೀಡಿದ್ದೀರಿ ಎಂದು ಪ್ರಶ್ನಿಸಿದ ಅವರು ನೀವು ಏನೂ ಮಾಡಿಲ್ಲ’ ಮಾಡಿದ್ದೆಲ್ಲ ಸ್ವಾಹ ಎಂಬರ್ಥದಲ್ಲಿ ದೂರಿದರು.
ಒಂದು ಕಡೆ ಕಾಂಗ್ರೆಸ್ ಪಕ್ಷದ ಲೋಕಸಭೆ ವಿಪಕ್ಷ ನಾಯಕ ರಾಹುಲ ಗಾಂಧಿ ವಿದೇಶಕ್ಕೆ ತೆರಳಿ ಅಲ್ಲಿ ಸಂವಿಧಾನದ ಬದಲಾವಣೆ ಮಾತನಾಡಿ ಮೀಸಲಾತಿ ರದ್ದತಿ ಮಾತನಾಡಿರುವುದು ಅಕ್ಷಮ್ಯ, ವಿದೇಶದಲ್ಲಿ ಕುಳಿತು ದೇಶದ ಬಗ್ಗೆ ಹಗುರವಾಗಿ ಮಾತನಾಡಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬಂದ ಮೇಲೆ ಜನಾದೇಶಕ್ಕೆ ನಾವು ಗೌರವ ನೀಡಿ ವಿಪಕ್ಷ ಸ್ಥಾನದಲ್ಲಿ ಕುಳಿತಿದ್ದೇವೆ ಆದರೆ ಆಡಳಿತ ಪಕ್ಷದಲ್ಲಿ ಕುಳಿತ ಕಾಂಗ್ರೆಸ್ ವರ್ಷದಲ್ಲಿಯೇ ಸಾಲು ಸಾಲು ಹಗರಣ ಮಾಡಿ ಕೋಟ್ಯಂತರ ರೂ. ದರೋಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಡಾ ಹಗರಣದಲ್ಲಿ ಸಾವಿರಾರು ಕೊಟಿ ರೂ.ಗಳು ಹಗರಣ ಸ್ವತಃ ಸಿಎಂ ಅವರೇ ಭಾಗಿಯಾಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸ್ವತಃ ಅಂದಿನ ಸಚಿವ ನಾಗೇಂದ್ರ ಕಿಂಗ್ ಪಿನ್ ಎಂದು ಇಡಿ ಆರೋಪ ಪಟ್ಟಿ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರದ ಎಸ್.ಐ.ಟಿ. ನಾಗೇಂದ್ರ ಪಾತ್ರವೇ ಇಲ್ಲ ಎಂದು ಕ್ಲೀನ್ ಚೀಟ್ ನೀಡಿ ನಗೆಪಾಟಲೀಗೀಡಾಗಿದೆಯಲ್ಲದೇ ಹಗರಣ ನಡೆದಿರುವುದನ್ನು ಮುಚ್ಚಿಹಾಕಲು ಎಸ್.ಐ.ಟಿ. ಬಳಸಿಕೊಂಡು ಯತ್ನಿಸಿರುವುದು ಬಹಿರಂಗವಾದAತಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಎಲ್ಲ ಪ್ರಕರಣಗಳಿಂದ ನೈತಿಕತೆ ಕಳೆದುಕೊಂಡಿರುವ ರಾಜ್ಯ ಸರ್ಕಾರ ವಿಶೇಷವಾಗಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ವೆಂಕಟಪ್ರಸಾದ್ ಮಾಲೆಪಾಟಿ,ಅಲೆಮಾರಿ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ನಗರಸಭೆ ಸದಸ್ಯ ಹಣಮಂತ ಇಟ್ಟಗಿ,ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಭೀಮಶಂಕರ ಬಿಲ್ಲವ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಹಾಗೂ ಸಿಹಿ ಸಂಚಾಲಕ ಚಂದ್ರಶೇಖರ ಕಡೆಸೂರ ಇದ್ದರು…..
