
ಒಂದು ವಾರದೊಳಗೆ ಪೊಲೀಸ್ ಠಾಣೆ ಉದ್ಘಾಟಿಸುವಂತೆ ಉಮೇಶ್ ಮುದ್ನಾಳ್ ಗಡವು
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಯಾದಗಿರಿ ನಗರದ ಹೃದಯಭಾಗದಲ್ಲಿರುವ ಪ್ರಮುಖ ವೃತ್ತ ಗಾಂಧಿ ಚೌಕ್ ನಲ್ಲಿ ಸುಮಾರು 1.65 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪೊಲೀಸ್ ಠಾಣೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕಚೇರಿ ಕಟ್ಟಡ ಕಾಮಗಾರಿ ಮುಗಿದು ಒಂದು ವರ್ಷ ಗತಿಸಿದ್ರು ಪೊಲೀಸ್ ಠಾಣೆ ಉದ್ಘಾಟಿಸಿಲ್ಲ. ಎಂಟು ತಿಂಗಳ ಹಿಂದೆಯೇ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಪೊಲೀಸ್ ವರಿಷ್ಟಾಧಿಕಾರಿಗೆ ಹಸ್ತಾಂತರ ಮಾಡಿದೆ. ಆದರೆ ಹಸ್ತಾಂತರವಾಗಿ ಎಂಟು ತಿಂಗಳ ಕಳೆದ್ರೂ ಪೊಲೀಸ್ ವರಿಷ್ಟಾಧಿಕಾರಿಗಳು ನೂತನ ಕಚೇರಿ ಕಟ್ಟಡ ಉದ್ಘಾಟನೆ ಗೋಜಿಗೆ ಹೋಗಿಲ್ಲ. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ಸಂಗೀತಾ ಅಧಿಕಾರ ಸ್ವೀಕರಿಸಿ ಇಲ್ಲಿಗೆ ಒಂದು ವರ್ಷ ಪೂರೈಸಿದೆ. ಆದರೆ ಈ ವರೆಗೂ ಸರ್ಕಾರದ ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದೂ ಚರ್ಚೆ ನಡೆಸುವ ಉಸಾಬರಿಗೂ ಹೋಗಿಲ್ಲ. ಹೀಗಾಗಿ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಟ್ಟಡ ಪುಂಡ ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೂಡಲೇ ಸರ್ಕಾರ ಕುಂಟು ನೆಪ ಹೇಳದೆ ಪೊಲೀಸ್ ಠಾಣೆ ಕಚೇರಿ ಉದ್ಘಾಟನೆ ಮಾಡಬೇಕು ಅಂತ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆಗ್ರಹ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ಮಾಡಿ ಮಾತನಾಡಿರುವ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಯಾದಗಿರಿ ಜಿಲ್ಲಾ ಕೇಂದ್ರವಾಗಿ 14 ವರ್ಷ ಕಳೆದ ಬಳಿಕ ನಿಜಾಮರ ಕಾಲದಲ್ಲಿ ನಿರ್ಮಿಸಿದ ಪೊಲೀಸ್ ಠಾಣೆ ಕಟ್ಟಡ ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಉದ್ಘಾಟನೆ ಮಾಡದಿರೋದು ದುರ್ದೈವದ ಸಂಗತಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಪೊಲೀಸರ ಸ್ಥಿತಿಯೇ ಕೈದಿಗಳ ಸ್ಥಿತಿಯಾಗಿದೆ. ಪೊಲೀಸ್ ಕ್ವಾಟರ್ಸ್ ನಲ್ಲಿ ಜಾಗೆ ಇಲ್ಲದಂತ್ತಾಗಿದೆ. ಹೀಗಾಗಿ ಕೂಡಲೇ ಉದ್ಘಾಟಿಸಿ ಕಚೇರಿ ಮಾಡಿಕೊಳ್ಳಿ, ಇಲ್ಲಾಂದ್ರೆ ಪೊಲೀಸ್ ಕ್ವಾಟರ್ಸ್ ಅಥವಾ ಬಾಡಿಗೆ ಕೊಟ್ಟರೆ ಬಾಡಿಗೆ ಹಣವಾದ್ರೂ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ. ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಗೆ ಗೃಹ ಸಚಿವರೇ ಬರಬೇಕಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ್ರೂ ಉದ್ಘಾಟಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ್ ಇಟಗಿ, ಬಾಬಾಖಾನ್, ಸಾಬಯ್ಯ, ವಿಶ್ವನಾಥ, ಭೀಮಶೆಪ್ಪ, ರಾಜು ಸೇರಿ ಹಲವರು ಉಪಸ್ಥಿತರಿದ್ದರು.
