
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಆರೋಪಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಜೊತೆ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ವೇದಿಕೆ ಹಂಚಿಕೊಂಡಿದ್ದನ್ನು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಖಂಡಿಸಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದಡೆ ಬಿಜೆಪಿ ಶಾಸಕ ಮುನಿರತ್ನ ಅವರನ್ನು ತಕ್ಷಣಕ್ಕೆ ಬಂಧಿಸುವ ರಾಜ್ಯ ಸರ್ಕಾರ, ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಮತ್ತು ಅವರ ಮಗನ ಮೇಲೆ ದೂರು ದಾಖಲಾಗಿ ಒಂದುವರೇ ತಿಂಗಳಾದರೂ ಬಂಧಿಸಿಲ್ಲ. ಇದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ಪರಶುರಾಮ ಸಾಯಿಯುವ ಮುಂಚೆ ಅವರ ಪತ್ನಿ ಎದುರಿಗೆ ತಮಗಾದ ಅನ್ಯಾಯ, ನೋವು ಮತ್ತು ಶಾಸಕರಿಂದ ಹಣದ ಒತ್ತಡದ ಬಗ್ಗೆ ಹೇಳಿದ್ದಾರೆ. ಆ ಪ್ರಕಾರ ದೂರು ನೀಡಿದರೂ ತನಿಖೆ ಸರಿಯಾಗಿ ಆಗುತ್ತಿಲ್ಲ ಎಂದು ಅವರು ದೂರಿದರು.
ಈ ಘಟನೆಗೆ ಇಡಿ ರಾಜ್ಯದ ಪ್ರಜ್ಞಾವಂತ ಜನರು ವಿರೋಧ ಮಾಡಿದರೂ, ಏನು ಮಾಡೇ ಇಲ್ಲ ಎನ್ನುವಂತೇ ಶಾಸಕರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.
ಸಚಿವರು ಅವರನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಕದಲ್ಲಿ ಕೂಡಿಸಿಕೊಳ್ಳುತ್ತಾರೆಂದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುವುದು ತಿಳಿಯುತ್ತದೆ ಎಂದು ರಾಜೀವ್ ವ್ಯಂಗ್ಯವಾಡಿದರು
ಸಾವಿನ ಪ್ರಕರಣದ ತನಿಖೆ ವೇಗವಾಗಿ ಮುಗಿಸಿ ಆ ಕುಟುಂಬಕ್ಕೆ ನ್ಯಾಯ ಕೊಡಬೇಕು, ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ೫ ಲಕ್ಷದ ಸದಸ್ಯತ್ವದ ಗುರಿ ಬಿಜೆಪಿ ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲಡೆ ಪಕ್ಷದ ಪದಾಧಿಕಾರಿಗಳು,ಪ್ರಮುಖರು ಕೆಲಸ ಮಾಡುತ್ತಿದ್ದಾರೆ. ಅದರ ಪರಿಶೀಲನೆಗೆ ತಾವು ಬಂದಿದ್ದಾಗಿ ಪಿ.ರಾಜೀವ್ ಹೇಳಿದರು.
ಅ.೨೫ ರವರೆಗೂ ಸದಸ್ಯತ್ವದ ನೊಂದಣಿ ನಡೆಯಲಿದೆ. ಇದಕ್ಕಾಗಿ ಇಂದು ಸಭೆ ನಡೆಸಿ ಮಾಡಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ,ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ,ಮುಖಂಡರಾದ ರಾಚಣ್ಣಗೌಡ ಮುದ್ನಾಳ, ಗುರು ಕಾಮಾ, ಪರಶುರಾಮ ಕುರಕುಂದಾ, ಮೇಲಪ್ಪ ಗುಳಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಬಸವರಾಜ ವಿಭೂತಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
