
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವಂತಹ ಯಾದಗಿರಿ ಜಿಲ್ಲೆ, ಸಂತ, ಶರಣರ ನಾಡಾಗಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾರತ ದೇಶದ ಗಮನ ಸೆಳೆದಿತ್ತು ಎಂದು ಹಿರಿಯ ಇತಿಹಾಸ ಸಂಶೋಧಕರು ಹಾಗೂ ನ್ಯಾಯ ವಾದಿ ಭಾಸ್ಕರಾವ್ ಮುಡಬೂಳ ಅವರು ಅಭಿಪ್ರಾಯಪಟ್ಟರು.
ನಗರದ ಲುಂಬಿನಿ ಉದ್ಯಾನವನ ಎದುರಿನ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ,ಜಿಲ್ಲಾ ಪ್ರವಾಸೋದ್ಯಮ ಸಮಿತಿ ಹಾಗೂ ಕಲಾನಿಕೇತನ ಟ್ರಸ್ಟ್, ಸಗರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಪ್ರವಾಸೋದ್ಯಮ ದಿನಾಚರಣೆ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಈ ಭಾಗದಲ್ಲಿ ಹಲವು ಸಂತ ಶರಣರು ಆಗಿಹೋಗಿದ್ದು, ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದಲ್ಲಿ ಸತ್ಯಕ್ರಾಂತಿ ಮಾಡಿದ್ದಾರೆ. ಅಂತಹವರ ಕುರಿತು ಸಂಶೋಧನೆ ನಡೆಯುವ ಅವಶ್ಯಕತೆ ಇದೆ. ಅದರಂತೆ ಗತವೈಭವ ಸಾರುವ ಹಲವು ಸ್ಮಾರಕಗಳು ಇಲ್ಲಿ ಇದ್ದು, ಪ್ರವಾಸೋದ್ಯಮ ಬೆಳವಣಿಗೆಗೆ ವಿಪುಲ ಅವಕಾಶವಿದೆ. ಕರ್ನಾಟಕ ದಲ್ಲಿಯೇ ಉತ್ತುಂಗದ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮ 1857 ರಲ್ಲಿ ಸುರಪುರ ಸಂಸ್ಥಾನಿಕರು ಬ್ರಿಟಿಷ್ ರ ವಿರುದ್ದ ಹೋರಾಡಿದ್ದಾರೆ. ಮೊಘಲ್ ದೊರೆ ಔರಂಗಜೇಬ ಕಾಲದಿಂದಲೂ ಸುರಪುರ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಇಲ್ಲಿಯ ಅತ್ಯಾಕರ್ಷಕ ಕಲೆ, ಟೈಲರ್ ಮಂಜಿಲ್,ಶಿರವಾಳ ಸ್ಮಾರಕಗಳು, ಬೋನಾಳ ಪಕ್ಷಿಧಾಮ, ವಿವಿಧ ದೇವಸ್ಥಾನ, ಕೋಟೆಗಳಿಂದ ಈ ಭಾಗ ಐತಿಹಾಸಿಕ ಮಹತ್ವ ಪಡೆದಿದ್ದು, ಕೈಬೀಸಿ ಕರೆಯುತ್ತಿವೆ, ಭವ್ಯ ಇತಿಹಾಸ ಸಾರಿಹೇಳುತ್ತಿವೆ. ವ್ಯಕ್ತಿತ್ವ ಬೆಳವಣಿಗೆಗೆ ಇತಿಹಾಸ, ಐತಿಹಾಸಿಕ ತಾಣಗಳ ಅಧ್ಯಯನ ಅತ್ಯವಶ್ಯಕವಾಗಿದ್ದು, ಈ ದಿಸೆಯಲ್ಲಿ ಈ ಭಾಗದ ನಾಗರಿಕರು ವಿಶೇಷ ಗಮನ ನೀಡಬೇಕೆಂದು ಹೇಳಿದರು.
ರಾಷ್ಟ್ರೀಯ ಐತಿಹಾಸಿಕ ಸ್ಮಾರಕಗಳ ರಕ್ಷಣೆಯಾಗಬೇಕು. ಪ್ರವಾಸೋದ್ಯಮ ದ ಅಭಿವೃದ್ಧಿಯಾಗಬೇಕು. ಸತ್ಯ ಶೋಧನೆ ನಡೆಯಬೇಕು.
ಜಾತಿ, ಮತ, ಪಂಥ ಬದಿಗೊತ್ತಿ ಶಾಂತಿ,ಸೌಹಾರ್ದತೆ ನೆಲೆಯೂರಬೇಕು. ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ಹೆಚ್ಚಿನ ಗಮನ ಇಂದು ನೀಡಬೇಕಾಗಿದೆ. ಶಾಂತಿ, ಸಾಮರಸ್ಯಕ್ಕೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಒತ್ತು ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಚುನಾವಣೆ ತಹಸೀಲ್ದಾರ ಸಂತೋಷ ರಾಣಿ ಅವರು ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಜೊತೆಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಅರಿವು ಮೂಡಿಸಲು ಕರೆ ನೀಡಿದರು.
ಪ್ರವಾಸೋದ್ಯಮ ಹಾಗೂ ಶಾಂತಿ, ಈ ದಿನಾಚರಣೆ ಯ ಸಂದೇಶವಾಗಿತ್ತು.ಲುಂಬಿನಿ ವನದಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ಉದ್ಘಾಟಿಸಲಾಯಿತು.ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕಿ ರುದ್ರಾಂಬಿಕಾ ಪಾಟೀಲ್,ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಪರಮೇಶ್ವರ ಉಪಸ್ಥಿತರಿದ್ದರು. ಬಸವರಾಜ ಸಿನ್ನೂರ್ ಕಾರ್ಯಕ್ರಮ ನಿರ್ವಹಿಸಿದರು.ಮಲ್ಲಿಕಾರ್ಜುನ ಶಹಾಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
