ಕನಕನೆಂಬ ಲೋಕಕಲ್ಯಾಣದ ಬೆಳಕು

By admin

 

ಭಾರತೀಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಧರ್ಭಗಳು ಲೋಕಕಲ್ಯಾಣದ ಮುಖವಾಣಿಯನ್ನು ಹೆರಳವಾಗಿಸಿಕೊಂಡಿವೆ. ಭಾರತೀಯ ಕಾವ್ಯ ಪರಂಪರೆಯು ಕಾವ್ಯ ಸೃಜಿಸುವಿಕೆಯಲ್ಲಿ ಲೋಕ ದೃಷ್ಟಿಯನ್ನು ಕೂಡಾ ಒಂದು ಕಾವ್ಯ ರಚನೆಯ ಮೂಲ ಸಾಮಗ್ರಿಯಾಗಿದೆ.ಸಾಮಾಜಿಕ ಸೂಕ್ಷ್ಮತೆಯ ಹಂಬಲದ ಕೆಲವು ಕಾವ್ಯ ಕೃಷಿಕಾರರು ಸಾಹಿತ್ಯವೆಂಬ ಸಾಗರದಲ್ಲಿ ತಮ್ಮನ್ನು ತೆಯ್ದುಕೊಂಡಿದ್ದರಿಂದ ಲೋಕನೀತಿಯ ಕಾವ್ಯಗಳು ಅವರಿಂದ ಅರ್ಥಪೂರ್ಣವಾಗಿ ನಿರೂಪಿತವಾಗಿರುವದಲ್ಲಿ ಯಾವುದೆ ಸಂಶಯಗಳಿಲ್ಲ. ಕನ್ನಡದ ಸಾಹಿತ್ಯಕ ಲೋಕವು ಇದರಿಂದ ಹೊರತಾಗಿಲ್ಲ. ಮಹತ್ತರವಾದ ಫಲಪ್ರದವಾದ ಜ್ಞಾನಾಮೃತದ ಹಂದರವೊಂದಿರುವ ಲೋಕಮಾನ್ಯ ಸೈದ್ಧಾಂತಿಕ ವಿಚಾರಮಾಲಿಕೆಯನ್ನು ಸಾಹಿತ್ಯದ ಕಕ್ಷೆಯೊಳಗೆ ತಂದು ವೈಚಾರಿಕ ಜಗತ್ತುನ್ನು ನಿರ್ಮಿಸಲು ಮೇಲ್ಪoಕ್ತಿ ಹಾಕಿ ಸಾಹಿತ್ಯದ ಮುಖೇನ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿ ಈ ನಿಟ್ಟಿನಲ್ಲಿ ಸಾರ್ಥಕ ಹೆಜ್ಜೆಗಳಟ್ಟವರು ಹಲವರು.ಇಂತಹ ಅನನ್ಯ ಜೀವನ್ಮುಖಿ ವ್ಯಕ್ತಿಗಳಲ್ಲಿ ಗಟ್ಟಿಯಾಗಿ ಕೇಳಿಬರುವ ಹೆಸರೆ ದಾಸಶ್ರೇಷ್ಠರಾದ ಕನಕದಾಸರದ್ದು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಾಮಾನ್ಯ ವ್ಯಕ್ತಿಯಾಗಿ ಜೀವಿಸಿ ಸಮಾಜದ ಶ್ರೇಯೋಭಿವೃದ್ಧಿಯಾಗಿ ಒಡ್ಡಿಕೊಂಡು ಈ ದೆಸೆಯಲ್ಲಿ ಪರಮೋಚ್ಚ ಗುಣಾತ್ಮಕ ಬದಲಾವಣೆಗಳನ್ನು ಹರಡಿದವರು ಕನಕದಾಸರು.ನಾಡು ಕಂಡ ಬಹುಬಗೆಯ ಸಾಮಾಜಿಕ ಸುಧಾರಕರಲ್ಲಿ ಕನಕರಿಗೆ ಅಗ್ರಸ್ಥಾನವಿದೆ. ಕನಕರು ಈ ನೆಲಕ್ಕೆ ನೀಡಿದ ಸಾಹಿತ್ಯಕ ಸಾಂಸ್ಕೃತಿಕ ಕೊಡುಗೆಗಳನ್ನು ಕೆಲವರು ನೀಲಿಗಣ್ಣಿನಿಂದ ಗ್ರಹಿಸುವ ಮನೋಭಾವವು ಕಳಚಬೇಕಿದೆ. ಕನಕರ ದುರದೃಷ್ಟಿ ಸಮಾಜದ ಐಕ್ಯತೆಗೆ ಸಾಮರಸ್ಯಗೆ ಪುಷ್ಟಿನೀಡುವಂತದ್ದಾಗಿದೆ. ಜಾತಿ ಧರ್ಮ, ಉಚ್ಚ, ನೀಚ, ಶ್ರೇಷ್ಠ, ಕನಿಷ್ಠ ಎನ್ನುವ ಮನುಷ್ಯ ಕಲ್ಯಾಣ ವಿರೋಧಿ ವ್ಯಸನವು ಇಡಿ ಸಮಾಜವನ್ನು ಬಿಡಿ ಬಿಡಿಯಾಗಿಸಿ ಅಂತಿಮವಾಗಿ ಮನುಷ್ಯ ವಿರೋಧಿಯಾಗಿ ತಳೆಯುವ ನಿಲುವು ಮಾನವತ್ವದ ದಹನವಾಗಿದೆ, ಇಂತಹ ಸನ್ನಿವೇಶಗಳು ಜನಸಮುದಾಯಗಳ ಸಹಜ ಬದುಕು ಮತ್ತು ಸಂತೋಷದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಉಂಟುಮಾಡುತ್ತವೆ ಎಂಬ ಸತ್ಯದ ಪ್ರತಿಪಾದನೆ ಕನಕದಾಸರು ಬಹಳ ಹಿಂದೆಯೆ ಮನಗಂಡಿದ್ದರು. ಜಾತಿ ಧರ್ಮಗಳು ಮನುಷ್ಯ ನಿರ್ಮಿತವಾದವು ಇವುಗಳಿಗೆ ದೈವಿಕ ಲೇಪನ ಸಲ್ಲ ಎನ್ನುವ ಸ್ಪಷ್ಟ ನಿಲುವನ್ನು ಹೊಂದಿದ್ದ ಕನಕರು ಜಾತಿಯನ್ನು ಕುರಿತು ಕಠೋರವಾಗಿ ತಮ್ಮ ಲೇಖನಿಯನ್ನುಹೀಗೆ ಬಳಸಿದ್ದಾರೆ. ಕುಲ ಕುಲವೆಂದು ಏಕೆ ಹೊಡೆದಾಡುವಿರಿ ನಿಮ್ಮ ಕುಲದ ನೆಲೆಯನೆನಾದರು ಬಲ್ಲಿರಾ ಎಂದು ನೇರವಾಗಿ ಈ ಪ್ರಕ್ರೀಯೆಯಲ್ಲಿ ತೊಡಗಿಕೊಂಡಿದ್ದವರನ್ನು ಪ್ರೆಶ್ನಿಸುತ್ತಾರೆ. ಜಾತಿಯ ಕಭಂದ ಬಾಹುಗಳು ಸಮುದಾಯಗಳ ಮಧ್ಯೆ ಕಂದಕವನ್ನು ಸೃಷ್ಟಿಸಿ, ಸಾಮರಸ್ಯ, ಪ್ರೀತಿಯಂತಹ ಅನೇಕ ಮೌಲಿಕವಾದ ಗುಣಗಳನ್ನು ಕಸಿದುಕೊಳ್ಳುತ್ತದೆ ಎಂಬ ಆಲೋಚನೆ ಕನಕರಲ್ಲಿತ್ತು. ಈ ಕಾರಣಕ್ಕಾಗಿ ಕನಕದಾಸರು ಇಂತಹ ಸಂಧರ್ಭಗಳನ್ನು ವಿರಳವಾಗಿಸುವಲ್ಲಿ ಅನೇಕ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುಖ್ಯವಾಗಿ ಸಾಹಿತ್ಯದ ಮೂಲಕ ಸಂಗೀತದೊಂದಿಗೆ ಕೀರ್ತನೆಗಳಲ್ಲಿ ಸಾಮಾಜಿಕ ಏರುಪೇರುಗಳನ್ನು ಸೇರಿಸಿ ಜನಜಾಗೃತಿಯನ್ನು ಕೈಗೊಂಡರು. ಕೀರ್ತನೆಗಳು ಕೂಡಾ ಸಾಹಿತ್ಯದಂತೆ ಜನಮನದ ಭಾವವಾಗಿದ್ದವು, ಇವುಗಳಿಗೆ ಸಂಗೀತದ ಸೌಗಂದವನ್ನು ನೀಡಿ ಮಾದುರ್ಯಯದ ಮುಖಾಂತರ ಜನಮನವನ್ನು ಪ್ರವೇಶಿಸುವ ಶಕ್ತಿಯಿದ್ದರಿಂದ ಈ ಮಾರ್ಗದ ಮುಖೇನ ಸಾಮಾಜಿಕ ಕಂದಕವನ್ನು ಮಿತಿಗೊಳಿಸುವ ಚಿಂತನೆಯನ್ನು ಕನಕರು ಹೊಂದಿದ್ದರು.ಕನಕರಿಂದ ಕನ್ನಡ ಸಾಹಿತ್ಯಲೋಕಕ್ಕೆ 316 ಕೀರ್ತನೆಗಳು ದೊರಕಿವೆ ಇನ್ನು ಅವರಿಂದ ರಚನೆಗೊಂಡ ಅನೇಕ ಕೀರ್ತನೆಗಳು ಅಲ್ಲಲ್ಲಿ ಚದುರಿಹೋಗಿರುವ ಸಂಭವವಿದ್ದು ಅವುಗಳನ್ನು ಒಟ್ಟುಗುಡಿಸುವ ಕಾರ್ಯಕ್ಕೆ ಸಾಹಿತ್ಯ ಲೋಕ ಅಣಿಯಾಗಬೇಕಿದೆ. ಕೀರ್ತನೆಗಳಲ್ಲದೆ ಸಾಹಿತ್ಯದ ಇತರೆ ಪ್ರಕಾರಗಳಾದ ಸುಳಾದಿ ಉಗಾಭೋಗಗಳನ್ನು ಸೃಜಿಸಿ ತಮ್ಮ ಸಾಹಿತ್ಯದ ಫಲವಂತಿಕೆಯನ್ನು ಜಗದ ಮುಂದಿರಿಸಿದ್ದಾರೆ ಕನಕದಾಸರು. ಸಾಮಾನ್ಯನಾದ ತಿಮ್ಮಪ್ಪನಾಯಕ ಎನ್ನುವ ವ್ಯಕ್ತಿ ಭಕ್ತಿ ಪರಂಪರೆಯ ಮಹಾಶಕ್ತಿಯಾಗಿ ರುಪುಗೊಂಡು, ಸಾಕ್ಷಾತ್ ಶ್ರೀ ಕೃಷ್ಣನನ್ನೆ ತನ್ನತ್ತ ತಿರುಗಿಸಿಕೊಂಡ ಅಪ್ರತಿಮ ಭಕ್ತ ಶ್ರೇಷ್ಠ ಕನಕದಾಸರ ಚರಿತ್ರೆ ಮೌಲ್ಯಯುತವಾದದ್ದು.15,16ನೆಯ ಶತಮಾನದದಲ್ಲಿ ಬರುವ ಹರಿದಾಸ ಪರಂಪರೆಯಲ್ಲಿ ಸುಮಾರು 250ಕ್ಕೂ ಹೆಚ್ಚು ದಾಸರಲ್ಲಿ ಕನಕರು ವಿಶೇಷರು ಏಕೆಂದರೆ 250 ಕ್ಕೂ ಮಿಗಿಲಾದ ಹರಿದಾಸರಲ್ಲಿ ಕನಕರೊಬ್ಬರೆ ಕೆಳವರ್ಗದವರು ಮತ್ತು ಕನ್ನಡಿಗರು. ಇವರ ಎಲ್ಲಾ ಸಾಹಿತ್ಯವು ಕನ್ನಡದಲ್ಲಿದೆ. ಇವರಿಂದ ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಿದ ಪ್ರಮುಖ ಕೊಡುಗೆಗಳೆಂದರೆ ನಳಚರಿತ್ರೆ, ಮೋಹನ ತರಂಗಿಣಿ, ರಾಮದಾನ್ಯ ಚರಿತ್ರೆ,ಹರಿಭಕ್ತಿಸಾರ ಮುಂತಾದವು. ಇವರ ಪ್ರತಿ ಕಾವ್ಯವು ಅನೇಕ ತಾತ್ವಿಕತೆಯ ಒಳನೋಟವನ್ನು ಹೊಂದಿದೆ, ಮತ್ತು ಜೀವನಾಮೃತವನ್ನು ಹೊಂದಿದೆ. ಬರಿ ಸಾಹಿತ್ಯದಡೆಯಷ್ಟೇ ತಮ್ಮ ತೊಡಗಿಸಿಕೊಳ್ಳುವಿಕೆ ಸೀಮಿತಗೊಳಿಸದೆ ಸಂಗೀತದಡೆಗೂ ತಮ್ಮ ಚಿತ್ತವನ್ನು ಹರಿಸಿ ಅದರಲ್ಲೂ ಕೂಡಾ ಅಪಾರವಾದ ಪ್ರಾವಿಣ್ಯತೆಯನ್ನು ಸಾಧಿಸಿದ್ದಾರೆ ಇದಕ್ಕೆ ಉದಾಹರಣೆಯಾಗಿ ಇವರಿಂದ 240 ಸಂಗೀತ ಸಂಯೋಜನೆಗಳು ಸೃಷ್ಟಿಗೊಂಡಿದ್ದು. 240 ಸಂಗೀತ ಸಂಯೋಜನೆಯನ್ನು ಸ್ವತ ತಾವೆ ಮಾಡಿ ತಮ್ಮ ಕೀರ್ತನೆಗಳನ್ನು, ಉಗಾಭೋಗ, ಸುಳಾದಿಗಳನ್ನು ಈ ಸಂಗೀತದ ವ್ಯಾಪ್ತಿಗೆ ತಂದಿದ್ದಾರೆ. ಇವರ 100 ಗೀತೆಗಳು ಕನ್ನಡದಲ್ಲಿ ಮತ್ತು 60 ಗೀತೆಗಳು ಇಂಗ್ಲಿಷ್ನ ಜನಪ್ರಿಯ ಪುಸ್ತಕಗಳಲ್ಲಿ ಪ್ರಕಟಗೊಂಡಿರುವದು ವಿಶೇಷವಾಗಿದೆ. ಹಾಗಾಗಿ ಕನಕರನ್ನು ಭಕ್ತಿಫoತದ ಶ್ರೇಷ್ಠರಷ್ಟೇ ಅಲ್ಲದೆ ಕರ್ನಾಟಕ ಸಂಗೀತದ ಎರಡನೆಯ ಜನಕರಾಗಿಯೂ ಪರಿಗಣಿಸಲಾಗುತ್ತದೆ. ಕರ್ನಾಟಕ ಸಂಗೀತಕ್ಕೆ ಹೊಸ ಸ್ವರೂಪವನ್ನು ನೀಡಿದ ಕೀರ್ತಿ ಕೂಡಾ ಖಂಡಿತವಾಗಿಯೂ ಕನಕದಾಸರಿಗೆ ಸಲ್ಲಲೆಬೇಕು. ಕನಕರು ತಮ್ಮ ಜೀವಿತಾವಧಿಯಲ್ಲಿ ಅಸಂಖ್ಯವಾದ ಜನಕಲ್ಯಾಣದ ಕಾರ್ಯಗಳಿಗೆ ಮುಖಾಮುಖಿಯಾದವರು. ಧಾರ್ಮಿಕ ಮೌಢ್ಯವು ಜಗತ್ತನ್ನು ಆಪತ್ತಿಗೆ ತಳ್ಳುತ್ತದೆ ಎಂದು ಮನಗಂಡಿದ್ದ ಕನಕರು ಧಾರ್ಮಿಕ ಕ್ರೀಯಾವಿಧಿಗಳು ಸರ್ವರನ್ನು ಒಳಗೊಂಡಾಗ ಮಾತ್ರ ಧಾರ್ಮಿಕ ಆಚರಣೆಗಳಿಗೆ ಮೌಲ್ಯ ಬರುತ್ತದೆ ಎಂದು ಅರಿತಿದ್ದರು.ಹಾಗಾಗಿ ಧಾರ್ಮಿಕ ಸುಧಾರಣೆಯು ಸಾಮಾಜಿಕ ಸುಧಾರಣೆಯ ಬಹುಮುಖ್ಯ ಅಂಶಗಳಲ್ಲಿ ಒಂದು ಎಂದು ನಂಬಿ ಈ ದೆಸೆಯಲ್ಲಿ ಧಾರ್ಮಿಕ ಕ್ಷೇತ್ರ ಪಕ್ವತೆಗೆ ತೆರೆದುಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿ ಅನೇಕ ಸಂದೇಶಗಳನ್ನು ನೀಡಿದ್ದಾರೆ. ಹೀಗೆ ಕನಕದಾಸರು ಬಹು ತರಹದಲ್ಲಿ ಸಾಮಾಜಿಕ ಸಂವರ್ಧನೆಗಾಗಿ ತಮ್ಮನ್ನು ಬಯಲುಗೊಳಿಸಿಕೊಂಡಿದ್ದಾರೆ. ಸಮಾಜದ ಉನ್ನತಿಕರಣಕ್ಕಾಗಿ ತಮ್ಮನ್ನು ಸಮರ್ಪಸಿಕೊಂಡಿದ್ದಾರೆ. ಇಂತಹ ಅನುಪಮವಾದ ಅನನ್ಯವಾದ ಸಾಮಾಜಿಕ ಜೀವಿಯ ಸಂದೇಶಗಳನ್ನು ಸಮಾಜ ವ್ಯಾಪಕವಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲಿಟ್ಟು ಪ್ರಗತಿಯತ್ತ ದಾವಿಸಬೇಕಾದ ಜರೂರು ಇದೆ.

-ಡಾ. ಸಾಯಿಬಣ್ಣ ಮುಡಬೂಳ.