ಭೂಗಳ್ಳರ ಪಾಲಾಗುತ್ತಿರುವ ಶಹಾಪುರದ ಮಾವಿನ ಕೆರೆ ?!

By admin

ಶಹಾಪುರ ನಗರದ ಜನತೆಯ ಕುಡಿಯುವ ನೀರಿಗೆ ಬವಣೆಯಾಗದಂತೆ ಸದಾ ಅಂತರ್ಜಲ ಒದಗಿಸುವ ಮಾವಿನ ಕೆರೆ ಭೂಗಳ್ಳರ ಪಾಲಾಗುತ್ತಿದೆ. ಮಳೆಗಾಲದಲ್ಲಿ ಬೆಟ್ಟಗಳಿಂದ ಹರಿದು ಬಂದು‌ ನೀರು ಸಂಗ್ರಹವಾಗುತ್ತದೆನೋ ಸರಿ. ಆದರೆ ಆ ನೀರು ಕೆರೆಯ ಅಂಗಳದಲ್ಲಿ ನಿಲ್ಲದಂತೆ ಕೆರೆಯ ಅಕ್ಕ ಪಕ್ಕದ ಹೊಲದವರು ಹಾಗೂ ಇಟ್ಟಂಗಿ ಭಟ್ಟಿಗೆ ಮಣ್ಣು ಸಂಗ್ರಹಿಸುವವರು ಕೆರೆಯ ಕೋಡಿ ನಿರ್ವಹಣೆಯ ಕಲ್ಲುಗಳನ್ನೇ ತೆಗೆದು ಹಾಕಿ ನೀರು ಅನಾವಶ್ಯಕವಾಗಿ ಹರಿದು ಹೋಗುವಂತೆ ಮಾಡುತ್ತಿದ್ದಾರೆ.

ವಾರಗಳ ಹಿಂದೆಯಂತೂ ಬೃಹತ್ ಗಾತ್ರದ ವಾಹನಗಳು ಕೆರೆಗೆ ಮಣ್ಣು ಸುರಿದವು. ಕಂದಾಯ ಇಲಾಖೆಯ, ನಗರ ಸಭೆಯ ಅಧಿಕಾರಿಗಳು ತಮಗೂ ಈ ಕೆಲಸಕ್ಕೂ ಯಾವುದೆ ಬಾದರಾಯಣ ಸಂಬಂಧ ಇಲ್ಲವೆಂಬಂತೆ ಕಣ್ಣ ಮೇಲೆ ಕೌದಿ ಹೊದ್ದುಕೊಂಡು ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರೆ.

ಕೆರೆಯಲ್ಲಿ ಸದಾ ನೀರು ಇರಲಿ ಎಂದು ಸ್ಥಳಿಯ ಜೈನ ಸಮೂದಾಯದವರು ಎರಡು ವರ್ಷಗಳಿಂದ ಕೆರೆಯ ಊಳೆತ್ತುವಾಗ ಅವರ ಗಮನವನ್ನು ಬೆರೆಡೆಗೆ ಸೆಳೆದು ಕೆರೆಯ ರಸ್ತೆಯಲ್ಲಿ ಈ ಹಿಂದೆ ಇಲ್ಲದ ರಸ್ತೆಯನ್ನು ಅವರಿಂದಲೆ ಮಾಡಿಸಿದರು. ಇದರ ಹಿಂದೆ ತಮ್ಮ ಕೃಷಿ ಭೂಮಿಯನ್ನು ಲೇ ಔಟ್ ಗಳಾಗಿ ಪರಿವರ್ತಿಸಿಕೊಳ್ಳುವ ಹುನ್ನಾರ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಕೆರೆಯ ದಂಡೆಯಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ದೊಡ್ಡ ಗಾತ್ರದ ವಾಹನಗಳು ತಿರುಗಾಡುವಂತೆ ಮಾಡಿಕೊಂಡಿದ್ದಾರೆ.

ಕೆರೆಯ ಅಭಿವೃದ್ಧಿಗಾಗಿ ಹತ್ತು ವರ್ಷಗಳ ಹಿಂದೆ ವಿಶೇಷ ಅನುದಾನಲ್ಲಿ ವಾಯು ವಿಹಾರಾರ್ಥಿಗಳಿಗಾಗಿ ಸುಂದರವಾದ ಪರಿಸರವನ್ನು ನಿರ್ಮಿಸಲಾಗಿತ್ತು. ಇದಕ್ಕೆ ಲಕ್ಷಾಂತರ ರೂಪಾಯಿಗಳ ಖರ್ಚನ್ನು ಮಾಡಲಾಗಿತ್ತು. ಆದರೆ ಅದರ ನಿರ್ವಹಣೆಗೆ ಯಾವ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡದಿರುವುದರಿಂದ ಸಹಜವಾಗಿಯೆ ಹಸಿರಿಂದ ನಳನಳಿಸುತ್ತಿದ್ದ ಪರಿಸರ ಮತ್ತೆ ಹಿಂದಿನಂತಾಯಿತು.

ಕಳೆದ ಎರಡು ವರ್ಷಗಳ ಹಿಂದೆ ಸಚಿವ ಶರಣ ಬಸಪ್ಪ ಗೌಡ ದರ್ಶನಾಪುರ ಅವರು ಹತ್ತು ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಿದ್ದ ಸಿ.ಸಿ. ರಸ್ತೆಯೇನೋ ಉಳಿದಿದೆ. ಆದರೆ ನಗರ ಸಭೆಯ ಜೆ.ಸಿ.ಬಿ.ಗಳು ಅಡ್ಡಾದಿಡ್ಡಿಯಾಗಿ ಕೆರೆಯ ಸುತ್ತ ಮುತ್ತ ಬೆಳೆದ ಕಸ ಕಂಟಿಯನ್ನು ತೆಗೆಯುವಾಗ ಕಬ್ಬಿಣದ ಗೇಟ್ ಗಳು ಕಳಚಿ ಬಿದ್ದಿವೆ. ಇನ್ನು ಕೆಲವೆ ದಿನಗಳಲ್ಲಿ ಅವು ಕಳ್ಳರ ಪಾಲಾಗಲಿವೆ.

ಪ್ರತಿ ವರ್ಷಕ್ಕಿಂತಲೂ ಈ ವರ್ಷ ಉತ್ತಮ ಮಳೆಯಾಗಿದೆ. ಆದರೆ ಕೆರೆಯ ಕೋಡಿಯನ್ನು ಮೊದಲೆ ಕೆಲವು ದುಷ್ಟರು ಒಡೆದು ಹಾಕಿದ್ದರಿಂದ ನೀರು ಕಡಿಮೆ ಸಂಗ್ರಹವಾಗಿದೆ. ಸಂಗ್ರಹವಾದಷ್ಟು ನೀರು ಮುಂದಿನ ಬೇಸಿಗೆಯವರೆಗೂ ಇರಬಹುದೆಂದು ಅಂದಾಜಿಸಿದ್ದರೆ ಆ ನೀರು ಸಹ ಇತ್ತೀಚೆಗೆ ಕೆರೆಗೆ ಸುರಿಯುತ್ತಿರುವ ಮಣ್ಣು ನೀರನ್ನೆಲ್ಲ ಹಿಂಗಿಕೊಂಡಿದೆ. ಜೊತೆಗೆ ಕೆರೆಯ ಸುತ್ತ ಮುತ್ತಲಿನ ರೈತರು ಸದಾ ಕೆರೆಯ ನೀರನ್ನು ಡಿಜೇಲ್ ಇಂಜನ ಮೂಲಕ ತಮ್ಮ ಹೊಲಗಳಿಗೆ ನೀರುಣಿಸುತ್ತಿದ್ದಾರೆ.

ಕೆರೆಯಲ್ಲಿ ನೀರಿದ್ದರೆ ಶಹಾಪುರ ಪಟ್ಟಣದ ಬೊರವೆಲ್ ಗಳ ಅಂತರ್ಜಲ ಬತ್ತುವುದಿಲ್ಲ. ನೀರಿಗಾಗಿ ಬೇಸಿಗೆಯಲ್ಲಿ ಆಹಾಕಾರ ಉಂಟಾಗುವುದಿಲ್ಲ. ಮಳೆಗಾಲದಲ್ಲಿ ಸಂಗ್ರಹವಾದ ನೀರನ್ನು ವೈಜ್ಞಾನಿಕವಾಗಿ ಕಾಯ್ದಿಟ್ಟುಕೊಳ್ಳದೆ ಬೇಸಿಯಲ್ಲಿ ನೀರಿನ ಕೊರತೆಯಾದಾಗ ರಾಜರಣಿಗಳು, ಅಧಿಕಾರಿಗಳು ಒಂದೆ ಸಮ ದೊಂಬರಾಟ ನಡೆಸುತ್ತಾರೆ.

೯ ಎಕರೆ ವಿಸ್ತೀರ್ಣವಾಗಿ ನಿಜಾಮರ ಕಾಲದಲ್ಲಿಯೆ ನಿರ್ಮಿಸಲಾಗಿರುವ ಕೆರೆ ಭೂಗಳ್ಳರಿಂದ ದಿನೆ ದಿನೆ ತನ್ನ ವಿಸ್ತೀರ್ಣ ಕಳೆದುಕೊಳ್ಳುತ್ತಿದೆ.ಕೂಡಲೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಹಾಗೂ ಕೆರೆ ನಿರ್ವಹಣಾ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕಿದೆ.

ಕೆರೆ ಒತ್ತುವರಿ ಮಾಡುತ್ತಿರುವ ಭೂಗಳ್ಳರಿಗೆ, ಅಕ್ರಮವಾಗಿ ನೀರು ಬಳಸುತ್ತಿರುವ ಬಳಕೆದಾರರ ಮೇಲೆ ಸೂಕ್ತಕ್ರಮ ಕೈಗೊಳ್ಳದಿದ್ದರೆ ಅಧಿಕಾರಿ / ರಾಜಕಾರಣಿಗಳು ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ.

ವಿಶ್ವಾರಾಧ್ಯ ಸತ್ಯಂಪೇಟೆ