
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಮಾಜಿ ಶಾಸಕ ನಾಗಣ್ಣಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆಗಾಗಿ ಗುರುಮಠಕಲ್ ಮತಕ್ಷೇತ್ರದ ಕಂದಕೂರು ಸಜ್ಜಾಗುತ್ತಿದೆ. ತುಮಕೂರು ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ, ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಒಡೆಯರಾದ ಡಾ.ಗಂಗಾಧರ ಸ್ವಾಮಿಗಳ, ನಾಲವಾರದ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಸ್ವಾಮಿಗಳ ಹಾಗೂ ಇತರೇ ವಿವಿಧ ೩೭ ಮಠಗಳ ಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗಾಗಿ ಈಗಾಗಲೇ ೧೭ ಎಕರೆ ಜಾಗದಲ್ಲಿ ವ್ಯವಸ್ಥಿತವಾಗಿ ಎಲ್ಲ ತಯಾರಿ ನಡೆದಿದೆ.
ನಾಗನಗೌಡ ಕಂದಕೂರ ಅವರ ಅಭಿಮಾನಿ ಬಳಗವು ಆಯೋಜಿಸಿರುವ ಈ ಕಾರ್ಯಕ್ರಮದ ಸಕಲ ಸಿದ್ದತೆಗಳು ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ರಡ್ಡಿ ಕಂದಕೂರ ನೇತೃತ್ವದಲ್ಲಿ ನಡೆಯುತ್ತಿದೆ.
ಬೆಳಗ್ಗೆ ಕುಟುಂಬಸ್ಥರಿದ ಐದು ಹಸುಗಳು ದಾನ ನೀಡುವ ಮೂಲಕ ಪೂಜೆ, ಅಭಿಷೇಕದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಲಿಂ.ನಾಗನಗೌಡರ ಸ್ಮಾರಕದ ಉದ್ಘಾಟನೆ, ಸುಮಾರು ೧೫೦೦ ಜನರಿಂದ ಬೃಹತ್ ರಕ್ತದಾನ. ಇದಕ್ಕಾಗಿ ೧೦ ಸಾವಿರ ಚದುರ ಅಡಿ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ.
ಹೆಲಿಕ್ಯಾಪ್ಟರ್ ಮೂಲಕ ಸಿದ್ದಗಂಗಾ ಶ್ರೀಗಳ ಆಗಮನವಾಗಲಿದ್ದು, ಇದಕ್ಕಾಗಿ ಇಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಾಣಗೊಂಡಿದೆ. ಇವರು ಸೇರಿದಂತೆಯೇ ಒಟ್ಟು ೪೦ ಸ್ವಾಮಿಗಳು ಆಗಮಿಸಲಿದ್ದು, ಇವರಿಗೆಲ್ಲ ಕೂಳಿತುಕೊಳ್ಳಲು ವೇದಿಕೆಯಲ್ಲಿ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಸುಮಾರು ೧೩ ಸಾವಿರ ಚದುರ ಅಡಿ ಜಾಗದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಮಾರು ೧೦ ರಿಂದ ೧೫ ಸಾವಿರ ಜನರು ಆಗಮಿಸಲಿದ್ದಾರೆ. ಎಲ್ಲರಿಗೂ ಬಾಳೆ ಎಲೆ ಮೇಲೆಯೇ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಯಾದಗಿರಿ ನಗರದಿಂದ ಕಂದಕೂರ ರಸ್ತೆಯವರೆಗೂ ಸ್ವಾಗತದ ಬ್ಯಾನರ್ ಕಟ್ಟಲಾಗಿದೆ. ಕಂದಕೂರ ಗ್ರಾಮದ ಅಗಸಿಯಲ್ಲಿ ಬೃಹತ್ ಸ್ವಾಗತ ಕಮಾನ ನಿಲ್ಲಿಸಲಾಗಿದೆ. ಜನರಿಗಾಗಿ ಹಾಗೂ ಗಣ್ಯರಿಗಾಗಿ ಬಂದು ಹೋಗಲು ಮತ್ತು ಪಾರ್ಕಿಂಗ್ ವ್ಯವಸ್ಥೆ ಪ್ರತ್ಯೇಕವಾಗಿ ಮಾಡಲಾಗಿದೆ.
ಖ್ಯಾತ ತತ್ವಪದಕಾರ ಸಂತೋಷ ಬಡಿಗೇರ ಕಾರ್ಯಕ್ರಮದಲ್ಲಿ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಸಿದ್ದತಾ ಸ್ಥಳದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷಚಂದ್ರ ಕಟಕಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್ ಕಟಕಟಿ, ಬಸವರಾಜಪ್ಪ ಗೊಂದಡಗಿ,ಜಿ.ತಮ್ಮಣ್ಣ, ಭೋಜನಗೌಡ ಯಡ್ಡಳ್ಳಿ, ದೊಡ್ಡಣ್ಣಗೌಡ ಅರಕೇರಿ, ಶರಣು ಆವಂಟಿ, ರವಿ ಪಾಟೀಲ, ಬಸಣ್ಣ ದೇವರಹಳ್ಳಿ,ಸೋಮಣ್ಣಗೌಡ ಬೆಳಗೇರಿ,ಮಲ್ಲನಗೌಡ ಕಾಳೂರು ಹಣಮಂತ ಕಣೇಕಲ್, ಕಿಶಾನ್ ರಾಠೋಡ ಸೇರಿದಂತೆಯೇ ಇತರರಿದ್ದರು.
ಹೆಲಿಪ್ಯಾಡ್ ನಿರ್ಮಾಣ.
ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತುಮಕೂರಿನ ತ್ರಿವಿಧ ದಾಸೋಹಿ ಸಿದ್ದಗಂಗಾ ಕ್ಷೇತ್ರದ ಪರಮ ಪೂಜ್ಯ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ತುಮಕೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಗ್ರಾಮದ ಹೈದರಾಬಾದ್ ರಸ್ತೆಯ ಪಕ್ಕದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.
ಕಲ್ಯಾಣ ಭಾಗದಲ್ಲೇ ಬೃಹತ್ ರಕ್ತದಾನ ಶಿಬಿರ.
ಕಲ್ಯಾಣ ಕರ್ನಾಟಕ ಭಾಗದಲ್ಲೇ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈಗಾಗಲೇ ೧೩೦೦ ಜನ ರಕ್ತದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ. ಸಂಗ್ರಹವಾದ ರಕ್ತವನ್ನು ಯಾದಗಿರಿ,ರಾಯಚೂರು, ಕಲಬುರಗಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಬೆಂಗಳೂರಿನ ರೆಡ್ ಕ್ರಾಸ್ ರಕ್ತನಿಧಿ ಘಟಕಕ್ಕೆ ನೀಡಲಾಗುವುದು.
ಸಾಂಪ್ರದಾಯಿಕ ಶೈಲಿ ಭೋಜನ.
ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸುವ ಜನತೆಗೆ ಸಾಂಪ್ರದಾಯಿಕ ಊಟದ ವ್ಯವಸ್ಥೆ ಮಾಡಲಾಗಿದ್ದು, ಹೋಳಿಗೆ, ಚಪಾತಿ, ಎರಡು ತರಹದ ಅನ್ನ, ಸಂಬಾರ್, ಎರಡ್ಮೂರು ತರಹದ ಪಲ್ಯದ ವ್ಯವಸ್ಥೆ ಇದ್ದು, ಭೋಜನ ಸಭಾಂಗಣದಲ್ಲಿ ಬಂದಿರುವAತಹ ನಾಗನಗೌಡರ ಅಭಿಮಾನಿಗಳಿಗೆ ಸ್ಥಳದಲ್ಲಿಯೇ ಕುಳಿತು ಬಾಳೆ ಎಲೆಯಲ್ಲಿ ಭೋಜನ ಸವಿಯುವ ವ್ಯವಸ್ಥೆ ಮಾಡಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷ.
ಜ.೨೮ರಂದು ಮಂಗಳವಾರ ಬೆಳಗ್ಗೆ ೭ ಗಂಟೆಗೆ ಲಿ.ನಾಗನಗೌಡ ಅವರ ಸಮಾದಿ ಸ್ಥಳದಲ್ಲಿ ಸ್ವಾಮೀಜಿಗಳಿಂದ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ಕಂದಕೂರ ಪರಿವಾರದವರಿಂದ ೫ ಗೋವುಗಳ ದಾನ ನೀಡಲಾಗುತ್ತಿದ್ದು, ಪುಣ್ಯಸ್ಮರಣೆ ನಿಮಿತ್ತ ಗುರಮಠಕಲ್ ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಸೇವಿಸಲು ಸುಮಾರು ೧೬ ಸಾವಿರಕ್ಕೂ ಹೆಚ್ಚು ತಟ್ಟೆ ಮತ್ತು ಗ್ಲಾಸ್‌ಗಳನ್ನು ವಿತರಿಸಲಾಗುವುದು.
– ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ
