ಕೆಕೆಆರ್ ಡಿಬಿಯಿಂದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ: ಶಾಸಕ ಚನ್ನಾರಡ್ಡಿ ಪಾಟೀಲ್

By admin

ಯಾದಗಿರಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಭಾಗದ ಸುಮಾರು 42 ಶಾಸಕರು ಹೆಚ್ಚಿನ ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಗುತ್ತಿದೆ, ಇದಕ್ಕೆ ರಾಜ್ಯ ಸರ್ಕಾರ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ನ್ಯೂ ಕನ್ನಡ ಶಾಲೆಯ ಹತ್ತಿರ ಹಾಗೂ ಅಂಬೇಡ್ಕರ್ ‌ಚೌಕ ಹತ್ತಿರ ಕೆಕೆಆರ್ ಡಿಬಿಯ 2023-24ನೇ ಸಾಲಿನಲ್ಲಿ ಯೋಜನೆಯಡಿ ಅಂದಾಜು ಮೊತ್ತ (ತಲಾ ಒಂದಕ್ಕೆ) 15 ಲಕ್ಷಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ಭಾಗದ ಸರ್ವ ರೀತಿಯ ಅಭಿವೃದ್ಧಿಗೆ ಅಂದಿನ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಹಾಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಡಿ ಸಂಸತ್ತಿನ ಮನವೊಲಿಸಿ 371 ಕಲಂ ಜಾರಿ ಮಾಡುವ ಮೂಲಕ ಕೆಕೆಆರ್ ಡಿಬಿಗೆ ಪ್ರತಿ ಐದು ಸಾವಿರ ಕೋಟಿ ರೂ. ಅನುದಾನ ಬರುತ್ತವಂತೆಯೇ ಮಾಡಿದ್ದಾರೆ. ಇದರ ಫಲವಾಗಿ ಮಂಡಳಿಯಿಂದ ಕೆಕೆ ಭಾಗದ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ದೊರೆಯುತ್ತಿದೆ. ಹೀಗಾಗಿ ಈ ಭಾಗದ ಶಾಸಕರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ, ಅದರ ಫಲವಾಗಿ ರಸ್ತೆ, ನೀರು, ಆರೋಗ್ಯ,ಶಿಕ್ಷಣ ಸೇರಿದಂತೆಯೇ ಮೂಲಭೂತ ಸೌಲಭ್ಯಗಳು ನೀಡಲಾಗಿತ್ತಿದೆ ಎಂದು ಶಾಸಕರು‌ ವಿವರಿಸಿದರು. ನಗರದಲ್ಲಿ ಕೆಟ್ಟಿರುವ ಆರ್ ಓ ಪ್ಲಾಂಟಗಳ ದುರಸ್ತಿಗೂ ಕ್ರಮ ತೆಗೆದುಕೊಳ್ಳಲಾಗುವುದೆಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಿಜಯಲಕ್ಷ್ಮೀ ಕೃಷ್ಟ ನಾನೇಕ, ಮಹೇಶ ಕುರಕುಂಬಳ,
ಗೋಪಾಲ ಗಿರಿಯಪ್ಪನೋರ್, ಶಿವಕುಮಾರ ಕರದಳ್ಳಿ, ಕಾರ್ಯಪಾಲಕ ಅಭಿಯಂತರರಾದ ಧನಂಜಯ್ಯ ಆರ್., ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವರಾಜ ಹುಡೇದ್, ಸೂಗುರೆಡ್ಡಿ ಸೇರಿದಂತೆ ಇತರರಿದ್ದರು.