ಖರ್ಗೆ ಬೆಂಬಲಿಗರ ಗೂಂಡಾ ವರ್ತನೆ

By admin

ಯಾದಗಿರಿ : ಇತ್ತೀಚೆಗೆ ಕಲ್ಬುರ್ಗಿಯ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮ ಒಂದಕ್ಕೆ ತೆರಳುವ ಪೂರ್ವದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿರುವ ಸಂದರ್ಭದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಬೆಂಬಲಿಗರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರಿಗೆ ಕಾರ್ಯಕ್ರಮಕ್ಕೆ ತೆರಳಲು ಬಿಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಶಾಯಿ ಚೆಲ್ಲಿ ವಿಕೃತಿ ಮೆರೆದಿದ್ದು ಪ್ರಜಾತಂತ್ರ ವ್ಯವಸ್ಥೆ ಮೇಲೆ ಮಾಡಿದ ಅಪಚಾರ ಎಂದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ ಖಂಡಿಸಿದ್ದಾರೆ. ಪ್ರಿಯಾಂಕ ಖರ್ಗೆ ಬೆಂಬಲಿಗರು ರಾಜ್ಯದಲ್ಲಿ ಸರ್ಕಾರ ತಮ್ಮದೇ ಇದೆ ಎಂದು ಈ ರೀತಿ ಗೂಂಡಾ ವರ್ತನೆ ಮಾಡಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ಎನ್ನುವುದು ಅವರು ಅರಿತುಕೊಳ್ಳಲಿ ಎಂದು ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಕೇವಲ ಐದು ವರ್ಷ ಅಧಿಕಾರದಲ್ಲಿ ಇರುತ್ತದೆ ಹೊರತು, ಶಾಶ್ವತವಾಗಿ ಅಲ್ಲ. ಸಚಿವರು ಕಾರ್ಯಕರ್ತರು ಅರಿತುಕೊಳ್ಳಲಿ. ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಇಲ್ಲದ ಸಲ್ಲದ ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು ನೋಡಿದರೆ ಸಚಿವರ ಮನಸ್ಥಿತಿ ಸ್ಥಿರವಾಗಿಲ್ಲ. ಅವರ ಹೇಳಿಕೆಗಳು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿವೆ ಎಂದು ಕುರಕುಂದಿ ವಾಗ್ದಾಳಿ ನಡೆಸಿದ್ದಾರೆ.
ಇನ್ನಾದರೂ ಕಾಂಗ್ರೆಸ್ ಮುಖಂಡರು ಸುಧಾರಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಭಾಜಪ ಕಾರ್ಯಕರ್ತರು ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.