ರಸ್ತಾಪೂರ, ಸಗರ ಶಟ್ಟಿಕೇರಾ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಸಿಇಒ ದಿಢೀರ ಭೇಟಿ

By admin

ಗ್ರಾಮ ನೈರ್ಮಲ್ಯ, ಕುಡಿಯುವ ನೀರಿನ ಸಮಸ್ಯೆಗೆ ಆಧ್ಯತೆ ನೀಡಿ : ಸಿಇಒ ಶ್ರೀ ಲವೀಶ ಒರಡಿಯಾ

ಶಹಾಪುರ: ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಮದಲ್ಲಿ ಸ್ವಚ್ಛ ನೈರ್ಮಲ್ಯ ಕಾಪಾಡಿ, ಕುಡಿಯುವ ನೀರಿನ ಸಮಸ್ಯೆ ಉಂಟಾದರೆ, ಪರಿಹಾರಕ್ಕೆ ಮೊದಲ ಆಧ್ಯತೆ ನೀಡಿ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಶ್ರೀ ಲವೀಶ ಒರಡಿಯಾ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಮೂಲ ಸೌಲಭ್ಯಗಳÀ ಕುರಿತು ಸಾರ್ವಜನಿಕರು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ ದೂರುಗಳ ಇತ್ಯಾರ್ಥಗೊಳಿಸಲು ಮೇ. ೨೨ರಂದು ಶಹಾಪುರ ತಾಲೂಕಿನ ರಸ್ತಾಪೂರ, ಸಗರ ಹಾಗೂ ಶಟ್ಟಿಕೇರಾ ಗ್ರಾಮಗಳಿಗೆ ದಿಢೀರ ಭೇಟಿ ನೀಡಿ, ದೂರಿನ ಸಮಸ್ಯೆಗಳ ಭೌತಿಕ ಸ್ಥಿತಿ ಪರಿಶೀಲಿಸಿ, ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ವಿವಿಧ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳನ್ನು ಯೋಜನೆಯ ನಿಯಮನುಸಾರ ಕಾಲ ವಿಳಂಬ ಮಾಡದೆ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಿ, ಅರ್ಹ ಫಲಾನುಭವಿಗೆ ಯೋಜನೆಯ ಸೌಲಭ್ಯ ನೀಡಿ, ಸಾರ್ವಜನಿಕ ಸೇವೆ ಸಲ್ಲಿಸುವ ಸರಕಾರಿ ಅಧಿಕಾರಿ, ಸಿಬ್ಬಂದಿಗಳು ತಮ್ಮ ಕಾರ್ಯನಿರ್ವಹಣೆ ಕುರಿತು ಸಾರ್ವಜನಿಕರಿಂದ ದೂರುಗಳು ಬರದಂತೆ ಕೆಲಸ ಮಾಡಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಮಹಾತ್ಮಗಾಂಧಿ ನರೇಗಾ ಯೋಜನೆ, ಪ್ರಧಾನ ಮಂತ್ರಿ ವಸತಿ ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆ ಅನುಷ್ಟಾನದ ಬಗ್ಗೆ ಮಾಹಿತಿ ಪಡೆದ ಅವರು, ತಪ್ಪದೇ ಕರ ವಸೂಲಿ ಮಾಡುವಂತೆ ರಸ್ತಾಪೂರ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಶಹಾಪುರ ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಾರದಮ್ಮ ಅವರಿಗೆ ತಾಕಿತು ಮಾಡಿದರು.

ರಸ್ತಾಪೂರ ಗ್ರಾಮದ ಪರಿಶಿಷ್ಟ ಜಾತಿಯ ಕೆಲವು ಮನೆಗಳಿಗೆ ಕುಡಿಯುವ ನೀರು ಬರುತ್ತಿಲ್ಲ ಎಂದು ಸಲ್ಲಿಸಿದ ದೂರಿನ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಅವರು, ಜಲ ಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದ್ದು, ಕುಡಿಯುವ ನೀರಿನ ಮೂಲದಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದು, ಹೊಸ ಬೊರವೆಲ್ ಕೊರೆಸಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಪಿಡಿಒ ಶ್ರೀಮತಿ ಶಾರದಮ್ಮ ಅವರು ಮಾಹಿತಿ ನೀಡಿದರು.

ಬಳಿಕ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ವೀಕ್ಷಿಸಿ, ನರೇಗಾ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ಪಾವತಿಸಲಾಗುತ್ತಿದೆ ಎಂದು ಕೂಲಿ ಕಾರ್ಮಿಕ ಸಂಘಟನೆಗಳು ದೂರು ಸಲ್ಲಿಸಿವೆ. ಯೋಜನೆಯ ನಿಯಮನುಸಾರ ಗಂಡು-ಹೆಣ್ಣಿಗೆ ದಿನಕ್ಕೆ ೩೭೦ ರೂ. ಕೂಲಿ ಇದ್ದು, ಕೂಲಿಕಾರರು ಮಾಡಿದ ಕೆಲಸದ ಪ್ರಮಾಣದ ಆಧಾರದ ಮೇಲೆ ದಿನದ ಕೂಲಿ ಪಾವತಿಸಲಾಗುತ್ತದೆ ಎಂದು ಕೂಲಿಕಾರರಿಗೆ ತಿಳಿಸಿ, ದಿನದಲ್ಲಿ ಮಾಡಬೇಕಾದ ಕೆಲಸದ ಪ್ರಮಾಣ ಅಳತೆ ಮಾಡಿ ಕೊಡಿ ಎಂದು ನರೇಗಾ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ನರೇಗಾ ಯೋಜನೆಯಡಿ ಸೃಜನೆಯಾದ ಆಸ್ತಿಗಳು ಸಾರ್ವಜನಿಕರಿಗೆ ಇಲ್ಲವೇ ಫಲಾನುಭವಿಗೆ ಸದುಪಯೋಗವಾಗಲಿ ಎಂದ ಅವರು, ಕೂಸಿನ ಮನೆ, ಗ್ರಾಮೀಣ ಗ್ರಂಥಾಲಯ (ಅರಿವು ಕೇಂದ್ರ) ಹಾಗೂ ಸಮುದಾಯ ಶೌಚಾಲಯಕ್ಕೆ ಭೇಟಿ ನೀಡಿ, ಕಾರ್ಯಾಚರಣೆ, ಭೌತಿಕ ಸ್ಥಿತಿ ವೀಕ್ಷಸಿದರು.

ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ದೂರುಗಳು ಬಂದ ನಂತರ ಅವರು ಗ್ರಾಮಗಳಿಗೆ ಭೇಟಿ ನೀಡಿ, ಚರಂಡಿ ವ್ಯವಸ್ಥೆ, ರಸ್ತೆಗಳು, ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ, ಕುಡಿಯುವ ನೀರು ಮತ್ತು ಆರೋಗ್ಯ ಸೇವಾ ಕೇಂದ್ರಗಳು ಕಾರ್ಯನಿರ್ವಹಣೆ ಕ್ರಮ ವೀಕ್ಷಿಸಿ, ಗ್ರಾಮಸ್ಥರ ಕುಂದುಕೊರತೆ ಆಲಿಸಿ, ಲಭ್ಯವಿರುವ ಸರಕಾರಿ ಯೋಜನೆಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಸರಕಾರದ ನಾನಾ ಅಭಿವೃದ್ಧಿ ಯೋಜನೆಗಳಲ್ಲಿ ಗ್ರಾಮೀಣ ಜನರಿಗೆ ಸಿಗುವ ಹಲವು ಸೌಲಭ್ಯ ಹಾಗೂ ಸೇವೆಯನ್ನು ಅರ್ಹ ಫಲಾನುಭವಿಗೆ ಪರಿಣಾಮಕಾರಿಯಾಗಿ ನೀಡಿ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಯಾದಗಿರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಶ್ರೀ ಸಿಬಿ ದೇವರಮನಿ, ಶಹಾಪುರ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ ಶರಬೈ, ಶಹಾಪುರ ತಾಲ್ಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಾರದಮ್ಮ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನೀಯರ, ತಾಂತ್ರಿಕ ಸಹಾಯಕ ಪ್ರವೀಣಕುಮಾರ ಕಟ್ಟಿಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.