
ಶುಭ್ರಗೊಂಡಿತು ಆಕಾಶ ಮಳೆಗಾಲ-ಮೋಕ್ಷದಿI
ಎಲ್ಲಡೆ ಹರಡಿತು ಮಂಜು,ಸರ್ಸಾ-ಹಕ್ಕಿಗಳ ಚಿಲಿಪಿಲಿ,II
ಭೋಗ ಸುಖಸಾಗರದಲಿ ಮುಳಗಿದ್ದ ಸುಗ್ರೀವ,I
ಪರರ ಪರಿವೇಯಿಲ್ಲದೇ, ಆಪ್ತಸುಖದಲಿ, II
ಪತ್ನಿ-ಸುಖದಲಿ ಲೀನನಾಗಿದ್ಧ ಸುಗ್ರೀವ,I
ಮರೆತು ವಚನಕೊಟ್ಟ ಕಾರ್ಯ,II
ರಾಜ್ಯ ಕಾರ್ಯಗಳನ್ನು ಮರೆತು ಮಗ್ನನಿದ್ದI
ಸ್ತ್ರೀ-ಮನರಂಜನೆಯಲಿ ಸುಗ್ರೀವ, II
ಸೌಮ್ಯ ಮಧುರ ಭಾಷೆಯಲಿ ಹನುಮಾನI
ನೆನಪಿಸಿಕೊಡಲು ಸುಗ್ರೀವನಿಗೆ, ಕರ್ತವ್ಯ,II
ಸುಗ್ರೀವನಿಗೆ ನುಡಿದ ಹನುಮ ವಿಧೇಯಕನಾಗಿ:I
“ರಾಜ್ಯವೈಭವ ಹಿಂಪಡೆದೆ, ಅಭಿವೃದ್ಧಿಯಾಯಿತು ಕುಲ, II
ಸ್ನೇಹಿತರು ಮಾತ್ರ ಉಳಿದಿಹರು,I
ಹಿತಕರ ಅವರೊಂದಿಗೆ ಸಂದರ್ಶಿಸು ವದು, II
ಸ್ನೇಹಿತರೊಂದಿಗೆ ಕಾಲಜ್ಞ ಬಲ್ಲವ ತನ್ನI
ಹೆಚ್ಚಿಸಿಕೊಳ್ಳುವನು ರಾಜ್ಯ ವೈಭವ, ನಿಜ,II
ಕೋಶ,ಸೈನ್ಯ, ಸ್ನೇಹ ವ ಸಾರ್ವಭೌಮತೆI
ಮಹತ್ವ ನೀಡುವ ರಾಜ ಅಪ್ರಥಿಮ, II
ವರ್ಷಾ ಋತು ಮುಗಿದು ಶರತ್ ಋತು ಆರಂಭವಾದಾಗ ಪ್ರಕೃತಿಯಲ್ಲಿ ಆಗುವ ಬದಲಾವಣೆ ಮತ್ತು ಹನುಮಾನನು ಸುಗ್ರೀವನಿಗೆ ಅವನ ಜವಾಬ್ದಾರಿ ಬಗ್ಗೆ ಎಚ್ಚರಿಸುವ ಪ್ರಸಂಗಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ವಿವರಿಸಿದ ವಿಶೇಷತೆಗಳು (1) ಪ್ರಕೃತಿಯ ಋತು-ಸ್ಪಂದನೆ ಸ್ವಭಾವ— ಮಳೆಗಾಲ ಮುಗಿಯುತ್ತಲೇ ಅರ್ಥಾತ್ ಶರತ್ ಋತು-ಕಾರ್ತಿಕ ಮಾಸ ಪ್ರಾರಂಭಿಸುತ್ತಲೆ ಆಕಾಶವು ಕಾರ್ಮೋಡಗಳಿಂದ ಬಿಡುಗಡೆಗೊಂಡದು ಸ್ವಚ್ಛಂದವಾಗಿ ಕಾಣುವದು, ಇದು ಪ್ರಕೃತಿಯ ಋತು-ಸ್ಪಂದನ ಸ್ವಭಾವ,(2) ಸುಗ್ರೀವನೂ ಸ್ತ್ರೀಲಂಪಟನು— “ಮಳೆಗಾಲದಲ್ಲಿ ಪರರ ಪರಿವೇಯಿಲ್ಲದೇ ಸುಗ್ರೀವನು ಸ್ತ್ರೀ-ಭೋಗ ಸುಖಸಾಗರದಲ್ಲಿ ಮುಳಗಿದ್ದನು, ಮಳೆಗಾಲ ಮುಗಿದಿದ್ದರೂ ತನ್ನ ಭೋಗ-ಸುಖದಲ್ಲಿಯೇ ಲೀನವಾಗಿದ್ದನು”ಎಂಬ ಆದಿಕವಿ ವಾಲ್ಮೀಕಿಯ ವೀಕ್ಷಣೆಯಿಂದ ಸುಗ್ರೀವನೂ ಸ್ತ್ರೀ-ಲಂಪಟ ಸ್ವಭಾವದವನಾಗಿದ್ದನೆಂದ ಅಂಶ ಗೋಚರಿಸುವದು, ಆಪ್ತಸುಖದಲಿ, ಪತ್ನಿಯರ-ಸುಖದಲಿ ಲೀನನಾಗಿದ್ಧ ಸುಗ್ರೀವನು ರಾಮನಿಗೆ ವಚನಕೊಟ್ಟ ಕಾರ್ಯ ಮರೆತು ಮಳೆಗಾಲ ಮುಗಿದಿದ್ದರೂ ತನ್ನ ಭೋಗ-ಸುಖದಲ್ಲಿಯೇ ಲೀನವಾಗಿದ್ದನು ಹನುಮಾನನು ಅವನನ್ನು ಎಚ್ಚರಿಸುವನು, ಸುಖಭೋಗದಲ್ಲಿ ಮನುಷ್ಯ ಮೈಮರೆತು ತನ್ನ ಜವಾಬ್ದಾರಿಗಳನ್ನು ಮರೆಯುವನು ಎಂಬದನ್ನು ಆದಿಕವಿಯು ತಿಳಿಸಿರುವರು, (3) ಹನುಮಾನನ ಎಚ್ಚರಿಕೆಯ ಮಾತುಗಳು: ಸುಗ್ರೀವನ ಸ್ತ್ರೀ ಲಂಪಟತನವನ್ನು ಅರಿತು ಹನುಮಾನನು ಅವನಿಗೆ ಸೌಮ್ಯ ಮಧುರ ಭಾಷೆಯಲಿ ಅವನ ಕರ್ತವ್ಯವನ್ನು ನೆನಪಿಸಿಕೊಡಲು ವಿಧೇಯಕನಾಗಿ “ ರಾಮನಿಂದ ರಾಜ್ಯ ವೈಭವನ್ನು ಹಿಂಪಡೆದಿರುವೆ, ಮಳೆಗಾಲದಲ್ಲಿ ನಿನ್ನ ಕುಲವನ್ನೂ ಅಭಿವೃದ್ಧಿ ಪಡಿಸಿದಿ, ಈಗ ಉಳಿದವರು ನಿನ್ನ ಸ್ನೇಹಿತರು ಮಾತ್ರ ಅವರೊಂದಿಗೆ ಹಿತಕರ ಮಾತಾಡು, ಅವರ ಕುಶಲತೆಯನ್ನು ವಿಚಾರಿಸು; ಕಾಲಜ್ಞ ಬಲ್ಲವನು ತನ್ನ ಸ್ನೇಹಿತರೊಂದಿಗೆ ನಿಜವಾಗಿ ರಾಜ್ಯ ವೈಭವ ಹೆಚ್ಚಿಸಿಕೊಳ್ಳುವನು; ತನ್ನ ರಾಜ್ಯ ಕೋಶ, ಸೈನ್ಯ, ಸ್ನೇಹ ಮತ್ತು ಸಾರ್ವಭೌಮತೆಗಳಿಗೆ ಮಹತ್ವ ನೀಡುವ ರಾಜನೇ ಅಪ್ರಥಿಮನು” ಎಂದು ಸುಗ್ರೀವನಿಗೆ ರಾಜಧರ್ಮವನ್ನು ಹನುಮಾನ ನೆನಪಿಸಿಕೊಡುವನು, ಮಂತ್ರಿಗಳಿದ್ದರೆ ಹನುಮಾನನಂತವರು ಇರಬೇಕು, ರಾಜನು/ಅಧಿಕಾರಗಳು ಮಾಡುವ ತಪ್ಪುಗಳನ್ನು ಅವರಿಗೆ ತಿಳಿಸಿ ಹೇಳದೇ ಅವರನ್ನು ಮತ್ತಿಷ್ಟು ಪತನದಾರಿಯಲ್ಲಿ ದೂಕುವದು ಮಂತ್ರಿಗಳು ಸ್ನೇಹಿತರು ಇದ್ದರೆ ಆ ವ್ಯಕ್ತಿ/ರಾಜ್ಯದ ಅಧೋಗತಿಯಾಗುವದನ್ನು ಆದಿಕವಿಯು ಹನುಮಾನನ ಮುಖೇನ ಸಮಾಜ/ವ್ಯವಸ್ಥೆಯನ್ನು ಎಚ್ಚರಿಸಿರುವರು, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹನುಮಾನನಂತಹ ಮಂತ್ರಿಗಳ ಅವಶ್ಯಕತೆ ಇದೆ, (4) ಮಳೆಗಾಲವು ವಂಶ ವೃದ್ಧಿಕಾಲವು— ಮಳೆಗಾಲದಲ್ಲಿ ಸಕಲ ಜೀವರಾಶಿಗಳ ಬೀಜ-ಅಂಡಗಳ ಮಿಲನಕ್ಕೆ ಸೂಕ್ತ ಕಾಲ, ಅದು ವಂಶೋಭಿವೃದ್ಧಿಗೆ ಅನುಕೂಲಕರ ವಾತಾವರಣ ನೀಡುವದು;” ಮಳೆಗಾಲದಲ್ಲಿ ನಿನ್ನ ಕುಲವನ್ನೂ ಅಭಿವೃದ್ಧಿ ಪಡಿಸಿದಿ” ಎಂಬ ಹನುಮಾನನ ಮಾತುಗಳಲ್ಲಿ ಕವಿಯ ತರ್ಕ ಸ್ಪಷ್ಟವಾಗುವದು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
