“ಗಂಗಾವತಿ | ಹಳ್ಳದ ಹೊಂಡಕ್ಕೆ ಕಾಲು ಜಾರಿ ಬಿದ್ದು ಬಾಲಕ ಸಾವು : ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ”

Contents
“ಗಂಗಾವತಿ | ಹಳ್ಳದ ಹೊಂಡಕ್ಕೆ ಕಾಲು ಜಾರಿ ಬಿದ್ದು ಬಾಲಕ ಸಾವು : ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ”• ಸೆಕ್ಯೂಲರ್ ವಾಯ್ಸ್ ನ್ಯೂಸ್ : ಗಂಗಾವತಿ : ಇಲ್ಲಿನ ಮಹಿಬೂಬ ನಗರದ ವಾರ್ಡ್ ನಂಬರ್ 6ರಲ್ಲಿ ಬಾಲಕ ಆಜಾನ್ ಮನೆ ಪಕ್ಕದ ಹಳ್ಳದ ಬಳಿ ಆಟವಾಡುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಭಾನುವಾರ ಬೆಳ್ಳಿಗೆ ನಡೆದಿದೆ.ಮನೆ ಪಕ್ಕದ ಹಳ್ಳದ ಬಳಿ ಆಟವಾಡುತ್ತಿದ್ದ ಆಜಾನ್(6) ದುರ್ಗಮ್ಮನ ಹಳ್ಳಕ್ಕೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಘಟನೆಯಿಂದ ಈ ಪ್ರದೇಶದಲ್ಲಿ ಶೋಕಸಾಗರ ಆವರಿಸಿದೆ.ಇದಕ್ಕೂ ಮುನ್ನ ಮಹಬೂಬ್ ನಗರದ ನಿವಾಸಿಗಳು ಸೇತುವೆಗೆ ತಡೆಗೋಡೆ ನಿರ್ಮಿಸಲು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಆಗಮಿಸಿದಾಗ, ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್ ಸದಸ್ಯರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಾರ್ವಜನಿಕರು ನಗರಸಭೆಯ ವಿರುದ್ಧ ಕಿಡಿಕಾರುತ್ತ, “ಈಗಲಾದರೂ ತಡೆಗೋಡೆ ನಿರ್ಮಿಸದಿದ್ದರೆ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೀದಿಗೆ ಇಳಿದು ನಗರಸಭೆ ಮುಂದೆ ಭಾರೀ ಪ್ರತಿಭಟನೆಗೆ ಮುಂದಾಗುತ್ತೇವೆ” ಎಂದು ಸ್ಥಳೀಯರು ನಗರ ಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
