
ಸೀತೆ ವಿರಹ ಶೋಕದಲಿ ಕಳೆದ ರಾಮIಮಳೆಗಾಲದ ರಾತ್ರಿಗಳ ಪ್ರಸವನ-ಗವಿಯಲಿ, IIಆಕಾಶ ಚಂದರ ತಾರಾ ಮಂಡಳ ಶುಭ್ರಗೊಂಡಿತ್ತುIಶರದ-ರಾತ್ರಿಗಳ ಆಗಮನ, ಕವಿದ ಮಂಜು, IIಕಾಮದಮಲಿನಲಿ ಮಗ್ನ ಸುಗ್ರೀವನ ಕಂಡುIತಾಳ್ಮೆ ಕಳೆದುಕೊಂಡು ಕ್ರೋಧಿತನಾದ ರಾಮ,II
ಮರು ಕ್ಷಣ ಕೋಪ ತೊರೆದ ರಾಮ,I
ಕುಳಿತು ಶಿಖರತುದಿ ಮೇಲೆ ಚಿತ್ತ ಹರಿಸಿದ ನಿಸರ್ಗದತ್ತ, II
ಶುಭ್ರಗಗನ, ಸಾರಸಗಳ ನದಿಯೊಂದಿಗಿನಾಟ ವ ಇಂಚರ, I
ಹೊಂಬಣ್ಣ ಶಿಖರ, ನಿರ್ಮಲ ಹೂಗಳಾಸನ ವೃಕ್ಷ, II
ನೆನೆಪಿಸಿದವು ರಾಮನಿಗೆ ಸೀತೆಯನು: “ಕಂಡುI
ಶರದ ಋತು ಸೌಂದರ್ಯ ಸಂತುಷ್ಟಳಾಗಳು ಸೀತೆ, II
ಹಂಸಗಳ ಮಿಲನ,ಚಕ್ರವಾಕಗಳ ಸರಸ,I
ಆದರೆ ಕಮಲಾಕ್ಷಿ ಸೀತೆ ಇಲ್ಲ, II
ಮಳೆನೀರು ತೃಪ್ತಿ ಪಡಿಸಿದೆ ಅರಣ್ಯ ನದಿ ಸರೋವರ ತೃಷೆI
ಆದರೆ ತೃಪ್ತಿ ಪಡಿಸಲಿಲ್ಲ ನನ್ನಲಿಯ ಸೀತೆ-ತೃಷೆ,II
ಸ್ತ್ರೀ ಚಂಚಲೆ, ಮನ್ಮಥನ ಬಾಣಕ್ಕೆI
ನೊಂದಿರಬೇಕು ಸೀತೆ ನನ್ನ ವಿರಹದಲಿ” II
ಮಂಡೆಗಾಲೂರಿ ಗೊರ್ಗರೆಯುವ ರಾಮನI
ಕಂಡ ಲಕ್ಷ್ಮಣ, ಹಣ್ಣುಗಳೊಂದಿಗೆ ಹಿಂದಿರುಗುವಾಗ,II
ಕಂಡು ಅಣ್ಣನ ದುಃಸ್ಥಿತಿ ಲಕ್ಷ್ಮಣ ನುಡಿದ:I
“ಓ ಆರ್ಯನೇ, ಭಾವನೆಗಳಿಗೇಕೆ ಬಲಿಯಾಗಿವಿ? II
ಆತ್ಮವಿಶ್ವಾಸ ಕಳೆದುಕೊಳ್ಳುವೇಕೆ?I
ಗುರಿಯತ್ತ ಸಾಗುವದು ಯಾವ ಪುರುಷಾರ್ಥಕ್ಕಾಗಿ? II
ಓ ಪ್ರೀಯನೇ, ಸಧೃಡಗೊಳಿಕೋ ಮನI
ಸಮಯ ನಿಯಂತ್ರಣದಲ್ಲಿರಲಿ ನಿನ್ನ, II
ಕೂಡಿಸು ಸುಗ್ರೀವ ವ ವಾನರರನು,I
ಗುರಿ ಮುಟ್ಟಲು, ವಿಚಲಿತಗೊಳ್ಳದೆ,II
ಬಳಿ ಬಂದದನು ಸುಡುವಂತೆ ಅಗ್ನಿII
ಅನ್ಯರು ಬಳಿ ಬಂದರೆ ಸುಡುವಳು ಸೀತೆ”,II
ಆದಿಕವಿ ವಾಲ್ಮೀಕಿಯು ಯಾವ ರೀತಿ ವರ್ಷಾ ಋತು ರಾಮನಿಗೆ ಸೀತೆಯ ವಿರಹ ದುಃಖವನ್ನು ತಂದುಕೊಟ್ಟಿತೋ ಅದೇ ರೀತಿ ಶರದ ಋತು ಅವನಲ್ಲಿ ಸೀತೆಯ ನೆನಪಿನ ಶೋಕದ ಕಿಚ್ಚವನ್ನು ಹಚ್ಚುವದನ್ನು ವಿವರಿಸುವದರ ಜೊತೆ ಶರದ ಋತುವಿನ ಚಟುವಟಿಕೆಗಳನ್ನು ಮತ್ತು ಸ್ವಭಾವವನ್ನು ವಿವರಿಸಿರುವರು: (1) ಒಂದು ಕಡೆ ಸೀತೆಯ ವಿರಹದ ದುಃಖದಲ್ಲಿ ಕಳೆದ ಮಳೆಗಾಲದ ದಿನಗಳು ರಾಮನಿಗೆ ಭಾದಿಸಿದರೆ ಇನ್ನೊಂದೆಡೆ ಶರದ ಋತು ಆರಂಭವಾದರೂ ಸಿಗದ ಸುಗ್ರೀವನ ಸುಳಿವು ರಾಮನ ಕೋಪ ತಾಪ ಹೆಚ್ಚಿಸುವದು ಆದರೆ ಅದೇ ಕ್ಷಣ ಶರತ ಋತುವಿನ ಚೇಷ್ಟೆಗಳು ತನಗೆ ತೃಪ್ತಿ ನೀಡಲಿಲ್ಲವೆಂಬ ರಾಮನ ನಿರಾಸೆಯನ್ನು ಆದಿಕವಿ ವಿವರಿಸಿರುವರು, (2) ಶರದ ಋತುವಿನ ದೃಶ್ಯ ಮತ್ತು ಚಟುವಟಿಕೆಗಳು: ಶರದ ಋತುವಿನ ರಾತ್ರಿಗಳಲ್ಲಿ ಆಕಾಶ ಚಂದರ ಮತ್ತು ತಾರಾ ಮಂಡಳ ಶುಭ್ರಗೊಂಡಿತ್ತು ಹಾಗು ಎಲ್ಲೆಡೆ ಮಂಜು ಕವಿದಿತ್ತು; ಹಗಲು ಎಲ್ಲೆಡೆ ಶುಭ್ರಗಗನ, ಸಾರಸ ಪಕ್ಷಿಗಳ ನದಿಯೊಂದಿಗಿನ ಆಟ ಮತ್ತು ಅವುಗಳ ಇಂಚರ ದ್ವನಿ ಕಂಪು, ಹೊಂಬಣ್ಣಮಯ ಶಿಖರ, ಹೊಂಬಣ್ಣ ನಿರ್ಮಲ ಹೂಗಳ ಆಸನದಂತಹ ವೃಕ್ಷಗಳ ದೃಶ್ಯ; ಶರದ ಋತುವಿನಲ್ಲಿ ತನ್ನ ಗರ್ಭ-ಜಲವನ್ನು ರಭಸದಿಂದ ಸುರಿಸಿ ಕುಟಜ ಅರ್ಜುನ ಹೂ-ಮಕರಂದ ಕೊಚ್ಚಿಕೊಂಡು ಹೋಗುವ ಮೋಡಗಳಿಲ್ಲ, ಮೋಡಗಳ ಗುಡುಗುಗಳಿಲ್ಲ, ಆನೆಗಳ ಘೀಂಕಾರವಿಲ್ಲ, ನವಿಲಗಳ ನೃತ್ಯವಿಲ್ಲ, ಎಲ್ಲವೂ ನಿಶಬ್ದವಾಗಿವೆ; ಆದರೆ ಶರದ ಋತುವಿನ ಚಂದ್ರನ ಬೆಳಕಿನಲಿ ಮತ್ತೆ ಗಿರಿ ಪರ್ವತಗಳು ಬಿಳಿವರ್ಣದಿಂದ ಹೊಳಪು ಪಡೆದಿವೆ; ಶರದ ಋತುವು ಬಾಳೆ ಗಿಡ ಏಳು-ಎಲೆಗಳನ್ನು ವಿಭಜಿಸಿ ಬಿಟ್ಟಂತೆ ಸೂರ್ಯ ಚಂದ್ರ ಮತ್ತು ನಕ್ಷತ್ರಗಳು ಬೆಳಕು ಚಲ್ಲಿವೆ ಪ್ರಾಣಿಗಳನ್ನು ಗುರುತಿಸಲು; ಸೂರ್ಯನ ಬೆಳಕಿನಲ್ಲಿ ಗರ್ವದಿಂದ ಸರೋವರ-ಕಮಲಗಳು ಹೊಳೆಯುತ್ತಿವೆ, ಮತ್ತೆ ನದಿ ಸರೋವರ ಮರಳು ಗಡ್ಡೆಗಳು ಚಕ್ರವಾಕ ಹಂಸ ಕಮಲ, ಗೂಳಿ ದನಕರ ಆನೆಗಳ ಹಿಂಡುಗಳಿಂದ ತುಂಬಿವೆ; ಗಂಡು ನವಿಲು ಹೆಣ್ಣಿನ ಬಯಕೆ ಕಳೆದುಕೊಂಡಿದೆ ಆದರೂ ಅವುಗಳ ಅಂದಚಂದ ಕುಗ್ಗಿರುವದಿಲ್ಲ; ಕಾಲದಲ್ಲಿ ಮಳೆಗಾಲದಲ್ಲಿ ಒದ್ದೆಯಾಗಿದ್ದ ಭೂಮಿ ಪುನಃ ಒಣಗಿ ಧೂಳದಿಮದ ತುಂಬುವದು, ಶತ್ರು ಸದೆಬಡೆಯಲು ಸೈನ್ಯ-ಸಜ್ಜು ಮಾಡುವ ಕಾರ್ಯ ನಡೆಯುವದು; ಧೂಳಲಿ ಹೊರಳಾಡಿ ಹೂಂ-ಕರಿಸುವ (ಮದವೇರಿದ) ಗೂಳಿ ಕಾದಾಟಕ್ಕಾಗಿ ಪ್ರತಿಸ್ಪರ್ಧಿಗಾಗಿ ಸಜ್ಜಾಗುವದು; ಹಿಂಡಿನಲ್ಲಿದ್ದ ಹೆಣ್ಣಾನೆ ಮದದಲಿ ಅರಣ್ಯದಲ್ಲಿ ಸಾಗುತ ಗಂಡಾನೆಯೊಂದಿಗೆ ಚೇಷ್ಟೆಯಲ್ಲಿ ತೊಡಗುವದು; ಮಳೆಗಾಲದಲ್ಲಿ ಹುತ್ತದಲಿ ಅವಿತ ಸರ್ಪಗಳು ಶರತ-ಕಾಲದಲಲ್ಲಿ ಆಹಾರಕ್ಕಾಗಿ ಹೊರ ಬೀಳುವವು; ಶರದ ಋತುವಿನ ರಾತ್ರಿ ಚಂದ್ರ-ಬೆಳಕಿನಿಂದ ತುಂಬಿದೆ, ನಕ್ಷತ್ರಗಳು ಚಂದ್ರನಗೆ ಪ್ರೇಮ ತೋರುತಿವೆ; ಮುಖದಂತಹ ಚಂದ್ರ, ಕಣ್ಣುಗಳಂತಹ ನಕ್ಷತ್ರಗಳು, ಉಡುಗೆಯಂತಹ ಬೆಳದಿಂಗಳು, ನಾರಿಯಂತೆ ಕಂಡವು; ಕುಕ್ಕಿ ಕುಕ್ಕಿ ಭತ್ತದ ತೆನೆ ತಿನ್ನು ಸಾರಸ ಹಕ್ಕಿಗಳು ಮತ್ತು ಗಗನದಲ್ಲಿ ಸಾಲು ಸಾಲುಗಳಲ್ಲಿ ಹಾರುವ ಹಕ್ಕಿಗಳ ದೃಶ್ಯ ಸಾಮನ್ಯವಾಗಿತು, ಹೀಗೆ ಆದಿಕವಿ ವಾಲ್ಮೀಕಿಯು ಶರತ್ ಋತುವಿನಲ್ಲಿ ಪ್ರಕೃತಿ ಮತ್ತು ಜೀವಸಂಕುಲದಲ್ಲಿ ನಡೆಯುವ ಚಟುವಟಿಕೆಗಳನ್ನು ಅಲಂಕಾರಮಯವಾಗಿ ಬಣ್ಣಿಸಿರುವರು, (3) ಸೀತೆಯ ನೆನಪು: ಪ್ರಸವನ-ಗವಿಯಲ್ಲಿ ರಾಮನು ಸೀತೆ ವಿರಹ ಶೋಕದಲ್ಲಿ ಮಳೆಗಾಲದ ರಾತ್ರಿಗಳನ್ನು ಕಳೆದನು; ಶರದ ಋತುವಿನ ರಾತ್ರಿಗಳ ಆಗಮದಿಂದ ಆಕಾಶ ಚಂದರ ಮತ್ತು ತಾರಾ ಮಂಡಳ ಶುಭ್ರಗೊಂಡಿತ್ತು ಹಾಗು ಎಲ್ಲೆಡೆ ಮಂಜು ಕವಿದಿತ್ತು; ಕಾಮದಮಲಿನಲ್ಲಿ ಮಗ್ನ ಸುಗ್ರೀವನ ಸುಳಿವು ತಿಳಿದು ರಾಮನು ತಾಳ್ಮೆ ಕಳೆದುಕೊಂಡು ಕ್ರೋಧಿತನಾದನು ಆದರೆ ಮರು ಕ್ಷಣವೇ ಕೋಪ ತೊರೆದ ರಾಮನು ಶಿಖರತುದಿ ಮೇಲೆ ಕೂಳಿತು ನಿಸರ್ಗದತ್ತ ತನ್ನ ಚಿತ್ತ ಹರಿಸಿದನು; ಎಲ್ಲೆಡೆ ಶುಭ್ರಗಗನ, ಸಾರಸ ಪಕ್ಷಿಗಳ ನದಿಯೊಂದಿಗಿನ ಆಟ ಮತ್ತು ಅವುಗಳ ಇಂಚರ ದ್ವನಿ ಕಂಪು, ಹೊಂಬಣ್ಣಮಯ ಶಿಖರ, ಹೊಂಬಣ್ಣ ನಿರ್ಮಲ ಹೂಗಳ ಆಸನದಂತಹ ವೃಕ್ಷಗಳು ರಾಮನಿಗೆ ಸೀತೆಯನು ನೆನೆಪಿಸಿಕೊಟ್ಟವು, ತಕ್ಷಣ ರಾಮನು ಮಂಡೆಗಾಲೂರಿ “ ಶರದ ಋತುವಿನ ಸೌಂದರ್ಯ ಕಂಡು ಸೀತೆಯೂ ಸಂತುಷ್ಟಳಾಗಳು, ಹೆಣ್ಣು ಗಂಡು ಹಂಸ ಪಕ್ಷಿಗಳ ಮಿಲನ, ಚಕ್ರವಾಕ ಪಕ್ಷಿಗಳ ಪರಸ್ಪರ ಸರಸ ಆದರೆ ಈ ಸಮಯದಲ್ಲಿ ಕಮಲಾಕ್ಷಿ ಸೀತೆ ಇಲ್ಲ; ಮಳೆಗಾಲದ ಮಳೆನೀರು ಅರಣ್ಯ ನದಿ ಸರೋವರಗಳ ತೃಷೆಯನ್ನು ತೃಪ್ತಿ ಪಡಿಸಿದೆ ಆದರೆ ಅದು ನನ್ನಲ್ಲಿಯ ಸೀತೆ-ತೃಷೆಯನ್ನು ತೃಪ್ತಿ ಪಡಿಸಲಿಲ್ಲ; ಸ್ತ್ರೀ ಚಂಚಲೆ, ಮನ್ಮಥನ ಬಾಣಕ್ಕೆ ಸೀತೆಯೂ ನನ್ನ ವಿರಹದಲ್ಲಿ ನೊಂದಿರಬೇಕು” ಎಂದು ಗುನಗುತ್ತ ಗೊರ್ಗರೆದನು. (4) ಲಕ್ಷ್ಮಣನ ಸಾಂತ್ವನ: ಅರಣ್ಯದಿಂದ ಹಣ್ಣುಗಳೊಂದಿಗೆ ಹಿಂದಿರುಗುವಾಗ ಸೀತೆಯ ವಿರಹದಲ್ಲಿ ದುಃಖದಿಂದ ಗೋರ್ಗರೆಯುವ ಅಣ್ಣ ರಾಮನ ದುಃಸ್ಥಿತಿ ಕಂಡ ಲಕ್ಷ್ಮಣನು ರಾಮನಿಗೆ “ ಓ ಆರ್ಯನೇ, ಭಾವನೆಗಳಿಗೆ ಬಲಿಯಾಗಬೇಡಾ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಾ, ಈಗ ನಾವು ಗುರಿಯತ್ತ ಸಾಗುತ್ತಿರುವದು ಸೀತೆಯನ್ನು ಹಿಂಪಡೆಯುವದಕ್ಕಾಗಿ; ನಿನ್ನ ಮನವನ್ನು ಸಧೃಡಗೊಳಿಕೋ, ನಿನ್ನ ಅವಕಾಶ/ಸಮಯವನ್ನು ನಿಯಂತ್ರಣದಲ್ಲಿಟ್ಟುಕೋ, ಸುಗ್ರೀವ ಮತ್ತು ವಾನರರನ್ನು ಕರೆಯಿಸಿ ಕೂಡಿಸು, ವಿಚಲಿತಗೊಳ್ಳದೆ ಗುರಿ ಮುಟ್ಟಲು, ಅಗ್ನಿಯು ತನ್ನ ಬಳಿ ಬಂದದನು ಸುಡುವಂತೆ ಸೀತೆಯೂ ತನ್ನ ಬಳಿ ಅನ್ಯರು ಬಂದರೆ ಸುಡುವಳು” ಎಂದು ಎಚ್ಚರಿಕೆಯ ಮತ್ತು ಸ್ವಾಂತನದ ಮಾತುಗಳನ್ನು ಆಡಿದ್ದನು ಆದಿಕವಿ ವಾಲ್ಮೀಕಿಯು ವಿವರಿಸುವ ಮುಖೇನ ರಾಮನ ಮನುಷ್ಯನ ಸಹಜ ಮನೋಸ್ಥಿತಿಯನ್ನು ತಿಳಿಸಿರುವರು. ಆದಿಕವಿ ವಾಲ್ಮೀಕಿಯ ಋತುಮುಖಿ ವಿರಹ ಪ್ರಲಾಪ ಗೀತೆ ಕಾವ್ಯ ಶೈಲಿಯು ಕಾಳಿದಾಸರಂತಹ ಕವಿಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು ಕಂಡುಬರುವದು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
