POET TIME :”ನೀವು ಬುದ್ಧನಾಗಬಾರದಿತ್ತು,ಗವಾಯಿ ಸರ್.! ✊ಎಂಬ ಕವನ (ಅನ್ಯಾಯ ವಿರೋಧಿಸುವ ಕವಿ ಸಮಯ ಇದು)”

By admin

•‌ ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್:

                              ✊“ನೀವು ಬುದ್ಧನಾಗಬಾರದಿತ್ತು, ಗವಾಯಿ ಸರ್.!”

ವಿಷವನ್ನೇ ಉಸಿರಾಡುವ
ದುಷ್ಟ ಅಧಮರ ಕೆಟ್ಟ ಕೃತ್ಯಕ್ಕೆ
ಕರುಣೆ ತೋರಬಾರದಿತ್ತು
ಗವಾಯಿ ಸರ್
ನೀವು ಬುದ್ಧನಾಗಬಾರದಿತ್ತು.!

ಮನುಷ್ಯರಿಗೆ ಮಾತೇ ಸಾಕು
ಕತ್ತೆಗೆ ಬೇಕಲ್ಲವೇ ಲತ್ತೆ ಪೆಟ್ಟು
ಇಷ್ಟು ಮುಗ್ದತೆಯ ಅವಶ್ಯಕತೆ ಏನಿತ್ತು
ಆದರೂ,
ಹಾವಿಗೆ ಹಾಲೆರೆಯಬಾರದಿತ್ತು
ಗವಾಯಿ ಸರ್
ನೀವು ಬುದ್ಧನಾಗಬಾರದಿತ್ತು.!

ವೈಯಕ್ತಿಕವಾಗಿ ನಿಂದಿಸಿದರೆ
ಮೂರ್ಖನೆಂದು
ಕ್ಷಮಿಸಬಹುದಿತ್ತು
ಆದರೆ, ಅಗೌರವ ತೋರಿದ್ದು
ಸಂವಿಧಾನ ಪೀಠಕ್ಕಲ್ಲವೆ!?
ಅದಕ್ಕೆ, ಗವಾಯಿ ಸರ್
ನೀವು ಬುದ್ಧನಾಗಬಾರದಿತ್ತು.!

ಬೊಗುಳುವುದು ನಾಯಿಯ ಗುಣ
ತೆಗಳುವುದು ನರಿಯ ಚಾಳಿ
ಹೊಗಳು ಭಟ್ಟರೇನು ಕಡಿಮೆಯಲ್ಲ
ಅಡಿಗಡಿಗೂ ಅಪಾಯವಿರುವಾಗ
ವಾಸ್ತವ ಅರ್ಥಮಾದುಕೊಳ್ಳಬೇಕಿತ್ತು
ಗವಾಯಿ ಸರ್
ನೀವು ಬುದ್ಧನಾಗಬಾರದಿತ್ತು.!

ಕಾಲ ಬದಲಾಗಿದೆ,
ಕುಲವೇ ಮೇಲಾಗಿದೆ
ಶರಣ, ಸಂತ, ಸೂಫಿಗಳನ್ನು
ಜಾತಿಯ ಬೇಡಿಗಳಿಂದ ಬಿಗಿಯಲಾಗಿದೆ
ಅನ್ನ ಆಹಾರಗಳು
ಧರ್ಮದ ವಿಷ ಬಿದ್ದು ನಂಜಾತ್ತಿರುವಾಗ
ಗವಾಯಿ ಸರ್
ನೀವು ಬುದ್ಧನಾಗಬಾರದಿತ್ತು.!

✍️ವಿಕ್ರಮ್ ತೇಜಸ್(ವಾಡಿ.ಜಂ),ಕಲಬುರಗಿ.