BIG BREKING NEWS :”ಕಲಬುರಗಿ| ಅಂಬಿಗರ ಚೌಡಯ್ಯರ ಮೂರ್ತಿಗೆ ಭಗ್ನ: ಆರೋಪಿಗಳನ್ನು ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪೋಲಿಸ್ ರಿಗೆ ಸೂಚನೆ”

By admin

“ಕಲಬುರಗಿ| ಅಂಬಿಗರ ಚೌಡಯ್ಯರ ಮೂರ್ತಿಗೆ ಭಗ್ನ: ಆರೋಪಿಗಳನ್ನು ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪೋಲಿಸ್ ರಿಗೆ ಸೂಚನೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌, ಕಲಬುರಗಿ :

ಕಲಬುರಗಿ:  ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಹೇಯ ಕೃತ್ಯ ಖಂಡನೀಯ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ, ಅವರಿಗೆ ಕಾನೂನು ಅಡಿಯಲ್ಲಿ ಕಠಿಣ ಶಿಕ್ಷೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವಿರೂಪ ಘಟನೆ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ವಚನ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸಿದ ಮಹಾ ಜ್ಞಾನಿ. ಸಮಾಜದಲ್ಲಿನ ಮೌಢ್ಯದ ಅಂಧಕಾರವನ್ನು ಅಳಿಸಿ, ಚಿಂತನೆಯ ಬೆಳಕು ಹೊತ್ತಿಸುವಲ್ಲಿ ಅಂಬಿಗರ ಚೌಡಯ್ಯ ಅವರ ಪಾತ್ರ ಹಿರಿದು. ಅವರ ವಚನಗಳು ನಮ್ಮಲ್ಲಿ ವಿಚಾರವಂತಿಕೆ ಮೂಡಿಸುತ್ತದೆ ಎಂದು ಹೇಳಿದರು.

ಆದರೆ ವಿಕೃತ ಮನಸ್ಥಿತಿಯ ಕೆಲವರು ಮಹಾನ್ ವಚನಕಾರರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ನಮ್ಮ ಭವ್ಯ ಪರಂಪರೆಗೆ ಮಾಡಿರುವ ಅಪಮಾನ. ಇದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.