“ಗಂಗಾವತಿ |ಕಾರ್ಮಿಕರ ಮಕ್ಕಳಿಗೆ ‘ಶಿಕ್ಷಾದೀಪ’ ಬೆಳಕು – ಕಾರ್ಮಿಕ ಮುಖಂಡ ಹುಸೇನಪ್ಪಅಭಿಮತ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗಂಗಾವತಿ :
ಇಲ್ಲಿನ ಪಿ. ಸಿಂಗ್ವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮಾಲಿ ಕಾರ್ಮಿಕರ ಮಕ್ಕಳಿಗಾಗಿ ಜಾರಿಗೆ ತಂದಿರುವ “ಶಿಕ್ಷಾದೀಪ” ವಿದ್ಯಾರ್ಥಿ ವೇತನ ಯೋಜನೆ ಬಡ ಕಾರ್ಮಿಕರ ಮಕ್ಕಳಿಗೆ ಬದುಕಿನ ಬೆಳಕಾಗಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಜಿಲ್ಲಾ ಸಮಿತಿ ಮುಖಾಂತರ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಗುರುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಫಲಾನುಭವಿ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗ್ಯಾನೇಶ ಕಡಗದ ಅವರು ಮಾತನಾಡಿ, ಹದಿಮೂರು ವರ್ಷಗಳಿಂದ ನಿರಂತರವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ತಾಂತ್ರಿಕ ಕೋರ್ಸ್‌ಗಳನ್ನು ಓದುತ್ತಿರುವ ಹಮಾಲಿ ಕಾರ್ಮಿಕರ ಮಕ್ಕಳಿಗೆ ಅವರ ಶೇಕಡಾವಾರು ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಯೋಜನೆ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ಬೆಂಬಲ ನೀಡಿದೆ” ಎಂದರು.
ಸಭೆಗೆ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಹುಸೇನಪ್ಪ ಅವರು “ಶಿಕ್ಷಾದೀಪ ವಿದ್ಯಾರ್ಥಿ ವೇತನವು ಹಮಾಲಿ ಕಾರ್ಮಿಕರ ಮಕ್ಕಳಿಗೆ ಬದುಕಿನ ಬೆಳಕಾಗಿದೆ” ಎಂದು ಪ್ರಶಂಸಿಸಿದರು.
ಯೋಜನೆಯ ಸಂಯೋಜಕ ಈರಪ್ಪ ಅವರು “ರಾಜ್ಯಾದ್ಯಂತ ಪ್ರತಿ ವರ್ಷ 51ರಿಂದ 55 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ನೂರಾರು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಈ ವರ್ಷ ಕೊಪ್ಪಳ ಜಿಲ್ಲೆಯ 72 ಮಂದಿ ಹಮಾಲಿ ಕಾರ್ಮಿಕರ ಮಕ್ಕಳಿಗೆ ₹3.5 ಲಕ್ಷಕ್ಕೂ ಹೆಚ್ಚು ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಶಿಕ್ಷಣದ ಪ್ರಾಮುಖ್ಯತೆ, ಉನ್ನತ ಶಿಕ್ಷಣದ ಮಾರ್ಗದರ್ಶನ, ಉದ್ಯೋಗದ ಅವಕಾಶಗಳ ಕುರಿತು ಸಂವಾದ ನಡೆಸಿದರು.
ಕಾರ್ಮಿಕ ಮುಖಂಡರಾದ ನಾಗರಾಜ್, ಶಿವಕುಮಾರ, ಮಂಜುನಾಥ್ ಡಗ್ಗಿ ಹಾಗೂ ಸಿಐಟಿಯು, ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಾದ ರಮೇಶ್ ಲಕ್ಷ್ಮಣ್, ಮಂಜುನಾಥ್, ಶರಣಬಸವ, ದೊಡ್ಡಬಸವ, ಸೌಮ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.